ನದಿ ನೀರಿನ ಮಾಲಿನ್ಯ

Update: 2024-08-27 06:11 GMT

ಸಾಂದರ್ಭಿಕ ಚಿತ್ರ (PTI)

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಒಳಚರಂಡಿ ನೀರು ಮತ್ತು ಆಯಾ ಜಲಾನಯನ ಪ್ರದೇಶದಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ಸೇರುತ್ತಿರುವುದರಿಂದ ಕರ್ನಾಟಕದ ಹತ್ತು ನದಿಗಳು ಕಲುಷಿತಗೊಂಡಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಕೊಂಡಿದೆ. ರಾಜ್ಯದ ನದಿಗಳು ಮಲಿನಗೊಂಡಿರುವ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ (ಎನ್ ಜಿಟಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ( ಕೆಎಸ್ ಪಿಸಿಬಿ) ಈ ಕುರಿತು ಪ್ರಮಾಣ ಪತ್ರ ಸಲ್ಲಿಸಿದೆ.

ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಸಿಸಿಬಿ) ಜಲಶಕ್ತಿ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ಪೈಕಿ ಶರಾವತಿ, ಗಂಗಾವಳಿ, ಅಘನಾಶಿನಿ, ಕೃಷ್ಣಾ, ಕಾಗಿನಾ ಮತ್ತು ನೇತ್ರಾವತಿ ನದಿಗಳಲ್ಲಿ ಕರಗಿದ ಆಮ್ಲಜನಕದ ಪ್ರಮಾಣ ಲೀಟರ್‌ಗೆ 3 ಮಿಲಿಗ್ರಾಂ ದಾಟಿಲ್ಲ. ಹೀಗಾಗಿ ಈ ನದಿಗಳನ್ನು ಕಲುಷಿತ ನದಿಗಳ ಪಟ್ಟಿಯಿಂದ ಕೈ ಬಿಡಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದು ತಿಳಿಸಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟೀಕರಣ ನೀಡಿದೆ. ಈಗ ಹೊಸದಾಗಿ ಪಟ್ಟಿ ಮಾಡಿದ ಪ್ರಕಾರ ಅರ್ಕಾವತಿ, ಭದ್ರಾ, ಭೀಮಾ, ಕಾವೇರಿ, ದಕ್ಷಿಣ ಪಿನಾಕಿನಿ, ಕಬಿನಿ, ಲಕ್ಷ್ಮಣ ತೀರ್ಥ, ಶಿಂಷಾ, ತುಂಗಾ ಹಾಗೂ ತುಂಗಭದ್ರಾ ನದಿಗಳು ಕಲುಷಿತಗೊಂಡಿವೆ ಎಂದು ತಿಳಿದು ಬಂದಿದೆ.

ವಾಸ್ತವವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ನದಿ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಎಷ್ಟಿದೆಯೆಂಬುದನ್ನು ಮಾತ್ರ ಹೇಳಿದೆ. ಆದರೆ ಅದಕ್ಕಿಂತ ಕಂಟಕಕಾರಿಯಾದ ಕೀಟನಾಶಕ ಅಂಶಗಳು, ನೈಟ್ರೆಟ್ ಲವಣಗಳು ಆ್ಯಂಟಿ ಬಯಾಟಿಕ್ ದ್ರಾವಣದ ಮಾಹಿತಿ ಈ ವರದಿಯಲ್ಲಿ ಇಲ್ಲ. ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್ ಮಾಲಿನ್ಯದ ಉಲ್ಲೇಖವಿಲ್ಲ. ಮಲಿನಗೊಂಡ ನದಿ ನೀರಿನಲ್ಲಿ ಜಲಚರಗಳು ಹೇಗೆ ಬದುಕುತ್ತವೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

ಮಾಲಿನ್ಯ ನಿಯಂತ್ರಣ ಮಂಡಳಿ ಎಂಬುದು ಇರುವುದಾದರೂ ಯಾಕೆ? ನದಿಗಳಲ್ಲಿ ಕೊಳೆ, ಕಸ, ಕಾರ್ಖಾನೆಗಳ ತ್ಯಾಜ್ಯವನ್ನು ಚೆಲ್ಲುವವರ ಮೇಲೆ ನಿಗಾ ಇಡುವುದು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸುವುದು ಇವು ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಣೆಗಾರಿಕೆ. ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಲಾಗದ ಮಂಡಳಿ ಈಗ ಅಸ್ತಿತ್ವದಲ್ಲಿರುವುದು ಮಾಲಿನ್ಯ ಮಾಡುವ ಕಂಪೆನಿಗಳ ಕಾರ್ಖಾನೆಗಳಿಗೆ ನಿರಪೇಕ್ಷಣಾ ಪತ್ರ ಕೊಡಲು ಮಾತ್ರ ಎಂಬಂತಾಗಿದೆ.

ಕರ್ನಾಟಕದ ನದಿಗಳಿಗೆ 107 ಕೋಟಿ ಲೀಟರ್‌ಗಳಷ್ಟು ಕೊಳಚೆ ನೀರು ಸೇರುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2021ರಲ್ಲಿ ವರದಿ ನೀಡಿತ್ತು. ಈಗ ಈ ಪ್ರಮಾಣ ಹೆಚ್ಚಾಗಿರಬಹುದು. ಹರಿಹರದ ಬಳಿ ಹರಿಯುವ ತುಂಗಭದ್ರಾ ನದಿ ಸೇರಿದಂತೆ ಬಹುತೇಕ ನದಿಗಳಿಗೆ ಅತ್ಯಂತ ಅಪಾಯಕಾರಿಯಾದ ಕಾರ್ಖಾನೆಗಳ ತ್ಯಾಜ್ಯ ಸೇರುತ್ತದೆ. ಇದನ್ನು ನಿಯಂತ್ರಿಸಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಕರ್ತವ್ಯ ಪಾಲನೆಯಲ್ಲಿ ವಿಫಲಗೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ವಾಸ್ತವ ಸಂಗತಿಯೆಂದರೆ ನದಿಗಳ ತೀರದ ಪ್ರದೇಶದಲ್ಲಿ ನದಿಗಳ ಶುದ್ಧೀಕರಣ ಘಟಕಗಳಿಲ್ಲ. ನದಿಗಳ ಶುದ್ಧೀಕರಣಕ್ಕಾಗಿ ಯಾವ ಪರಿಣಾಮಕಾರಿ ಕ್ರಮಗಳನ್ನೂ ಮಂಡಳಿ ರೂಪಿಸಿಲ್ಲ. ಅಟಲ್ ಮಿಶನ್, ಸ್ಮಾರ್ಟ್ ಸಿಟಿ ಮಿಶನ್ ಹೆಸರಿನಲ್ಲಿ ಕೇಂದ್ರ ಜಲಶಕ್ತಿ ಇಲಾಖೆ ಖರ್ಚು ಮಾಡುವ ಹಣ ವ್ಯರ್ಥವಾಗುತ್ತಿದೆ.

ನಮಗೆ ಅಂದರೆ ಭಾರತೀಯರಿಗೆ ಎಲ್ಲವನ್ನು ಪೂಜಿಸುವುದು ಮಾತ್ರ ಗೊತ್ತು. ನದಿಗಳಿಗೆ ಪವಿತ್ರ ಸ್ಥಾನವನ್ನು ನೀಡಿ ಪ್ರಾಣ ಪೋಷಿಣಿ, ಜೀವದಾಯಿನಿ ಎಂದು ಕರೆಯುತ್ತೇವೆ. ರಾಜಕಾರಣಿಗಳಿಂದ ವರ್ಷಕ್ಕೊಮ್ಮೆ ನದಿಗಳಿಗೆ ಬಾಗಿನ ಅರ್ಪಿಸುವ ಕಾರ್ಯವೂ ನಡೆಯುತ್ತದೆ. ಆದರೆ ಅಭಿವೃದ್ಧಿ ಯೋಜನೆಗಳ ಅವಿವೇಕದಲ್ಲಿ ದೇಶದ ಪ್ರಮುಖ ನದಿಗಳಾದ ಯಮುನಾ, ಗಂಗಾ, ಕೋಲ್ಕತಾದ ಹೂಗ್ಲಿ, ಬೆಂಗಳೂರಿನ ವೃಷಭಾವತಿ ಮುಂತಾದ ನದಿಗಳು ವಿನಾಶದ ಅಂಚಿಗೆ ಬಂದು ನಿಂತಿವೆ. ಭಾರತದ ಗಾಳಿ, ನೀರು, ಮಣ್ಣು ಸೇರಿದಂತೆ ಎಲ್ಲವೂ ವಿಷಮಯವಾಗುತ್ತಿದೆ. ನಮಗೆ ಗಂಗಾರತಿ ಮತ್ತು ತುಂಗಾರತಿ ಮಾಡುವುದು ಮಾತ್ರ ಗೊತ್ತು. ಇನ್ನೊಂದು ಕಡೆ ಅಪಾಯಕಾರಿ ಔದ್ಯಮಿಕ ಚಟುವಟಿಕೆಗಳಿಂದಾಗಿ ಜೀವ ನದಿಗಳು ನಾಶವಾಗುತ್ತಿರುವ ಬಗ್ಗೆ ನಮಗೆ ಅರಿವಿಲ್ಲ.

ವಿಶ್ವದ 180 ದೇಶಗಳ ಪರಿಸರ ಪರಿಸ್ಥಿತಿಯನ್ನು ಕುರಿತು ಅಧ್ಯಯನ ಮಾಡುವ ಅಮೆರಿಕದ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಕಳೆದ ವರ್ಷ ಭಾರತಕ್ಕೆ ಅತ್ಯಂತ ಕೊನೆಯ 180ನೇ ಶ್ರೇಯಾಂಕವನ್ನು ಕೊಟ್ಟಿದ್ದರು. ಕೋವಿಡ್ ಕಾಲಾವಧಿಯ ದಿಗ್ಬಂಧನದ ಸಮಯದಲ್ಲಿ ಮಾತ್ರ ಗಾಳಿ ಮತ್ತು ಕುಡಿಯುವ ನೀರು ಶುದ್ಧವಾಗಿದ್ದುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಇದರರ್ಥ ನಾವು ಭಾರತೀಯರು ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿ ಗೃಹ ಬಂಧನದಲ್ಲಿ ಇದ್ದರೆ ಮಾತ್ರ ಶುದ್ಧ ಗಾಳಿ ಮತ್ತು ನೀರು ಸಿಗಬಹುದೇನೋ.

ಕಲುಷಿತ ನೀರಿಗೆ ಇನ್ನೊಂದು ಮುಖ್ಯ ಕಾರಣವೆಂದರೆ ಅಸಮರ್ಪಕ ಒಳಚರಂಡಿ ವ್ಯವಸ್ಥೆ. ರಾಜ್ಯದ ಬಹುತೇಕ ನಗರಗಳಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದಾಗಿ ಚರಂಡಿಯ ಕೊಳಚೆ ನೀರು ಜಲ ಮೂಲಗಳನ್ನು ಸೇರಿ ಕಲುಷಿತಕ್ಕೆ ಕಾರಣವಾಗಿದೆ. ಇದರಿಂದ ನಾನಾ ಕಾಯಿಲೆಗಳು ಹಬ್ಬುತ್ತವೆ. ಜಲ ಮೂಲಗಳನ್ನು ಕಾಪಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಆಸಕ್ತಿ ವಹಿಸುವುದಿಲ್ಲ. ಚರಂಡಿ ನೀರನ್ನು ಶುದ್ಧೀಕರಣ ಮಾಡಿ ಜಲಮಾಲಿನ್ಯ ನಿಯಂತ್ರಿಸುವ ಕಾರ್ಯ ಸರಿಯಾಗಿ ನಡೆದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೊಳಚೆ ನೀರು ಜಲಮೂಲಗಳನ್ನು ಸೇರುವ ವಿಷಯದಲ್ಲಿ ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಹೊಣೆಗೇಡಿತನ ಎದ್ದು ಕಾಣುತ್ತದೆ. ಜನತೆ ಜಾಗೃತರಾಗಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸಬೇಕಾಗಿದೆ.

ಕೇವಲ ನದಿಗಳ ನೀರು ಮಾತ್ರವಲ್ಲ, ರಾಜ್ಯದಲ್ಲಿರುವ ಬಹುತೇಕ ಕೆರೆಗಳ ನೀರು ಕೂಡ ಕುಡಿಯಲು ಸುರಕ್ಷಿತವಾಗಿಲ್ಲ. ರಾಜಧಾನಿ ಬೆಂಗಳೂರಿನ 106 ಕೆರೆಗಳ ನೀರಿನ ಗುಣಮಟ್ಟವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷಿಸಿದಾಗ ಶೇ. 66ರಷ್ಟು ಕೆರೆಗಳ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಉಳಿದ ಕೆರೆಗಳಲ್ಲಿ ಲೋಹ, ಒಳಚರಂಡಿ ತ್ಯಾಜ್ಯ ಸೇರಿ ನೀರು ಕಲ್ಮಶವಾಗಿದೆ ಎಂದು ತಿಳಿದು ಬಂದಿದೆ. ಕೆರೆಗಳು ಈ ರೀತಿ ಕಲ್ಮಶವಾಗಲು ಯಾರು ಕಾರಣ? ದಿನದಿನಕ್ಕೂ ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಮುಂಚೆ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳಿಂದ ವಲಸೆ ಬರುತ್ತಿದ್ದರು. ಈಗ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ರಾಜ್ಯಗಳಿಂದಲೂ ಜನ ವಲಸೆ ಬರುತ್ತಿದ್ದಾರೆ.ಜನಸಂಖ್ಯೆ ಒಂದೂವರೆ ಕೋಟಿ ಸಮೀಪಿಸಿದೆ. ಇದಕ್ಕೆ ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಸರಕಾರದಿಂದ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News