ಪುಲ್ವಾಮಾ ದುರಂತ: ಹುತಾತ್ಮ ಯೋಧರಿಗೆ ಸಿಗದ ನ್ಯಾಯ

Update: 2023-09-25 05:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

2019ರಲ್ಲಿ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸುಮಾರು 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಆದರೆ ಇಂದಿಗೂ ಈ ದಾಳಿಯ ಹಿಂದಿರುವವರು ಯಾರು? ಈ ದಾಳಿ ಹೇಗೆ ನಡೆಯಿತು? ನಮ್ಮ ಯೋಧರು ಯಾರ ವೈಫಲ್ಯಕ್ಕಾಗಿ ಪ್ರಾಣ ತೆರಬೇಕಾಯಿತು ಎನ್ನುವ ಪ್ರಶ್ನೆಗಳು ಉತ್ತರವಿಲ್ಲದೆ ಬಿದ್ದುಕೊಂಡಿವೆ. 40ಕ್ಕೂ ಅಧಿಕ ಯೋಧರ ಬಲಿದಾನಕ್ಕೆ ನ್ಯಾಯ ಸಿಗಬೇಕಾದರೆ ಈ ದುರಂತಕ್ಕೆ ಕಾರಣವಾದ ಶಕ್ತಿಗಳಿಗೆ ಶಿಕ್ಷೆಯಾಗಬೇಕು. ವಿರೋಧ ಪಕ್ಷದ ನಾಯಕರು ಪುಲ್ವಾಮ ದಾಳಿಯ ಬಗ್ಗೆ ತಮ್ಮ ಸಂಶಯಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದರ ಬೆನ್ನಿಗೇ, ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್, ಈ ದುರಂತಕ್ಕೆ ಕೇಂದ್ರ ಸರಕಾರವೇ ಹೊಣೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಇದೀಗ ಅವರು, ಪುಲ್ವಾಮ ದುರಂತ ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಡಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ದುರಂತದ ಕುರಿತಂತೆ ಮೋದಿ ನೇತೃತ್ವದ ಸರಕಾರ ಮೌನ ತಾಳಿದೆ ಮಾತ್ರವಲ್ಲ, ಅಂದು ನಡೆದ ವೈಫಲ್ಯಗಳಿಗಾಗಿ ಯಾರನ್ನೂ ಸರಕಾರ ಹೊಣೆ ಮಾಡಿಲ್ಲ ಎನ್ನುವ ಅಂಶವನ್ನು ಅವರು ಉಲ್ಲೇಖಿಸಿದ್ದಾರೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸ್ಫೋಟ ನಡೆದಿದೆ ಎನ್ನುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ದುರಂತ ಸಂಭವಿಸಿದಾಗ ಮಲಿಕ್ ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದರು. ಅವರು ಕೇಂದ್ರ ಸರಕಾರದ ಮುಖವಾಣಿಯಾಗಿ ಅಲ್ಲಿ ಕೆಲಸ ಮಾಡಿದ್ದರು. ಆದುದರಿಂದ ಅವರು ಎತ್ತಿರುವ ಪ್ರಶ್ನೆಗಳು ಅತ್ಯಂತ ವಿಶ್ವಾಸಾರ್ಹವಾದದ್ದಾಗಿದೆ. ಈ ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಸರಕಾರ ಆದ್ಯತೆಯ ಮೇಲೆ ತನಿಖೆ ನಡೆಸುವ ಅಗತ್ಯವಿದೆ. ಈ ದುರಂತಗಳ ಹಿಂದಿರುವ ವೈಫಲ್ಯಗಳನ್ನು ಗುರುತಿಸಿ, ಅದಕ್ಕೆ ಕಾರಣರಾದವರನ್ನು ಶಿಕ್ಷಿಸುವ ಮೂಲಕ ಹುತಾತ್ಮ ಯೋಧರ ಸಾವಿಗೆ ನ್ಯಾಯ ನೀಡಬೇಕಾಗಿದೆ.

ಸತ್ಯಪಾಲ್ ಮಲಿಕ್ ಬರೇ ಆರೋಪಗಳನ್ನಷ್ಟೇ ಮಾಡಿರುವುದಲ್ಲ. ಅವರು ಹಲವು ಪ್ರಶ್ನೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಸರಕಾರ ಉತ್ತರಿಸಬೇಕಾಗಿದೆ. ಅದರಲ್ಲಿ ಮೊತ್ತ ಮೊದಲ ಪ್ರಶ್ನೆಯೇ, ‘ಸೈನಿಕರ ಪ್ರಯಾಣಕ್ಕೆ ವಿಮಾನ ಒದಗಿಸಬೇಕು ಎಂಬ ಬೇಡಿಕೆಯನ್ನು ಯಾಕೆ ತಿರಸ್ಕರಿಸಲಾಯಿತು?’ ಎನ್ನುವುದು. ಅಂದರೆ, ಸೈನಿಕರ ಹತ್ಯೆಯ ಸಂಚು ಯಶಸ್ವಿಯಾಗಲು ಈ ತಿರಸ್ಕಾರವೇ ಮುಖ್ಯ ಕಾರಣವಾಗಿತ್ತು. ಒಂದು ವಾರಕ್ಕೂ ಹೆಚ್ಚು ಅವಧಿಯಲ್ಲಿ ಶಿಬಿರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೈನಿಕರ ಸಾಗಾಟಕ್ಕೆ ವಿಮಾನ ಒದಗಿಸುವಂತೆ ಸಿಆರ್‌ಪಿಎಫ್ ಏರ್ ಕೊರಿಯರ್ ಸರ್ವಿಸ್‌ನ ಐಜಿಯ ಮನವಿಯನ್ನು ಯಾಕೆ ತಿರಸ್ಕರಿಸಲಾಯಿತು? ಕೇವಲ ಕೆಲವು ನೂರು ಸೈನಿಕರು ತಂಗಬಹುದಾಗಿದ್ದ ಶಿಬಿರದಲ್ಲಿ 2,500ಕ್ಕೂ ಹೆಚ್ಚು ಸೈನಿಕರು ತಂಗಿದ್ದರು. ಅಲ್ಲಿನ ಅತ್ಯಂತ ಕೊಳಕು ವಾತಾವರಣದಲ್ಲಿ ಅವರು ಬದುಕಬೇಕಾಗಿತ್ತು. ಹಾಗಾಗಿ, ಸಹಜವಾಗಿಯೇ ಅವರ ಸಾಗಾಟಕ್ಕೆ ವಿಮಾನ ಕಳುಹಿಸಲು ಕೋರಿಕೆ ಸಲ್ಲಿಸಲಾಗಿತ್ತು. ಇಂಥ ಸಹಜ ಬೇಡಿಕೆಯನ್ನು ನಿರಾಕರಿಸಿರುವುದು, ಸೈನಿಕರ ಬಗೆಗೆ ಆಡಳಿತದಲ್ಲಿರುವವರು ಹೊಂದಿರುವ ತುಚ್ಛ ಮನೋಭಾವವನ್ನು ತೋರಿಸುತ್ತದೆ.

ಗುಪ್ತಚರ ವೈಫಲ್ಯದ ಬಗ್ಗೆಯೂ ಮಲಿಕ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಗೃಹ ವ್ಯವಹಾರಗಳ ಸಹಾಯಕ ಸಚಿವ ಜಿ. ಕಿಶನ್ ರೆಡ್ಡಿ 2019 ಜೂನ್ 19ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡುತ್ತಾ, ‘‘ಯಾವುದೇ ಗುಪ್ತಚರ ವೈಫಲ್ಯ ಸಂಭವಿಸಿಲ್ಲ ಹಾಗೂ ಎಲ್ಲಾ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದವು ಮತ್ತು ಗುಪ್ತಚರ ಮಾಹಿತಿಗಳನ್ನು ವಿವಿಧ ಸಂಸ್ಥೆಗಳಿಗೆ ಸಕಾಲದಲ್ಲಿ ತಲುಪಿಸಲಾಗುತ್ತಿತ್ತು’’ ಎಂದು ಹೇಳಿದ್ದರು.ಆದರೆ, ಇದನ್ನು ಸಿಆರ್‌ಪಿಎಫ್ ಪ್ರಶ್ನಿಸಿದೆ.ಘಟನೆಗೆ ಸಂಬಂಧಿಸಿ ಸಿಆರ್‌ಪಿಎಫ್‌ನ ಆಂತರಿಕ ತನಿಖೆಯು ಗುಪ್ತಚರ ಮತ್ತು ಇತರ ಹಲವಾರು ವೈಫಲ್ಯಗಳತ್ತ ಬೆಟ್ಟು ಮಾಡಿದೆ. ಆದರೆ, ಈ ವರದಿಯನ್ನು ಬಹಿರಂಗ ಪಡಿಸಲು ಸಿಆರ್‌ಪಿಎಫ್ ನಿರಾಕರಿಸಿದೆ. ಸಂಗತಿಗಳನ್ನು ತಿಳಿಯುವ ಹಕ್ಕು ಜನರಿಗಿದೆ. ಹಾಗಾಗಿ, ಸಿಆರ್‌ಪಿಎಫ್ ವರದಿಯು ಸಾರ್ವಜನಿಕ ವೇದಿಕೆಯಲ್ಲಿ ಯಾಕೆ ಲಭ್ಯವಿಲ್ಲ? ಎಂದೂ ಮಲಿಕ್ ಕೇಳುತ್ತಿದ್ದಾರೆ. ಬಾಂಬ್ ಸ್ಫೊಟ ನಡೆದ ತಕ್ಷಣ, 350 ಕೆಜಿ ಸ್ಫೋಟಕಗಳನ್ನು ಆತ್ಮಹತ್ಯಾ ಬಾಂಬರ್ ಬಳಸಿದ್ದಾನೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಈ ಮಾಹಿತಿಯು ಘಟನೆ ನಡೆಯುವ ಮೊದಲೇ ಯಾಕೆ ಲಭ್ಯವಾಗಲಿಲ್ಲ? ಇಷ್ಟೊಂದು ದೊಡ್ಡ ಪ್ರಮಾಣದ ಸ್ಪೋಟಕವನ್ನು ಜೋಡಿಸುವುದು, ವಾಹನದ ಖರೀದಿ ಮತ್ತು ಕಾರ್ಯಾಚರಣೆಯ ಯೋಜನೆ ರೂಪಿಸಲು ತುಂಬಾ ಸಮಯ ಬೇಕಾಗಿತ್ತು. ಬಾಂಬರ್ ಮತ್ತು ಅವನ ಸೂತ್ರಧಾರಿಗಳ ನಡುವಿನ ಇಲೆಕ್ಟ್ರಾನಿಕ್ ಅಥವಾ ಬೇರೆ ರೀತಿಯ ಸಂವಹನವನ್ನು ಪತ್ತೆಹಚ್ಚಲು ಗುಪ್ತಚರ ಸಂಸ್ಥೆಗಳಿಗೆ ಯಾಕೆ ಸಾಧ್ಯವಾಗಲಿಲ್ಲ?

ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ಹೊತ್ತುಕೊಂಡಿತು. ಆತ್ಮಹತ್ಯಾ ಬಾಂಬರ್ ಅದಿಲ್ ಅಹ್ಮದ್ ದಾರ್‌ನ ವೀಡಿಯೊವನ್ನೂ ಅದು ಬಿಡುಗಡೆಗೊಳಿಸಿತು. 22 ವರ್ಷದ ಅವನು ಕಾಕಪುರ ನಿವಾಸಿಯಾಗಿದ್ದನು. ಅವನು ಒಂದು ವರ್ಷದ ಹಿಂದೆ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾನೆ ಎನ್ನಲಾಗುತ್ತಿದೆ. ದಾರ್‌ನ ಕುಟುಂಬವು ಅವನನ್ನು ಕೊನೆಯ ಬಾರಿ ನೋಡಿದ್ದು 2018 ಮಾರ್ಚ್‌ನಲ್ಲಿ.

ಇದಕ್ಕೂ ಮೊದಲು ಅದಿಲ್ ಅಹ್ಮದ್ ದಾರ್‌ನನ್ನು ಆರು ಬಾರಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು, ಆದರೆ, ಬಂಧಿಸಲಾಗಿರಲಿಲ್ಲ ಎಂದು ಮುಂಬೈ ಮಿರರ್ ವರದಿಯೊಂದು ತಿಳಿಸಿದೆ.‘‘ಅವನನ್ನು ಎಲ್‌ಇಟಿಗೆ ಸರಕು ಪೂರೈಕೆ ಮಾಡುತ್ತಿದ್ದ ಸಂಶಯದಲ್ಲಿ ನಾಲ್ಕು ಸಂದರ್ಭಗಳಲ್ಲಿ ವಶಕ್ಕೆ ಪಡೆಯಲಾಗಿತ್ತು. ಆದರೆ, ಪ್ರತೀ ಬಾರಿಯೂ ಯಾವುದೇ ಆರೋಪವಿಲ್ಲದೆ ಅವನನ್ನು ಬಿಡುಗಡೆಗೊಳಿಸಲಾಗಿತ್ತು. ಅವನನ್ನು 2016 ಸೆಪ್ಟಂಬರ್ ಮತ್ತು 2018 ಮಾರ್ಚ್ ನಡುವೆ ಕಲ್ಲೆಸೆತಕ್ಕಾಗಿ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬಾದ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದಲ್ಲಿ ಆರು ಬಾರಿ ಬಂಧಿಸಲಾಗಿತ್ತು’’ ಎಂದು ವರದಿ ಹೇಳುತ್ತದೆ.

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸೇನಾ ವಾಹನಗಳನ್ನು ರಕ್ಷಿಸಲು ಮಾದರಿ ಕಾರ್ಯಾಚರಣಾ ವಿಧಾನವಿದೆ. ಪೂರ್ತಿ ಹೆದ್ದಾರಿಯನ್ನು ವಶಕ್ಕೆ ಪಡೆದು ಅಪಾಯಮುಕ್ತಗೊಳಿಸುವುದು ಗಸ್ತುಪಡೆಯ ಜವಾಬ್ದಾರಿಯಾಗಿದೆ. ಯಾವುದೇ ನೆಲಬಾಂಬ್‌ನ್ನು ತೆರವುಗೊಳಿಸುವುದು ಅದರ ಕರ್ತವ್ಯವಾಗಿದೆ. ಹೆದ್ದಾರಿಯನ್ನು ರಾಷ್ಟ್ರೀಯ ರೈಫಲ್ಸ್ ಮುಂತಾದ ಅರೆಸೈನಿಕ ಪಡೆಗಳು ಕಾಯಬೇಕು. ಹೆದ್ದಾರಿಗೆ ಹೋಗುವ ರಸ್ತೆಗಳನ್ನು ಕಾಯುವುದು ಅವುಗಳ ಕೆಲಸ. ಇಡೀ ಪ್ರದೇಶ ಭಯೋತ್ಪಾದಕರಿಂದ ಮುಕ್ತವಾಗಿದೆ ಎಂದು ಖಾತರಿಪಡಿಸುವುದು ಅವುಗಳ ಕರ್ತವ್ಯ

ವಾಗಿತ್ತು. ರಾಷ್ಟ್ರೀಯ ರೈಫಲ್ಸ್‌ಗೆ ಬಾಂಬ್ ನಿಷ್ಕ್ರಿಯ ಪಡೆಯು ನೆರವು ನೀಡಬೇಕು. ಹೆದ್ದಾರಿಗೆ ಹೋಗುವ ಪ್ರತಿಯೊಂದು ರಸ್ತೆಯಲ್ಲಿ ಅದು ತಡೆಬೇಲಿಗಳನ್ನು ಇಡಬೇಕು. ಪ್ರತೀ ವ್ಯಕ್ತಿ ಮತ್ತು ವಾಹನವನ್ನು ತಪಾಸಣೆ ಮಾಡಬೇಕು. ರಸ್ತೆಯನ್ನು ಅಪಾಯ ಮುಕ್ತಗೊಳಿಸುವಲ್ಲಿ ಭದ್ರತಾ ಪಡೆಗಳು ವಿಫಲವಾಗಿರುವುದು ಸ್ಪಷ್ಟವಾಗಿದೆ.

ದುರಂತ ನಡೆದ ದಿನ ಪ್ರಧಾನಿ ಕಾರ್ಬೆಟ್ ನ್ಯಾಶನಲ್ ಪಾರ್ಕ್‌ನಲ್ಲಿ ಡಿಸ್ಕವರಿ ಚಾನೆಲ್ ತಂಡದ ಜೊತೆ ಶೂಟಿಂಗ್‌ನಲ್ಲಿದ್ದರು ಮತ್ತು ದುರಂತ ನಡೆದ ಮೂರು ಗಂಟೆಗಳಿಗೂ ಹೆಚ್ಚಿನ ಅವಧಿಯಲ್ಲಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂಬ ವ್ಯಾಖ್ಯಾನವನ್ನು ದೇಶದ ಜನರಿಗೆ ನೀಡಲಾಯಿತು. ಆದರೆ ಸತ್ಯಪಾಲ್ ಮಲಿಕ್‌ರ ಇತ್ತೀಚಿನ ಹೇಳಿಕೆಗಳು ಆ ವ್ಯಾಖ್ಯಾನವನ್ನು ಪ್ರಶ್ನಿಸಿವೆ. ಘಟನೆ ನಡೆದ ಒಂದು ಗಂಟೆಯ ಬಳಿಕ ಪ್ರಧಾನಿ ನನಗೆ ಕರೆ ಮಾಡಿ, ‘‘ಬಾಯಿ ಮುಚ್ಚಿಕೊಂಡಿರಿ, ಮಾಧ್ಯಮಕ್ಕೆ ಏನೂ ಹೇಳಬೇಡಿ’’ ಎಂದು ಹೇಳಿದ್ದರು ಎಂಬುದಾಗಿ ಮಲಿಕ್ ಈ ವರ್ಷದ ಎಪ್ರಿಲ್‌ನಲ್ಲಿ ಪತ್ರಕರ್ತ ಪ್ರಶಾಂತ್ ಟಂಡನ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಅಜಿತ್ ದೋವಲ್ ಕೂಡ ನನಗೆ ಕರೆ ಮಾಡಿ ಬಾಯಿ ಮುಚ್ಚಿಕೊಂಡಿರುವಂತೆ ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ.

ಹುತಾತ್ಮ ಯೋಧರಿಗೆ ನ್ಯಾಯ ನೀಡುವುದು ಬದಿಗಿರಲಿ, ಕನಿಷ್ಠ ತನ್ನ ಮೇಲೆ ಬಂದಿರುವ ಈ ಗಂಭೀರ ಆರೋಪದಿಂದ ಮುಕ್ತವಾಗುವ ಕಾರಣಕ್ಕಾದರೂ ಪುಲ್ವಾಮ ದಾಳಿಯ ತನಿಖೆಯನ್ನು ಸರ್ವೋಚ್ಚ ನ್ಯಾಯಾಲಯದ ನೇತೃತ್ವದಲ್ಲಿ ಕೇಂದ್ರ ಸರಕಾರ ನಡೆಸಬೇಕು. ಆ ಮೂಲಕ, ಈ ದೇಶದ ಯೋಧರ ಬಲಿದಾನ ವ್ಯರ್ಥವಾಗದು ಎನ್ನುವುದನ್ನು ದೇಶಕ್ಕೆ ಸ್ಪಷ್ಟ ಪಡಿಸಬೇಕು. ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News