ವೈಜ್ಞಾನಿಕ ಮನೋಧರ್ಮವನ್ನು ಎತ್ತಿ ಹಿಡಿಯಲಿ ಚಂದ್ರಯಾನ-3
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದ ವರ್ಚಸ್ಸನ್ನು ಎತ್ತರಿಸುವ ಉದ್ದೇಶವುಳ್ಳ ಚಂದ್ರಯಾನ-3 ಗಗನದೆಡೆಗೆ ಚಿಮ್ಮಿದೆ. 3,900 ಕಿಲೋ ಭಾರದ ನೌಕೆಯನ್ನು ಕಕ್ಷೆಯಲ್ಲಿ ಸೇರಿಸಲು ಮೊದಲ ಹಂತದಲ್ಲಿ ಇಸ್ರೋ ಯಶಸ್ವಿಯಾಗಿದೆ. ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಾದರೆ ಇನ್ನೂ 41 ದಿನಗಳು ಬೇಕಾಗುತ್ತವೆ. 2019ರ ಚಂದ್ರಯಾನ-2ರ ವೈಫಲ್ಯದ ತಳಹದಿಯ ಮೇಲೆ ಚಂದ್ರಯಾನ-3 ನಿಂತಿರುವುದರಿಂದ, ಈ ಬಾರಿ ನೌಕೆ ಚಂದ್ರನ ಬಗ್ಗೆ ಇಳಿಯುವ ನಿರೀಕ್ಷೆಯನ್ನು ದೇಶ ಹೊಂದಿದೆ. ಇದರಲ್ಲಿ ಯಶಸ್ವಿಯಾದರೆ, ಅಮೆರಿಕ, ರಶ್ಯ, ಚೀನಾದ ಬಳಿಕ ಈ ಸಾಧನೆ ಮಾಡಿದ ನಾಲ್ಕನೆಯ ದೇಶವಾಗಿ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳಲಿದೆ. ಸುಮಾರು 630 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. ಈ ಹಿಂದಿನ ವಿಫಲ ಯೋಜನೆಗೆ ವೆಚ್ಚ ಮಾಡಿದ ಹಣವನ್ನು ಸೇರಿಸಿದರೆ ಈ ಮೊತ್ತ ಇನ್ನಷ್ಟು ದೊಡ್ಡದಾಗುತ್ತದೆ. ಆದರೆ ನೌಕೆ ಚಂದ್ರನನ್ನು ತಲುಪುವಲ್ಲಿ ಯಶಸ್ವಿಯಾಗಿ, ಅದು ಚಂದ್ರನ ಮೇಲ್ಮೈಯ ಕುರಿತಂತೆ ಮಹತ್ತರ ಸಂಶೋಧನೆಗಳನ್ನು ಭೂಮಿಗೆ ರವಾನಿಸುವುದರ ಮುಂದೆ ಈ ವೆಚ್ಚ ಅತ್ಯಲ್ಪ. ಚಂದ್ರಯಾನ ಯಶಸ್ವಿಯಾದರೆ ಖಗೋಳ ಕ್ಷೇತ್ರದಲ್ಲಿ ಭಾರತದ ವರ್ಚಸ್ಸೂ ಹಿಗ್ಗಲಿದೆ.
ಇಸ್ರೋ ಈ ಹಿಂದೆ ಹಲವು ದೂರ ಸಂವೇದಿ ಉಪಗ್ರಹಗಳನ್ನು ಹಾರಿಸಿದೆ. ಶಿಕ್ಷಣ, ಮೀನುಗಾರಿಕೆ, ನೈಸರ್ಗಿಕ ವಿಪತ್ತುಗಳ ರಕ್ಷಣೆ ಮೊದಲಾದ ಕ್ಷೇತ್ರಗಳಿಗೆ ಈ ಉಪಗ್ರಹಗಳು ತಮ್ಮ ನೆರವನ್ನು ನೀಡುತ್ತಿವೆ. ಭಾರತ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಸಾಧಿಸುತ್ತಿರುವುದಕ್ಕೆ ಇಸ್ರೋ ಕೂಡ ಕಾರಣವಾಗಿದೆ. ಇಸ್ರೋದ ವಿಜ್ಞಾನಿಗಳು ಹಗಲು ರಾತ್ರಿಯೆನ್ನದೆ ಬೆಳೆಸಿದ ದೇಶೀಯ ತಂತ್ರಜ್ಞಾನ ಭಾರತವನ್ನು ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿಸಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಆದರೆ ಚಂದ್ರಯಾನದ ಕನಸಿನ ಬಗ್ಗೆ ಹಲವರು ಪರ-ವಿರೋಧ ಅಭಿಪ್ರಾಯಗಳನ್ನು ತಳೆಯುತ್ತಾ ಬಂದಿದ್ದಾರೆ. ಭಾರತದಂತಹ ದೇಶಕ್ಕೆ ಚಂದ್ರಯಾನವೆನ್ನುವುದು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎನ್ನುವ ಟೀಕೆಗಳನ್ನು ಹಲವು ಆರ್ಥಿಕ ತಜ್ಞರು ಮಾಡಿದ್ದಾರೆ. ಚಂದ್ರಯಾನದಿಂದ ನಿಜಕ್ಕೂ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಲಾಭವಿದೆಯೆ? ಕೆಲವು ಸಂದರ್ಭಗಳಲ್ಲಿ ಸಂಶೋಧನೆಗಳಿಂದ ನೇರ ಲಾಭಗಳನ್ನು ನಾವು ನಿರೀಕ್ಷಿಸುವಂತಿಲ್ಲ. ಚಂದ್ರಯಾನದ ಮೂಲಕ ಚಂದ್ರನಲ್ಲಿ ನೀರಿನ ಅಂಶ, ಖನಿಜಗಳ ಸಂಯೋಜನೆ, ಚಂದ್ರನ ಧ್ರುವ ಪ್ರದೇಶದ ಗುಣಲಕ್ಷಣಗಳು ಇವೆಲ್ಲವನ್ನು ನಾವು ತಿಳಿದುಕೊಳ್ಳಬಹುದು. ಇದು ಭವಿಷ್ಯದಲ್ಲಿ ಭಾರತಕ್ಕೆ ಲಾಭವನ್ನು ತಂದು ಕೊಡಬಹುದು. ಆದರೆ ಸಂಶೋಧನೆಗಳು ಈ ದೇಶದ ತಳಸ್ತರದ ಜನರನ್ನೂ ತೆಕ್ಕೆಗೆ ತೆಗೆದುಕೊಳ್ಳಬೇಕು ಎನ್ನುವ ಆಗ್ರಹಗಳಿಗೆ ಕಿವುಡಾಗುವುದು ಸರಿಯಲ್ಲ. ಈ ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಶೇ. 40ರಷ್ಟು ಜನರು ಈ ಚಂದ್ರಯಾನದಿಂದ ನೇರ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಜಗತ್ತಿನ ಶ್ರೀಮಂತ ರಾಷ್ಟ್ರಗಳೆಂದು ಗುರುತಿಸಲ್ಪಟ್ಟಿರುವ ಹಲವು ದೇಶಗಳು ಚಂದ್ರಯಾನದಂತಹ ಯೋಜನೆಗಳಿಗೆ ತಮ್ಮ ಹಣವನ್ನು ವ್ಯಯಿಸದೇ, ಎಲ್ಲರಿಗೂ ಆರೋಗ್ಯ, ಶಿಕ್ಷಣ, ಆಹಾರ, ವಸತಿಗಳನ್ನು ನೀಡಲು ಆದ್ಯತೆಯನ್ನು ನೀಡುತ್ತಿವೆ. ನಮ್ಮ ಕೈಯಲ್ಲಿರುವ ನೆಲ, ಜಲ, ಪರಿಸರವನ್ನು ನಿರ್ಲಕ್ಷಿಸಿ ಚಂದ್ರನಲ್ಲಿರುವ ನೀರಿಗೆ ಆಸೆ ಪಡುವುದು ಎಷ್ಟು ಸರಿ? ಇಂತಹ ಎಲ್ಲ ಪ್ರಶ್ನೆಗಳ ಅಡೆತಡೆಗಳನ್ನು ಮೀರಿ ಚಂದ್ರಯಾನ -3 ಇದೀಗ ನಭಕ್ಕೆ ಜಿಗಿದಿದೆ.
‘‘ಚಂದ್ರಯಾನ-3 ಪ್ರತೀ ಭಾರತೀಯನ ಮಹತ್ವಾಕಾಂಕ್ಷೆ, ಕನಸುಗಳನ್ನು ಎತ್ತರಕ್ಕೇರಿಸಿದೆ’ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಆದರೆ ಈ ಕನಸುಗಳು ಕೇವಲ ಚಂದ್ರನನ್ನು ತಲುಪುದಕ್ಕಷ್ಟೇ ಸೀಮಿತವಾದರೆ ಸಾಕೆ? ಚಂದ್ರನ ಮೇಲೆ ನೌಕೆಯನ್ನು ಕಳುಹಿಸಿರುವ ನಮಗೆ, ಕೆಲವೇ ಮೀಟರ್ ಆಳವಿರುವ ಮಲದ ಗುಂಡಿ ಶುಚಿಗೊಳಿಸಲು ಯಂತ್ರವನ್ನು ಸೃಷ್ಟಿಸುವುದಕ್ಕೆ ಯಾಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಯೂ ಈ ಸಂದರ್ಭದಲ್ಲಿ ಮುನ್ನೆಲೆಗೆ ಬರಬೇಕು. ಮ್ಯಾನ್‌ಹೋಲ್, ಮಲದಗುಂಡಿ, ಚರಂಡಿಗಳನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಪ್ರತೀ ವರ್ಷ ನೂರಕ್ಕೂ ಅಧಿಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮ್ಯಾನ್‌ಹೋಲ್‌ಗಳಲ್ಲಿ ತೇಲುತ್ತಿರುವ ಭಾರತದ ವರ್ಚಸ್ಸನ್ನು ಮೇಲೆತ್ತುವುದಕ್ಕೆ ಬೇಕಾದ ಸಾಧನೆಗಳು ಇಂದಿನ ಅಗತ್ಯವಾಗಿದೆ. ಇದಕ್ಕೆ ‘ಚಂದ್ರಯಾನ-3’ಕ್ಕೆ ಬೇಕಾದಷ್ಟು ಹಣದ ಅಗತ್ಯವೇನೂ ಇಲ್ಲ. ಇಂದು ಚಂದ್ರನೆಡೆಗೆ ಯಾವುದೇ ನೌಕೆಯನ್ನು ಕಳುಹಿಸದ ದೇಶಗಳು ತಮ್ಮ ದೇಶದಲ್ಲಿ ಮಲದ ಗುಂಡಿಗೆ ಯಾವುದೇ ಮನುಷ್ಯನನ್ನು ಇಳಿಸಿ ಶುಚಿಗೊಳಿಸುವುದಿಲ್ಲ ಎಂದು ಹೆಮ್ಮೆ ಪಡುತ್ತಿವೆ. ಆ ಹೆಮ್ಮೆಯ ಮುಂದೆ ‘ಚಂದ್ರಯಾನ-3’ರ ಹೆಮ್ಮೆ ಏನೇನೂ ಅಲ್ಲ ಎನ್ನುವ ಅರಿವು, ವಿವೇಕ ಕೂಡ ನಮ್ಮಲ್ಲಿ ಇರಬೇಕಾಗಿದೆ.
ಇದೇ ಸಂದರ್ಭದಲ್ಲಿ ಉಡಾವಣೆಗೆ ಮುನ್ನ ‘ಚಂದ್ರಯಾನ-3’ ಪ್ರತಿಕೃತಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ವಿಜ್ಞಾನಿಗಳು ಆಸ್ತ್ತಿಕರಾಗಿರುವುದು ತಪ್ಪಲ್ಲ. ಚಂದ್ರಯಾನಕ್ಕೆ ಮುನ್ನ ಪೂಜೆ, ಪ್ರಾರ್ಥನೆಯೂ ತಪ್ಪಲ್ಲ. ದೇವರನ್ನು ನಂಬುವುದು ವೌಢ್ಯವೂ ಅಲ್ಲ. ಆದರೆ ಇಸ್ರೋ ಎನ್ನುವುದು ಒಂದು ಸಾರ್ವಜನಿಕ ಸಂಸ್ಥೆ. ಅಲ್ಲಿ ಬೇರೆ ಬೇರೆ ನಂಬಿಕೆಗಳುಳ್ಳ ವಿಜ್ಞಾನಿಗಳಿದ್ದಾರೆ. ನಾಸ್ತಿಕರು ಕೂಡ ಅವರಲ್ಲಿ ಸೇರಿರಬಹುದು. ತಮ್ಮ ತಮ್ಮ ಮನೆಗಳಲ್ಲಿ ದೇವರನ್ನು ಪೂಜಿಸಿ, ದೇವರನ್ನು ಸ್ಮರಿಸಿದರೆ ಅದು ಚರ್ಚೆಯಾಗುತ್ತಿರಲಿಲ್ಲ. ಇಷ್ಟಕ್ಕೂ ಖಗೋಳ ಶಾಸ್ತ್ರದ ಬಗ್ಗೆ ತಿರುಪತಿಯ ನಂಬಿಕೆಯೇ ಭಿನ್ನವಾದುದು. ಗ್ರಹಣದ ಬಗ್ಗೆ ವೌಢ್ಯಗಳನ್ನು ಹರಡುವ ಕೆಲಸವು ಇಂತಹ ಕೆಲವು ಧಾರ್ಮಿಕ ಕ್ಷೇತ್ರಗಳಿಂದ ನಡೆಯುತ್ತವೆೆ. ಗ್ರಹಣವೆಂದರೆ ರಾಹು-ಕೇತುಗಳು ಚಂದ್ರನನ್ನು ನುಂಗುವುದು ಎಂದು ನಂಬುವ ಧಾರ್ಮಿಕ ಸಂಪ್ರದಾಯಸ್ಥರಿದ್ದಾರೆ. ಇಸ್ರೋ ಅಲ್ಲಿಗೆ ಹೋಗಿ ಅವರಿಂದ ಮಾರ್ಗದರ್ಶನ ಪಡೆಯುವ ಅಗತ್ಯವಿದೆಯೆ? ಎನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಮುಂದಿನ ದಿನಗಳಲ್ಲಿ, ಜೋತಿಷ್ಯದ ಮೇಲೆ ನಂಬಿಕೆ ಇರುವ ವಿಜ್ಞಾನಿಗಳು ನೌಕೆ ಉಡಾಯಿಸಲು ‘ರಾಹು ಕಾಲ’ವನ್ನು ಗುರುತಿಸಲು ಈ ಕ್ಷೇತ್ರದ ವೈದಿಕರನ್ನೇ ಬಳಸಿಕೊಳ್ಳುವ ಸಂದರ್ಭ ಬರಬಹುದು. ಇಸ್ರೋ ಎನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಈ ದೇಶದ ವಿಜ್ಞಾನಿಗಳು, ವಿಚಾರವಾದಿಗಳ ಪಾತ್ರ ದೊಡ್ಡದಿದೆ. ಹಾಗೆಯೇ ನೆಹರೂ, ಇಂದಿರಾಗಾಂಧಿಯಂತಹ ಮುತ್ಸದ್ದಿ ರಾಜಕಾರಣಿಗಳ ದೂರದೃಷ್ಟಿಯ ಫಲವಾಗಿ ಇಂದು ಇಸ್ರೋ ವಿಶ್ವಮಟ್ಟದಲ್ಲಿ ಬೆಳೆದು ನಿಂತಿದೆ. ಈ ದೇಶದ ಪ್ರತೀ ಪ್ರಜೆಯ ತೆರಿಗೆ ಹಣ ಅದಕ್ಕಾಗಿ ವ್ಯಯವಾಗಿದೆ. ಅಂತಹ ಇಸ್ರೋದ ಸಾಧನೆಗಳ ವರ್ಚಸ್ಸನ್ನು ಕೆಲವು ವಿಜ್ಞಾನಿಗಳೆಂದು ಕರೆಸಿಕೊಂಡ ಅಜ್ಞಾನಿಗಳು ತಿರುಪತಿಯಲ್ಲಿರುವ ರಾಹು-ಕೇತುಗಳ ಪಾದತಳಕ್ಕೆ ಒಪ್ಪಿಸಿರುವುದು ಎಷ್ಟು ಸರಿ? ಚಂದ್ರನಲ್ಲಿ ನೀರು ಇದೆಯೋ, ಇಲ್ಲವೋ ಎನ್ನುವ ಪ್ರಶ್ನೆಯ ಜೊತೆಗೆ ಈ ಪ್ರಶ್ನೆಗೂ ಇಸ್ರೋ ವಿಜ್ಞಾನಿಗಳು ಉತ್ತರವನ್ನು ಕಂಡುಕೊಳ್ಳುವ ಅಗತ್ಯವಿದೆ. ಚಂದ್ರಯಾನದ ಯಶಸ್ಸು ಈ ದೇಶದ ವೈಜ್ಞಾನಿಕ ಮನೋಧರ್ಮವನ್ನು ಇನ್ನಷ್ಟು ಹಿಗ್ಗಿಸಲಿ, ಇಸ್ರೋ ಸಾಧನೆಯ ಲಾಭ ಈ ದೇಶದ ತಳಸ್ತರದ ಜನರಿಗೂ ತಲುಪಲಿ ಎಂದು ನಾವು ಈ ಸಂದರ್ಭದಲ್ಲಿ ಆಶಿಸಬೇಕಾಗಿದೆ