ಅಪಾಯಕಾರಿ ಯೋಜನೆಗಳು ಮಾಡುವ ಅನಾಹುತ
ಅಭಿವೃದ್ಧಿಯ ಅಟ್ಟಹಾಸದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಸರಕಾರ ಕೈಗೊಳ್ಳುವ ಯೋಜನೆಗಳು ಎಷ್ಟು ಅಪಾಯಕಾರಿ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಉತ್ತರಾಖಂಡದ ಚಾರ್‌ಧಾಮ್ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಮಾಡುವ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಭೂ ಕುಸಿತದ ಪರಿಣಾಮವಾಗಿ ಸುರಂಗದ ಒಳಗೆ ಸಿಲುಕಿ ಒಂದು ವಾರವಾಯಿತು. ಅವರ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಈವರೆಗೆ ಯಶಸ್ವಿಯಾಗಿಲ್ಲ. ಹೀಗಾಗಿ ಕಾರ್ಮಿಕರ ಆರೋಗ್ಯ ಹದಗೆಡುತ್ತಲೇ ಇದೆ. ಅವರ ಕುಟುಂಬದ ಸದಸ್ಯರು ಆತಂಕದೊಂದಿಗೆ ತಮ್ಮವರು ಬದುಕಿ ಬರುತ್ತಾರೆಂದು ಆಸೆಗಣ್ಣುಗಳಿಂದ ಕಾಯುತ್ತಿದ್ದಾರೆ. ಆದರೆ ಅವಶೇಷಗಳ ಅಡಿಯಲ್ಲಿ ರಂಧ್ರ ಕೊರೆದು ಕಾರ್ಮಿಕರನ್ನು ಸುರಕ್ಷಿತವಾಗಿ ಪಾರು ಮಾಡುವ ಕಾರ್ಯಾಚರಣೆ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದೆ. ಈಗ ಮತ್ತೊಂದು ರಂಧ್ರ ಕೊರೆಯುವ ಬೈರಿಗೆ ಯಂತ್ರ ತರಿಸಿ ಕಾರ್ಯಾಚರಣೆ ನಡೆಸಬೇಕಾಗಿದೆ.
ಉತ್ತರಾಖಂಡದಲ್ಲಿ ಚಾರ್‌ಧಾಮ್ ಹೆದ್ದಾರಿಯಯಲ್ಲಿ ಇರುವ ಸುರಂಗ ನಿರ್ಮಾಣ ಕಾರ್ಯದಲ್ಲಿ ಈ ಕಾರ್ಮಿಕರು ತೊಡಗಿದಾಗ ಈ ಘಟನೆ ಸಂಭವಿಸಿದೆ. ಈ ಪ್ರದೇಶದಲ್ಲಿ ಯಾತ್ರಾ ಸ್ಥಳಗಳಿಗೆ ಭಕ್ತರು ಹೋಗಲು ಅನುಕೂಲವಾಗಲೆಂದು ಅವುಗಳನ್ನು ಅಗಲವಾದ ರಸ್ತೆಗಳ ಜೊತೆಗೆ ಸೇರ್ಪಡೆ ಮಾಡುವ ಉದ್ದೇಶದ ಈ ಯೋಜನೆಯ ಬಗ್ಗೆ ತಜ್ಞರ ಆಕ್ಷೇಪವಿದ್ದರೂ, ಪರಿಸರದ ಮೇಲೆ ಇದರಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಅಧ್ಯಯನ ಮಾಡದೇ ಇದನ್ನು ಹಮ್ಮಿ ಕೊಂಡಿರುವುದು ಸರಿಯಲ್ಲ.
ಹಿಮಾಲಯದ ತಪ್ಪಲಿನ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಟ್ಟಡ ಹಾಗೂ ಇತರ ನಿರ್ಮಾಣ ಚಟುವಟಿಕೆಗಳ ಪರಿಣಾಮವಾಗಿ ಅಲ್ಲಿ ಆಗಾಗ ಅನಾಹುತಗಳು ನಡೆಯುತ್ತಲೇ ಇವೆ. ಆದರೂ ಈ ಅವೈಜ್ಞಾನಿಕ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ತಡೆಯಲು ಸರಕಾರ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ.
ವಾಸ್ತವವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು 690 ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. 55 ಸಾವಿರ ಮರಗಳನ್ನು ಕಡಿಯಲಾಗುತ್ತದೆ. 2 ಕ್ಯೂಬಿಕ್ ಮಿಟರ್‌ನಷ್ಟು ಮಣ್ಣನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬೇಕಾಗುತ್ತದೆ. ಇಳಿಜಾರು ಪ್ರದೇಶದಲ್ಲಿ ಈ ರೀತಿ ಅಗೆದು ಮಣ್ಣನ್ನು ತೆಗೆಯುವುದು ಅಲ್ಲಿ ಸುರಂಗ ನಿರ್ಮಾಣ ಮಾಡುವುದು ಅಲ್ಲಿನ ಸೂಕ್ಷ್ಮ ಪ್ರದೇಶದ ಮೇಲೆ ವಿಪರೀತ ಒತ್ತಡವನ್ನು ಉಂಟು ಮಾಡುತ್ತದೆ.
ಹಿಮಾಲಯ ಪ್ರದೇಶದ ಎತ್ತರದ ಸ್ಥಳಗಳು ಹಾಗೂ ತಪ್ಪಲಿನ ಜಾಗಗಳಲ್ಲಿ ನಿರಂತರವಾಗಿ ಮಣ್ಣು ಕುಸಿತದ ಘಟನೆಗಳು ಸಂಭವಿಸುತ್ತಲೇ ಇವೆ.ಒಮ್ಮಿಂದೊಮ್ಮೆಲೇ ಪ್ರವಾಹ ಉಂಟಾಗುವುದು ಹಾಗೂ ಭೂಕಂಪನದ ಘಟನೆಗಳು ಇಲ್ಲಿ ಸಾಮಾನ್ಯ. ಹೀಗಾಗಿ ಆಗಾಗ ದುರಂತಗಳು ಸಂಭವಿಸುತ್ತಲೇ ಇವೆ. ಅದರಲ್ಲೂ ಜೋಶಿಮಠ ಪ್ರದೇಶ ಸುರಕ್ಷಿತವಲ್ಲ. ಇಲ್ಲಿ ಕಳೆದ ವರ್ಷ ತೀವ್ರ ಭೂ ಕುಸಿತ ಉಂಟಾಗಿತ್ತು. ಇದರ ಜೊತೆಗೆ ಪ್ರವಾಹ ಇಲ್ಲಿ ಆಗಾಗ ಅನಾಹುತ ಉಂಟು ಮಾಡುತ್ತದೆ. ಸಾವು, ನೋವುಗಳು ಸಂಭವಿಸುತ್ತಲೇ ಇವೆ. ಇಂಥಲ್ಲಿ ಯಾವುದೇ ಯೋಜನೆಯನ್ನು ಹಮ್ಮಿಕೊಳ್ಳುವ ಮುನ್ನ ಸರಕಾರ ಸಾಕಷ್ಟು ಯೋಚಿಸಬೇಕು.
ಹಿಮಾಲಯದ ಪರ್ವತ ಪ್ರದೇಶದಲ್ಲಿ ಈ ಅಭಿವೃದ್ಧಿ ಯೋಜನೆಗಳಿಂದ ಉಂಟಾಗುವ ಒತ್ತಡದಿಂದ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿವೆ. ಇತ್ತೀಚೆಗೆ ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಯ ಸುಬನ್‌ಸಿರಿ ಕೆಳದಂಡೆಯ ವಿದ್ಯುತ್ ಯೋಜನೆಯ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಆದರೂ ಸರಕಾರ ಅಭಿವೃದ್ಧಿ ಯೋಜನೆಗಳ ಕುರಿತ ತನ್ನ ಧೋರಣೆಯನ್ನು ಬದಲಿಸುತ್ತಿಲ್ಲ. ಪ್ರಕೃತಿಯ ಮೇಲೆ ಮನುಷ್ಯ ತನ್ನ ಅನುಕೂಲಕ್ಕಾಗಿ ನಡೆಸುತ್ತಿರುವ ದಾಳಿಯಿಂದ ಉಂಟಾಗಿರುವ ಅಸಮತೋಲನವನ್ನು ಸರಿಪಡಿಸಲು ಹಿಮಾಲಯ ಪರ್ವತ ಶ್ರೇಣಿಗಳು ವಿಫಲವಾಗುತ್ತಿವೆ. ನಿಸರ್ಗದ ಜೊತೆಗಿನ ಈ ಸಂಘರ್ಷದಲ್ಲಿ ಸೋಲುವುದು ಯಾರೆಂದು ವಿವರಿಸಬೇಕಾಗಿಲ್ಲ. ಸೋಲು ಗೊತ್ತಿದ್ದರೂ ಮನುಷ್ಯ ಪ್ರಕೃತಿಯ ಮೇಲೆ ತನ್ನ ದಾಳಿಯನ್ನು ಮುಂದುವರಿಸಿದ್ದಾನೆ.
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂಬ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ತಜ್ಞರ ಅಭಿಪ್ರಾಯವನ್ನು ಕಡೆಗಣಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ತಿರುಗುಬಾಣವಾಗುತ್ತದೆ. ಎಲ್ಲ ಪ್ರದೇಶಗಳಲ್ಲಿ ಒಂದೇ ರೀತಿಯ ಅಭಿವೃದ್ಧಿ ಸೂತ್ರಗಳನ್ನು ಅನ್ವಯಿಸುವುದು ಸರಿಯಲ್ಲ. ವಿಶೇಷವಾಗಿ ಚಾರ್‌ಧಾಮ್ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯ ಕೈಗೊಂಡರೂ ಇದರ ಒಳಗೆ ರಾಜಕೀಯ ಲೆಕ್ಕಾಚಾರ ಗಳು ಇವೆ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಸರಕಾರ ಈ ರೀತಿ ಮನ ಬಂದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತ ಹೋದರೆ ಅದರ ದುಷ್ಪರಿಣಾಮವನ್ನು ಹಿಮಾಲಯ ಪ್ರದೇಶ ಮಾತ್ರವಲ್ಲ ಇಡೀ ದೇಶ ಅನುಭವಿಸಬೇಕಾಗುತ್ತದೆ ಎಂಬ ಅರಿವು ಸರಕಾರಕ್ಕೆ ಇರಬೇಕು.
ಅಭಿವೃದ್ಧಿ ಯೋಜನೆಗಳ ಬಗ್ಗೆ ಸರಕಾರದ ಮಾನದಂಡ ಬದಲಾಗಬೇಕಾಗಿದೆ. ಪ್ರವಾಸೋದ್ಯಮ ಬೆಳೆಸುವ ಹೆಸರಿನಲ್ಲಿ ಹಿಮಾಲಯದಂಥ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಲಂಗು ಲಗಾಮಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸರಿಯಲ್ಲ. ಈ ಬಗ್ಗೆ ಸರಕಾರ ಪುನರಾಲೋಚನೆ ಮಾಡಬೇಕಾಗಿದೆ.
ಅಭಿವೃದ್ಧಿ ಯೋಜನೆಗಳು ಜನರಿಗಾಗಿಯೇ ಹಮ್ಮಿಕೊಳ್ಳಲಾಗುತ್ತಿದೆಯಾದರೂ ಅಂತಹ ಯೋಜನೆಗಳಿಗಾಗಿ ಜನರ ಬದುಕು ಅಸಹನೀಯವಾಗಬಾರದು. ಪ್ರವಾಸೋದ್ಯಮ ಬೆಳೆಸಲು ಹಿಮಾಲಯದಂಥ ಸೂಕ್ಷ್ಮಪ್ರದೇಶದಲ್ಲಿ ಅಪಾಯಕಾರಿ ಯೋಜನೆಗಳನ್ನು ತರಬಾರದು.
ಸರಕಾರ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳುವ ಮುನ್ನ ತಜ್ಞರ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಪಡೆಯಬೇಕು. ಅಷ್ಟೇ ಅಲ್ಲ ಆ ಪ್ರದೇಶದ ಜನರ ಸಭೆ ಸೇರಿಸಿ ಅವರ ಒಪ್ಪಿಗೆ ಪಡೆಯಬೇಕು. ಜನರ ಸಮ್ಮತಿಯಿಲ್ಲದೆ ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸಬಾರದು.
ಇನ್ನು ಮುಂದಾದರೂ ಹಿಮಾಲಯದ ತಪ್ಪಲಿನಂಥ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಯೋಜನೆಯನ್ನು ಕೈಗೊಳ್ಳುವ ಮುನ್ನ ಸರಕಾರ ಹಲವಾರು ಬಾರಿ ಯೋಚಿಸಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಾದರೆ ಅಂತಹ ಯೋಜನೆಗಳನ್ನು ಕೈಬಿಡಬಿಡಬೇಕು.