ಗಣರಾಜ್ಯೋತ್ಸವ: ಸಂಚಲನ ಪಥ ತಪ್ಪದಿರಲಿ

Update: 2024-01-11 04:09 GMT

2011 ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕದ ಸ್ತಬ್ಧಚಿತ್ರ

Photo:wikipedia.org/wiki/File:The_Karnataka_tableau

ಭಾರತವೆನ್ನುವುದು ಹಲವು ಭಾಷೆ, ಸಂಸ್ಕೃತಿಗಳನ್ನೊಳಗೊಂಡ ಒಕ್ಕೂಟ ವ್ಯವಸ್ಥೆ. ಆ ವೈವಿಧ್ಯವನ್ನು ಸಂಭ್ರಮಿಸುವ, ಎತ್ತಿ ಹಿಡಿಯುವ ದಿನ ಗಣರಾಜ್ಯೋತ್ಸವ. ಹೊಸದಿಲ್ಲಿಯಲ್ಲಿ ಪ್ರತೀ ವರ್ಷ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನ, ವಿವಿಧ ರಾಜ್ಯಗಳು ಭಾರತೀಯತೆಯ ಗುರುತಿನೊಂದಿಗೆ ಒಂದಾಗಿ ಹೆಜ್ಜೆಯಿಡುವ ಕ್ಷಣ. ಆದುದರಿಂದಲೇ ಈ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರದರ್ಶನಗೊಳ್ಳುವ ಸ್ತಬ್ಧ ಚಿತ್ರಕ್ಕೆ ವಿಶೇಷ ಮಹತ್ವವಿದೆ. ಕೇಂದ್ರ ಸರಕಾರದ ಸರ್ವಾಧಿಕಾರಿ ನೀತಿಗಳಿಂದಾಗಿ ಒಕ್ಕೂಟ ವ್ಯವಸ್ಥೆಯು ದುರ್ಬಲಗೊಳ್ಳುತ್ತಿರುವ ಈ ದಿನಗಳಲ್ಲಿ ಸಹಜವಾಗಿಯೇ ಪ್ರತೀ ವರ್ಷ ಆಚರಿಸಲ್ಪಡುವ ಗಣರಾಜ್ಯೋತ್ಸವ ಸಮಾರಂಭವು ತಪ್ಪು ಕಾರಣಗಳಿಗಾಗಿ ಟೀಕೆಗೊಳಗಾಗುತ್ತಿದೆ. ಎಲ್ಲ ರಾಜ್ಯಗಳನ್ನು ಭಾವನಾತ್ಮಕವಾಗಿ ಒಂದು ಗೂಡಿಸಬೇಕಾದ ಈ ದಿನ, ರಾಜ್ಯಗಳ ಭಾವನೆಗಳನ್ನು ಘಾಸಿಗೊಳಿಸುವುದಕ್ಕೆ ಕೇಂದ್ರ ಸರಕಾರಕ್ಕೆ ಒಂದು ನೆಪವಾಗುತ್ತಿದೆೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬೇರೆ ಬೇರೆ ರಾಜ್ಯಗಳು ತಮ್ಮ ನಾಡು-ನುಡಿಯನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸುತ್ತಾ ಬರುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪಥಸಂಚಲನದಲ್ಲಿ ಸ್ತಬ್ಧ ಚಿತ್ರ ಪ್ರದರ್ಶಿಸುವ ಕುರಿತಂತೆ, ರಾಜ್ಯಗಳು ಏನನ್ನು ಪ್ರದರ್ಶಿಸಬೇಕು, ಪ್ರದರ್ಶಿಸಬಾರದು ಎನ್ನುವುದರಲ್ಲಿ ಕೇಂದ್ರ ಸರಕಾರ ಅನಗತ್ಯ ಮೂಗು ತೂರಿಸುತ್ತಿದೆ. ಪರಿಣಾಮವಾಗಿ ಕೆಲವು ರಾಜ್ಯಗಳ ಸ್ತಬ್ಧಚಿತ್ರಗಳನ್ನು ಕೇಂದ್ರ ಸರಕಾರ ಕಾರಣವಿಲ್ಲದೆಯೇ ತಿರಸ್ಕರಿಸಿ ವಿವಾದವನ್ನು ಸೃಷ್ಟಿಸುತ್ತಿದೆ. ಈ ಬಾರಿ, ಜನವರಿ ೨೬ರಂದು ಕರ್ನಾಟಕ ರಾಜ್ಯ ಪ್ರದರ್ಶಿಸಲು ಮುಂದಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಚೆನ್ನಮ್ಮ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ನಿರಾಕರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ನವ ಕರ್ನಾಟಕದ ಅಭಿವೃದ್ಧಿಯನ್ನು ವಸ್ತುವಾಗಿಟ್ಟುಕೊಂಡು ಈ ಬಾರಿಯ ಸ್ತಬ್ಧ ಚಿತ್ರವನ್ನು ರೂಪಿಸಲಾಗಿತ್ತು. ನವಕರ್ನಾಟಕದ ಅಭಿವೃದ್ಧಿಯ ದೃಷ್ಠಾರ, ಸಾಮಾಜಿಕ ನ್ಯಾಯದ ಹರಿಕಾರ, ಮೈಸೂರನ್ನು ಮಾದರಿ ರಾಜ್ಯವಾಗಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಕಿತ್ತೂರು ಚೆನ್ನಮ್ಮ, ಜೊತೆಗೆ ಬ್ರಾಂಡ್ ಬೆಂಗಳೂರು ಹಾಗೂ ಕರ್ನಾಟಕದ ನೈಸರ್ಗಿಕ ಚಿತ್ರಣ ಇವುಗಳನ್ನು ಮಾದರಿಯಾಗಿ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿ ಮನವಿಯನ್ನು ತಿರಸ್ಕರಿಸಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ವಿದ್ದಾಗಲೂ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಟ್ಯಾಬ್ಲೋವನ್ನು ಕೇಂದ್ರ ಸರಕಾರ ನಿರಾಕರಿಸಿತ್ತು. ಇದು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ತೀವ್ರ ಮುಜುಗರಕ್ಕೆ ಈಡು ಮಾಡಿತ್ತು. ಈ ಬಗ್ಗೆ ಕರ್ನಾಟಕದ ಜನತೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಬದಲಿಸಿ ಟ್ಯಾಬ್ಲೋಗೆ ಅವಕಾಶವನ್ನು ನೀಡಿತ್ತು. ಈಗಾಗಲೇ ಕರ್ನಾಟಕಕ್ಕೆ ಸೇರಬೇಕಾದ ತೆರಿಗೆ ಹಣವನ್ನು ನೀಡಲು ಕೇಂದ್ರ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡುತ್ತಿದೆ. ಇದೀಗ ಕರ್ನಾಟಕದ ಟ್ಯಾಬ್ಲೋವನ್ನು ನಿರಾಕರಿಸಿರುವುದು, ಕೇಂದ್ರದ ಮೇಲಿರುವ ಆರೋಪಗಳಿಗೆ ಪುಷ್ಟಿಯನ್ನು ನೀಡಿದೆ.

ಇಂದು ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಉತ್ತರ ಭಾರತಕ್ಕೆ ಮಾದರಿಯಾಗಿ ಬೆಳೆಯುತ್ತಿವೆ. ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಸವಾಲಾಗಿ ಬೆಳೆಯುತ್ತಿವೆ. ಪ್ರಾದೇಶಿಕ ಭಾಷೆಗಳು ಮತ್ತು ಇಂಗ್ಲಿಷ್ ಇವೆರಡನ್ನು ಜೊತೆಯಾಗಿಸಿಕೊಂಡು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಭಾರತ ಗುರುತಿಸಲ್ಪಡುತ್ತಿದೆ. ಉತ್ತರ ಭಾರತ ಬಡತನ, ಕೋಮುಗಲಭೆ, ಹಿಂಸಾಚರ, ದಂಗೆ ಇತ್ಯಾದಿಗಳಿಗೆ ಸುದ್ದಿಯಾಗುತ್ತಿದ್ದರೆ, ದಕ್ಷಿಣ ಭಾರತ ಆರೋಗ್ಯ, ಆಸ್ಪತ್ರೆ, ಶಿಕ್ಷಣ ಕ್ಷೇತ್ರಗಳ ಸಾಧನೆಗಳಿಂದ ಸುದ್ದಿಯಾಗುತ್ತಿದೆ. ಉತ್ತರ ಭಾರತದಲ್ಲಿ ಮಂದಿರ, ಪ್ರತಿಮೆ ಎಂದು ಸರಕಾರ ಹಣ ಪೋಲು ಮಾಡುತ್ತಿದೆ. ಉತ್ತರ ಭಾರತೀಯರು ಉದ್ಯೋಗವನ್ನು ಅರಸಿಕೊಂಡು ದಕ್ಷಿಣ ಭಾರತಕ್ಕೆ ವಲಸೆ ಬರುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹಿಂದಿಯ ಸರ್ವಾಧಿಕಾರವನ್ನು ಧಿಕ್ಕರಿಸಿ ದಕ್ಷಿಣ ಭಾರತದ ಬೆಳವಣಿಗೆ ಕೇಂದ್ರ ಸರಕಾರಕ್ಕೆ ಸಹಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದುದರಿಂದಲೇ, ದಕ್ಷಿಣ ಭಾರತದ ರಾಜ್ಯಗಳ ಸಾಧನೆಗಳು, ಅಲ್ಲಿನ ಅಭಿವೃದ್ಧಿಗಳ ಪ್ರತಿನಿಧಿಗಳಾಗಿ ಭಾಗವಹಿಸುವ ಟ್ಯಾಬ್ಲೋಗಳು ಕೇಂದ್ರ ಸರಕಾರಕ್ಕೆ ಬೇಕಾಗಿಲ್ಲ.

ಈ ಹಿಂದೆ ಕೇರಳ ರಾಜ್ಯದ ನಾರಾಯಣ ಗುರು ಟ್ಯಾಬ್ಲೋವನ್ನು ತಿರಸ್ಕರಿಸಿರುವುದು ಕೂಡ ತೀವ್ರ ವಿವಾದಕ್ಕೀಡಾಗಿತ್ತು. ನಾರಾಯಣ ಗುರುಗಳು ಕೇರಳದಲ್ಲಿ ವೈದಿಕ ಧರ್ಮದ ಜಾತೀಯತೆ, ಅಸ್ಪಶ್ಯತೆಯ ವಿರುದ್ಧ ಹೋರಾಡಿದವರು. ಈಳವ ಸಮುದಾಯವೂ ಸೇರಿದಂತೆ ಶೂದ್ರರು, ದಲಿತರಿಗೆ ದೇವಸ್ಥಾನದ ಆವರಣದೊಳಗೂ ಪ್ರವೇಶವಿರಲಿಲ್ಲ. ಮೇಲ್‌ಜಾತಿಯ ಜನರು ಓಡಾಡುವ ರಸ್ತೆಯಲ್ಲಿ ನಡೆಯುವ ಅವಕಾಶವಿರಲಿಲ್ಲ. ಇಂತಹ ಕಾಲಘಟ್ಟದಲ್ಲಿ ಕೇರಳದಲ್ಲಿ ನಾರಾಯಣಗುರುಗಳು ಧಾರ್ಮಿಕ, ವೈಚಾರಿಕ ಕ್ರಾಂತಿಯನ್ನು ನಡೆಸಿ ಶೂದ್ರರನ್ನು ವೈದಿಕ ಧರ್ಮದಿಂದ ಬಿಡುಗಡೆಗೊಳಿಸಿದರು. ನಾರಾಯಣಗುರುಗಳು ಒಂದೇ ಜಾತಿ-ಒಂದೇ ದೇವರು ತತ್ವವನ್ನು ದೇಶಾದ್ಯಂತ ಪ್ರಚಾರ ಮಾಡಿದವರು. ಮಹಾತ್ಮಾಗಾಂಧೀಜಿಯೂ ನಾರಾಯಣ ಗುರುಗಳನ್ನು ಭೇಟಿ ಮಾಡಿ, ಜಾತೀಯತೆಯ ನಿವಾರಣೆಯ ಬಗ್ಗೆ ಚರ್ಚೆ ನಡೆಸಿದ್ದರು. ನಾರಾಯಣಗುರು ತತ್ವ ಇಡೀ ದೇಶಕ್ಕೆ ಮಾದರಿಯಾದುದು. ಇಂತಹ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಕೇರಳ ಸರಕಾರ ಪ್ರದರ್ಶನಕ್ಕೆ ಕಳುಹಿಸಿ ಅನುಮತಿ ಬೇಡಿತ್ತು. ಆದರೆ ಕೇಂದ್ರ ಸರಕಾರ ಅದನ್ನು ನಿರಾಕರಿಸಿತು. ನಾರಾಯಣ ಗುರುಗಳ ಬದಲಿಗೆ ಶಂಕರಾಚಾರ್ಯ ಟ್ಯಾಬ್ಲೋವನ್ನು ಪಥ ಸಂಚಲನದಲ್ಲಿ ಪ್ರದರ್ಶಿಸುವುದು ಕೇಂದ್ರ ಸರಕಾರದ ಇಂಗಿತವಾಗಿತ್ತು. ದಕ್ಷಿಣ ಭಾರತದಲ್ಲಿ ವೈಚಾರಿಕ ಕ್ರಾಂತಿಕಾರರ ದೊಡ್ಡ ಪಡೆಯೇ ಇದೆ. ತಮಿಳುನಾಡಿನಲ್ಲಿ ಪೆರಿಯಾರ್ ಹೆಸರು ಕೇಳಿದರೆ ಉತ್ತರ ಭಾರತದ ಜಾತೀಯವಾದಿಗಳು ನಡುಗುತ್ತಾರೆ. ನಾರಾಯಣಗುರುಗಳ ಹೆಸರೂ ಜಾತೀಯವಾದಿಗಳಿಗೆ ಅಪಥ್ಯವಾಗಿದೆ. ಕರ್ನಾಟಕದ ಬಸವಣ್ಣ ನಡೆಸಿದ ವೈಚಾರಿಕ ಕ್ರಾಂತಿಯು ವಿಶ್ವ ಮಾನ್ಯವಾಗಿದೆಯಾದರೂ, ಕೇಂದ್ರ ಸರಕಾರಕ್ಕೆ ಬಸವಣ್ಣನ ತತ್ವ, ವಿಚಾರ ಬೇಡವಾಗಿದೆ.

ವಿಪರ್ಯಾಸವೆಂದರೆ ಈ ಬಾರಿ ಪಂಜಾಬ್‌ನ ಟ್ಯಾಬ್ಲೋವನ್ನು ಕೂಡ ಕೇಂದ್ರ ತಿರಸ್ಕರಿಸಿದೆ. ಪಂಜಾಬ್ ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿಯಿಂದ ಗುರುತಿಸಲ್ಪಡುತ್ತಿರುವ ರಾಜ್ಯ. ಕೃಷಿ ಮತ್ತು ಸೇನೆಗೆ ಪಂಜಾಬ್ ನೀಡಿರುವ ಕೊಡುಗೆ ಅನುಪಮವಾದುದು. ಇತ್ತೀಚಿನ ದಿನಗಳಲ್ಲಿ ಪಂಜಾಬ್ ಜನರು ಬಿಜೆಪಿಯ ಜಾತೀಯ ಮತ್ತು ಕಾರ್ಪೊರೇಟ್ ನೇತೃತ್ವದ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಮಾತ್ರವಲ್ಲ, ಕೇಂದ್ರದ ಕೃಷಿ ವಿರೋಧಿ ನೀತಿಗಳ ವಿರುದ್ಧ ರೈತರನ್ನು ಸಂಘಟಿಸಿ ವಿಶ್ವ ಮಟ್ಟದಲ್ಲಿ ಗಮನಸೆಳೆದರು. ಪಂಜಾಬ್‌ನ ಟ್ಯಾಬ್ಲೋ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕಾಣಿಸಿಕೊಳ್ಳುವುದು ದೇಶದ ಪಾಲಿನ ಹೆಮ್ಮೆಯಾಗಬೇಕು. ಆದರೆ ಅದಕ್ಕೆ ಅನುಮತಿ ನೀಡದೇ ಇರುವ ಮೂಲಕ ಕೇಂದ್ರ ಸರಕಾರ ಪಂಜಾಬ್‌ನ ವೈವಿಧ್ಯವನ್ನೇ ತಿರಸ್ಕರಿಸಿದೆ.

ಕೇಂದ್ರ ಸರಕಾರದ ಇಂತಹ ಸರ್ವಾಧಿಕಾರಿ ನಿರ್ಧಾರಗಳು ಒಕ್ಕೂಟ ವ್ಯವಸ್ಥೆಯ ಬೆಸುಗೆಯನ್ನು ಇನ್ನಷ್ಟು ದುರ್ಬಲಗೊಳಿಸಲಿದೆ. ಮೀಸಲಾತಿಯ ಹರಿಕಾರರಾಗಿರುವ ನಾಲ್ವಡಿ ಕೃಷ್ಣರಾಜರಿರುವ ಕರ್ನಾಟಕದ ಟ್ಯಾಬ್ಲೋವನ್ನು ತಿರಸ್ಕರಿಸುವುದೆಂದರೆ, ಜಾತ್ಯತೀತವಾಗಿ ಈ ನಾಡನ್ನು ಕಟ್ಟಿ ಬೆಳೆಸಿದ ಐತಿಹಾಸಿಕ ವ್ಯಕ್ತಿಗಳನ್ನೇ ತಿರಸ್ಕರಿಸಿದಂತೆ. ಇದರ ವಿರುದ್ಧ ಬಿಜೆಪಿಯ ನಾಯಕರು ಕೂಡ ಧ್ವನಿಯೆತ್ತಬೇಕು. ನಾಲ್ವಡಿ, ಕಿತ್ತೂರು ಚೆನ್ನಮ್ಮ ಈ ದೇಶದ ಅಸ್ಮಿತೆಯ ಭಾಗವಾಗಿದ್ದಾರೆ. ಅವರ ಟ್ಯಾಬ್ಲೋ ತಿರಸ್ಕರಿಸಿದರೆ ಕನ್ನಡದ ನಾಡು ನುಡಿಯನ್ನು ಭಾರತದಿಂದ ಹೊರಗಿಟ್ಟಂತೆ. ಆದುದರಿಂದ, ಕರ್ನಾಟಕದ ಟ್ಯಾಬ್ಲೋಗೆ ಅನುಮತಿಯನ್ನು ನೀಡಿ ಪಥ ತಪ್ಪಿದ ಸಂಚಲನವನ್ನು ಮತ್ತೆ ಸರಿದಾರಿಗೆ ತರಲು ಕೇಂದ್ರ ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕದ ಸರ್ವಪಕ್ಷಗಳು ಒಂದಾಗಿ ಕೇಂದ್ರಕ್ಕೆ ಒತ್ತಡವನ್ನು ಹೇರಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News