ಹೊಸ ಬೆಳಕಿನ ಹುಡುಕಾಟದಲ್ಲಿ ವಿಪಕ್ಷ ಸಮಾವೇಶ

Update: 2023-07-17 04:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಜೂನ್ ತಿಂಗಳಲ್ಲಿ ಪಾಟ್ನಾದಲ್ಲಿ ನಡೆದ ವಿಪಕ್ಷ ಸಭೆಯ ನಿರ್ಧಾರಗಳು ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸ್ಪಷ್ಟ ರೂಪು ಪಡೆಯುವ ಸಾಧ್ಯತೆಗಳಿವೆ. ಹತ್ತು ಹಲವು ಗೊಂದಲಗಳು, ಅನಿಶ್ಚಿತಗಳ ನಡುವೆ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ವಿಪಕ್ಷ ಸಭೆ ನಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೋದಿಯವರನ್ನು ಸೋಲಿಸುವ ನಿಟ್ಟಿನಲ್ಲಿ ವಿಪಕ್ಷಗಳು ತಮ್ಮೆಲ್ಲ ಭಿನ್ನಮತಗಳನ್ನು ಬದಿಗಿಟ್ಟು ಒಂದಾಗುವುದನ್ನು ಹೊರತು ಪಡಿಸಿ ಬೇರೆ ದಾರಿಯೇ ಇಲ್ಲ ಎನ್ನುವುದನ್ನು ಈ ಸಭೆಯಲ್ಲಿ ಹಲವು ನಾಯಕರು ಮನಗಂಡಿದ್ದಾರೆ. ಜನವಿರೋಧಿ ನೀತಿಗಳು, ಸೇನೆಯ ಮೇಲೆ ಉಗ್ರರ ದಾಳಿ, ಭ್ರಷ್ಟಾಚಾರಗಳ ಕಾರಣಕ್ಕಾಗಿ ಮೋದಿ ಸರಕಾರ ಪ್ರತೀ ಬಾರಿ ಸುದ್ದಿಯಲ್ಲಿರುತ್ತದೆಯಾದರೂ, ಅವುಗಳನ್ನು ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿರೋಧ ಪಕ್ಷಗಳು ಎಡವುತ್ತಿವೆ. ನೋಟು ನಿಷೇಧ ಜನಸಾಮಾನ್ಯರ ಬದುಕಿನ ಮೇಲೆ ಮಾಡಿದ ದುಷ್ಪರಿಣಾಮ, ಜಿಎಸ್ಟಿಯಿಂದ ವ್ಯಾಪಾರ ಉದ್ಯಮಗಳಲ್ಲಾದ ಗೊಂದಲಗಳನ್ನು ಮೋದಿಯ ವಿರುದ್ಧ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಬಳಸುವ ಅವಕಾಶ ವಿರೋಧಪಕ್ಷಗಳಿದ್ದವು. ಆದರೆ ಆ ಅವಕಾಶವನ್ನು ಕೈ ಚೆಲ್ಲಿದವು. ವಿಪಕ್ಷಗಳ ನಡುವೆ ಹೊಂದಾಣಿಕೆಯಲ್ಲಾದ ಲೋಪಗಳು, ಕಳೆದ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಪಾತ್ರವನ್ನು ವಹಿಸಿದ್ದವು.

ಮೋದಿ ಸರಕಾರದ ವೈಫಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿರೋಧಪಕ್ಷಗಳು ಸಂಘಟಿತವಾಗುವುದು ಬಹಳ ಮುಖ್ಯವಾಗಿದೆ. ಕೊರೋನ ಸಂದರ್ಭದಲ್ಲಾದ ಸಾವುನೋವುಗಳು, ಲಾಕ್ಡೌನ್ ದುಷ್ಪರಿಣಾಮಗಳು, 2000 ರೂ. ನೋಟಿನ ವೈಫಲ್ಯ, ದೇಶವನ್ನು ಕಿತ್ತು ತಿನ್ನುತ್ತಿರುವ ಕೋಮುಗಲಭೆಗಳು, ರಫೇಲ್ ಹಗರಣ ಇವೆಲ್ಲವನ್ನು ಜನರ ಬಳಿಗೆ ತಲುಪಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಅಷ್ಟೇ ಅಗತ್ಯ. ಯಾಕೆಂದರೆ ಮೋದಿ ನೇತೃತ್ವದ ಸರಕಾರ ಮಾಧ್ಯಮಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿದೆ. ಬಹುತೇಕ ಮಾಧ್ಯಮಗಳನ್ನು ಕೊಂಡುಕೊಂಡಿದ್ದರೆ, ಅಳಿದುಳಿದವುಗಳನ್ನು ಕಾನೂನಿನ ಕುಣಿಕೆಯ ಮೂಲಕ ನಿಯಂತ್ರಿಸುತ್ತಿದೆ. ಒಂದೆಡೆ ಸರಕಾರದ ಭ್ರಷ್ಟಾಚಾರಗಳನ್ನು, ವೈಫಲ್ಯಗಳನ್ನು ಮಾಧ್ಯಮಗಳು ಮುಚ್ಚಿಡುವ ಕೆಲಸವನ್ನು ಮಾಡುತ್ತಿದ್ದರೆ, ಇನ್ನೊಂದೆಡೆ ಮೋದಿಯ ಪರವಾಗಿ ಸುಳ್ಳು , ಅತಿಮಾನುಷ ವರದಿಗಳನ್ನು ಮಾಡುತ್ತಾ ಅವರನ್ನು ವಿಶ್ವಗುರುವಾಗಿಸಲು ಹವಣಿಸುತ್ತಿವೆ. ಮೋದಿಯ ವೈಫಲ್ಯಗಳನ್ನೇ ಸಾಧನೆಗಳಾಗಿ ಬಿಂಬಿಸುವ ಪ್ರಯತ್ನ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರು ಆಡುವ ಮಾತುಗಳನ್ನು ಜನರ ಬಳಿಗೆ ತಲುಪಿಸುವ ಮಾಧ್ಯಮಗಳೇ ಇಲ್ಲ ಎನ್ನುವಂತಹ ಸ್ಥಿತಿಯಿದೆ. ಯುಪಿಎ ಸರಕಾರದ ಭ್ರಷ್ಟಾಚಾರಗಳ ವಿರುದ್ಧ ಮಾಧ್ಯಮಗಳು ಸಂಘಟಿತವಾಗಿ ಕೆಲಸ ಮಾಡಿದ ಕಾರಣದಿಂದಲೇ ಜನರು ಆ ಸರಕಾರವನ್ನು ಕೆಳಗಿಳಿಸಿ ಮೋದಿ ನೇತೃತ್ವದ ಎನ್ಡಿಎ ಸರಕಾರವನ್ನು ಅಸ್ತಿತ್ವಕ್ಕೆ ತಂದರು. ಆದರೆ ಇದೀಗ ಯುಪಿಎ ಸರಕಾರಕ್ಕಿಂತಲೂ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಮಾಧ್ಯಮಗಳು ಸರಕಾರದ ವಿರುದ್ಧ ಉಸಿರೆತ್ತುತ್ತಿಲ್ಲ. ಮೋದಿಯ ಪರವಾಗಿ ಐಟಿ ಪಡೆಗಳು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿವೆ. ವಿರೋಧ ಪಕ್ಷಗಳು ಸಂಘಟಿತವಾಗುವುದು ಮಾತ್ರವಲ್ಲ, ಜನರ ಬಳಿಗೆ ತಲುಪುವ ದಾರಿಯನ್ನು ಕೂಡ ಅದು ಹುಡುಕಬೇಕಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುವ ವಿಪಕ್ಷ ಸಭೆಯ ಪಾತ್ರ ಮಹತ್ವದ್ದಾಗಿದೆ.

ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನದಾಗಿಸಿಕೊಂಡ ಗೆಲುವಿನ ಬೆಳಕಿನಡಿಯಲ್ಲಿ ಬೆಂಗಳೂರಿನಲ್ಲಿ ವಿಪಕ್ಷ ಸಭೆ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಿತ್ತು. ಕೋಮು ಉದ್ವಿಗ್ನ ವಿಷಯಗಳನ್ನು ಮುಂದಿಟ್ಟು ಅಮಿತ್ ಶಾ ಸಾರ್ವಜನಿಕವಾಗಿ ಮತ ಯಾಚಿಸಿದ್ದರು. ಮೋದಿಯವರ ರೋಡ್ ಶೋ ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ್ದವು. ಆದರೆ ಇವೆಲ್ಲವನ್ನು ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ನೇತೃತ್ವದಲ್ಲಿ ‘ಅಭಿವೃದ್ಧಿ ರಾಜಕಾರಣ’ದ ಮೂಲಕ ಎದುರಿಸಿತು. ರಾಹುಲ್ ಗಾಂಧಿಯ ‘ಭಾರತ್ ಜೋಡೊ’ ಯಾತ್ರೆಯೂ ಜನರ ಮನಸ್ಸನ್ನು ಬೆಸೆಯುವಲ್ಲಿ ಯಶಸ್ವಿಯಾಗಿತ್ತು. ಗ್ಯಾರಂಟಿ ಘೋಷಣೆಗಳು ಜನರನ್ನು ಯಾವ ಮಟ್ಟಿಗೆ ಸೆಳೆದವು ಎಂದರೆ ವಿಧಾನಸಭಾಚುನಾವಣೆಯಲ್ಲಿ ದ್ವೇಷ ರಾಜಕಾರಣ ಮಕಾಡೆ ಮಲಗಿತು. ರಾಜ್ಯದ ಕಾಂಗ್ರೆಸ್ ಗೆಲುವಿನಲ್ಲಿ ವಿಪಕ್ಷಗಳಿಗೆ ಬಹಳಷ್ಟು ಪಾಠಗಳಿವೆ. ಚುನಾವಣೆಯಲ್ಲಿ ಅನ್ನ, ಶಿಕ್ಷಣ, ವಸತಿಗಳು ಮುಖ್ಯ ವಿಷಯವಾದರೆ ಅವುಗಳನ್ನು ಜನರು ಸ್ವೀಕರಿಸುತ್ತಾರೆ ಎನ್ನುವುದಕ್ಕೆ ಈ ಗೆಲವು ಉದಾಹರಣೆಯಾಗಿದೆ. ಇಂದು ವಿಪಕ್ಷಗಳು ಮತ್ತು ಜನರ ನಡುವೆ ಬಲಾಢ್ಯ ಗೋಡೆಗಳಾಗಿ ನಿಂತಿರುವುದೇ ಮೋದಿ ಪರ ಮಾಧ್ಯಮಗಳು. ಅವುಗಳನ್ನು ಒಡೆದು ಜನರಲ್ಲಿ ಒಂದಾಗುವ ಸವಾಲನ್ನು ಗೆದ್ದರೆ ಅರ್ಧ ಲೋಕಸಭಾ ಚುನಾವಣೆಯನ್ನು ಗೆದ್ದಂತೆಯೇ ಸರಿ.

ಜಾತ್ಯತೀತ, ಶೋಷಿತ, ಅಲ್ಪಸಂಖ್ಯಾತ ಮತಗಳು ಒಡೆದು ಹೋಗದಂತೆ ನೋಡಿಕೊಳ್ಳಬೇಕಾದರೆ ಅವುಗಳನ್ನು ಪ್ರತಿನಿಧಿಸುವ ಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ. ಈ ವಿಪಕ್ಷಗಳ ಸಮಾವೇಶದಲ್ಲಿ ಆಪ್ ಮತ್ತು ತೃಣಮೂಲ ಕಾಂಗ್ರೆಸ್ ಭಾಗವಹಿಸುವ ಭರವಸೆಯನ್ನು ವ್ಯಕ್ತಪಡಿಸಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಬೆಂಬಲವನ್ನು ವ್ಯಕ್ತಪಡಿಸಿಲ್ಲ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಪ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ನೇರ ಎದುರಾಳಿಯಾಗಿ ಪರಿಗಣಿಸಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ದಿಲ್ಲಿಯ ವಿಷಯದಲ್ಲಿ ಕಾಂಗ್ರೆಸ್ ಆಪ್ನ ಜೊತೆಗೆ ನಿಂತಿಲ್ಲ ಎನ್ನುವ ಅಸಮಾಧಾನ ಕೇಜ್ರಿವಾಲ್ಗಿದೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳು ಯಾರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಬೇಕು ಎನ್ನುವುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಕಾಂಗ್ರೆಸ್ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುವ ಬಗ್ಗೆ ಆಪ್ ಮತ್ತು ತೃಣಮೂಲ ಕಾಂಗ್ರೆಸ್ಗೆ ಆಕ್ಷೇಪಗಳಿವೆ. ಈ ಕಾರಣದಿಂದ ಪೂರ್ಣ ಮನಸ್ಸಿನಿಂದ ವಿಪಕ್ಷಗಳ ಜೊತೆಗೆ ಇವುಗಳು ಕೈಜೋಡಿಸಿಲ್ಲ. ದಿಲ್ಲಿಯ ಕುರಿತಂತೆ ಕೇಂದ್ರ ಸರಕಾರದ ಸುಗ್ರೀವಾಜ್ಞೆಯ ವಿರುದ್ಧ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಸ್ಪಷ್ಟ ಪಡಿಸಿರುವುದರಿಂದ ಆಪ್ ಈ ಬಾರಿ ಬೆಂಗಳೂರಿನ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಸಭೆಗೆ ತೃಣಮೂಲ ಕಾಂಗ್ರೆಸ್ ತನ್ನ ಬೆಂಬಲ ನೀಡಿದೆಯಾದರೂ, ಕಾಲಿನ ಗಾಯದ ನೆಪದಲ್ಲಿ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ.

ಇದೇ ಸಂದರ್ಭದಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಮತ್ತು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ವಿಪಕ್ಷ ಸಮಾವೇಶದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕಾಗಿತ್ತು. ಆದರೆ ಈ ಎರಡೂ ಪಕ್ಷಗಳು ಬಿಜೆಪಿಯೊಂದಿಗೆ ಕೈ ಜೋಡಿಸುವ ಸಿದ್ಧತೆ ನಡೆಸುತ್ತಿದೆ. ಬಹುಜನರ ಹೆಸರಿನಲ್ಲಿ ಕಟ್ಟಿದ ಬಿಎಸ್ಪಿಯನ್ನು ಮಾಯಾವತಿಯವರು ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಬಿಜೆಪಿಗೆ ಬಲಿಕೊಡುತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಪ್ರಾದೇಶಿಕ ಶಕ್ತಿಯಾಗಿ ಬೆಳೆಯುವ ಸಾಧ್ಯತೆಗಳ ಬಗ್ಗೆ ಹಲವರು ಕನಸು ಕಟ್ಟಿದ್ದರು. ಅದು ಕೂಡ ನಿಧಾನಕ್ಕೆ ಬಿಜೆಪಿಯೊಂದಿಗೆ ವಿಲೀನದ ಸಿದ್ಧತೆಯಲ್ಲಿದೆ. ತನ್ನ ಸಮಯಸಾಧಕ ರಾಜಕಾರಣಕ್ಕಾಗಿ ಜೆಡಿಎಸ್ ಈಗಾಗಲೇ ಸಾಕಷ್ಟು ಬೆಲೆಯನ್ನು ತೆತ್ತಿದೆ. ಮುಂದಿನ ಲೋಕಸಭೆಯಲ್ಲಿ ಈ ಎರಡೂ ಪಕ್ಷಗಳು ಸಂದರ್ಭದ ಲಾಭಗಳನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿವೆ. ಇಂತಹ ಸಮಯ ಸಾಧಕ ಪಕ್ಷಗಳಿಗೆ ಮುಂದಿನ ಲೋಕಸಭೆ ಯಾವ ರೀತಿಯ ಪಾಠವನ್ನು ಕಲಿಸಲಿದೆ ಎನ್ನುವುದನ್ನು ಕೂಡ ಕಾದು ನೋಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರವನ್ನು ಮುಂದಿಟ್ಟು ಜನರನ್ನು ಯಾಮಾರಿಸಲು ಮೋದಿ ನೇತೃತ್ವದ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಮಂದಿರಕ್ಕೆ ಪರ್ಯಾಯವಾಗಿ ಅನ್ನ, ಆರೋಗ್ಯ, ಶಿಕ್ಷಣವನ್ನು ಪರಿಣಾಮಕಾರಿಯಾಗಿ ಹೇಗೆ ಜನರ ಮುಂದೆ ಇಡಬಹುದು ಎನ್ನುವುದನ್ನು ಈ ಸಮಾವೇಶದಲ್ಲಿ ವಿಪಕ್ಷಗಳು ಕಂಡುಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News