200 ಜನರಿಗಷ್ಟೇ ದೊರಕಿದ ಪ್ರಧಾನಿ ಮೋದಿಯ ಅಚ್ಛೇದಿನ್ !
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
2024ರ ‘ಫೋರ್ಬ್ಸ್’ ಜಾಗತಿಕ ಅತಿ ಶ್ರೀಮಂತರ ಪಟ್ಟಿ ಬಿಡುಗಡೆಗೊಂಡಿದೆ. ಫೋರ್ಬ್ಸ್ ಪ್ರಕಾರ ಮುಕೇಶ್ ಅಂಬಾನಿ ಏಶ್ಯದ ನಂಬರ್ ವನ್ ಶ್ರೀಮಂತರಾಗಿದ್ದರೆ, ಗೌತಮ್ ಅದಾನಿ ಭಾರತದ ಎರಡನೇ ಅತಿ ಶ್ರೀಮಂತರೆಂದು ಗುರುತಿಸಲ್ಪಟ್ಟಿದ್ದಾರೆ. ಜಗತ್ತಿನ ಹತ್ತು ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಒಂಬತ್ತನೇ ಸ್ಥಾನವನ್ನು ಪಡೆದಿದ್ದಾರೆ. 2024ನೇ ಸಾಲಿನ ಫೋರ್ಬ್ಸ್ ಜಾಗತಿಕ ಅತಿ ಶ್ರೀಮಂತರ ಪಟ್ಟಿಯಲ್ಲಿ 200 ಭಾರತೀಯರು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 39 ಮಂದಿ ಬಿಲಿಯಾಧೀಶರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಭಾರತದ 200 ಬಿಲಿಯಾಧೀಶರ ಒಟ್ಟು ಸಂಪತ್ತು 954 ಬಿಲಿಯ ಡಾಲರ್ ಅಂದರೆ 79.63 ಲಕ್ಷ ಕೋಟಿ ರೂಪಾಯಿಯಾಗಿದ್ದು, ಇದೊಂದು ದಾಖಲೆಯಾಗಿದೆ. ಇದು ಕಳೆದ ವರ್ಷದ 675 ಬಿಲಿಯ ಡಾಲರ್ ಅಂದರೆ 56.34 ಲಕ್ಷ ಕೋಟಿ ರೂ.ಗಿಂತ 41 ಶೇಕಡ ಅಧಿಕವಾಗಿದೆ. ಮುಕೇಶ್ ಅಂಬಾನಿಯವರ ಸಂಪತ್ತು ಕಳೆದ 83 ಬಿಲಿಯ ಡಾಲರ್‌ನಿಂದ ಈ ಬಾರಿ 116 ಬಿಲಿಯ ಡಾಲರ್‌ಗೆ ಏರಿಕೆಯಾಗಿದೆ. ಇದರೊಂದಿಗೆ 100 ಬಿಲಿಯ ಡಾಲರ್‌ಗಿಂತ ಹೆಚ್ಚಿನ ಸಂಪತ್ತು ಹೊಂದಿದವರ ಗುಂಪಿಗೆ ಸೇರ್ಪಡೆಗೊಂಡ ಮೊದಲ ಏಶ್ಯನ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಪ್ರಧಾನಿ ಮೋದಿಯವರ ಭಾರತ ಇದು. 200 ಮಂದಿಯಿರುವ ಅತಿ ಶ್ರೀಮಂತರ ಭಾರತವೊಂದನ್ನು ಕಳೆದ ಹತ್ತು ವರ್ಷಗಳಲ್ಲಿ ಅವರು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅದಾನಿ, ಅಂಬಾನಿಗಳು ಅಭಿವೃದ್ಧಿಯಾದರೆ ದೇಶವೂ ಅಭಿವೃದ್ಧಿಯಾದಂತೆಯಲ್ಲವೇ ಎನ್ನುವ ಪ್ರಶ್ನೆಯನ್ನು ಹಲವರು ಈಗಲೂ ಎತ್ತುತ್ತಿದ್ದಾರೆ. ಈ ದೇಶದಲ್ಲಿ ಅತಿ ಶ್ರೀಮಂತರು ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದರೆ ಅದರ ಅರ್ಥ ದೇಶ ಅಭಿವೃದ್ಧಿಯಾಗಿದೆ ಎಂದಲ್ಲವೆ? ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಾರೆ. ದೇಶದಲ್ಲಿ 30 ಹೊಸ ಬಿಲಿಯಾಧೀಶರು ಹುಟ್ಟಿಕೊಂಡಿದ್ದಾರೆ ಎಂದರೆ ಸಹಜವಾಗಿಯೇ ಈ ದೇಶದಲ್ಲಿ ಉದ್ಯೋಗಗಳ ಸಂಖ್ಯೆ ಹೆಚ್ಚಬೇಕು. ಹಸಿವು, ಬಡತನದ ಪ್ರಮಾಣ ಭಾರೀ ಇಳಿಮುಖವಾಗಬೇಕು. ಜನರ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆಗಳು ಕಂಡಿರಬೇಕು. ಆದರೆ ಅಂತಹದೇನೂ ಸಂಭವಿಸಿಲ್ಲ. ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಕಾರ್ಮಿಕರ ಸಂಘಟನೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ನಿರುದ್ಯೋಗ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನುವುದರ ಕಡೆಗೆ ಬೊಟ್ಟು ಮಾಡಿದೆ. ಉನ್ನತ ಶಿಕ್ಷಣಗಳು ಇಲ್ಲಿನ ಯುವಕರಿಗೆ ಉದ್ಯೋಗಗಳನ್ನು ನೀಡುತ್ತಿಲ್ಲ. ಶಿಕ್ಷಣವನ್ನು ಪಡೆಯದವರಿಗಿಂತ ಉನ್ನತ ಶಿಕ್ಷಣ ಪಡೆದವರೇ ಅತ್ಯಧಿಕ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನುವುದು ಈ ವರದಿಯಿಂದ ಬಹಿರಂಗವಾಗಿದೆ. ಸರಕಾರದ ಭರವಸೆಗಳನ್ನು ನಂಬಿ ಉನ್ನತ ಶಿಕ್ಷಣವನ್ನು ಪಡೆದವರು ಎಲ್ಲೂ ಸಲ್ಲದವರಾಗಿ ಅತಂತ್ರರಾಗಿದ್ದಾರೆ. ಭಾರತದಲ್ಲಿ ನಿರುದ್ಯೋಗ ದರವು ಜಾಗತಿಕ ಮಟ್ಟಗಳಿಗಿಂತ ಹೆಚ್ಚಿದೆ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಶೇ. 54ರಿಂದ 65ಕ್ಕೆ ಏರಿರುವುದು ಮಾತ್ರವಲ್ಲ, ಪುರುಷರಿಗೆ ಹೋಲಿಸಿದರೆ, ಮಹಿಳೆಯರ ನಿರುದ್ಯೋಗ ದರವು ಶೇ. 76.7ರಷ್ಟಿದೆ.
ಬಿಲಿಯಾಧೀಶರ ಸಂಖ್ಯೆ ಹೆಚ್ಚಾದಂತೆಯೇ ಈ ದೇಶದ ಬಡತನ, ಹಸಿವು ಹೆಚ್ಚಾಗುತ್ತಿರುವುದು ವಿಪರ್ಯಾಸವಾಗಿದೆ. ಈ ಬಾರಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 125 ದೇಶಗಳಲ್ಲಿ 111 ನೇ ಸ್ಥಾನವನ್ನು ಪಡೆದುಕೊಂಡಿದೆ. ದೇಶದ ಒಟ್ಟಾರೆ ಪೌಷ್ಟಿಕತೆ, ಮಕ್ಕಳ ತೂಕಗಳಲ್ಲಿರುವ ಅಸಮಾನತೆ, ಶಿಶುಮರಣದ ಪ್ರಮಾಣ ಇವೆಲ್ಲವನ್ನು ಆಧರಿಸಿಕೊಂಡು ದೇಶದ ಹಸಿವಿನ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಬಡ ರಾಷ್ಟ್ರಗಳೆಂದು ಗುರುತಿಸಿಲ್ಪಟ್ಟಿರುವ, ಯಾವುದೇ ಬಿಲಿಯಾಧೀಶರುಗಳಿಂದ ಗುರುತಿಸಲ್ಪಡದ ನೆರೆಯ ಬಾಂಗ್ಲಾ, ನೇಪಾಳ, ಶ್ರೀಲಂಕಾ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿದೆ. ಪಾಕಿಸ್ತಾನ 102 ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾ 81, ನೇಪಾಳ 69 ಮತ್ತು ಶ್ರೀಲಂಕಾ 60ನೇ ಸ್ಥಾನದಲ್ಲಿದೆ. ಅಪೌಷ್ಟಿಕತೆಯ ಕಾರಣದಿಂದ ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕವನ್ನು ಹೊಂದಿರುವುದಿಲ್ಲ. ಇಂತಹ ಮಕ್ಕಳ ಪ್ರಮಾಣ ಭಾರತದಲ್ಲಿ ಶೇ. 18.7ರಷ್ಟಿದೆ. ಇದು ಜಗತ್ತಿನಲ್ಲೇ ಗರಿಷ್ಠ ಮಟ್ಟದ್ದಾಗಿದೆ ಎಂದು ಸೂಚ್ಯಂಕ ಹೇಳುತ್ತದೆ. ಆದರೆ ಭಾರತ ಮೇಲಿನ ಎರಡೂ ವರದಿಗಳನ್ನು ಒಪ್ಪಿಕೊಂಡಿಲ್ಲ. ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿಯನ್ನು ನಾವು ಯಾಕೆ ಒಪ್ಪಿಕೊಳ್ಳಬೇಕು? ಎಂದು ಭಾರತ ಮರು ಪ್ರಶ್ನಿಸಿದ್ದರೆ, ಹಸಿವು ಸೂಚ್ಯಂಕ ವರದಿಗೆ ಅನುಸರಿಸಿದ ಮಾನದಂಡವೇ ಸರಿಯಿಲ್ಲ ಎಂದು ಹೇಳಿ ತನ್ನ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಇವುಗಳ ನಡುವೆಯೇ, ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಕುಟುಂಬ ಸಮೀಕ್ಷೆ ಯ (2019-21)ರ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಲಾದ ಅಧ್ಯಯನವೊಂದು ಈ ದೇಶದಲ್ಲಿ 67 ಲಕ್ಷ ಮಕ್ಕಳಿಗೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ. ಕಡಿಮೆ ಆದಾಯ ಮತ್ತು ಮಧ್ಯಮ ಆದಾಯಗಳನ್ನೊಳಗೊಂಡ 92 ದೇಶಗಳಲ್ಲಿನ ಆರೋಗ್ಯ ಸಮೀಕ್ಷೆಗಳನ್ನು ಬಳ ಸಿಕೊಂಡು ಈ ಅಧ್ಯಯನವನ್ನು ನಡೆಸಲಾಗಿದ್ದು ‘ಜೆಎಎಂಎ ನೆಟ್ವರ್ಕ್
ಓಪನ್’ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ. ಶೂನ್ಯ ಆಹಾರ ಸೇವಿಸುವ ಮಕ್ಕಳು ಅಂದರೆ, 24 ಗಂಟೆಗಳ ಅವಧಿಯಲ್ಲಿ ಯಾವುದೇ ಹಾಲು ಅಥವಾ ಘನ ಆಹಾರ ಸೇವಿಸಿರದ ಆರರಿಂದ 24 ತಿಂಗಳ ಮಕ್ಕಳನ್ನು ಮುಂದಿಟ್ಟುಕೊಂಡು ಅಧ್ಯಯನ ನಡೆಸಲಾಗಿದೆ. ಆಹಾರ ವಂಚಿತ ಮಕ್ಕಳ ಪ್ರಮಾಣಕ್ಕೆ ಹೋಲಿಸಿದರೆ, ಗಿನಿ ಮತ್ತು ಮಾಲಿ ಅಗ್ರಸ್ಥಾನದಲ್ಲಿದ್ದರೆ ಭಾರತ ಮೂರನೇ ಸ್ಥಾನದಲ್ಲಿದೆ ಎನ್ನುವ ಆಘಾತಕಾರಿ ಅಂಶವನ್ನು ತೆರೆದಿಟ್ಟಿದೆ. ಒಂದೆಡೆ ಭಾರತ ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿರುವಾಗಲೇ ಇನ್ನೊಂದೆಡೆ ಪೌಷ್ಟಿಕ ಆಹಾರವಾಗಿರುವ ಬೀಫ್ ರಫ್ತಿಗಾಗಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಿದೆ. ಈ ಬೀಫ್ ರಫ್ತಿನ ಲಾಭದ ಪೌಷ್ಟಿಕತೆಯನ್ನು ತನ್ನದಾಗಿಸಿಕೊಳ್ಳುತ್ತಿರುವುದು ಯಾರು ಎನ್ನುವುದನ್ನು ಫೋರ್ಬ್ಸ್ ವರದಿಯಿಂದ ಅರ್ಥ ಮಾಡಿಕೊಳ್ಳಬಹುದು.
ಭಾರತದಲ್ಲಿ ಗಂಭೀರವಾಗಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯನ್ನು ಕಳೆದ ವರ್ಷ ಆಕ್ಸ್‌ಫಾಮ್ ವರದಿ ಜಗತ್ತಿನ ಮುಂದಿಟ್ಟಿತ್ತು. ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಕಾರಣದಿಂದಾಗಿ ಎಲ್ಲ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಸರ್ವನಾಶವಾದವು. ಬಡವರು ಇನ್ನಷ್ಟು ಬಡವರಾದರು. ನಿರುದ್ಯೋಗಗಳು ಹೆಚ್ಚಾದವು. ಆದರೆ ಇದೇ ಸಂದರ್ಭದಲ್ಲಿ, ಈ ದೇಶದ ಬಿಲಿಯಾಧೀಶರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಇವರ ಮೇಲೆ ಲಾಕ್‌ಡೌನ್ ಯಾವ ದುಷ್ಪರಿಣಾಮವನ್ನು ಬೀರಲಿಲ್ಲ. ಬದಲಿಗೆ, ಕೊರೋನ ಅಕ್ರಮಗಳು ಇವರನ್ನು ಜಗತ್ತಿನಲ್ಲಿ ಇನ್ನಷ್ಟು ಶ್ರೀಮಂತರಾಗಲು ಸಹಾಯ ಮಾಡಿದವು. 2000 ಇಸವಿಯಿಂದ ಭಾರತದಲ್ಲಿ ಅಸಮಾನತೆ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಶೇ. 1ರಷ್ಟು ಶ್ರೀಮಂತರು ಈ ದೇಶದ 40ರಷ್ಟು ಸಂಪತ್ತನ್ನು ಕೈವಶ ಮಾಡಿಕೊಂಡಿದ್ದಾರೆ ಎನ್ನುವುದನ್ನು ವರದಿ ಹೇಳಿದೆ. ಈ ದೇಶದ 10,000 ಶ್ರೀಮಂತ ವ್ಯಕ್ತಿಗಳು 22.6 ಶತಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದಾರೆ. ಈ ಕಾರಣದಿಂದಲೇ ದೇಶದಲ್ಲಿ ಬಿಲಿಯಾಧೀಶರ ಸಂಖ್ಯೆ ಹೆಚ್ಚುತ್ತಾ ಹೋದಂತೆಯೇ ಬಡತನವೂ ಹೆಚ್ಚುತ್ತಾ ಹೋಗುತ್ತಿದೆ. ಅಂದರೆ, ಸಂಪತ್ತನ್ನು ಬಡವರಿಂದ ಕಿತ್ತು ಈ ಬಿಲಿಯಾಧೀಶರಿಗೆ ನೀಡುವುದೇ ಪ್ರಧಾನಿ ಮೋದಿಯವರ ಅಭಿವೃದ್ಧಿಯ ಪರಿಕಲ್ಪನೆ. ಆದುದರಿಂದಲೇ ಬಿಲಿಯಾಧೀಶರ ಸಂಖ್ಯೆ ಹೆಚ್ಚಾದಂತೆಯೇ ದೇಶದಲ್ಲಿ ನಿರುದ್ಯೋಗಿಗಳ, ಆಹಾರ ವಂಚಿತರ ಸಂಖ್ಯೆ ಹೆಚ್ಚುತ್ತಿವೆ. ಈ ದೇಶದ ಬಿಲಿಯನೇರ್‌ಗಳ ಮೇಲೆ ಶೇ. 1ರಷ್ಟು ಸಂಪತ್ತಿನ ತೆರಿಗೆಯನ್ನು ವಿಧಿಸಿದರೂ, ಇಲ್ಲಿನ ಆರೋಗ್ಯ ಮಿಷನ್‌ಗೆ ಸುಮಾರು ಮೂರು ವರ್ಷಗಳ ಕಾಲ 36, 960 ಕೋಟಿ ರೂಪಾಯಿಗಳನ್ನು ಒದಗಿಸಬಹುದು. ಭಾರತದ ಬಿಲಿಯನೇರ್‌ಗಳ ಮೇಲೆ ಶೇ. 2ರಷ್ಟು ತೆರಿಗೆ ವಿಧಿಸುವ ಮೂಲಕ ಈ ದೇಶದ ಅಪೌಷ್ಟಿಕತೆಯನ್ನು ನಿವಾರಿಸಬಹುದಾಗಿದೆ. ಆದರೆ, ಮೋದಿಯವರ ಅಚ್ಛೇದಿನ್‌ನ ವ್ಯಾಖ್ಯಾನವೇ ಬಡವರನ್ನು ಬಲಿಕೊಟ್ಟು ಅದಾನಿ, ಅಂಬಾನಿಗಳನ್ನು ಪೋಷಿಸುವುದಾಗಿದೆ. ನಾವಿಂದು 200 ಅತಿ ಶ್ರೀಮಂತರನ್ನೇ ಭಾರತವೆಂದು ಭಾವಿಸಿ, 60 ಲಕ್ಷ ಆಹಾರ ವಂಚಿತ ಕಂದಮ್ಮಗಳನ್ನು ಮೋದಿ ಭಾರತದಿಂದ ಹೊರಗಿಡಬೇಕಾಗಿದೆ.