ರಾಷ್ಟ್ರಪತಿಯನ್ನು ಕಾಡಿದ ಮರೆವು ರೋಗ

Update: 2024-08-31 07:10 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋಲ್ಕತಾದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತು ಆಕೆಯ ಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿರುವ ಬೆನ್ನಿಗೇ, ರಾಷ್ಟ್ರಪತಿ ದ್ರೌಪದಿ ಮುರ್ಮು ಮೌನ ಮುರಿದಿದ್ದಾರೆ. ‘‘ನಿಲ್ಲಿಸಿ. ಇನ್ನು ಸಹಿಸಲು ಸಾಧ್ಯವಿಲ್ಲ’’ ಎಂದು ಅಬ್ಬರಿಸಿರುವುದಲ್ಲದೆ, ಇಂಥ ಹೀನ ಕೃತ್ಯಗಳ ಮೂಲ ಕಾರಣಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ‘ಪ್ರಾಮಾಣಿಕ, ನಿಷ್ಪಕ್ಷ ಆತ್ಮಾವಲೋಕನ’ಗಳ ಆಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2012ರ ನಿರ್ಭಯಾ ಪ್ರಕರಣವನ್ನು ಸ್ಮರಿಸಿಕೊಂಡ ಅವರು ‘‘ಭಾರತೀಯ ಸಮಾಜಕ್ಕೆ ಸಾಮೂಹಿಕ ಮರೆವು ರೋಗ ಕಾಡಿದೆ’’ ಎಂದು ವಿಷಾದಿಸಿದ್ದಾರೆ. ‘‘ಈ ಸಾಮೂಹಿಕ ಮರೆವು ಅಹಿತಕರವಾಗಿದೆ. ಮಹಿಳೆಯರ ವಿರುದ್ಧದ ಹಿಂಸೆಯ ವಿರುದ್ಧ ತಿರುಗಿ ಬೀಳಬೇಕು’’ ಎಂದು ಅವರು ಭಾರತವನ್ನು ಆಗ್ರಹಿಸಿದ್ದಾರೆ.

ಈ ಸಾಮೂಹಿಕ ಮರೆವು ಸ್ವತಃ ರಾಷ್ಟ್ರಪತಿಯನ್ನು ಕೂಡ ಬಿಟ್ಟಿಲ್ಲ ಎನ್ನುವುದು ಸದ್ಯದ ವಿಪರ್ಯಾಸವಾಗಿದೆ. ಪಶ್ಚಿಮಬಂಗಾಳದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಕೊಲೆಗೆ ಸ್ಪಂದಿಸಿರುವುದಕ್ಕಾಗಿ ಅವರನ್ನು ಅಭಿನಂದಿಸುತ್ತಲೇ, ಈ ಹಿಂದೆ ಗುಜರಾತ್‌ನ ಸಾಮೂಹಿಕ ಅತ್ಯಾಚಾರ ಆರೋಪಿಗಳನ್ನು ಸರಕಾರದ ನೇತೃತ್ವದಲ್ಲೇ ಬಿಡುಗಡೆ ಮಾಡಿದಾಗ, ಮಣಿಪುರದಲ್ಲಿ ಅಲ್ಲಿನ ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆ ಗೊಳಿಸಿ ಮೆರವಣಿಗೆ ನಡೆಸಿ, ಬಳಿಕ ಅವರ ಮೇಲೆ ಸಾಮೂಹಿಕ ಅತ್ಯಾಚಾರಗೈದಾಗ ರಾಷ್ಟ್ರಪತಿಯವರನ್ನು ಕಾಡಿದ ಮರೆವು ಯಾವುದು ಎಂದು ದೇಶ ಕೇಳುತ್ತಿದೆ. ಗುಜರಾತ್‌ನ ಹತ್ಯಾಕಾಂಡದ ಸಂದರ್ಭದಲ್ಲಿ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದವು. ಬಿಲ್ಕೀಸ್ ಬಾನು ಅವರ ಅತ್ಯಾಚಾರ ಪ್ರಕರಣದಲ್ಲಿ 11 ಮಂದಿ ದೋಷಿಗಳು ಎಂದು ಗುರುತಿಸಲ್ಪಟ್ಟು ಜೀವಾವಧಿ ಶಿಕ್ಷೆಯನ್ನು ಅನುಭವಿಸಿದರು. ಆದರೆ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಅವರನ್ನು ಬಿಡುಗಡೆ ಮಾಡಿತು. ಒಬ್ಬ ಮಹಿಳೆಯಾಗಿ ಇದನ್ನು ತಡೆಯುವುದು ರಾಷ್ಟ್ರಪತಿಯ ಕರ್ತವ್ಯವಾಗಿತ್ತು. ಆದರೆ ಆಗ ಅವರು ಮೌನವಾಗಿದ್ದರು. ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಸರಕಾರದ ಈ ನಿರ್ಧಾರಕ್ಕೆ ತಡೆಯನ್ನು ಒಡ್ಡಬೇಕಾಯಿತು.

ಕನಿಷ್ಠ ಮಣಿಪುರದಲ್ಲಿ ಅಲ್ಲಿನ ಮಹಿಳೆಯರ ಮೇಲೆ ಬರ್ಬರ ಅತ್ಯಾಚಾರಗಳು ನಡೆಯುತ್ತಿರುವಾಗಲಾದರೂ ರಾಷ್ಟ್ರಪತಿ ಮುರ್ಮು ಅವರು ಮಧ್ಯ ಪ್ರವೇಶಿಸಿ ‘‘ಸಾಕು ನಿಲ್ಲಿಸಿ’’ ಎಂದು ಅಬ್ಬರಿಸಬಹುದಿತ್ತು. ಆದರೆ ಅಂತಹದೇನೂ ನಡೆಯಲಿಲ್ಲ. ಮಹಿಳೆಯರನ್ನು ದುಷ್ಕರ್ಮಿಗಳ ಗುಂಪು ನಗ್ನಗೊಳಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದವು. ಇವೆಲ್ಲವು ಪೊಲೀಸರ ಉಪಸ್ಥಿತಿಯಲ್ಲೇ ನಡೆದಿದ್ದವು. ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿತು. ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದಾಗ, ಅಲ್ಲಿನ ರಾಜಕಾರಣಿಗಳು ಅವರನ್ನು ತರಾಟೆಗೆ ತೆಗೆದುಕೊಂಡರು. ಆದರೆ ಆಗಲೂ ಮುರ್ಮು ವಿಸ್ಮತಿಯಲ್ಲಿದ್ದರು. ಸ್ವತಃ ಬುಡಕಟ್ಟು ಸಮುದಾಯದಿಂದ ಬಂದ ರಾಷ್ಟ್ರಪತಿಯವರಿಗೆ ಮಣಿಪುರದ ಬುಡಕಟ್ಟು ಮಹಿಳೆಯರ ಆಕ್ರಂದನಗಳು ಕೇಳಲಿಲ್ಲ. ಹೀಗಿರುವಾಗ, ಏಕಾಏಕಿ ಪಶ್ಚಿಮಬಂಗಾಳದ ಪ್ರಕರಣ ಅವರನ್ನು ತಟ್ಟಿ ಎಚ್ಚರಿಸಿದ್ದು ಹೇಗೆ ಎಂಬ ಅಚ್ಚರಿಯಲ್ಲಿದೆ ದೇಶ. ಈ ದೇಶದಲ್ಲಿ ದಲಿತರ ಮೇಲೆ ಸಾಲು ಸಾಲು ಅತ್ಯಾಚಾರಗಳು, ಅವರ ಹತ್ಯೆಗಳು ನಡೆಯುತ್ತಲೇ ಇವೆ. ಆದರೆ ಅದು ಪಶ್ಚಿಮಬಂಗಾಳದಲ್ಲಿ ನಡೆದ ಅತ್ಯಾಚಾರ, ಕೊಲೆಯಂತೆ ರಾಷ್ಟ್ರಪತಿಯನ್ನು ಆಘಾತಕ್ಕೀಡು ಮಾಡಲಿಲ್ಲ. ಕನಿಷ್ಠ ಈ ದೇಶದಲ್ಲಿ ವಿದ್ಯಾವಂತರ ಮೇಲೆ ನಗರ ಪ್ರದೇಶದಲ್ಲಿ ನಡೆದ ಅತ್ಯಾಚಾರಗಳು ಸುದ್ದಿಯಾದಂತೆ, ದಲಿತರು, ಶೋಷಿತ ಸಮುದಾಯದ ಮೇಲೆ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ವರ್ಗ, ಮೇಲ್‌ಜಾತಿಯ ಜನರು ನಡೆಸುವ ಅತ್ಯಾಚಾರಗಳು ಯಾಕೆ ಸುದ್ದಿಯಾಗುವುದಿಲ್ಲ? ಪಶ್ಚಿಮಬಂಗಾಳದ ಕೃತ್ಯವನ್ನು ಉಲ್ಲೇಖಿಸುವಾಗ ರಾಷ್ಟ್ರಪತಿ ಮುರ್ಮು ಅವರಿಗೆ 2012ರ ನಿರ್ಭಯಾ ಪ್ರಕರಣ ನೆನಪಾಯಿತೇ ಹೊರತು ಕಳೆದ ವರ್ಷ ಮಣಿಪುರದಲ್ಲಿ ನಡೆದ ಸಾಲು ಸಾಲು ಸಾಮೂಹಿಕ ಅತ್ಯಾಚಾರಗಳು ಯಾಕೆ ನೆನಪಾಗಲಿಲ್ಲ?

ಇಲ್ಲಿ ಒಬ್ಬಂಟಿ ಹೆಣ್ಣಿನ ಮೇಲೆ ಅತ್ಯಾಚಾರ ಎಸಗಿದರೆ ಮಾತ್ರ ಅಪರಾಧವೆ? ದಂಗೆ, ಗಲಭೆಯ ನೆಪದಲ್ಲಿ ಸಾಮೂಹಿಕವಾಗಿ ಮಹಿಳೆಯ ಮೇಲೆ ಅತ್ಯಾಚಾರಗಳು ನಡೆಯುವುದು ಸಂವಿಧಾನ ಬದ್ಧವೆ? ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರಗಳಿಗೆ ನ್ಯಾಯ ಸಿಗಬೇಕಾದರೆ ಸಂತ್ರಸ್ತರು ಮತ್ತು ಆರೋಪಿಗಳ ಹಿನ್ನೆಲೆಗಳು ಯಾಕೆ ಮುಖ್ಯವಾಗುತ್ತವೆೆ? ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಸಾಲು ಅತ್ಯಾಚಾರಗಳ ಸಂದರ್ಭದಲ್ಲಿ ರಾಷ್ಟ್ರಪತಿಯವರು ಮಾಧ್ಯಮಗಳ ಮುಂದೆ ಬಂದು ‘‘ಸಾಕು ನಿಲ್ಲಿಸಿ, ಇನ್ನು ಸಹಿಸಲು ಸಾಧ್ಯವಿಲ್ಲ’’ ಎನ್ನುವ ಒಂದು ಮಾತು ಆಡಿದ್ದರೆ ಅರ್ಧಕ್ಕರ್ಧ ಮಹಿಳೆಯರ ಪ್ರಾಣ, ಮಾನ ಉಳಿದು ಬಿಡುತ್ತಿತ್ತು. ಆಗ ರಾಷ್ಟ್ರಪತಿಯನ್ನು ಮೌನವಾಗಿರಿಸಿದ ಶಕ್ತಿ ಯಾವುದು? ಆ ಶಕ್ತಿಯೇ ಈ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳ ಮೂಲ ಕಾರಣವಾಗಿದೆ. ಹೆಣ್ಣಿನ ಮಾನ, ಪ್ರಾಣಗಳನ್ನು ಅಧಿಕಾರೇರುವ ಏಣಿಯಾಗಿ ಬಳಸಿಕೊಂಡವರು ನಮ್ಮನ್ನಾಳುತ್ತಿರುವುದೇ ಈ ದೇಶದಲ್ಲಿ ಇಂತಹ ಹೀನ ಕೃತ್ಯಗಳು ಹೆಚ್ಚಲು ಮುಖ್ಯ ಕಾರಣ. ಇತ್ತೀಚೆಗಷ್ಟೇ ಸರಕಾರೇತರ ಸಂಸ್ಥೆಯೊಂದು ಈ ದೇಶದಲ್ಲಿ ಎಷ್ಟು ಶಾಸಕರು ಮತ್ತು ಸಂಸದರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣಗಳಿವೆ ಎನ್ನುವುದನ್ನು ಬಹಿರಂಗಪಡಿಸಿತ್ತು. ಇವರಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಹೊಂದಿದವರೂ ಇದ್ದಾರೆ. ಇದು ರಾಷ್ಟ್ರಪತಿಯವರಿಗೆ ತಿಳಿಯದ ವಿಷಯವೇನೂ ಅಲ್ಲ.

ಬರಿದೇ ಭಾಷಣಗಳು ಸಂತ್ರಸ್ತರ ಮಹಿಳೆಯರಿಗೆ ಯಾವ ನ್ಯಾಯವನ್ನೂ ನೀಡಲಾರವು. ಪಶ್ಚಿಮಬಂಗಾಳದ ಪ್ರಕರಣದಲ್ಲಿ ಆಸ್ಪತ್ರೆಗಳ ಭದ್ರತಾ ವಿಷಯಗಳು ಚರ್ಚೆಯಾಗುತ್ತಿವೆಯೇ ಹೊರತು, ಈ ದೇಶದ ಸಕಲ ಮಹಿಳೆಯರ ಪ್ರಾಣ, ಮಾನಗಳ ರಕ್ಷಣೆಯ ಬಗ್ಗೆ ಯಾರಿಂದಲೂ ಕಾಳಜಿ ವ್ಯಕ್ತವಾಗುತ್ತಿಲ್ಲ. ದಲಿತರು, ಬುಡಕಟ್ಟು ಸಮುದಾಯದ ಮಹಿಳೆಯರ ಮೇಲೆ ನಡೆಯುತ್ತಿರುವ ಸಾಮೂಹಿಕ ದಾಳಿಗಳು ಯಾರಿಗೂ ಮುಖ್ಯವೆನಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಅಲ್ಲಲ್ಲಿ ಎಳೆ ಮಕ್ಕಳ ಮೇಲೂ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬರುತ್ತಿವೆ. ಮಹಾರಾಷ್ಟ್ರದಲ್ಲಿ ನರ್ಸರಿ ಮಕ್ಕಳಿಬ್ಬರ ಮೇಲೆ ನಡೆದ ದೌರ್ಜನ್ಯದ ವಿರುದ್ಧದ ಆಕ್ರೋಶ, ಮಹಾರಾಷ್ಟ್ರ ಬಂದ್‌ವರೆಗೂ ತಲುಪಿತು. ಆದರೆ ಈ ಹಿಂದೆ ಜಮ್ಮುವಿನಲ್ಲಿ ಆಸೀಫಾ ಎನ್ನುವ ಎಳೆ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯನ್ನು ಬರ್ಬರವಾಗಿ ಕೊಂದಿರುವುದು ಇಲ್ಲಿನ ರಾಜಕಾರಣಿಗಳ ಪಾಲಿಗೆ ವಿಜಯದ ಸಂಕೇತವಾಗಿತ್ತು. ಈ ಆರೋಪಿಗಳ ಪರವಾಗಿ ಸ್ವತಃ ಬಿಜೆಪಿ ನಾಯಕರೇ ಬೀದಿಗಿಳಿದಿದ್ದರು. ಅವರ ಬಿಡುಗಡೆಗೆ ಒತ್ತಾಯಿಸಿದರು. ಬಿಡುಗಡೆಯಾದ ಬಳಿಕ ಬೀದಿಯಲ್ಲಿ ಸಂಭ್ರಮಾಚರಣೆ ನಡೆಯಿತು. ಇದು ನಮ್ಮ ಇಂದಿನ ಭಾರತ.

ಇಡೀ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳ ಮತ್ತು ವಿಶೇಷ ನ್ಯಾಯಾಧೀಶರ ಅಗತ್ಯವಿದೆ. ಹಾಗೆಯೇ ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಯನ್ನು ವಿಧಿಸಲು ಕ್ರಮ ಜರುಗಿಸಬೇಕು. ಆದರೆ ಅದಾವುದರ ಬಗ್ಗೆಯೂ ರಾಷ್ಟ್ರಪತಿಯ ಭಾಷಣದಲ್ಲಿ ಪರಿಹಾರಗಳಿರಲಿಲ್ಲ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿಷಯದಲ್ಲಿ ರಾಷ್ಟ್ರಪತಿಯವರ ಆತಂಕದ ಮಾತುಗಳು ಒಂದು ರಾಜಕೀಯ ಭಾಷಣವಷ್ಟೇ ಆಗಿತ್ತು. ರಾಷ್ಟ್ರಪತಿಯ ಈ ಹತಾಶೆಯ, ಅಸಹಾಯಕತೆಯ ಮಾತುಗಳು ದುಷ್ಕರ್ಮಿಗಳಿಗೆ ಇನ್ನಷ್ಟು ದೌರ್ಜನ್ಯಗಳನ್ನು ಎಸಗಲು ಕುಮ್ಮಕ್ಕುಕೊಡುವಂತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News