ಅಮೆರಿಕದಲ್ಲಿ ಪ್ರಧಾನಿ ಮೋದಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದ ಪ್ರಶ್ನೆಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಅತ್ಯಂತ ಯಶಸ್ವಿಯಾಗಿದೆ, ಉಭಯ ದೇಶಗಳ ಸಂಬಂಧಕ್ಕೆ ಹೊಸ ಆಯಾಮ ದೊರಕಿದಂತಾಗಿದೆ ಎಂದು ಸರಕಾರ ಮತ್ತು ಆಡಳಿತ ಪಕ್ಷದವರು ಹೇಳಿಕೊಳ್ಳುವುದು ಸಹಜ. ನಿಜ, ಉಭಯ ದೇಶಗಳ ಸಂಬಂಧ ವರ್ಧನೆಯಲ್ಲಿ ಮೋದಿಯವರ ಈ ಭೇಟಿ ತುಂಬಾ ಮಹತ್ವದ್ದಾಗಿದೆ.ಎರಡೂ ದೇಶಗಳ ನಡುವೆ ವಿಜ್ಞಾನ, ತಂತ್ರಜ್ಞಾನ, ಸೆಮಿ ಕಂಡಕ್ಟರ್ ವಲಯದಲ್ಲಿ ಮಾಡಿಕೊಂಡಿರುವ ಒಪ್ಪಂದಗಳು ಉಪಯುಕ್ತಕರವಾಗಿವೆ. ಬಲಿಷ್ಠ ಚೀನಾದ ಎದುರು ಏಗುತ್ತಿರುವ ಅಮೆರಿಕಕ್ಕೆ ಭಾರತದ ಈ ಸ್ನೇಹ ಅನಿವಾರ್ಯವಾಗಿತ್ತು. ಇದಾವುದರ ಬಗೆಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಈ ಭೇಟಿಯ ಬಗ್ಗೆ ಮುಕ್ತ ಪರಾಮರ್ಶೆ ಮಾಡಿದಾಗ ಮೋದಿಯವರ ಈ ಭೇಟಿಯಲ್ಲಿ ಹಲವಾರು ಲೋಪಗಳು ಗೋಚರಿಸುತ್ತವೆ. ಭೇಟಿಯ ಸಂದರ್ಭದಲ್ಲಿ ಮೋದಿಯವರು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೆ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಭಾರತದಲ್ಲಿ ಸುದ್ದಿಗೋಷ್ಠಿಯನ್ನು ಎದುರಿಸಲು ನಿರಾಕರಿಸುವ ಮೋದಿಯವರು ವಾಶಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಒತ್ತಾಯಕ್ಕೆ ಮಣಿದು ಮಾಧ್ಯಮ ಗೋಷ್ಠಿಯಲ್ಲಿ ಪ್ರತ್ಯಕ್ಷರಾದರು.ಮೊದಲ ತುತ್ತಿಗೆ ಹರಳು ಎಂಬಂತೆ ಮೋದಿಯವರು ಮೊದಲ ಸುದ್ದಿಗೋಷ್ಠಿಯಲ್ಲಿ ಅಲ್ಲಿನ ಪತ್ರಕರ್ತರಿಂದ ಇಕ್ಕಟ್ಟಿನ ಪ್ರಶ್ನೆಗಳನ್ನು ಎದುರಿಸಿ ತಬ್ಬಿಬ್ಬಾದರು.
ಈ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಕೆಲವು ಸುದ್ದಿಗಾರರು ಮೋದಿಯವರನ್ನುದ್ದೇಶಿಸಿ, 'ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ, ಅಲ್ಪಸಂಖ್ಯಾತರನ್ನು ಗುರಿಯಾಗಿ ಮಾಡಿಕೊಂಡು ದಾಳಿ ಮಾಡಲಾಗುತ್ತಿದೆ ಹಾಗೂ ತಾರತಮ್ಯದಿಂದ ನೋಡಲಾಗುತ್ತಿದೆ. ಇದರ ಬಗ್ಗೆ ಅಮೆರಿಕದ ನಿಲುವೇನು' ಎಂಬ ಪ್ರಶ್ನೆಯನ್ನು ಜೋ ಬೈಡನ್‌ಗೆ ಕೇಳಿದರು.ಅಷ್ಟೇ ಅಲ್ಲ ಈ ಪ್ರಶ್ನೆಗೆ ಉತ್ತರ ನೀಡುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು. 'ಭಾರತದಲ್ಲಿ ವಾಕ್ ಸ್ವಾತಂತ್ರ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಏನು ಕ್ರಮ ಕೈಗೊಂಡಿದ್ದೀರಿ?' ಎಂದು ಮೋದಿಯವರನ್ನು ಪ್ರಶ್ನಿಸಿದರು.ಆಗ ಅಮೆರಿಕದ ಅಧ್ಯಕ್ಷ ಜೋ ಬೈಡನ್ 'ಎರಡೂ ದೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿವೆ.ಹೀಗಾಗಿ ಮಾನವ ಹಕ್ಕುಗಳು, ಸಹಿಷ್ಣುತೆ ಮತ್ತು ವೈವಿಧ್ಯತೆಯನ್ನು ಗೌರವಿಸುತ್ತವೆ' ಎಂದು ಸಮರ್ಥನೆ ಮಾಡಿಕೊಂಡರು.
ಜೋ ಬೈಡನ್ ಸಮರ್ಥನೆಯನ್ನೇ ಬಳಸಿಕೊಂಡ ಮೋದಿಯವರು, ಭಾರತದ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದರು. ಪ್ರಜಾಪ್ರಭುತ್ವದ ಎಲ್ಲ ಮೂಲ ತತ್ವಗಳನ್ನು ಭಾರತ ಅಳವಡಿಸಿಕೊಂಡಿದೆ ಎಂದು ಹೇಳಿಕೊಂಡರು. ಸಂವಿಧಾನ ವನ್ನು ಮುಂದಿಟ್ಟು ಕೊಂಡು ಮೋದಿಯವರು ಭಾರತದಲ್ಲಿ ಯಾವ ತಾರತಮ್ಯವಿಲ್ಲ ಎಂದು ಸಮರ್ಥಿಸಿಕೊಂಡಿರಬಹುದು.ಆದರೆ ವಾಸ್ತವ ಪರಿಸ್ಥಿತಿ ಏನು? ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಸಂವಿಧಾನ ಹಾಗೂ ಅದರ ಮೂಲ ತತ್ವಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡದೆ ಮೋದಿಯವರು ಜಾರಿ ಕೊಂಡರು.
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರು. ಸಾವಿರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿ ಬೀದಿ ಪಾಲಾದರು.ಅವರೆಲ್ಲರೂ ಯಾವ ಸಮುದಾಯಕ್ಕೆ ಸೇರಿದವರೆಂಬುದನ್ನು ವಿವರಿಸಬೇಕಾಗಿಲ್ಲ. 2014ರಲ್ಲಿ ಮೋದಿಯವರು ದಿಲ್ಲಿಗೆ ಬಂದು ಪ್ರಧಾನಿಯಾದರು. ಆ ನಂತರವೂ ಅಲ್ಪಸಂಖ್ಯಾತ ಸಮುದಾಯಗಳು ನಿತ್ಯ ದಾಳಿಗೆ ಗುರಿಯಾಗುತ್ತಲೇ ಇವೆ. ಪ್ರಧಾನಿ ಜಾಣ ವೌನ ತಾಳುತ್ತಾರೆ, ಇಲ್ಲವೇ ಹಾಗೇನು ಆಗಿಲ್ಲ ಎಂದು ಕಾಟಾಚಾರದ ಹೇಳಿಕೆಯನ್ನು ನೀಡುತ್ತಾರೆ.
ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ದಾಳಿಯ ಪ್ರಶ್ನೆ ಮಾತ್ರವಲ್ಲ, ಸಾಮಾಜಿಕ ನ್ಯಾಯಕ್ಕಾಗಿ, ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ನೂರಾರು ಚಿಂತಕರನ್ನು, ಲೇಖಕರನ್ನು, ಕಲಾವಿದರನ್ನು ಈ ಸರಕಾರ ಜೈಲಿಗೆ ತಳ್ಳಿದೆ.ಅವರ ಮೇಲೆ ರಾಜದ್ರೋಹದ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ.ಸೈದ್ಧಾಂತಿಕವಾಗಿ ಸಂಘಪರಿವಾರದ ನಿಲುವುಗಳನ್ನು ಒಪ್ಪದವರೆಲ್ಲ ಸರಕಾರದ ದಾಳಿಗೆ ಗುರಿಯಾಗಿದ್ದಾರೆ. ಹೀಗೇಕೆ ಎಂಬ ಪ್ರಶ್ನೆಗಳಿಗೂ ಮೋದಿಯವರ ಬಳಿ ಉತ್ತರವಿಲ್ಲ.
ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿರುವ ಬಗ್ಗೆ ಭಾರತದ ಸಂಸತ್ತಿನ ಒಳಗೆ ಮತ್ತು ಹೊರಗೆ ಸಾಕಷ್ಟು ಸಲ ಟೀಕೆ, ಪ್ರತಿರೋಧ ವ್ಯಕ್ತವಾಗಿವೆ. ಆದರೆ ಜಾತಿ,ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ತಾರತಮ್ಯದಿಂದ ನೋಡುವುದೇ ಆಡಳಿತ ಪಕ್ಷ ಮತ್ತು ಅದರ ಸೈದ್ಧಾಂತಿಕ ಮೂಲವಾದ ಆರೆಸ್ಸೆಸ್‌ತಾತ್ವಿಕ ನಿಲುವಾಗಿರುವುದರಿಂದ ಮಾನವ ಹಕ್ಕುಗಳಂಥ ಪ್ರಶ್ನೆಗಳಿಗೆ ಇವರ ಬಳಿ ಉತ್ತರವಿಲ್ಲ. ಒಂದು ಬಹುದೊಡ್ಡ ಸಮುದಾಯವನ್ನು ಮೂಲೆಗುಂಪು ಮಾಡಿ ಯಾವುದೇ ದೇಶ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರಧಾನಿ ಮೋದಿಯವರು ಮತ್ತು ಅವರ ಪಕ್ಷ ಅರ್ಥಮಾಡಿಕೊಳ್ಳುವವರೆಗೆ ಇಂಥ ಪ್ರಶ್ನೆಗಳನ್ನು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಎದುರಿಸಲೇಬೇಕಾಗುತ್ತದೆ. ಯಾವುದೇ ಆರೋಪಕ್ಕೆ ನಿರಾಕರಣೆ ಉತ್ತರವಾಗುವುದಿಲ್ಲ.
ಸಂಘದ ಶಾಖೆಯಲ್ಲಿ ಔರಂಗಜೇಬ ಮತ್ತು ಶಿವಾಜಿ ಕತೆ ಹೇಳಿ ಹುಡುಗರನ್ನು ಹುರಿದುಂಬಿ ಸಿದಂತೆ ಅಂತರ್‌ರಾಷ್ಟ್ರೀಯ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಲು ಆಗುವುದಿಲ್ಲ. ಆಧುನಿಕ ನಾಗರಿಕ ಸಮಾಜದಲ್ಲಿ ಮನುಷ್ಯರನ್ನು ಸಮಾನತೆಯಿಂದ ಕಾಣಲು ಒಪ್ಪದ ಯಾವುದೇ ಸಂಘಟನೆ ಇಲ್ಲವೇ ವ್ಯಕ್ತಿ ಇಂಥ ಪ್ರಶ್ನೆಗಳನ್ನು ಎದುರಿಸಲೇ ಬೇಕಾಗುತ್ತದೆ. ಅಮೆರಿಕದಂಥ ದೇಶಕ್ಕೆ ಹೋಗಿ ಅನಿವಾಸಿ ಭಕ್ತರಿಂದ ಜೈಕಾರ ಹಾಕಿಸಿಕೊಳ್ಳುವುದು ಸುಲಭ. ಆದರೆ ಅಮೆರಿಕದ ಅಧ್ಯಕ್ಷರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬರುವ ವಿಮರ್ಶಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಲ್ಲ. ಇಂಥ ಸನ್ನಿವೇಶದಲ್ಲಾದರೂ ಮೋದಿಯವರು ಸ್ವಯಂ ವಿಮರ್ಶೆ ಮಾಡಿಕೊಂಡು ತಪ್ಪುಗಳಾಗಿದ್ದರೆ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೆ ಅವರ ವ್ಯಕ್ತಿತ್ವದ ಹಿರಿಮೆ ಹೆಚ್ಚುತ್ತದೆ.
ಮೋದಿಯವರ ಭೇಟಿಯನ್ನು ವಿರೋಧಿಸಿ ಅಲ್ಲಿನ ಮೂವರು ಸಂಸದರು ಔತಣ ಕೂಟವನ್ನು ಬಹಿಷ್ಕರಿಸಿದರು. ಕೆಲವು ಸಂಸದರು ಕೂಡ ಪತ್ರಕರ್ತರು ಕೇಳಿದ ಪ್ರಶ್ನೆಗಳನ್ನು ಮೋದಿಯವರಿಗೆ ಕೇಳಿದರು. ಅವರು ವೌನಿಬಾಬಾ ಆದರು.ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ ಇದೇ ಸಂದರ್ಭದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಸಂದರ್ಶನವೊಂದರಲ್ಲಿ, 'ಭಾರತದಲ್ಲಿ ಅಲ್ಪಸಂಖ್ಯಾತರನ್ನು ಸಂರಕ್ಷಣೆ ಮಾಡದಿದ್ದರೆ ದೇಶ ಮುನ್ನಡೆಯಲು ಸಾಧ್ಯವಿಲ್ಲ . ಈ ಬಗ್ಗೆ ಅಧ್ಯಕ್ಷ ಬೈಡನ್ ಮೋದಿಯವರಿಗೆ ತಿಳಿ ಹೇಳಬೇಕು' ಎಂದು ಮನವಿ ಮಾಡಿದ್ದಾರೆ. ಇದರಿಂದ ತಮಗೆ ಅಚ್ಚರಿ ಆಗಿದೆಯೆಂಬ ಮೋದಿಯವರ ಮಾತು, ತನ್ನ ದೇಶದ ಜನರ ನೋವು, ಸಂಕಟ, ದುಮ್ಮಾನಗಳ ಬಗ್ಗೆ ಅವರು ಬೆನ್ನು ತಿರುವಿ ನಿಂತಿರುವುದಕ್ಕೆ ಸಾಕ್ಷಿಯಾಗಿದೆ. ಭಾರತದಲ್ಲಿ ರುವ ಅಲ್ಪಸಂಖ್ಯಾತರ ಸ್ಥಿತಿಗತಿಯ ಅಳಲು ಒಬಾಮಾ ಅವರಿಗೆ ತಟ್ಟಿದೆ. ಆದರೆ ಇದು ಮೋದಿಯವರಿಗೆ ತಟ್ಟಿಲ್ಲ ಎನ್ನುವುದು ಪ್ರಧಾನಿಯಾಗಿ ಅವರ ವೈಫಲ್ಯವನ್ನು ಹೇಳುತ್ತದೆ. ಅದೊಂದು ಕಾಲವಿತ್ತು. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು ವಿದೇಶಕ್ಕೆ ಹೋದರೆ ಅವರ ಮಾತು ಕೇಳಲು ಅಲ್ಲಿನ ಸರಕಾರಗಳ ಮುಖ್ಯಸ್ಥರು ಕಾತರದಿಂದ ಕಾಯುತ್ತಿದ್ದರು. ಅಲ್ಲಿನ ಸರಕಾರಗಳ ತಪ್ಪುಗಳನ್ನು ನೆಹರೂ ಅವರು ಕಿವಿ ಹಿಂಡಿ ತಿದ್ದಿ ಬುದ್ಧಿ ಹೇಳಿ ಭಾರತಕ್ಕೆ ವಾಪಸಾಗುತ್ತಿದ್ದರು. ಹಾಗಾಗಿಯೇ ಅಲಿಪ್ತ ಆಂದೋಲನವನ್ನು ಕಟ್ಟಲು ಅವರಿಂದ ಸಾಧ್ಯವಾಯಿತು. ಆದರೆ ಇಂದು ಬೇರೆ ದೇಶಗಳಿಂದ ನಾವು ಬುದ್ಧಿ ಹೇಳಿಸಿಕೊಳ್ಳಬೇಕಾಗಿ ಬಂದಿದೆ. ಇನ್ನಾದರೂ ಮೋದಿಯವರು ಇಂಥ ಇಕ್ಕಟ್ಟಿಗೆ ಸಿಲುಕದೆ ಪ್ರಜಾಪ್ರಭುತ್ವದ ಘನತೆ ಮತ್ತು ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳುವ ಮೂಲಕ ಇನ್ನೊಮ್ಮೆ ಇಂಥ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಲಿ.