ಚುನಾವಣಾ ಪ್ರಚಾರಕ್ಕೆ ಸೀಮಿತವಾದ ಕೆಂಪು ಕೋಟೆಯ ಪ್ರಧಾನಿ ಭಾಷಣ

Update: 2023-08-17 05:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ನಿಂತು ಪ್ರಧಾನಿ ಮಾಡುವ ಭಾಷಣಕ್ಕಾಗಿ ದೇಶ ಪ್ರತೀ ಬಾರಿ ಕುತೂಹಲದಿಂದ ಕಾಯುತ್ತಿರುತ್ತದೆ. ಸರ್ವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ದೇಶವನ್ನು ಮುನ್ನಡೆಸುವ ಸಂದೇಶವೊಂದು ಪ್ರಧಾನಿ ಭಾಷಣದಲ್ಲಿರುತ್ತದೆ. ಈ ದೇಶ ಯಾವ ದಿಕ್ಕಿನ ಕಡೆಗೆ ಮುನ್ನಡೆಯುತ್ತದೆ ಎನ್ನುವ ಸೂಚನೆಯೊಂದನ್ನು ಪ್ರಧಾನಿ ನೀಡುತ್ತಾರೆ. ವರ್ತಮಾನದ ಗಾಯಗಳಿಗೆ ಅವರ ಮಾತಿನಲ್ಲಿ ಮುಲಾಮುಗಳಿರುತ್ತವೆ. ಭವಿಷ್ಯದ ಕುರಿತಂತೆ ಭರವಸೆಗಳನ್ನು ಕಟ್ಟಿಕೊಡುತ್ತಾರೆ. ತಮ್ಮ ಮಾತಿನಲ್ಲಿ ದೇಶದ ವೈವಿಧ್ಯತೆಯನ್ನು, ಸಮಗ್ರತೆಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ಈ ಬಾರಿ ಪ್ರಧಾನಿ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣವನ್ನು ಬಿಜೆಪಿಯ ಚುನಾವಣಾ ರ್ಯಾಲಿಯೊಂದರ ಭಾಷಣವಾಗಿ ಪರಿವರ್ತಿಸಿದರು. ಇತ್ತೀಚೆಗೆ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಮಾಡಿದ ಭಾಷಣ ಕೆಂಪುಕೋಟೆಯಲ್ಲಿ ಪುನರಾವರ್ತನೆಗೊಂಡಿತ್ತು. ಭಾಷಣವನ್ನು ವಿಪಕ್ಷಗಳ ಟೀಕೆಗೆ ಮತ್ತು ಸ್ವ ಪ್ರತಿಷ್ಠೆಯ ಪ್ರದರ್ಶನಕ್ಕೆ ಅವರು ಮೀಸಲಿಟ್ಟರು.

ವಿಪಕ್ಷವೂ ಸರಕಾರದ ಒಂದು ಭಾಗ ಎನ್ನುವುದನ್ನು ಪ್ರಧಾನಿ ಮೋದಿಯವರು ಮರೆತಂತಿದೆ. ಭಾರತ ವರ್ತಮಾನದಲ್ಲಿ ಎದುರಿಸುತ್ತಿರುವ ನೂರಾರು ಸಮಸ್ಯೆಗಳನ್ನು ಬದಿಗಿಟ್ಟು, ವಂಶರಾಜಕಾರಣ ದೇಶದ ಪ್ರಗತಿಗೆ ಅಡ್ಡಿ ಎಂದು ಅದೇ ಹಳೆಯ ತುತ್ತೂರಿಯನ್ನು ಮತ್ತೆ ಊದಿದ್ದಾರೆ. ಯಾವುದೋ ಚುನಾವಣಾ ಪ್ರಚಾರ ಸಭೆಯಲ್ಲಿ ಇದನ್ನು ಹೇಳಿದ್ದಿದ್ದರೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಆದರೆ ಕೆಂಪುಕೋಟೆಯಲ್ಲಿ ರಾಜಕೀಯ ಮಾತುಗಳನ್ನು ಆಡುವ ಮೂಲಕ ಸ್ವಾತಂತ್ರ್ಯೋತ್ಸವ ಭಾಷಣದ ಗಾಂಭೀರ್ಯವನ್ನು ಅವರು ಕೆಡಿಸಿದ್ದಾರೆ. ಒಂದು ಕಾಲದಲ್ಲಿ ವಂಶ ರಾಜಕಾರಣದ ಬಗ್ಗೆ ಆಕ್ಷೇಪಗಳಿದ್ದುವಾದರೂ, ಪ್ರಧಾನಿ ಮೋದಿಯವರು ಕಳೆದ ೯ ವರ್ಷಗಳಿಂದ ಈ ದೇಶವನ್ನು ಮುನ್ನಡೆಸುತ್ತಿರುವ ರೀತಿ ಗಮನಿಸಿದಾಗ ‘ವಂಶ ರಾಜಕಾರಣ’ವೇ ವಾಸಿಯಿತ್ತು ಎಂದು ಜನರಿಗೆ ಅನ್ನಿಸಿರುವುದು ಸುಳ್ಳಲ್ಲ. ಇಷ್ಟಕ್ಕೂ ವಂಶ ರಾಜಕಾರಣದ ಮೂಲಕ ಈ ದೇಶದ ಪ್ರಧಾನಿಯಾದವರ ಹೆಸರನ್ನೊಮ್ಮೆ ನೆನೆಯೋಣ. ಮೊತ್ತ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಈ ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತೆಯೇ ಇಲ್ಲ. ನೆಹರೂ ಅವರನ್ನು ಟೀಕಿಸುತ್ತಾ ದೇಶವನ್ನು ಕಟ್ಟುವುದೆಂದರೆ ಅಡಿಗಲ್ಲನ್ನು ನಿಂದಿಸುತ್ತಾ ಮಹಡಿ ಏರಿಸಿದಂತೆ. ತನ್ನ ಅಲಿಪ್ತ ನೀತಿಯ ಮೂಲಕ ವಿಶ್ವ ನಾಯಕರಾಗಿ ಬೆಳೆದವರು ನೆಹರೂ. ಅವರ ಪುತ್ರಿ ಇಂದಿರಾಗಾಂಧಿ ಪ್ರಧಾನಿಯಾಗಿ ಈ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಭೂಸುಧಾರಣೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಕ್ರಾಂತಿಕಾರಿ ನಡೆಯಿಂದಾಗಿ ಬಡವರ ಪಾಲಿನ ತಾಯಿಯಾಗಿ ಗುರುತಿಸಲ್ಪಟ್ಟವರು. ಇಂದಿರಾಗಾಂಧಿಯ ಕಾಲದಲ್ಲಿ ಭಾರತಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸಿತ್ತು. ಅವರ ಪುತ್ರ ರಾಜೀವ್‌ಗಾಂಧಿಯ ದೂರದೃಷ್ಟಿಯ ಫಲವಾಗಿ ನಾವಿಂದು ಡಿಜಿಟಲ್ ಭಾರತದ ಬಗ್ಗೆ ಮಾತನಾಡುವಂತಾಯಿತು. ಈ ಮೂವರು ಅಪ್ರತಿಮ ಪ್ರತಿಭಾವಂತರಾಗಿದ್ದರು. ಇವರೇನು ಸರ್ವಾಧಿಕಾರಿ ಮಾರ್ಗದ ಮೂಲಕ ಆಯ್ಕೆಯಾದವರಲ್ಲ. ಪ್ರಜಾಸತ್ತಾತ್ಮಕವಾಗಿ ಗುರುತಿಸಿಕೊಂಡವರು. ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಈ ದೇಶಕ್ಕೆ ತಮ್ಮ ಪ್ರಾಣವನ್ನೇ ಅರ್ಪಿಸಿದವರು. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಇವರು ನೀಡಿದ ಕೊಡುಗೆಗಳನ್ನು ನೆನೆಯುವ ಬದಲಾಗಿ ಅವರನ್ನು ಪರೋಕ್ಷ ನಿಂದಿಸುವ ಮೂಲಕ ಪ್ರಧಾನಿ ಮೋದಿ ತನ್ನ ವಿವೇಕದ ಮಟ್ಟವೆಷ್ಟು ಎನ್ನುವುದನ್ನು ದೇಶದ ಮುಂದೆ ಪ್ರದರ್ಶಿಸಿದರು.

ಇಷ್ಟಕ್ಕೂ ಇಂದು ವಂಶ ರಾಜಕಾರಣ ಎಲ್ಲ ಪಕ್ಷಗಳಲ್ಲೂ ವ್ಯಾಪಿಸಿವೆ. ಬಿಜೆಪಿಯೊಳಗಿರುವ ಬಹುತೇಕ ರಾಜಕಾರಣಿಗಳ ಮಕ್ಕಳು ರಾಜಕೀಯದಲ್ಲಿದ್ದಾರೆ. ತನ್ನ ತಂದೆ ರಾಜಕಾರಣದಲ್ಲಿರುವುದೇ ಮಕ್ಕಳ ಅರ್ಹತೆ ಎನ್ನುವಾಗಷ್ಟೇ ವಂಶ ರಾಜಕಾರಣವನ್ನು ಟೀಕಿಸಬೇಕಾಗುತ್ತದೆ. ಒಂದು ಕಾಲದಲ್ಲಿ ರಾಜೀವ್‌ಗಾಂಧಿ ಪ್ರಧಾನಿಯಾದಾಗ ಅವರ ಅರ್ಹತೆಯ ಬಗ್ಗೆ ಸಂಶಯಿಸಲಾಗಿತ್ತಾದರೂ, ನಿಧಾನಕ್ಕೆ ದೇಶವನ್ನು ಕಂಪ್ಯೂಟರ್‌ಯುಗಕ್ಕೆ ಸಿದ್ಧಗೊಳಿಸಿದರು. ಅವರ ದೂರದೃಷ್ಟಿಯನ್ನ್ನು ಹಲವು ಅರ್ಥಶಾಸ್ತ್ರಜ್ಞರು, ರಾಜಕೀಯ ಚಿಂತಕರು ಕೊಂಡಾಡಿದ್ದಾರೆ. ಇಂದು ರಾಹುಲ್‌ಗಾಂಧಿ ತನ್ನ ಅರ್ಹತೆಯನ್ನು ತಾವೇ ರೂಪಿಸಿಕೊಂಡಿದ್ದಾರೆ. ದೇಶಾದ್ಯಂತ ಅವರು ಹಮ್ಮಿಕೊಂಡ ರ್ಯಾಲಿ, ಸಂಸತ್‌ನಲ್ಲಿ ಅವರು ಆಡುತ್ತಿರುವ ಮಾತುಗಳೇ ಅವರ ಅರ್ಹತೆಯನ್ನು ಹೇಳುತ್ತಿವೆ. ವಂಶರಾಜಕಾರಣದ ಬಗ್ಗೆ ಟೀಕಿಸುವ ಮೊದಲು, ಬಿಜೆಪಿಯೊಳಗಿರುವ ಎಲ್ಲ ರಾಜಕೀಯ ನಾಯಕರ ಪುತ್ರರು ರಾಜಕೀಯ ಪ್ರವೇಶಿಸದಂತೆ ಮೋದಿಯವರು ನೀತಿಯೊಂದನ್ನು ರೂಪಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಭಾರತದ ಪ್ರಗತಿಗೆ ಅಡ್ಡಿ ಎಂದು ಕೆಂಪುಕೋಟೆಯ ಮೇಲೆ ನಿಂತು ಘೋಷಿಸಿದ್ದಾರೆ. ಆದರೆ ಆ ಭ್ರಷ್ಟಾಚಾರವನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮೌನ ತಳೆದಿದ್ದಾರೆ.

ನೋಟು ನಿಷೇಧ ಸ್ವಾತಂತ್ರ್ಯೋತರ ಭಾರತದ ಅತಿ ದೊಡ್ಡ ಹಗರಣವೆಂದು ಗುರುತಿಸಲ್ಪಟ್ಟಿದೆ. ನೋಟು ನಿಷೇಧದಿಂದ ಆರ್ಥಿಕತೆಯ ಮೇಲೆ ಆದ ಆಘಾತದಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ‘ನೋಟು ನಿಷೇಧದಿಂದ ದೇಶಕ್ಕಾದ ಲಾಭವೇನು? ಬಂದ ಕಪ್ಪು ಹಣವೆಷ್ಟು?’ ಎನ್ನುವುದನ್ನು ವಿವರಿಸಲು ಪ್ರಧಾನಿ ಮೋದಿಯವರಿಗೆ ಇನ್ನೂ ಸಾಧ್ಯವಾಗಿಲ್ಲ. ಹಾಗಾದರೆ ದೇಶದೊಳಗೆ ಕಪ್ಪು ಹಣವೇ ಇರಲಿಲ್ಲವೆ? ಇದ್ದ ಕಪ್ಪು ಹಣ ಬಿಳಿಯಾದದ್ದು ಹೇಗೆ? ಎನ್ನುವ ಪ್ರಶ್ನೆ ಇನ್ನೂ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಈ ಹಿಂದೆ ಕೆಂಪು ಕೋಟೆಯಲ್ಲಿ ನಿಂತು ‘ವಿದೇಶದಲ್ಲಿರುವ ಕಪ್ಪುಹಣ’ದ ಬಗ್ಗೆ ಮಾತನಾಡಿದ್ದರು. ಈ ಬಾರಿ ಆ ಬಗ್ಗೆ ತುಟಿಯೇ ಬಿಚ್ಚಿಲ್ಲ. ರಫೇಲ್ ಹಗರಣ, ರಾಜೀವ್‌ಗಾಂಧಿಯವರ ಕಾಲದ ಬೊಫೋರ್ಸ್ ಹಗರಣಕ್ಕಿಂತ ಹಲವು ಪಟ್ಟು ದೊಡ್ಡದು ಎಂದು ಮಾಧ್ಯಮಗಳು ಹೇಳುತ್ತಿವೆ. ಬೊಫೋರ್ಸ್ ಹಗರಣ ತನಿಖೆಗೆ ರಾಜೀವ್‌ಗಾಂಧಿ ತಲೆಬಾಗಿದ್ದರು. ಆದರೆ ಪ್ರಧಾನಿ ಮೋದಿ ರಫೇಲ್ ಹಗರಣ ತನಿಖೆ ನಡೆಯದಂತೆ ಸರ್ವ ಪ್ರಯತ್ನ ನಡೆಸಿದರು. ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತದೆ ಎನ್ನುವುದು ಗೊತ್ತಾದಾಗ ಆ ತನಿಖಾ ಸಂಸ್ಥೆಯನ್ನೇ ಬುಡಮೇಲುಗೊಳಿಸಿದರು. ವಿಶ್ವಮಟ್ಟದಲ್ಲಿ ಸುದ್ದಿಯಾದ ಅದಾನಿಯ ಹಗರಣದ ತನಿಖೆಯನ್ನೂ ನಡೆಯದಂತೆ ನೋಡಿಕೊಂಡರು. ಕೊರೋನ, ಲಾಕ್‌ಡೌನ್ ಅವಧಿಯಲ್ಲಾದ ಅಕ್ರಮಗಳು ಬೆಟ್ಟದಷ್ಟಿವೆ. ಲಸಿಕೆಯ ಹಿಂದೆಯೂ ಬೃಹತ್ ಅಕ್ರಮಗಳು ನಡೆದ ಆರೋಪಗಳಿವೆ. ಹೀಗಿರುವಾಗ ಭ್ರಷ್ಟಾಚಾರದ ಕುರಿತಂತೆ ಪ್ರಧಾನಿ ಮೋದಿಯವರಿಗೆ ಮಾತನಾಡುವ ನೈತಿಕತೆಯಿದೆಯೇ? ಕೆಂಪುಕೋಟೆಯಲ್ಲಿ ನಿಂತು ‘‘ಮತ್ತೆ ನಾನೇ ಪ್ರಧಾನಿ’’ ಎಂದು ಮೋದಿಯವರು ಘೋಷಿಸುತ್ತಿರುವಾಗ, ಮಣಿಪುರದ ಮಹಿಳೆಯರ ಮಾನ, ಪ್ರಾಣ ಅವರ ಕಣ್ಣೆ ಮುಂದೆ ಬರದೇ ಇರುವುದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಕೆಂಪುಕೋಟೆಯಲ್ಲಿ ನಿಂತು ತನ್ನ ಹತ್ತು ವರ್ಷಗಳ ವೈಫಲ್ಯಗಳನ್ನೇ ಸಾಧನೆಯೆಂದು ಹೆಮ್ಮೆಯಿಂದ ದೇಶದ ಮುಂದೆ ಘೋಷಿಸಿಕೊಂಡಿದ್ದಾರೆ. ಭವಿಷ್ಯದ ಅಮೃತ ಕಾಲ ಅದೆಷ್ಟು ಭೀಕರವಾಗಿರುತ್ತದೆ ಎನ್ನುವುದನ್ನು ತಮ್ಮ ಭಾಷಣದ ಮೂಲಕ ದೇಶಕ್ಕೆ ಮನವರಿಕೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News