ಅಕ್ರಮಗಳೇ ಪತಂಜಲಿಯ ಸ್ವದೇಶಿ ಉತ್ಪನ್ನಗಳು !

Update: 2023-11-25 04:31 GMT

Photo: PTI 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಪತಂಜಲಿ ಸುದ್ದಿಯಾಗುತ್ತಿರುವುದು ತನ್ನ ಉತ್ಪನ್ನಗಳಿಗಾಗಿ ಅಲ್ಲ, ತಾನು ಮಾಡುತ್ತಿರುವ ಅಕ್ರಮಗಳಿಗಾಗಿ. ಸ್ವದೇಶಿ ಮುಖವಾಡದಲ್ಲಿ ಸಾವಿರಾರು ಕೋಟಿ ರೂ.ವ್ಯವಹಾರಗಳನ್ನು ಮಾಡುತ್ತಿರುವ ಪತಂಜಲಿ ರಾಮ್‌ದೇವ್ ಸನ್ಯಾಸಿ ವೇಷ ಭೂಷಣದಲ್ಲಿ ರುವ ಬೃಹತ್ ಉದ್ಯಮಿ. ತನ್ನ ಬೃಹತ್ ಉದ್ಯಮ ವಲಯವನ್ನು ರಕ್ಷಿಸಲು ಧರ್ಮ, ಸಂಸ್ಕೃತಿಯನ್ನು ಕೋಟೆಯಾಗಿ ಬಳಸುತ್ತಾ ಬಂದಿದ್ದಾರೆ. ಬೇರೆ ದೇಶದಲ್ಲಾದರೆ ಆರೋಗ್ಯ ಕ್ಷೇತ್ರದಲ್ಲಿ ಈತ ಮಾಡಿರುವ ಭಾನಗಡಿಗಳಿಗಾಗಿ ಎಂದೋ ಜೈಲು ಸೇರಬೇಕಾಗಿತ್ತು. ಆದರೆ ಇಂದು ರಾಮ್‌ದೇವ್ ತಾನು ಹಾಕಿರುವ ಕಾವಿ ವೇಷದ ಬಲದಿಂದ ಸರಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಭಾರತದಲ್ಲಿ ಬೆಳೆದು ಬಿಟ್ಟಿದ್ದಾರೆ. ಆದುದರಿಂದ ಇವರು ನಡೆಸುತ್ತಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಧೈರ್ಯ ಸರಕಾರಕ್ಕಿದ್ದಂತಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ರಾಮಲೀಲಾ ಮೈದಾನದಲ್ಲಿ ದುಷ್ಕೃತ್ಯ ಎಸಗಲು ವಿಫಲ ಯತ್ನ ನಡೆಸಿ, ಬಳಿಕ ಪೊಲೀಸರ ಬಂಧನಕ್ಕೆ ಹೆದರಿ ರಾತ್ರೋರಾತ್ರಿ ಚೂಡಿಧಾರ ಧರಿಸಿ ಪಲಾಯನಗೈದ ರಾಮ್‌ದೇವ್ ಇಂದು ಅಕ್ರಮಗಳ ಬೃಹತ್ ಉತ್ಪಾದಕನಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಆರೋಗ್ಯ, ಯೋಗ, ಸ್ವದೇಶಿ ಉತ್ಪನ್ನಗಳನ್ನು ಮುಂದಿಟ್ಟು ಸರಕಾರದಿಂದ ನೂರಾರು ಸವಲತ್ತುಗಳನ್ನು ಬಾಚಿಕೊಳ್ಳುತ್ತಾ, ಬೇರೆ ಬೇರೆ ಸಬ್ಸಿಡಿಗಳನ್ನು ದೋಚಿಕೊಳ್ಳುತ್ತಾ, ನೂರಾರು ಎಕರೆ ಜಮೀನುಗಳನ್ನು ಕಡಿಮೆ ದರದಲ್ಲಿ ತನ್ನದಾಗಿಸಿಕೊಳ್ಳುತ್ತಾ ಬೆಳೆಯುತ್ತಿರುವ ಈ ನಕಲಿ ಉದ್ಯಮಿ ಮತ್ತು ವೈದ್ಯ ಇದೀಗ ಅಕ್ರಮ ರಿಯಲ್ ಎಸ್ಟೇಟ್ ದಂಧೆಗಾಗಿ ಸುದ್ದಿಯಲ್ಲಿದ್ದಾರೆ.ಬೇನಾಮಿ ಕಂಪೆನಿಗಳ ಮೂಲಕ ಹರ್ಯಾಣದ ಮಂಗರ್ ಗ್ರಾಮದಲ್ಲಿ ಕೋಟ್ಯಂತರ ರೂ. ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ವಿಚಾರವನ್ನು ಇದೀಗ ತನಿಖಾ ವರದಿಯೊಂದು ಬಹಿರಂಗಪಡಿಸಿದೆ. ಹಲವಾರು ಕಂಪೆನಿಗಳು ಇಲ್ಲಿ ಭೂಮಿ ಖರೀದಿಸಿದ್ದು, ಅವೆಲ್ಲವೂ ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪೆನಿಗೆ ಸೇರಿರುವುದನ್ನು ರಿಪೋರ್ಟರ್ಸ್‌ ಕಲೆಕ್ಟಿವ್ ತನಿಖಾ ವರದಿ ಬಯಲಿಗೆಳೆದಿದೆ. ಪತಂಜಲಿ ಸಮೂಹದೊಂದಿಗೆ ಸಂಬಂಧಹೊಂದಿರುವ ಶೆಲ್ ಕಂಪೆನಿಗಳ ಜಾಲವನ್ನು ವರದಿ ಪತ್ತೆ ಮಾಡಿದ್ದು, ಅವುಗಳು ಬಾಬಾ ರಾಮದೇವ್ ಅವರ ಸಂಬಂಧಿಗಳ ಮತ್ತು ಸಹವರ್ತಿಗಳ ನಿಯಂತ್ರಣದಲ್ಲಿರುವುದೂ ಗೊತ್ತಾಗಿದೆ. ಅಧ್ಯಾತ್ಮ, ಯೋಗ, ಆರೋಗ್ಯ ಕ್ಷೇತ್ರಗಳನ್ನು ಅವರು ತನ್ನ ರಿಯಲ್ ಎಸ್ಟೇಟ್ ದಂಧೆಗೆ ಬಳಸಿ ಕೋಟ್ಯಂತರ ರೂ. ಯನ್ನು ಸಂಪಾದಿಸುತ್ತಿರುವುದು ಬೆಳಕಿಗೆ ಬಂದಿದೆಯಾದರೂ, ಈ ಬಗ್ಗೆ ಸರಕಾರ ಮಾತ್ರ ಯಾವ ಕ್ರಮವೂ ತೆಗೆದುಕೊಂಡಿಲ್ಲ. ಬಾಬಾ ರಾಮ್‌ದೇವ್ ತನ್ನ ಯೋಗ ಮತ್ತಿತರ ಹೆಸರಿನಲ್ಲಿ ಬಹಳಷ್ಟು ರಿಸಾರ್ಟ್‌ಗಳನ್ನು ಹೊಂದಿರುವುದು, ಆ ಮೂಲಕವೇ ಕೋಟ್ಯಂತರ ರೂ.ಗಳನ್ನು ಸಂಪಾದಿಸುತ್ತಿರುವುದು ಕೂಡ ಮಾಧ್ಯಮಗಳಲ್ಲಿ ಚರ್ಚೆಯಾಗಿವೆ. ಇಷ್ಟಾದರೂ ಸರಕಾರದ ಯಾವುದೇ ತನಿಖಾ ಸಂಸ್ಥೆಗಳು ಈತನನ್ನು ಮುಟ್ಟುವ ಧೈರ್ಯವನ್ನು ತೋರಿಸಿಲ್ಲ.

ಈ ದೇಶದಲ್ಲಿ ಉದ್ಯಮಗಳ ಹೆಸರಿನಲ್ಲಿ ಅಕ್ರಮಗಳು ಹೊಸತೇನೂ ಅಲ್ಲ. ಅದಾನಿ, ಅಂಬಾನಿಗಳಿಂದ ಹಿಡಿದು ನೂರಾರು ಬೃಹತ್ ಉದ್ಯಮಿಗಳು ಅಕ್ರಮ ದಾರಿಯ ಮೂಲಕ ಈ ದೇಶವನ್ನು ದೋಚುತ್ತಲೇ ಇದ್ದಾರೆ. ಹಲವರು ವಂಚಿಸಿ ದೇಶವನ್ನು ತೊರೆದಿದ್ದಾರೆ. ಪತಂಜಲಿ ಬಾಬಾ ಅವರೆಲ್ಲರಿಗಿಂತಲೂ ಯಾಕೆ ಅಪಾಯಕಾರಿಯೆಂದರೆ, ಈತ ಒಂದೆಡೆ ತನ್ನನ್ನು ತಾನು ಪರಂಪರೆಯ ರಕ್ಷಕನೆಂದು, ಸನ್ಯಾಸಿಯೆಂದೂ, ಆಯುರ್ವೇದ ಕ್ಷೇತ್ರದ ಉದ್ಧಾರಕನೆಂದೂ ಬಿಂಬಿಸುತ್ತಾ, ಸರಕಾರ ದೇಶದ ಆರೋಗ್ಯ ಕ್ಷೇತ್ರಕ್ಕೆ ಸುರಿಯುತ್ತಿರುವ ಕೋಟ್ಯಂತರ ರೂ.ಗಳನ್ನು ತನ್ನ ಜೋಳಿಗೆಗೆ ಹಾಕಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರ ಆರೋಗ್ಯಕ್ಕಾಗಿ ವ್ಯಯಿಸಬೇಕಾದ ಈ ಹಣವನ್ನು ಆಯುರ್ವೇದ ವೈದ್ಯಕೀಯದ ಹೆಸರಿನಲ್ಲಿ ತನ್ನದಾಗಿಸಿಕೊಳ್ಳುತ್ತಿದ್ದಾರೆೆ. ಇಷ್ಟೇ ಅಲ್ಲ, ಪತಂಜಲಿ ಔಷಧಿಯ ಪ್ರಚಾರಕ್ಕಾಗಿ ಆತ ಜನಸಾಮಾನ್ಯರಲ್ಲಿ ಅಲೋಪತಿ ಔಷಧಿಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಹಂಚುತ್ತಿದ್ದಾರೆೆ. ಭಾರತದಲ್ಲಿ ಇಂದಿಗೂ ಕ್ಷಯ, ಎಚ್‌ಐವಿ, ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಔಷಧಿ ಸಿಗದೇ ಜನಸಾಮಾನ್ಯರು ಒದ್ದಾಡುತ್ತಿದ್ದಾರೆ. ಕೊರೋನೋತ್ತರ ದಿನಗಳಲ್ಲಿ ಭಾರತದ ಆರೋಗ್ಯ ಸಮಸ್ಯೆ ಬಹಳಷ್ಟು ಬಿಗಡಾಯಿಸಿದೆ. ಕೊರೋನಾ ಕಾಲದಲ್ಲಿ ರಾಮ್‌ದೇವ್ ಅಲೋಪತಿ ಔಷಧಿಗಳ ವಿರುದ್ಧ ಅಪಪ್ರಚಾರ ಮಾಡಿರುವುದು ಮಾತ್ರವಲ್ಲ, ಕೊರೋನವನ್ನು ಗುಣ ಪಡಿಸುತ್ತದೆ ಎಂದು ಹೇಳಿ ಯಾವ ಪ್ರಮಾಣ ಪತ್ರವೂ ಇಲ್ಲದ ತನ್ನದೇ ಔಷಧಿಯೊಂದನ್ನು ಮಾರುಕಟ್ಟೆಗೆ ಇಳಿಸಿದ್ದರು. ಈ ಕಾರಣಕ್ಕಾಗಿ ಈತನ ವಿರುದ್ಧ ಮೊಕದ್ದಮೆಗಳು ದಾಖಲಾದವು. ಕೊರೋನ ಕಾಲದಲ್ಲಿ ಪತಂಜಲಿ ಸಂಸ್ಥೆ ಕೆಸರಿನಲ್ಲಿ ಮೀನು ಹಿಡಿಯುವ ಪ್ರಯತ್ನ ನಡೆಸಿತು. ನಕಲಿ ಔಷಧಿಗಳನ್ನು ಮಾರಿದ್ದಲ್ಲದೆ, ಅಲೋಪತಿ ಔಷಧಿಗಳು ನಕಲಿಯೆಂದು ಅಪಪ್ರಚಾರ ಮಾಡುತ್ತಾ ಸರಕಾರವನ್ನು, ಜನಸಾಮಾನ್ಯರನ್ನು ಏಕಕಾಲದಲ್ಲಿ ದಾರಿ ತಪ್ಪಿಸುತ್ತಾ ಬಂದರು. ಆಯುಷ್ ಹೆಸರಿನಲ್ಲಿ ಈತ ಮಾಡಿದ ಲಾಬಿಯಿಂದಾಗಿ, ಸರಕಾರಿ ಆಸ್ಪತ್ರೆಯಲ್ಲಿ ಅಲೋಪತಿಗೆ ನೀಡುತ್ತಾ ಬಂದಿರುವ ಅನುದಾನಗಳಲ್ಲಿ ವ್ಯತ್ಯಯವಾಯಿತು. ಇದರಿಂದ ನಿಜಕ್ಕೂ ನಷ್ಟವಾದದ್ದು ಅಲೋಪತಿ ಔಷಧಿಗಳಿಗಾಗಿ ಸರಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡ ಬಡವರ್ಗಕ್ಕೆ.

ಇತ್ತೀಚೆಗಷ್ಟೇ ಅಲೋಪತಿ ವೈದ್ಯಕೀಯ ಪದ್ಧತಿಯ ಬಗ್ಗೆ ತಪ್ಪು ಜಾಹೀರಾತುಗಳನ್ನು ನೀಡಿದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಬಾಬಾ ರಾಮ್‌ದೇವ್‌ಗೆ ಎಚ್ಚರಿಕೆಯನ್ನು ನೀಡಿತ್ತು. ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ‘‘ಪತಂಜಲಿ ಆಯುರ್ವೇದ ಕಂಪೆನಿಯು ತಪ್ಪುದಾರಿಗೆ ಎಳೆಯುವ ಮತ್ತು ಸತ್ಯಕ್ಕೆ ದೂರವಾಗಿರುವ ಎಲ್ಲ ಜಾಹೀರಾತುಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಈ ವಿಚಾರವಾಗಿ ಕಂಪೆನಿಯು ಕಾನೂನು ಉಲ್ಲಂಘಿಸುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ’’ ಎಂದು ಎಚ್ಚರಿಸಿತ್ತು. ಒಂದೊಂದು ತಪ್ಪು ಮಾಹಿತಿಯ ಜಾಹೀರಾತಿಗೆ ಒಂದು ಕೋಟಿ ರೂ.ದಂಡ ವಿಧಿಸುವುದಾಗಿಯೂ ಹೇಳಿತ್ತು. ಇಂತಹ ಹತ್ತು ಹಲವು ಎಚ್ಚರಿಕೆಗಳನ್ನು ಈಗಾಗಲೇ ಹಲವು ಬಾರಿ ನ್ಯಾಯಾಲಯದ ಮೂಲಕ ತನ್ನದಾಗಿಸಿಕೊಂಡರೂ ಪತಂಜಲಿ ಕಂಪೆನಿ ತನ್ನ ಚಾಳಿ ನಿಲ್ಲಿಸಿಲ್ಲ.

ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳು ಸೇರಿದಂತೆ ಶೇ. 40ರಷ್ಟು ಆಯುರ್ವೇದಿಕ್ ಉತ್ಪನ್ನಗಳು ಕೆಳದರ್ಜೆಯದ್ದು ಎಂದು ಹರಿದ್ವಾರದ ಆಯುರ್ವೇದ ಮತ್ತು ಯುನಾನಿ ಕಚೇರಿಯು ಕೆಲವು ವರ್ಷಗಳ ಹಿಂದೆ ತಿಳಿಸಿತ್ತು. 2013ರಿಂದ 2016ರವರೆಗಿನ ಅವಧಿಯಲ್ಲಿ ಸುಮಾರು 82 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇವುಗಳಲ್ಲಿ ಪತಂಜಲಿಯ ‘ದಿವ್ಯ ಆಮ್ಲ ಜ್ಯೂಸ್, ಶಿವಲಿಂಗಿ ಬೀಜ’ ಸೇರಿದಂತೆ 32 ಉತ್ಪನ್ನಗಳು ಗುಣಮಟ್ಟದಲ್ಲಿ ವಿಫಲವಾಗಿವೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ಮಾಹಿತಿಯಿಂದ ತಿಳಿದು ಬಂದಿದೆ. ತುಪ್ಪದಂತಹ ಆಹಾರ ಉತ್ಪನ್ನಗಳ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದಿವೆ. ಇಷ್ಟೆಲ್ಲ ಆರೋಪ, ಅಕ್ರಮಗಳ ನಡುವೆಯೂ ಸರಕಾರ ಆರೋಗ್ಯಕ್ಕಾಗಿ ಮೀಸಲಿಟ್ಟ ಹಣ, ಜಮೀನು ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಪತಂಜಲಿ ಸಂಸ್ಥೆ ತನ್ನದಾಗಿಸುತ್ತಾ ಬರುತ್ತಿದೆ. ಸಂಸ್ಕೃತಿ, ಪರಂಪರೆ, ಯೋಗ, ಧರ್ಮ, ಆರೋಗ್ಯ ಮೊದಲಾದ ಮುಖವಾಡದಲ್ಲಿ ಈತ ನಡೆಸುತ್ತಿರುವ ಬೃಹತ್ ಅಕ್ರಮ ದಂಧೆಗಳು ಭಾರತದ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಕ್ಷೇತ್ರಗಳ ಆರೋಗ್ಯವನ್ನೇ ಕೆಡಿಸುತ್ತಿವೆ. ಕನಿಷ್ಠ ಆರೋಗ್ಯ ಕ್ಷೇತ್ರದಿಂದಲಾದರೂ ಈತನ ಸಂಸ್ಥೆಗಳನ್ನು ದೂರವಿರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಆಯುಷ್ ಹೆಸರಿನಲ್ಲಿ ಈತನ ಸಂಸ್ಥೆಗಳಿಗೆ ನೀಡುವ ಸವಲತ್ತುಗಳನ್ನು ತಕ್ಷಣ ನಿಲ್ಲಿಸಬೇಕು. ಜನರಿಗಿಂದು ತುರ್ತು ಮೂಲಭೂತವಾದ ಆರೋಗ್ಯ ಸೇವೆಗಳ ಅಗತ್ಯವಿದೆ. ಯೋಗ, ಆಯುರ್ವೇದ ಔಷಧಿಗಳು ಜನಸಾಮಾನ್ಯರ ಐಚ್ಛಿಕವಾದ ಆಯ್ಕೆಯಾಗಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಅವುಗಳನ್ನು ಅನಿವಾರ್ಯ ಆಯ್ಕೆಯಾಗಿಸಬಾರದು. ಅಲೋಪತಿ ಔಷಧಿಗಳು ನೀಡುವ ಗಂಭೀರ ಸೇವೆಗಳನ್ನು ಇಂದಿಗೂ ಆಯುರ್ವೇದದಂತಹ ಔಷಧಿಗಳಿಗೆ ನೀಡಲು ಸಾಧ್ಯವಾಗಿಲ್ಲ. ಕ್ಯಾನ್ಸರ್, ಕ್ಷಯದಂತಹ ರೋಗಗಳನ್ನು ಎದುರಿಸಲು ಆಯುರ್ವೇದ ಔಷಧಿಗಳಿಗೆ ಸಾಧ್ಯವಿಲ್ಲ ಎಂದು ಗೊತ್ತಿರುವಾಗ ಪರಂಪರೆ, ಸಂಸ್ಕೃತಿ, ಸ್ವದೇಶಿ ಮೊದಲಾದ ಹೆಸರಿನಲ್ಲಿ ಪತಂಜಲಿಯಂತಹ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ನಮ್ಮ ಆರೋಗ್ಯ ಕ್ಷೇತ್ರವನ್ನು ನಾವು ಕೈಯಾರೆ ನಾಶ ಮಾಡಬಾರದು. ವೈದ್ಯಕೀಯ ಸಂಶೋಧನೆ, ಯೋಗ, ಸ್ವದೇಶಿ ಉತ್ಪನ್ನ ಮೊದಲಾದ ಹೆಸರಿನಲ್ಲಿ, ಪತಂಜಲಿಯಂತಹ ಸಂಸ್ಥೆಗಳು ಮಾಡುತ್ತಿರುವ ಅಕ್ರಮ ದಂಧೆಗಳ ಬಗ್ಗೆ ಸರಕಾರ ಗಂಭೀರ ತನಿಖೆಯೊಂದನ್ನು ನಡೆಸುವುದಕ್ಕೆ ಇದು ಸುಸಮಯವಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News