ಪ್ರತಿಪಕ್ಷಗಳ ಬಗ್ಗೆ ಪ್ರಧಾನಿಯ ನಿಲ್ಲದ ಅಸಹನೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಸಂವಾದ, ಸಮಾಲೋಚನೆ ಮೂಲಕ ದೇಶವನ್ನು ಮುನ್ನಡೆಸುವುದು ಆರೋಗ್ಯಕರ ಜನತಂತ್ರದ ಲಕ್ಷಣ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಪರಸ್ಪರ ಶತ್ರುಗಳಲ್ಲ. ಇದನ್ನು ಪ್ರತಿಪಕ್ಷದಲ್ಲಿ ಇದ್ದವರು ಅರಿತರೆ ಸಾಲದು ಅಧಿಕಾರದಲ್ಲಿದ್ದವರು ವಿಶಾಲ ಮನೋಭಾವ ಹೊಂದಿರಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಸರಕಾರ ರಚಿಸಲು ಮತದಾರರು ಬೆಂಬಲ ನೀಡಲಿಲ್ಲ. ನರೇಂದ್ರ ಮೋದಿಯವರು ಎನ್‌ಡಿಎ ಮೈತ್ರಿ ಕೂಟದ ಬಲದಿಂದ ಮೂರನೇ ಸಲ ಪ್ರಧಾನಿಯಾದರು. ಈ ಬಾರಿ ಅಧಿಕಾರವನ್ನು ವಹಿಸಿಕೊಂಡಾಗ ಜನತೆ ಸಹಮತದ ಆಡಳಿತಕ್ಕೆ ಮತ್ತು ಹೊಂದಾಣಿಕೆಗೆ ಆದೇಶ ನೀಡಿದ್ದಾರೆ. ಮಿತ್ರ ಪಕ್ಷಗಳನ್ನು ಮಾತ್ರವಲ್ಲ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವುದಾಗಿ ಮೋದಿ ಹೇಳಿದ್ದರು. ಆದರೆ ಅವರು ಅಧಿಕಾರ ವಹಿಸಿಕೊಂಡ ಕಳೆದ ಮೂರು ವಾರಗಳ ಅವರ ಕಾರ್ಯವೈಖರಿಯನ್ನು ಗಮನಿಸಿದರೆ ಮೋದಿಯವರಿಗೆ ತಾವು ಹೇಳಿದ ಮಾತಿನಂತೆ ನಡೆದುಕೊಳ್ಳುವುದು ಇಷ್ಟವಿಲ್ಲವೆಂಬುದು ಸ್ಪಷ್ಟವಾಗುತ್ತಿದೆ.
ಭಾರತದ ಪ್ರಜಾಪ್ರಭುತ್ವದ ಇತಿಹಾಸವನ್ನು ಅವಲೋಕಿಸಿದರೆ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್‌ರವರೆಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಪರಸ್ಪರ ಸಹಮತ ಮತ್ತು ಹೊಂದಾಣಿಕೆಯ ಸತ್ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗಲಾಗಲಿ, ಆಡಳಿತಕ್ಕೆ ಬಂದಾಗಲಾಗಲಿ ಸದನದ ಕಲಾಪವನ್ನು ಸರಾಗವಾಗಿ ನಡೆಸಿಕೊಂಡು ಹೋಗಲು ಬಿಡಲಿಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರವಂತೂ ಪ್ರತಿಪಕ್ಷಗಳನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಮುಖ್ಯ ವಿರೋಧ ಪಕ್ಷ ಕಾಂಗ್ರೆಸ್ ಸದನದ ಒಟ್ಟು ಸ್ಥಾನಗಳಲ್ಲಿ ಶೇಕಡಾ 10ರಷ್ಟೂ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅಧಿಕೃತ ವಿರೋಧ ಪಕ್ಷವಾಗಲಿಲ್ಲ. ಇದನ್ನೇ ಬಳಸಿಕೊಂಡ ಮೋದಿಯವರು ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ನಿರ್ಲಕ್ಷಿಸುತ್ತ ಬಂದರು. ಆದರೆ ಈ ಬಾರಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಅಧಿಕೃತವಾಗಿ ಮುಖ್ಯ ವಿರೋಧ ಪಕ್ಷವಾಗಿದೆ. ಇದನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡಿಕೊಳ್ಳಲು ಪ್ರಧಾನಿ ಮೋದಿಯವರು ತಯಾರಿಲ್ಲ.
ಕಾಂಗ್ರೆಸ್ ಮಾತ್ರವಲ್ಲ ಒಟ್ಟಾರೆ ಪ್ರತಿಪಕ್ಷಗಳ ಬಗ್ಗೆ ಮೋದಿಯವರಿಗೆ ಯಾವ ಪರಿ ಅಸಹನೆಯಿದೆಯೆಂದರೆ ತಮ್ಮ ಅಧಿಕಾರದ ಹಿಂದಿನ ಕಾಲಾವಧಿಯಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಮಾತನ್ನು ಬಹಿರಂಗವಾಗಿ ಹೇಳುತ್ತಾ ಬಂದರು. ಇದು ಸರ್ವಾಧಿಕಾರಿ ಮನೋಭಾವವಲ್ಲದೆ ಬೇರೇನೂ ಅಲ್ಲ. ಆದರೆ ಈಗ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದು ಮುಖ್ಯ ವಿರೋಧ ಪಕ್ಷವಾಗಿದೆ. ಬಿಜೆಪಿಯ ಭದ್ರಕೋಟೆ ಉತ್ತರ ಪ್ರದೇಶದಲ್ಲಿ ಮುಖಭಂಗವಾಗಿದೆ. ಸ್ವತಃ ಮೋದಿಯವರೇ ಅತ್ಯಂತ ಕಡಿಮೆ ಅಂತರದಿಂದ ಜಯಶಾಲಿಯಾಗಿದ್ದಾರೆ.ಆದರೂ ಭಿನ್ನಾಭಿಪ್ರಾಯ ಹೊಂದಿದವರ ಬಗೆಗಿನ ಅವರ ಅಸಹನೆ ಕಡಿಮೆಯಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷವನ್ನು ಸಂಪೂರ್ಣ ನಿರ್ನಾಮ ಮಾಡುತ್ತೇನೆ ಎನ್ನುವುದೇ ನಿರಂಕುಶ ಮನೋಭಾವ.
ಮೋದಿಯವರ ಮತ್ತು ಆಡಳಿತ ಪಕ್ಷದ ಅಸಹನೆಗೆ ಒಂದು ಉದಾಹರಣೆಯೆಂದರೆ ನೂತನ ಲೋಕಸಭೆಯ ಹೊಸ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಲು ಹಂಗಾಮಿ ಸ್ಪೀಕರ್ ಅವರನ್ನು ಆರಿಸುವಾಗ ಹಿರಿತನಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಈ ಸಂಸದೀಯ ಸಂಪ್ರದಾಯವನ್ನು ಧಿಕ್ಕರಿಸಿ ಆಡಳಿತ ಪಕ್ಷದ ಸದಸ್ಯರನ್ನು ಹಂಗಾಮಿ ಸ್ಪೀಕರ್‌ರನ್ನಾಗಿ ಮಾಡಲಾಯಿತು. ಸದನದಲ್ಲಿ ಅಧಿಕೃತ ವಿರೋಧ ಪಕ್ಷ ಇದ್ದರೂ ಉಪಾಧ್ಯಕ್ಷ ಸ್ಥಾನವನ್ನು ಪ್ರತಿಪಕ್ಷ ಗಳಿಗೆ ಬಿಟ್ಟುಕೊಡಲು ಮೋದಿಯವರು ತಯಾರಿಲ್ಲ. ಅವರ ಪ್ರತೀ ಮಾತಿನಲ್ಲಿ ಅಧಿಕಾರದ ಮದ ಎದ್ದು ಕಾಣುತ್ತಿದೆ.
ನ್ಯಾಯವಾಗಿ ಲೋಕಸಭಾಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಬೇಕಾಗಿರಲಿಲ್ಲ. ಸಂಸದೀಯ ಸಂಪ್ರದಾಯದಂತೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಪರಸ್ಪರ ಮಾತುಕತೆ ನಡೆಸಿ ಅಧ್ಯಕ್ಷ ಸ್ಥಾನವನ್ನು ಆಡಳಿತ ಪಕ್ಷಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪ್ರತಿಪಕ್ಷಕ್ಕೆ ಎಂದು ಹೊಂದಾಣಿಕೆಗೆ ಬರಬೇಕಾಗಿತ್ತು. ಆದರೆ ಮೋದಿಯವರಿಗೆ ಸಹಮತ ಮತ್ತು ಸಂವಾದದಲ್ಲಿ ನಂಬಿಕೆಯಿಲ್ಲ. ಹೀಗಾಗಿ ಚುನಾವಣೆ ನಡೆಸಬೇಕಾಯಿತು. ಹಿಂದಿನ ಸ್ಪೀಕರ್ ಓಂ ಬಿರ್ಲಾ ಮತ್ತೆ ಅಧಿಕಾರ ವಹಿಸಿಕೊಂಡರು.
ಓಂ ಬಿರ್ಲಾ ಅವರು ಅಧಿಕಾರ ವಹಿಸಿಕೊಂಡ ನಂತರ ಅವರ ನಡೆ ಕೂಡ ಪಕ್ಷಪಾತದಿಂದ ಕೂಡಿರುವುದು ಸ್ಪಷ್ಟವಾಗುತ್ತದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣದ ಪ್ರಶ್ನೆಯಾಗಿರುವ ನೀಟ್ ವಿಷಯದ ಚರ್ಚೆಗೆ ಪ್ರತಿಪಕ್ಷ ಗಳಿಗೆ ಅವಕಾಶ ನೀಡಲಿಲ್ಲ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡಿದರು. ಹೀಗಾಗಿ ಕಲಾಪ ಸುಗಮವಾಗಿ ನಡೆಯಲು ಅವರೇ ಅಡ್ಡಿಯಾದರು. ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮಾತಾಡುವುದು ದಾಖಲಾಗದಂತೆ, ಯಾರಿಗೂ ಅವರ ಮಾತು ಕೇಳದಂತೆ ಧ್ವನಿವರ್ಧಕವನ್ನು ಸ್ವಿಚ್‌ಆಫ್ ಮಾಡಲಾಯಿತು. ಇದು ಪ್ರಧಾನಿ ಮೋದಿಯವರಿಗೆ ಸಹಮತಕ್ಕಿಂತ, ಸಂಘರ್ಷ ಇಷ್ಟ ಎಂಬುದಕ್ಕೆ ಉದಾಹರಣೆಯಾಗಿದೆ.
ಇನ್ನು ಯಾವುದೇ ಪಕ್ಷದ ಜೊತೆಗೆ ಗುರುತಿಸಿಕೊಳ್ಳದೇ ನಿಷ್ಪಕ್ಷವಾಗಿರಬೇಕಾದ ನೂತನ ಸ್ಪೀಕರ್ ಓಂ ಬಿರ್ಲಾ ಹಿಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಮತ್ತು ಕಾಂಗ್ರೆಸ್ ಪಕ್ಷದ ಹೆಸರನ್ನು ಉಲ್ಲೇಖಿಸಿ ತುರ್ತು ಪರಿಸ್ಥಿತಿಯನ್ನು ಖಂಡಿಸುವ ಹೇಳಿಕೆಯನ್ನು ನೀಡಿದರು. ಹಿಂದಿನ ಕಾಲಾವಧಿಯಲ್ಲೂ ಅವರು ಸದನದ ಎಲ್ಲರಿಗೆ ಸೇರಿದ ಸ್ಪೀಕರ್‌ರಂತೆ ನಡೆದುಕೊಳ್ಳಲಿಲ್ಲ. ಈ ಬಾರಿಯೂ ತಾನು ಒಂದು ಪಕ್ಷದ ಪರ ಎಂಬುದನ್ನು ಅವರು ಬಹಿರಂಗವಾಗಿ ತೋರಿಸಿಕೊಳ್ಳುತ್ತಿದ್ದಾರೆ.
ಈಗ ಮತ್ತೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಬದಲಾವಣೆಯಾಗಿರುವ ಯಾವ ಸೂಚನೆಗಳು ಕಾಣುತ್ತಿಲ್ಲ. ಐವತ್ತು ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ನೆನಪು ಮಾಡಿಕೊಂಡು ಮಾತಾಡಿದ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಈಗ ದೇಶದಲ್ಲಿರುವ ಘನಘೋರವಾದ ಅಘೋಷಿತ ತುರ್ತುಪರಿಸ್ಥಿತಿ ಬಗ್ಗೆ ಮಾತಾಡಬೇಕಿತ್ತು. ಪ್ರತಿಪಕ್ಷದಲ್ಲಿರುವ ಕಾರಣಕ್ಕಾಗಿ ಮಧ್ಯರಾತ್ರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಬಂಧಿಸಿರುವ ಬಗ್ಗೆ ಪ್ರಸ್ತಾಪಿಸಬೇಕಿತ್ತು. ಆದರೆ ಮೋದಿಯವರ ಕೈಗೊಂಬೆಯಾದವರಿಂದ ಇಂತಹ ನಿರೀಕ್ಷೆ ಸಾಧ್ಯವಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜನತೆ ಮತದಾನದ ಮೂಲಕ ನೀಡಿದ ಎಚ್ಚರಿಕೆಯನ್ನು ಮನಗಂಡು ಮೋದಿ ಮತ್ತು ಅವರ ಪಕ್ಷ ಹಾಗೂ ಪರಿವಾರದವರು ಜನತಾಂತ್ರಿಕ ಮೌಲ್ಯಗಳನ್ನು ಗೌರವಿಸಲಿ. ಪ್ರತಿಪಕ್ಷ ನಾಯಕರನ್ನು ಶತ್ರುಗಳಂತೆ ಕಾಣದೆ ವಿಶ್ವಾಸಕ್ಕೆ ತೆಗೆದುಕೊಂಡು ಸಹಮತದ ಸರಕಾರವನ್ನು ನೀಡಲಿ.