ಶಕ್ತಿ ಯೋಜನೆ: ಖಾಸಗಿ ಸಾರಿಗೆ ಆಕ್ಷೇಪ ಸಲ್ಲ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸೋಮವಾರ ‘ಬೆಂಗಳೂರು ಬಂದ್’ ಬೆದರಿಕೆಯನ್ನು ಒಡ್ಡಿತ್ತು. ಸಾರಿಗೆ ಸಚಿವರು ತಕ್ಷಣ ಮಧ್ಯ ಪ್ರವೇಶಿಸಿ ಭರವಸೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಒಕ್ಕೂಟ ತನ್ನ ಪ್ರತಿಭಟನೆಯನ್ನು ಕೊನೆಯ ಕ್ಷಣದಲ್ಲಿ ಹಿಂದೆಗೆಯಿತು. ಖಾಸಗಿ ಸಾರಿಗೆ ಹತ್ತು ಹಲವು ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭ ಇದು. ಬಹುತೇಕ ಖಾಸಗಿ ವಾಹನಗಳ ಚಾಲಕ-ಮಾಲಕರ ತಲೆಯ ಮೇಲೆ ಸದಾ ‘ಬಡ್ಡಿ ಸಾಲ’ದ ಕತ್ತಿ ತೂಗುತ್ತಿರುತ್ತದೆ. ಊಬರ್, ಓಲಾಗಳಿಂದಾಗಿಯೂ ಸ್ಥಳೀಯ ಖಾಸಗಿ ವಾಹನ ಚಾಲಕರು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸಾರಿಗೆ ಪೊಲೀಸರ ಭ್ರಷ್ಟಾಚಾರದ ನೇರ ಬಲಿಪಶು ಇವರು. ಈ ಎಲ್ಲ ಕಾರಣಗಳಿಂದ ಇವರು ಸಂಘಟಿತವಾಗಿ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರೆ ಅದರಲ್ಲಿ ತಪ್ಪೇನೂ ಇಲ್ಲ. ಖಾಸಗಿ ಸಾರಿಗೆಯಿಲ್ಲದೆ ಇದ್ದರೆ ದೈನಂದಿನ ಬದುಕೇ ಇಲ್ಲ ಎನ್ನುವ ಸ್ಥಿತಿಯಿರುವಾಗ, ಇವರ ಸಮಸ್ಯೆಗಳಿಗೆ ಕಿವಿಯಾಗುವುದು ಸರಕಾರದ ಕರ್ತವ್ಯವಾಗಿರುತ್ತದೆ.
ಇದೇ ಸಂದರ್ಭದಲ್ಲಿ ಸರಕಾರ ನೂತನವಾಗಿ ಜಾರಿಗೊಳಿಸಿರುವ ‘ಶಕ್ತಿ’ಯೋಜನೆಯನ್ನು ಕೂಡ ತನ್ನ ಸಮಸ್ಯೆಯ ಪಟ್ಟಿಯಲ್ಲಿ ಖಾಸಗಿ ಸಾರಿಗೆ ಒಕ್ಕೂಟ ಸೇರಿಸಿಕೊಂಡಿದೆ. ರಾಜ್ಯಾದ್ಯಂತ ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದಾಗಿ ಖಾಸಗಿ ಬಸ್‌ಗಳು, ವಾಹನಗಳು ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ನಷ್ಟವುಂಟಾಗಿದೆ. ಈ ನಷ್ಟವನ್ನು ಭರಿಸಿಕೊಡಬೇಕು ಅಥವಾ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಎಂದು ಒಕ್ಕೂಟ ಒತ್ತಾಯಿಸುತ್ತಿದೆ. ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಮುಖ್ಯವಾಗಿ ವಿವಿಧ ಕಾರ್ಖಾನೆಗಳಲ್ಲಿ, ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ಮಹಿಳೆಯರ ಪಾಲಿಗೆ ಇದೊಂದು ಕ್ರಾಂತಿಕಾರಿ ಯೋಜನೆ. ಅವರ ದೈನಂದಿನ ಜೀವನ ಗತಿಯನ್ನೇ ಈ ಯೋಜನೆ ಬದಲಿಸಿದೆ. ಆರಂಭದಲ್ಲಿ ಈ ಯೋಜನೆಯಿಂದಾಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಸರಕಾರ ದಿವಾಳಿಯಾಗಿ ಈ ಯೋಜನೆ ಶೀಘ್ರವೇ ಸ್ಥಗಿತಗೊಳ್ಳುತ್ತದೆ ಎಂದು ವಿರೋಧ ಪಕ್ಷಗಳ ಮುಖಂಡರು ಆಡಿಕೊಂಡು ಓಡಾಡುತ್ತಿದ್ದರು. ಆದರೆ ಈ ಯೋಜನೆಯಿಂದಾಗಿಯೇ ಸರಕಾರಿ ಸಾರಿಗೆ ಲಾಭದಾಯಕವಾಯಿತು. ಅಷ್ಟೇ ಅಲ್ಲ, ಮಹಿಳೆಯರ ಉಚಿತ ಪ್ರಯಾಣದಿಂದ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು ತುಂಬಿ ತುಳುಕತೊಡಗಿ ಅಲ್ಲಿನ ವ್ಯಾಪಾರ-ವಹಿವಾಟುಗಳು ಚುರುಕಾದವು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶಕ್ತಿ ಯೋಜನೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಇಂತಹ ಯೋಜನೆಯೊಂದನ್ನು ಖಾಸಗಿ ಸಾರಿಗೆ ಒಕ್ಕೂಟ ‘ಸಮಸ್ಯೆ’ಯಾಗಿ ಬಿಂಬಿಸುವುದು ಅತಿರೇಕ ತನದಿಂದ ಕೂಡಿದೆ.
ಸರಕಾರ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿರುವುದು ಲಾಭಕ್ಕಾಗಿ ಅಲ್ಲ. ಒಂದು ವೇಳೆ ಲಾಭಕ್ಕಾಗಿಯಾದರೂ, ಆ ‘ಲಾಭ’ದ ಮಾನದಂಡಗಳು ಬೇರೆಯೇ ಇವೆ. ಸರಕಾರಿ ಬಸ್‌ಗಳ ಉದ್ದೇಶ ಸಾರ್ವಜನಿಕ ಸೇವೆ. ಸೇವೆಯಲ್ಲಿ ಸರಕಾರಿ ಬಸ್‌ಗಳು ವಿಫಲವಾಗುತ್ತಿವೆ ಮತ್ತು ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿ ಎನ್ನುವ ಕಾರಣವನ್ನು ಇಟ್ಟುಕೊಂಡು ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿಯವರಿಗೆ ಪಾಲು ನೀಡಲಾಯಿತು. ಈ ಹಿಂದೆ ಸರಕಾರ ಖಾಸಗಿ ಬಸ್‌ಗಳಿಗೆ ಅನುಮತಿ ನೀಡಿದಾಗ ಅದರ ವಿರುದ್ಧ ಸಾರ್ವಜನಿಕರು ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದರು ಎನ್ನುವುದನ್ನು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಮರೆಯಬಾರದು. ಸರಕಾರಿ ಬಸ್ ಜನಸಾಮಾನ್ಯರ ಹಕ್ಕು. ತಾವು ಕಟ್ಟಿದ ತೆರಿಗೆಯ ಹಣದಿಂದ ತಾವೇ ನಡೆಸುವ ಸಾರಿಗೆ ವ್ಯವಸ್ಥೆ ಅದು. ಸಾಮಾನ್ಯ ಜನರು ಪಾವತಿಸಿದ ತೆರಿಗೆಯ ಹಣದಿಂದಲೇ ಶಕ್ತಿ ಯೋಜನೆಗೆ ಹಣ ವ್ಯಯವಾಗುತ್ತದೆ. ಒಂದು ರೀತಿಯಲ್ಲಿ ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎನ್ನುವಂತೆ ಜನರ ಹಣವನ್ನು ಜನರಿಗೆ ಮರಳಿಸಿದೆ. ಇದನ್ನು ಪ್ರಶ್ನಿಸುವ ಯಾವ ಅಧಿಕಾರವೂ ಖಾಸಗಿ ಬಸ್‌ಗಳಿಗೆ ಇಲ್ಲ. ಕೆಲವು ಊರುಗಳಲ್ಲಿ ಸರಕಾರಿ ಬಸ್‌ಗಳಿಲ್ಲ. ಅಲ್ಲಿನ ಮಹಿಳೆಯರಿಗೆ ಶಕ್ತಿ ಯೋಜನೆಯ ಲಾಭ ಸಿಗುತ್ತಿಲ್ಲ ಎನ್ನುವ ಆರೋಪಗಳಿವೆ. ಕೆಲವು ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳದೇ ಪಾರಮ್ಯ. ಅಂತಹ ಪ್ರದೇಶದಲ್ಲಿ ನೂತನ ಸರಕಾರಿ ಬಸ್‌ಗಳನ್ನು ಓಡಿಸಿ ಶಕ್ತಿ ಯೋಜನೆಯನ್ನು ವಿಸ್ತರಿಸಬೇಕೇ ಹೊರತು, ಖಾಸಗಿ ಬಸ್‌ಗಳಿಗೂ ಯೋಜನೆಯನ್ನು ವಿಸ್ತರಿಸುವುದಲ್ಲ. ಒಂದು ವೇಳೆ ಖಾಸಗಿ ಬಸ್‌ಗಳಿಗೆ ಈ ಯೋಜನೆಯನ್ನು ವಿಸ್ತರಿಸಿದರೆ ಅದು ವ್ಯಾಪಕ ದುರುಪಯೋಗವಾಗುವುದರಲ್ಲಿ ಸಂಶಯವಿಲ್ಲ. ಅಂತಿಮವಾಗಿ ಯೋಜನೆಯನ್ನೇ ಸ್ಥಗಿತಗೊಳಿಸಬೇಕಾದ ಸ್ಥಿತಿ ನಿರ್ಮಾಣವಾಗಬಹುದು.
ಇಷ್ಟಕ್ಕೂ ಸರಕಾರ ನಾಳೆ ಎಲ್ಲ ಸರಕಾರಿ ಶಾಲೆಗಳನ್ನು ಅತ್ಯಾಧುನಿಕ ಗೊಳಿಸಿ, ಪದವಿ ಶಿಕ್ಷಣದ ವರೆಗೆ ಎಲ್ಲರಿಗೂ ಸಂಪೂರ್ಣ ಉಚಿತಗೊಳಿಸಿದರೆ ಅದರ ವಿರುದ್ಧ ಖಾಸಗಿ ಶಾಲೆಗಳು ಧರಣಿ ಮಾಡುತ್ತವೆಯೆ? ಶಿಕ್ಷಣ ಈ ದೇಶದ ಪ್ರಜೆಗಳ ಹಕ್ಕು ಎನ್ನುವ ನಿಟ್ಟಿನಲ್ಲಿ ಸರಕಾರ ಶಾಲೆಗಳನ್ನು ನಡೆಸುತ್ತಿವೆ. ಅದರಲ್ಲಿ ಸರಕಾರದ ವೈಫಲ್ಯಗಳನ್ನು ಬಳಸಿಕೊಂಡು ಖಾಸಗಿ ಶಾಲೆಗಳು ತಲೆಯೆತ್ತಿವೆ. ಸರಕಾರಿ ಶಾಲೆಗಳನ್ನು ಮೇಲೆತ್ತುವಲ್ಲಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಎಲ್ಲ ಖಾಸಗಿ ಶಾಲೆಗಳು ಮುಚ್ಚಲ್ಪಡುವುದರಲ್ಲಿ ಸಂಶಯವಿಲ್ಲ. ಆದರೆ ಖಾಸಗಿ ಶಾಲೆಗಳು ಲಾಭದಾಯಕ ದಂಧೆಯಾಗಿ ಮಾರ್ಪಟ್ಟಿವೆ. ರಾಜಕಾರಣಿಗಳೂ ಈ ದಂಧೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಕಾರಣದಿಂದ ಸರಕಾರಿ ಶಾಲೆಗಳ ಉದ್ಧಾರ ರಾಜಕಾರಣಿಗಳಿಗೂ ಬೇಕಾಗಿಲ್ಲ. ಕರ್ನಾಟಕ ಸಾರಿಗೆ ಸಂಸ್ಥೆಯ ಪಾಲಿಗೆ ಶಕ್ತಿ ಯೋಜನೆ ಸಂಜೀವಿನಿ ಶಕ್ತಿಯನ್ನು ನೀಡಿದೆ. ಭವಿಷ್ಯದಲ್ಲಿ ಈ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿಸಲು ಈ ಯೋಜನೆ ಸಹಾಯ ಮಾಡಬಹುದು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಯಾವ ನೈತಿಕ ಹಕ್ಕೂ ಖಾಸಗಿ ಸಂಸ್ಥೆಗಳಿಗೆ ಇಲ್ಲ. ಸಾಧ್ಯವಾದರೆ, ತಮ್ಮ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಖಾಸಗಿ ವಾಹನಗಳು ಶಕ್ತಿ ಯೋಜನೆಯ ಜೊತೆಗೆ ಸ್ಪರ್ಧೆಗಿಳಿಯಬಹುದು. ಸರಕಾರದ ಇನ್ನೊಂದು ಗ್ಯಾರಂಟಿ ಯೋಜನೆ ಉಚಿತ ಅಕ್ಕಿ. ಇದರಿಂದ ನಮ್ಮ ದಿನಸಿ ಅಂಗಡಿಗಳಿಗೆ ನಷ್ಟವುಂಟಾಗುತ್ತದೆ ಎಂದು ವ್ಯಾಪಾರಿಗಳು ಆರೋಪಿಸುವ ದಿನಗಳು ಬರಬಹುದು. ಜನಸಾಮಾನ್ಯರಿಗಾಗಿ ಯಾವುದೇ ಜನಪ್ರಿಯ ಕಾರ್ಯಕ್ರಮಗಳು ಜಾರಿಗೆ ತಂದರೂ ಅವುಗಳನ್ನು ಖಾಸಗಿ ಉದ್ಯಮಿಗಳು ಪ್ರಶ್ನಿಸಲು ತೊಡಗಬಹುದು.
ಶಕ್ತಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಸರಕಾರ ಯೋಚಿಸಬೇಕು. ಇದು ಆರಂಭದ ಹಂತ. ಇದರ ಲೋಪದೋಷಗಳನ್ನು ಕಂಡು ಹುಡುಕಿ ತಳಸ್ತರದ ಪ್ರತಿಯೊಬ್ಬ ಮಹಿಳೆಗೂ ಲಾಭ ತಲುಪುವಂತೆ ಮಾಡುವುದು ಸರಕಾರದ ಕರ್ತವ್ಯವಾಗಿದೆ. ಮುಖ್ಯವಾಗಿ ಎಲ್ಲೆಲ್ಲಿ ಸರಕಾರಿ ಬಸ್‌ಗಳಿಲ್ಲವೋ ಅಲ್ಲಿಗೆ ನೂತನ ಬಸ್‌ಗಳನ್ನು ಇಳಿಸಬೇಕು. ಹಾಗೆಯೇ ಸರಕಾರಿ ಬಸ್‌ಗಳಲ್ಲಿ ಒತ್ತಡಗಳಾಗದಂತೆ ಬಸ್‌ಗಳ ಸಂಖ್ಯೆ ಮತ್ತು ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿ ಸಬೇಕು. ಭ್ರಷ್ಟಾಚಾರ, ಅವ್ಯವಹಾರ ನಡೆಯದಂತೆ ಕಣ್ಗಾವಲಿಡಬೇಕು. ಯಾರ ಒತ್ತಡಕ್ಕೂ ಬಲಿಯಾಗದೆ ಶಕ್ತಿ ಯೋಜನೆ ಇನ್ನಷ್ಟು ಯಶಸ್ವಿಯಾಗಿ ಮಹಿಳೆಯರ ಬದುಕಿಗೆ ಶಕ್ತಿ ತುಂಬಬೇಕು.