ಸದನದಲ್ಲಿ ವಿರೋಧ ಪಕ್ಷ: ಹಿಂದೆ ಗುರುವಿಲ್ಲ, ಮುಂದೆ ಗುರಿಯಿಲ್ಲ!

Update: 2023-07-20 14:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಿಂದೆ ಗುರು ಇಲ್ಲದೇ ಇದ್ದರೆ, ಮುಂದೆ ಗುರಿಯಿಲ್ಲದೇ ಇದ್ದರೆ ಏನಾಗಬಹುದು ಎನ್ನುವುದಕ್ಕೆ ಸದನ ಕಲಾಪದಲ್ಲಿ ವಿರೋಧ ಪಕ್ಷದ ನಾಯಕರ ಬೇಜವಾಬ್ದಾರಿ ವರ್ತನೆಗಳೇ ಸಾಕ್ಷಿ. ‘ರಾಜಕೀಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿ ಬಿಜೆಪಿಯ ಶಾಸಕರು ಗದ್ದಲ ಎಬ್ಬಿಸಿದ್ದು ಮಾತ್ರವಲ್ಲ, ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಮುಖದ ಮೇಲೆ ವಿಧೇಯಕಗಳ ಪ್ರತಿಗಳನ್ನು ಹರಿದು ಎಸೆದಿದ್ದಾರೆ. ಈ ಅವಿವೇಕದ ನಡೆಗಾಗಿ ಬಿಜೆಪಿಯ ಸುಮಾರು ೧೦ ಮಂದಿ ಸದಸ್ಯರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಸದನ ಕಲಾಪಗಳ ಸಂದರ್ಭದಲ್ಲಿ ಗದ್ದಲಗಳು ನಡೆಯುವುದಿಲ್ಲ ಎಂದಲ್ಲ. ಕೆಲವೊಮ್ಮೆ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ, ಕಾಯ್ದೆಗಳ ವಿರುದ್ಧ, ಭಾರೀ ಭ್ರಷ್ಟಾಚಾರಗಳ ವಿರುದ್ಧ ವಿರೋಧ ಪಕ್ಷಗಳು ಒಂದಾಗಿ ದೊಡ್ಡ ಮಟ್ಟದಲ್ಲಿ ಗದ್ದಲ ಎಬ್ಬಿಸದೇ ಇದ್ದರೆ ಸರಕಾರ ಮಣಿಯುವುದಿಲ್ಲ. ವಿರೋಧಪಕ್ಷಗಳ ಅಭಿಪ್ರಾಯಗಳನ್ನು, ಪ್ರತಿಕ್ರಿಯೆಗಳನ್ನು ನಿರ್ಲಕ್ಷಿಸಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾದಾಗ ಕಲಾಪ ಗದ್ದಲಗಳಲ್ಲಿ ಮುಗಿದದ್ದಿದೆ. ನಿರ್ದಿಷ್ಟ ವಿಧೇಯಕಗಳ ಚರ್ಚೆ ನಡೆದ ಸಂದರ್ಭದಲ್ಲಿ ವಿಧೇಯಕಗಳನ್ನು ಹರಿದ ಉದಾಹರಣೆಗಳಿವೆ. ಆದರೆ ಇಲ್ಲಿ ಗದ್ದಲ ಎಬ್ಬಿಸಿದ ಶಾಸಕರಿಗೆ ಯಾವ ಗೊತ್ತು ಗುರಿಯೂ ಇದ್ದಿರಲಿಲ್ಲ. ಯಾವ ಕಾರಣಕ್ಕಾಗಿ ವಿಧೇಯಕವನ್ನು ಹರಿದು ಹಾಕಿದರು, ಯಾವ ಕ್ರಮವನ್ನು ನಿರೀಕ್ಷಿಸಿ ಗದ್ದಲ ಎಬ್ಬಿಸಿದರು ಎನ್ನುವುದು ಸ್ವತಃ ಶಾಸಕರಿಗೇ ಗೊತ್ತಿದ್ದಂತೆ ಇಲ್ಲ. ಒಟ್ಟಿನಲ್ಲಿ ಕಲಾಪಗಳು ನಡೆಯದಂತೆ ಗದ್ದಲ ಎಬ್ಬಿಸುವುದಕ್ಕಾಗಿಯೇ ವಿರೋಧ ಪಕ್ಷಗಳಿರುವುದು ಎನ್ನುವಂತೆ ಕೆಲವು ಶಾಸಕರು ವರ್ತಿಸಿದ್ದಾರೆ. ವಿರೋಧ ಪಕ್ಷವನ್ನು ಮುನ್ನಡೆಸಲು, ಅವರಿಗೆ ಮಾರ್ಗದರ್ಶನವನ್ನು ನೀಡಲು ಯೋಗ್ಯ ನಾಯಕರ ಕೊರತೆಯೇ ಇವೆಲ್ಲಕ್ಕೂ ಕಾರಣವಾಗಿದೆ.

‘ರಾಜಕೀಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಲಾಗಿದೆ’ ಎನ್ನುವ ಬಿಜೆಪಿ ಶಾಸಕರ ಆರೋಪವೇ ಹಾಸ್ಯಾಸ್ಪದ. ಕಳೆದ ಚುನಾವಣೆಯ ಸಂದರ್ಭದಲ್ಲಿ ಈ ದೇಶದ ಪ್ರಧಾನಿ ಮತ್ತು ಗೃಹ ಸಚಿವರನ್ನು ದುರ್ಬಳಕೆ ಮಾಡಿಯೂ ಚುನಾವಣೆ ಗೆಲ್ಲಲಾಗದ ಸಂಕಟ , ಹತಾಶೆ ಅವರ ಪ್ರತಿಭಟನೆಯಲಿ ಎದ್ದುಕಾಣುತ್ತಿತ್ತು. ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ, ಗೃಹ ಸಚಿವರನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿದ ಸಂದರ್ಭದಲ್ಲಿ ಬಳಕೆಯಾದ ಐಎಎಸ್ ಅಧಿಕಾರಿಗಳ ಬಗ್ಗೆ ಬಿಜೆಪಿ ನಾಯಕರು ಏನನ್ನುತ್ತಾರೆ? ಆಗ ದುರ್ಬಳಕೆಯಾಗಿರುವುದು ತೆರಿಗೆಯ ಹಣವಲ್ಲವೆ? ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷ ಸಮಾವೇಶ ನಡೆದಾಗ ಅಲ್ಲಿಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೂ ಆಗಮಿಸಿದ್ದಾರೆ. ಅವರಿಗೆ ನೀಡಬೇಕಾದ ಗೌರವಗಳನ್ನು ನೀಡುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ಈ ಹಿಂದೆ ಬಿಜೆಪಿಯ ಸಮಾವೇಶ ನಡೆದಾಗ ಪಕ್ಷದ ಬೇರೆ ಬೇರೆ ನಾಯಕರು ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದಾಗಲೂ ಅಂದಿನ ಸರಕಾರ ಐಎಎಸ್ ಅಧಿಕಾರಿಗಳನ್ನು ಅವರ ಸೇವೆಗೆ ಬಳಸಿಕೊಂಡಿದ್ದಾರೆ. ಹೀಗಿರುವಾಗ, ಸದನದಲ್ಲಿ ಚರ್ಚಿಸಬೇಕಾದ ಪ್ರಮುಖ ವಿಷಯಗಳನ್ನು ಬದಿಗಿಟ್ಟು, ಈ ಕ್ಷುಲ್ಲಕ ವಿಷಯಕ್ಕಾಗಿ ಸದನದ ಘನತೆ, ಗಾಂಭೀರ್ಯಗಳನ್ನು ಗಾಳಿಗೆ ತೂರಿರುವುದು ವಿರೋಧ ಪಕ್ಷಕ್ಕೆ ಸೂಕ್ತ ಮಾರ್ಗದರ್ಶನದ ಕೊರತೆಯಿರುವುದನ್ನು ಹೇಳುತ್ತಿದೆ. ಬಿಜೆಪಿಯ ನಾಯಕರ ಈ ವರ್ತನೆಗಳಿಂದ ಸದನದ ಘನತೆ, ವಿರೋಧ ಪಕ್ಷದ ಘನತೆ ಏಕಕಾಲಕ್ಕೆ ನೆಲಕಚ್ಚಿದೆ.

ವಿರೋಧ ಪಕ್ಷದ ಕೆಲಸ ಗದ್ದಲ ಎಬ್ಬಿಸಿ ಕಲಾಪವನ್ನು ಅಸ್ತವ್ಯಸ್ತಗೊಳಿಸುವುದಲ್ಲ. ಸರಕಾರಕ್ಕೆ ಸೂಕ್ತ ಮಾರ್ಗದರ್ಶನವನ್ನು ನೀಡುವುದು. ಐಎಎಸ್ ಅಧಿಕಾರಿಗಳಿಂದ ಹಿಡಿದು ಎಲ್ಲ ಸರಕಾರಿ ವ್ಯವಸ್ಥೆಗಳನ್ನು ದುರುಪಯೋಗಗೊಳಿಸಿದ ಹೆಗ್ಗಳಿಕೆಯುಳ್ಳ ಬಿಜೆಪಿಯು, ಇದೀಗ ಕಾಂಗ್ರೆಸ್ ಸರಕಾರ ಐಎಎಸ್ ಅಧಿಕಾರಿಗಳನ್ನು ತಮ್ಮ ರಾಜಕೀಯ ಕಾರ್ಯಕ್ರಮಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸುವುದರಿಂದ ಅರ್ಥವಾಗುವುದೇನೆಂದರೆ, ಬಿಜೆಪಿಯ ಬಳಿ ಪ್ರತಿಭಟಿಸುವುದಕ್ಕೆ ವಿಷಯಗಳೇ ಇಲ್ಲ. ಅಥವಾ ಸೂಕ್ತ ವಿಷಯಗಳನ್ನು ಕೈಗೆತ್ತಿಕೊಂಡು ಪ್ರತಿಭಟಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲ ಮುತ್ಸದ್ದಿಗಳ ಕೊರತೆಯಿದೆ. ಸದ್ಯಕ್ಕೆ ಗದ್ದಲ ಎಬ್ಬಿಸಿ ಕೇಂದ್ರ ವರಿಷ್ಠರಿಗೆ ತಮ್ಮ ಅರ್ಹತೆಯನ್ನು ಸಾಬೀತು ಪಡಿಸಲು ಬಿಜೆಪಿಯೊಳಗಿನ ಶಾಸಕರಲ್ಲಿ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಕರಾವಳಿಯ ಐವರು ಶಾಸಕರು ಗುರುತಿಸಿಕೊಂಡಿರುವುದು ಆಕಸ್ಮಿಕವಲ್ಲ. ಅಷ್ಟೇ ಅಲ್ಲ, ಈ ಪ್ರಕರಣ ಉಪ ಸ್ಪೀಕರ್ ಅವರ ಆರೋಪದಿಂದಾಗಿ ಬೇರೆಯೇ ಆಯಾಮವನ್ನು ಪಡೆದಿದೆ. ವಿಧೇಯಕವನ್ನು ಹರಿದು ತನ್ನ ಮುಖಕ್ಕೆ ಎಸೆಯುವುದರ ಹಿಂದೆ ‘ಜಾತಿ ಮನಸ್ಥಿತಿ’ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ‘‘ನಾನು ದಲಿತ ಎನ್ನುವ ಕಾರಣಕ್ಕಾಗಿಯೇ ಅವರು ನನಗೆ ಈ ಅವಮಾನ ಮಾಡಿದ್ದಾರೆ’’ ಎಂದು ಅವರು ನೊಂದು ನುಡಿದಿದ್ದಾರೆ. ಉಪ ಸ್ಪೀಕರ್ ಸ್ಥಾನದಲ್ಲಿ ಮೇಲ್ ಜಾತಿಯ ಅಥವಾ ಆರೆಸ್ಸೆಸ್ ಹಿನ್ನೆಲೆಯ ನಾಯಕನೊಬ್ಬ ಕೂತಿದ್ದರೆ ಅವರ ಮುಂದೆ ಬಿಜೆಪಿಯ ನಾಯಕರು ಇಂತಹ ವರ್ತನೆಯನ್ನು ಪ್ರದರ್ಶಿಸುತ್ತಿದ್ದರೆ? ಎನ್ನುವ ಪ್ರಶ್ನೆ ನಿರ್ಲಕ್ಷಿಸುವಂತಹದು ಖಂಡಿತಾ ಅಲ್ಲ.

ದಿಲ್ಲಿಯಲ್ಲಿ ತನ್ನ ಮಿತ್ರ ಪಕ್ಷವನ್ನು ಒಗ್ಗೂಡಿಸಿ ಸಮಾವೇಶ ನಡೆಸಿರುವ ಪ್ರಧಾನಿ ಮೋದಿಯವರು, ಮೊತ್ತ ಮೊದಲು ರಾಜ್ಯದಲ್ಲಿ ಬಿಜೆಪಿಯನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಬೇಕಾಗಿದೆ. ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರ ಘೋಷಣೆಯಾದ ಬೆನ್ನಿಗೇ ಬಿಜೆಪಿಯೊಳಗೆ ಭಿನ್ನಮತ ಸ್ಫೋಟಗೊಳ್ಳಲಿದೆ ಎನ್ನುವ ಆತಂಕದಿಂದ ನಾಯಕರ ಆಯ್ಕೆಯನ್ನು ಕೇಂದ್ರ ವರಿಷ್ಠರು ಮುಂದೂಡುತ್ತಿದ್ದಾರೆ. ಆದರೆ ಇದರ ದುಷ್ಪರಿಣಾಮ ಸದನ ಕಲಾಪಗಳಲ್ಲಿ ಕಂಡು ಬರುತ್ತಿದೆ. ಆರೆಸ್ಸೆಸ್ನ ಕುಮ್ಮಕ್ಕಿನಿಂದ ಬಿಜೆಪಿಯು ಹಿರಿಯ ನಾಯಕರನ್ನು ಹೊರ ಗಿಟ್ಟ ಪರಿಣಾಮದಿಂದಾಗಿ ಬಿಜೆಪಿಯಲ್ಲಿ ಅನುಭವಿ, ಮುತ್ಸದ್ದಿ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಬರೇ ಆವೇಶ, ಆಕ್ರೋಶ, ಹೊಡಿ-ಬಡಿ ಮೂಲಕ ಸದನದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವ ಪ್ರಯತ್ನದಲ್ಲಿರುವ ಕೆಲವು ಶಾಸಕರಿಂದಾಗಿ ಕಳೆದ ಚುನಾವಣೆಯ ಸೋಲಿಗಿಂತಲೂ ಹೆಚ್ಚಿನ

ನಾಚಿಗೆಗೇಡನ್ನು ಬಿಜೆಪಿ ಅನುಭವಿಸಬೇಕಾಗಿ ಬಂದಿದೆ. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿಯಂತಹ ಮಹತ್ತರ ಯೋಜನೆಗಳನ್ನು ಸರಕಾರ ಜಾರಿಗೊಳಿಸುತ್ತಿರುವ ಸಂದರ್ಭದಲ್ಲಿ ಅದರ ಸಾಧಕಬಾಧಕಗಳನ್ನು ಸೂಕ್ಷ್ಮವಾಗಿ ಗಮನಿಸಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಯೋಗ್ಯ ನಾಯಕರನ್ನು ಬಿಜೆಪಿ ಇನ್ನಾದರೂ ಆಯ್ಕೆ ಮಾಡಿ ತನ್ನ ಅಳಿದುಳಿದ ಮಾನವನ್ನು ಕಾಪಾಡಿಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News