ಸ್ಪಷ್ಟನೆ, ಬದ್ಧತೆ ಎರಡೂ ಇಲ್ಲದ ಕೆಂಪುಕೋಟೆಯ ಮಾತುಗಳು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆಂಪುಕೋಟೆಯಲ್ಲಿ ಗುರುವಾರ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಭಾಷಣ, ಈ ದೇಶದ ಸ್ವಾತಂತ್ರ್ಯದ ಬಹುದೊಡ್ಡ ಅಣಕವಾಗಿತ್ತು. ಕೆಂಪು ಕೋಟೆಯಲ್ಲಿ ಈ ದೇಶದ ಸಂವಿಧಾನವನ್ನು ಪರೋಕ್ಷವಾಗಿ ಟೀಕಿಸಿದರು. ಸಮಾನ ನಾಗರಿಕ ಸಂಹಿತೆಯನ್ನು ಎತ್ತಿಹಿಡಿಯುವ ಭರದಲ್ಲಿ ಅವರು ಈಗ ಇರುವ ನಾಗರಿಕ ಸಂಹಿತೆಯನ್ನು ಕೋಮುವಾದಿ, ತಾರತಮ್ಯವಾದಿ ಎಂದು ಪರೋಕ್ಷವಾಗಿ ನಿಂದಿಸಿದರು. ವಿಶೇಷವೆಂದರೆ, ತಾನು ಪ್ರತಿಪಾದಿಸುವ ಸಮಾನ ನಾಗರಿಕ ಸಂಹಿತೆಗೆ ಅವರು ‘ಜಾತ್ಯತೀತ ನಾಗರಿಕ ಸಂಹಿತೆ’ ಎಂದು ಕರೆದಿದ್ದಾರೆ. ಈ ದೇಶದಲ್ಲಿ ಹೆಚ್ಚುತ್ತಿರುವ ಜಾತಿ ದೌರ್ಜನ್ಯಗಳ, ಕೋಮು ದೌರ್ಜನ್ಯಗಳು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗಳು, ಅಸ್ಪಶ್ಯತೆ ಇವೆಲ್ಲಕ್ಕೂ ನಮ್ಮ ನಾಗರಿಕ ಸಂಹಿತೆ ಕಾರಣವೋ ಅಥವಾ ನಮ್ಮ ನಾಗರಿಕ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕಿಳಿಸಲು ವಿಫಲವಾದ ಸರಕಾರವೋ ಎನ್ನುವುದರ ಬಗ್ಗೆ ಅವರ ಮಾತಿನಲ್ಲಿ ಸ್ಪಷ್ಟತೆಯಿರಲಿಲ್ಲ. ದೇಶದಲ್ಲಿ ಈಗಲೂ ಜಾತೀಯತೆ ತಾಂಡವವಾಡುತ್ತಿದೆ. ಅಸ್ಪಶ್ಯತೆ ಜೀವಂತವಿದೆ. ಮಲಹೊರುವ ಪದ್ಧತಿಗೆ ಈಗಲೂ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಇವೆಲ್ಲಕ್ಕೂ ಪ್ರಧಾನಿ ಮೋದಿಯವರ ‘ಸಮಾನ ನಾಗರಿಕ ಸಂಹಿತೆ’ಯಲ್ಲಿ ಯಾವ ಪರಿಹಾರವಿದೆ? ದೇಶದಲ್ಲಿ ಸಮ ಸಮಾಜವೇ ಅಸ್ತಿತ್ವದಲ್ಲಿಲ್ಲದೇ ಇರುವಾಗ, ದುರ್ಬಲರಿಗೂ, ಸಬಲರಿಗೂ ಸಮಾನವಾದ ಕಾನೂನನ್ನು ಜಾರಿಗೊಳಿಸುವುದು ಸಾಧ್ಯವೆ? ವೈವಿಧ್ಯಗಳ ಸಂಗಮವಾಗಿರುವ ಭಾರತದಲ್ಲಿ ಯಾವ ಮಾನದಂಡದ ಆಧಾರದಲ್ಲಿ ಸಮಾನ ನಾಗರಿಕ ಕಾನೂನನ್ನು ರಚಿಸಲಾಗುತ್ತದೆ? ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿಯವರು ಈಗ ಇರುವ ಕಾನೂನನ್ನು ಟೀಕಿಸಿ, ಏಕರೂಪ ನಾಗರಿಕ ಸಂಹಿತೆಯನ್ನು ಜಾತ್ಯತೀತ ಎಂದು ಕರೆಯುವುದಕ್ಕೆ ಪ್ರೇರಣೆಯಾದರೂ ಏನು? ಅಂತಹದೊಂದು ಸಮಾನ ನಾಗರಿಕ ಕಾನೂನನ್ನು ಅಧಿಕೃತವಾಗಿ ರಚಿಸಲಾಗಿದೆಯೆ? ಸಮಾನ ನಾಗರಿಕ ಸಂಹಿತೆಯ ಹೆಸರಿನಲ್ಲಿ ಈ ದೇಶದ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಕೆಳಜಾತಿಗಳ ನಡುವೆ ಆತಂಕಗಳನ್ನು ಬಿತ್ತುವ ರಾಜಕಾರಣಕ್ಕೆ ಕೆಂಪುಕೋಟೆಯ ಭಾಷಣವನ್ನು ಪ್ರಧಾನಿ ಮೋದಿಯವರು ಬಳಸಿಕೊಂಡರು.
ಅವರ ಭಾಷಣ ಪರೋಕ್ಷವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿತ್ತೇ ಹೊರತು, ಈ ದೇಶದ ಎಲ್ಲ ವರ್ಗದ, ಎಲ್ಲ ಜಾತಿಯ, ಎಲ್ಲ ಧರ್ಮದ ಜನರಿಗೆ ಸಮಾನ ನ್ಯಾಯವನ್ನು ಕೊಡಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಈ ದೇಶದಲ್ಲಿ ಮುಸ್ಲಿಮರಿಗೊಂದು ಕಾನೂನು, ಅಲ್ಪಸಂಖ್ಯಾತರಿಗೊಂದು ಕಾನೂನಿದೆ ಎನ್ನುವ ಸುಳ್ಳನ್ನು ಬಿಜೆಪಿ ಪದೇ ಪದೇ ಹೇಳುತ್ತಿದ್ದು, ಆ ಸುಳ್ಳಿನ ಮುಂದುವರಿದ ಭಾಗವಾಗಿದೆ ಪ್ರಧಾನಿ ಮೋದಿಯವರ ಹೇಳಿಕೆ. ಈ ದೇಶ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ, ದಲಿತರಿಗೆ, ಆದಿವಾಸಿಗಳಿಗೆ, ಬುಡಕಟ್ಟು ಜನರಿಗೆ ...ಹೀಗೆ ವೈವಿಧ್ಯಕ್ಕೆ ಪೂರಕವಾಗಿ ಅವರ ಹಕ್ಕುಗಳನ್ನು ನೀಡಿದೆ. ಸಮಾನ ನಾಗರಿಕ ಸಂಹಿತೆಯು ಈ ದೇಶದ ಮೇಲ್‌ಜಾತಿಯ ಹಿತಾಸಕ್ತಿಗೆ ಪೂರಕವಾಗಿ ರೂಪುಗೊಳ್ಳುತ್ತಿದೆ ಎನ್ನುವ ಆರೋಪಗಳಿವೆ. ಸಂವಿಧಾನ ಜಾರಿಗೊಳಿಸಿದ ನಾಗರಿಕ ಸಂಹಿತೆಗಳನ್ನು ಕಿತ್ತು ಹಾಕಿ ಅಸಮಾನ ಮೇಲೆ ಮನು ಸಂಹಿತೆಯನ್ನು ಹೇರುವ ಪರೋಕ್ಷ ಪ್ರಯತ್ನ ನಡೆಯುತ್ತಿದೆ. ಮತ್ತು ಆ ಪ್ರಯತ್ನವನ್ನು ಒಂದು ಸುಧಾರಣೆಯೆಂಬಂತೆ ಬಿಂಬಿಸಲು ಮುಂದಾಗಿದ್ದಾರೆ. ಪ್ರಧಾನಿ ಮೋದಿ ಹೇರಲು ಹೊರಟಿರುವ ಸಮಾನ ನಾಗರಿಕ ಸಂಹಿತೆಯ ವಿರುದ್ಧ ಮೊತ್ತ ಮೊದಲು ಹಿಂದೂ ಸಮಾಜದೊಳಗಿಂದಲೇ ಪ್ರತಿರೋಧ ಕೇಳಿ ಬರಲಿದೆ. ಇದು ಈ ದೇಶದ ದುರ್ಬಲರ, ಕೆಳಜಾತಿಯ ಜನರ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಕಬಳಿಸುವ ಸಂಹಿತೆಯಾಗಿದೆ.
ಇದರ ಜೊತೆ ಜೊತೆಗೇ ‘ಒಂದು ದೇಶ ಒಂದು ಚುನಾವಣೆ’ಯ ಬಗ್ಗೆ ಮಾತನಾಡಿದ್ದಾರೆ. ‘ಒಂದು ದೇಶ- ಒಂದು ಚುನಾವಣೆ’ಯ ಘೋಷಣೆ ಏಕ ನಾಗರಿಕ ಸಂಹಿತೆಗಿಂತ ಭಿನ್ನವಾಗಿಯೇನೂ ಇಲ್ಲ. ಈಗಾಗಲೇ ಈ ದೇಶದ ಬಹುತೇಕ ರಾಜ್ಯಗಳು ಈ ಘೋಷಣೆಯನ್ನು ತಿರಸ್ಕರಿಸಿವೆ. ಒಕ್ಕೂಟ ವ್ಯವಸ್ಥೆಗೆ ಇದು ಭಾರೀ ಹಾನಿಯನ್ನು ಎಸಗಲಿದೆ ಎನ್ನುವ ಆತಂಕವನ್ನು ಹಲವು ರಾಜ್ಯಗಳು ವ್ಯಕ್ತಪಡಿಸಿವೆ. ಈ ದೇಶದಲ್ಲಿ ಚುನಾವಣೆಗಳು ನಡೆಯುವುದು ಆಯಾ ರಾಜ್ಯಗಳ ಹಿತಾಸಕ್ತಿಗೆ ಅನುಗುಣವಾಗಿ. ಪ್ರಧಾನಿಯ ಆಯ್ಕೆಗೂ ಮುಖ್ಯಮಂತ್ರಿಯ ಆಯ್ಕೆಗೂ ಅಂತರವಿದೆ. ‘ಒಂದು ದೇಶ ಒಂದು ಚುನಾವಣೆ’ಯು ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎನ್ನುವ ಅಭಿಪ್ರಾಯವನ್ನು ಹಲವು ರಾಜಕೀಯ ತಜ್ಞರು ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಚುನಾವಣಾ ಆಯೋಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಇವಿಎಂನಲ್ಲಿ ವ್ಯಾಪಕ ಸುಧಾರಣೆಗಳ ಅಗತ್ಯವಿದೆ ಎನ್ನುವ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಕೂಡ ಒಪ್ಪಿಕೊಂಡಿದೆ. ಚುನಾವಣಾ ಪ್ರಕ್ರಿಯೆಯೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಇಂದಿನ ದಿನಗಳಲ್ಲಿ ‘ಒಂದು ದೇಶ-ಒಂದು ಚುನಾವಣೆ’ ಘೋಷಣೆ, ರಾಜ್ಯಗಳ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಲು ಕೇಂದ್ರ ಸರಕಾರ ನಡೆಸುತ್ತಿರುವ ಹುನ್ನಾರದ ಭಾಗವೆಂದು ರಾಜ್ಯಗಳು ಆತಂಕಕ್ಕೊಳಗಾಗುವುದು ಸಹಜವಾಗಿದೆ.
ಕೊಲ್ಕತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ದೇಶಾದ್ಯಂತ ಗದ್ದಲ ಎಬ್ಬಿಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ಮೋದಿಯವರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಕೆಂಪುಕೋಟೆಯಲ್ಲಿ ಮಾತನಾಡಿದ್ದಾರೆ. ‘‘ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸಬೇಕಾಗಿದೆ ಹಾಗೂ ಇಂತಹ ರಾಕ್ಷಸೀ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಶಿಕ್ಷೆಯನ್ನು ನೀಡಬೇಕಾಗಿದೆ’’ ಎಂದವರು ಹೇಳಿದ್ದಾರೆ. 2014ರಲ್ಲಿ ಮೊದಲ ಬಾರಿ ಕೆಂಪುಕೋಟೆಯಲ್ಲಿ ನಿಂತು ಆಡಿತ ಮಾತುಗಳನ್ನು ಪ್ರಧಾನಿ ಮೋದಿ 2024ರದಲ್ಲಿ ಪುನರಾವರ್ತಿಸಿದ್ದಾರೆ. ಈ ದೇಶದ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಮಾತನಾಡಿದಾಗ ಅವರಿಗೆ ಸಿಕ್ಕಿದ ನ್ಯಾಯವೇನು ಎನ್ನುವುದು ವಿಶ್ವಕ್ಕೇ ಗೊತ್ತಿದೆ. ಈ ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಬೀದಿಗಿಳಿದಾಗ ಪೊಲೀಸರು ಅವರ ಮೇಲೆ ಲಾಠಿ ಬೀಸಿದರು. ಈ ಸಂದರ್ಭದಲ್ಲಿ ಪ್ರಧಾನಿ ತುಟಿ ಬಿಚ್ಚಲಿಲ್ಲ. ತನ್ನದೇ ಪಕ್ಷದ ಸಂಸದನ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಲಿಲ್ಲ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಅವರ ಹತ್ಯೆಯ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ದೋಷಮುಕ್ತರಾಗಿಸಿ ಬಿಡುಗಡೆ ಮಾಡಿರುವುದು ಯಾರು ಎನ್ನುವುದು ಪ್ರಧಾನಿಗೆ ಮರೆತು ಹೋಗಿರಬಹುದು, ಆದರೆ ದೇಶಕ್ಕೆ ನೆನಪಿದೆ.
ಇದೇ ಸಂದರ್ಭದಲ್ಲಿ ಭಾರತವು ಒಲಿಂಪಿಕ್ಸ್‌ನ ಆತಿಥ್ಯವನ್ನು ಹೊತ್ತುಕೊಳ್ಳುವ ಉದ್ದೇಶವನ್ನು ಹೊಂದಿದೆ ಎನ್ನುವ ಭರವಸೆಯನ್ನೂ ಪ್ರಧಾನಿ ಮೋದಿಯವರು ನೀಡಿದ್ದಾರೆ. ಇದೊಂದು ರೀತಿಯಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿದುಕೊಳ್ಳುವ ಆಸೆಯನ್ನು ಹೇಳಿಕೊಂಡಂತಿದೆ. ಮೊತ್ತ ಮೊದಲು, ಭಾರತದ ಕ್ರೀಡೆಯನ್ನು ರಾಜಕೀಯ ಭ್ರಷ್ಟರಿಂದ ಬಿಡುಗಡೆಗೊಳಿಸುವ ಬಗ್ಗೆ ಸರಕಾರ ಯೋಚಿಸಬೇಕು. ಕ್ರೀಡೆಯನ್ನು ಸುತ್ತುವರಿದಿರುವ ಭ್ರಷ್ಟ ರಾಜಕಾರಣಿಗಳ ಕಾರಣದಿಂದಲೇ, ವಿನೇಶ್ ಫೋಗಟ್ ಅವರ ಚಿನ್ನದ ಪದಕದ ಹಾದಿ ಮುಚ್ಚಲ್ಪಟ್ಟಿತು. ಆಕೆ ಕುಸ್ತಿಯಿಂದ ಅನರ್ಹಗೊಳ್ಳಬೇಕಾಯಿತು. ದೇಶದ ಅತ್ಲೀಟ್‌ಗಳಿಗೆ ಪ್ರಾಮಾಣಿಕ ಪ್ರೋತ್ಸಾಹ ಇಂದಿನ ಅಗತ್ಯವಾಗಿದೆ. ಕ್ರಿಕೆಟ್‌ಗೆ ದೇಶದಲ್ಲಿ ಸಲ್ಲುತ್ತಿರುವ ರಾಜಕೀಯ, ಆರ್ಥಿಕ ಬೆಂಬಲ ಅತ್ಲೀಟ್‌ಗಳಿಗೂ ಸಿಗಬೇಕಾಗಿದೆ. ಒಲಿಂಪಿಕ್ಸ್‌ಗೆ ಭಾರತದಲ್ಲಿ ಆತಿಥ್ಯ ನೀಡುವುದಕ್ಕೆ ಮುನ್ನ, ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಳುಗಳು ಭಾರೀ ಸಾಧನೆಗಳನ್ನು ಮಾಡುವ ವಾತಾವರಣ ನಿರ್ಮಾಣವಾಗುವುದು ಇಂದಿನ ಅಗತ್ಯವಾಗಿದೆ. ಆದರೆ ಆ ಬಗ್ಗೆ ಪ್ರಧಾನಿ ಮೋದಿಯವರಿಂದ ಯಾವ ಭರವಸೆಯೂ ಸಿಕ್ಕಿಲ್ಲ. ಸ್ಪಷ್ಟತೆ ಮತ್ತು ಬದ್ಧತೆ ಎರಡೂ ಇಲ್ಲದ ಮೋದಿಯ ಕೆಂಪುಕೋಟೆಯ ಭಾಷಣ, 78ನೇ ಸ್ವಾತಂತ್ರ್ಯದ ಒಂದು ವ್ಯಂಗ್ಯವಾಗಿಯಷ್ಟೇ ಜನತೆ ಸ್ವೀಕರಿಸಿದ್ದಾರೆ.