ವಿದ್ಯುತ್ ಸಮಸ್ಯೆಗೆ ತುರ್ತು ಪರಿಹಾರ ಅಗತ್ಯ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಲ್ಲಲ್ಲಿ ಮಳೆಯಾಗಿದ್ದರೂ ಒಟ್ಟಾರೆ ರಾಜ್ಯದಲ್ಲಿ ಮುಂಗಾರು ಈ ಬಾರಿ ಕೈ ಕೊಟ್ಟಿದೆ. ಬಹುತೇಕ ಕಡೆ ಬರಗಾಲದ ಸೂಚನೆಗಳು ಗೋಚರಿಸುತ್ತಿವೆ.ಮಳೆಯ ಕೊರತೆಯಿಂದಾಗಿ ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಹೀಗಾಗಿ ಬೇಸಿಗೆಯ ದಿನಗಳಲ್ಲಿ ಬಳಕೆಯಾಗಬೇಕಾಗಿದ್ದ ವಿದ್ಯುತ್ತನ್ನು ಮಳೆಗಾಲದಲ್ಲಿ ಬಳಸಬೇಕಾದ ಪ್ರಸಂಗ ಎದುರಾಗಿದೆ. ಇದರಿಂದಾಗಿ ಲಭ್ಯವಿರುವ ವಿದ್ಯುತ್ ಮತ್ತು ಬೇಡಿಕೆಗಳ ನಡುವೆ ಭಾರೀ ಅಂತರ ಉಂಟಾಗಿದೆ. ಪ್ರತಿವರ್ಷ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿಂದ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗುತ್ತಿತ್ತು. ಆದರೆ ಈ ಸಲ ಆಗಸ್ಟ್ ತಿಂಗಳಲ್ಲೇ ವಿದ್ಯುತ್‌ಗೆ ಬೇಡಿಕೆ ಬರುತ್ತಿದೆ.
ಇಂಧನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಒಂಭತ್ತು ಸಾವಿರ ಟನ್ ಮೆಗಾವ್ಯಾಟ್‌ನಿಂದ ಹನ್ನೊಂದು ಸಾವಿರ ಟನ್ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ಬೇಡಿಕೆಯ ಪ್ರಮಾಣ ಹದಿನಾರು ಸಾವಿರ ಮೆಗಾವ್ಯಾಟ್‌ಗಿಂತ ಹೆಚ್ಚಿದೆ. ಪರಿಸ್ಥಿತಿ ಹದಗೆಡುವ ಸಂಭವವನ್ನು ಅಲ್ಲಗಳೆಯಲಾಗುವುದಿಲ್ಲ. ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಬೇಕು ಇಲ್ಲವಾದರೆ ಅವರ ಬೆಳೆ ಹಾಳಾಗಿ ಹೋಗುತ್ತದೆ. ವಾಣಿಜ್ಯ, ಉದ್ಯಮ ಕ್ಷೇತ್ರಗಳಿಂದಲೂ ವಿದ್ಯುತ್‌ಗೆ ಬೇಡಿಕೆ ಬರತೊಡಗಿದೆ. ಜೊತೆಗೆ ಗೃಹ ಜ್ಯೋತಿ ಯೋಜನೆಯ ಅನ್ವಯ ಪ್ರತೀ ಕುಟುಂಬಕ್ಕೆ ೨೦೦ ಯುನಿಟ್‌ಗಳ ವರೆಗೆ ಉಚಿತವಾಗಿ ವಿದ್ಯುತ್ ಒದಗಿಸಬೇಕಾಗಿದೆ. ಜೊತೆಗೆ ಅನಿರೀಕ್ಷಿತವಾಗಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದರಿಂದ ಕರ್ನಾಟಕ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಅನಿರೀಕ್ಷಿತವಾಗಿ ಎದುರಾದ ಈ ಸಮಸ್ಯೆಯನ್ನು ಎದುರಿಸಲು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿರದ ಕಾರಣದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅನಿವಾರ್ಯವಾಗಿ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ.
ಮಳೆಯ ಕೊರತೆಯಿಂದಾಗಿ ಬಹುತೇಕ ಜಲಾಶಯಗಳು ಭರ್ತಿಯಾಗಿಲ್ಲ. ಹೀಗಾಗಿ ಜಲ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲೂ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಸೌರಶಕ್ತಿ ಮತ್ತು ಪವನ ವಿದ್ಯುತ್ ಮೂಲಗಳಿಂದ ೧೩ ಸಾವಿರ ಮೆಗಾವ್ಯಾಟ್‌ಗೂ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕಗಳು ರಾಜ್ಯದಲ್ಲಿವೆ. ಈ ಮೂಲಗಳಿಂದ ಅತ್ಯಂತ ಕಡಿಮೆ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿರುವುದು ಕೂಡ ವಿದ್ಯುತ್ ಅಭಾವ ತೀವ್ರವಾಗಲು ಕಾರಣ.
ಉತ್ತರ ಭಾರತದಲ್ಲೂ ಈ ವರ್ಷ ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ ಕೇಂದ್ರೀಯ ವಿದ್ಯುತ್ ವಿತರಣಾ ಜಾಲದಿಂದಲೂ ಅಗತ್ಯವಿರುವಷ್ಟು ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಅಲ್ಲಿನ ಬಹುತೇಕ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳನ್ನು ನಿರ್ವಹಣಾ ಕಾರ್ಯಗಳಿಗಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕೇಂದ್ರೀಯ ವಿದ್ಯುತ್ ವಿತರಣಾ ಜಾಲದಿಂದ ಪೂರೈಕೆ ಕಡಿಮೆಯಾಗಲು ಕಾರಣ. ನಮ್ಮ ಅಕ್ಕಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ವಿದ್ಯುತ್ ಕೊರತೆ ತೀವ್ರವಾಗಿದೆ. ಹೀಗಾಗಿ ಯಾರಿಂದಲೂ ನೆರವು ಸಿಗಲಾಗದೆ ಕರ್ನಾಟಕ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರ ಪ್ರತಿನಿತ್ಯವೂ ಸರಾಸರಿ ಐದು ಸಾವಿರ ಮೆಗಾವ್ಯಾಟ್ ವಿದ್ಯುತ್‌ನ್ನು ಖರೀದಿ ಮಾಡುತ್ತಿದೆ. ಇದಕ್ಕಾಗಿ ಸುಮಾರು ೪೦ ಕೋಟಿ ರೂ.ನಿಂದ ೫೦ ಕೋಟಿ ರೂ. ವರೆಗೆ ಖರ್ಚು ಮಾಡುತ್ತಿದೆ.
ಕಾಲ ಮಿಂಚಿಲ್ಲ, ಇನ್ನಾದರೂ ರಾಜ್ಯದಲ್ಲಿ ಸಮೃದ್ಧ ಮಳೆಯಾಗಿ ಜಲಾಶಯಗಳು, ಕೆರೆ ಕಟ್ಟೆಗಳು ಸೇರಿದಂತೆ ಜಲಮೂಲಗಳು ಭರ್ತಿಯಾದರೆ ವಿದ್ಯುತ್ ಸಮಸ್ಯೆ ಬಗೆಹರಿಯುತ್ತದೆ. ಇಲ್ಲವಾದರೆ ಬಿಗಡಾಯಿಸುತ್ತದೆ. ಅಕಸ್ಮಾತ್ ಪರಿಸ್ಥಿತಿ ಬಿಗಡಾಯಿಸಿದರೆ ಅದನ್ನು ಎದುರಿಸಲು ಇಂಧನ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ವಿದ್ಯುತ್ ಕೊರತೆಯೆಂದು ಕೈ ಚೆಲ್ಲಿ ಕುಳಿತುಕೊಳ್ಳದೆ ಅಸಾಂಪ್ರದಾಯಿಕ ಮೂಲಗಳಿಂದ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶಗಳಿವೆ. ಪವನ ವಿದ್ಯುತ್ ಮತ್ತು ಸೌರ ವಿದ್ಯುತ್ ಸೇರಿದಂತೆ ಎಲ್ಲ ಅಸಾಂಪ್ರದಾಯಿಕ ಮೂಲಗಳಿಂದ ಸಮರ್ಪಕ ಬಳಕೆ ಮಾಡುವುದಕ್ಕೆ ಕ್ರಿಯಾ ಯೋಜನೆಯನ್ನು ತುರ್ತಾಗಿ ತಯಾರಿಸಿ ಜಾರಿಗೆ ತರಬೇಕಾಗಿದೆ.
ಜೊತೆಗೆ ಸೌರ ವಿದ್ಯುತ್, ಪವನ ವಿದ್ಯುತ್ ಉತ್ಪಾದನೆ ಕುಂಠಿತವಾಗಲು ಕಾರಣವೇನು?ಅವುಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು.
ಕರ್ನಾಟಕದ ವಿದ್ಯುತ್ ನಿಯಂತ್ರಣ ಆಯೋಗದ ಅಂದಾಜಿನ ಪ್ರಕಾರ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಶೇ. ೧೨.೯೫ರಷ್ಟು ವಿದ್ಯುತ್ ಪ್ರಸರಣ ಮತ್ತು ಪೂರೈಕೆ ಹಂತದಲ್ಲಿ ನಷ್ಟವಾಗುತ್ತಿದೆ. ಮಳೆಯಾಗದೆ ವಿದ್ಯುತ್ ಕೊರತೆ ಒಂದೆಡೆಯಾದರೆ ವಿದ್ಯುತ್ ಸೋರಿಕೆ ಮತ್ತು ವಿದ್ಯುತ್ ಕಳ್ಳತನ ಇನ್ನೊಂದು ಮಹತ್ವದ ಸಮಸ್ಯೆ. ಇದಕ್ಕೆ ಜನಸಾಮಾನ್ಯರು ಕಾರಣರಲ್ಲ. ನೂರಾರು ಕೋಟಿ ರೂ. ಗಳಿಸುವ ಉದ್ಯಮಪತಿಗಳು, ಸಕ್ಕರೆ ಕಾರ್ಖಾನೆ ಮಾಲಕರು ವಿದ್ಯುತ್ ಕಳ್ಳತನದ ಆರೋಪ ಹೊತ್ತಿದ್ದಾರೆ. ಇವರಿಗೆ ಪ್ರಭಾವೀ ರಾಜಕಾರಣಿಗಳ ಆಶೀರ್ವಾದವೂ ಇದೆ. ಈ ಕಳ್ಳತನವನ್ನು ಮೊದಲು ತಡೆಗಟ್ಟಬೇಕು.
ಕೆಲವು ಖಾಸಗಿ ಕಾರ್ಖಾನೆಗಳು ಅತ್ಯಂತ ಜಾಣತನದಿಂದ ವಿದ್ಯುತ್ ಕಳ್ಳತನ ಮಾಡುತ್ತವೆ. ಈ ಸೋರಿಕೆ ತಡೆಗೆ ಬಿಗಿಯಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಾಗಿದೆ. ಒಟ್ಟಾರೆ ರೈತರು, ಉದ್ಯಮಿಗಳು, ಗೃಹ ಬಳಕೆದಾರರು ಸೇರಿದಂತೆ ಯಾರಿಗೂ ತೊಂದರೆಯಾಗದಂತೆ ವಿದ್ಯುತ್ ಸಮಸ್ಯೆಗೆ ಪರಿಹಾರವನ್ನು ಸರಕಾರ ಕಂಡು ಹಿಡಿಯಬೇಕಾಗಿದೆ. ಇದರಲ್ಲಿ ಇಂಧನ ಇಲಾಖೆಯ ಪಾತ್ರ ಮುಖ್ಯವಾಗಿದೆ.
ವಿದ್ಯುತ್ ಸಮಸ್ಯೆಗೆ ಸರಕಾರ ಶಾಶ್ವತವಾದ ಪರಿಹಾರವೊಂದನ್ನು ರೂಪಿಸಬೇಕು. ಮಳೆಯಾಗಲಿ, ಆಗದಿರಲಿ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಸಮಸ್ಯೆಗೆ ವಿದ್ಯುತ್ ಖಾಸಗೀಕರಣ ಪರಿಹಾರವಲ್ಲ ಎಂಬುದನ್ನು ಅಧಿಕಾರದಲ್ಲಿರುವವರು ತಿಳಿದುಕೊಳ್ಳಬೇಕು.