ಖರ್ಗೆ ಕಪ್ಪೆನ್ನುವ ಕಾರಣಕ್ಕೆ ಕಸ್ತೂರಿರಂಗನ್ ವರದಿ ಜಾರಿಯಾಗಬಾರದೇ?

Update: 2023-08-07 06:28 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

 ತೋಳ ಇದ್ದಕ್ಕಿದ್ದಂತೆಯೇ ಕುರಿಗಳ ರಕ್ಷಣೆಯ ಬಗ್ಗೆ ಜೋರು ಧ್ವನಿಯಲ್ಲಿ ಮಾತನಾಡುತ್ತದೆ ಎಂದಾಗ ಕುರಿ ಸಮೂಹ ಜಾಗೃತವಾಗಬೇಕಾಗುತ್ತದೆ. ಒಂದು ಕಾಲದಲ್ಲಿ ಗಣಿಗಾರಿಕೆಯ ಮೂಲಕ ಇಡೀ ಬಳ್ಳಾರಿ ಜಿಲ್ಲೆಯನ್ನೇ ನರಕ ಮಾಡಿದ, ಕರ್ನಾಟಕದ ಒಡಲನ್ನು ಬಗೆದು ಸಾವಿರಾರು ಕೋಟಿ ರೂಪಾಯಿಗಳನ್ನು ದೋಚಿ ದಿಲ್ಲಿಯ ದನಿಗಳಿಗೆ ಅರ್ಪಿಸಿದ ಬಿಜೆಪಿ ನಾಯಕರು ಇದೀಗ ಪಶ್ಚಿಮಘಟ್ಟ ಪರಿಸರದ ಬಗ್ಗೆ ಮಾತನಾಡುತ್ತಾರೆ ಎನ್ನುವಾಗ ಜನರು ಬೆಚ್ಚಿ ಬೀಳುವುದು ಸಹಜವಾಗಿದೆ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುತ್ತೇವೆ ಎಂದಾಕ್ಷಣ ಅದರ ವಿರುದ್ಧ ಬಿಜೆಪಿಯ ಮುಖಂಡ ಆರಗ ಜ್ಞಾನೇಂದ್ರ ಅವರು ತಿರುಗಿ ಬಿದ್ದಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿ ಈ ನಾಡಿನ ಶಾಂತಿ ಕೆಡಿಸುವಲ್ಲಿ ಸರ್ವ ಪ್ರಯತ್ನವನ್ನೂ ಮಾಡಿದ್ದ ಇವರು ಅಧಿಕಾರ ಕಳೆದುಕೊಂಡ ಬೆನ್ನಿಗೇ ಅಘೋಷಿತ ಪರಿಸರ ಸಚಿವರಾಗುವುದಕ್ಕೆ ಹೊರಟಿದ್ದಾರೆ. ಗೃಹ ಸಚಿವರಾಗುವುದೆಂದರೆ ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡಹುವುದು ಎಂದು ನಂಬಿದವರು, ಪರಿಸರದ ಬಗ್ಗೆ ಮಾತನಾಡುವುದೆಂದರೆ, ಪರಿಸರವನ್ನು ಇನ್ನಷ್ಟು ಹಾಳು ಗೆಡಹಲು ಸಂಚು ನಡೆಸುವುದು ಎಂದು ಭಾವಿಸಿರಬೇಕು. ‘ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಬಿಡುವುದಿಲ್ಲ’ ಎನ್ನುವ ಸಂದರ್ಭದಲ್ಲಿ, ವರದಿಯನ್ನು ಯಾಕೆ ಜಾರಿಗೊಳಿಸಬಾರದು ಎನ್ನುವ ಬಗ್ಗೆ ಅವರಲ್ಲಿ ಯಾವ ಮಾಹಿತಿಗಳು ಇದ್ದಂತಿಲ್ಲ. ‘ಮಲ್ಲಿಕಾರ್ಜುನ ಖರ್ಗೆಯವರು ಉತ್ತರ ಕರ್ನಾಟಕದ ಬಿಸಿಲಿನಿಂದ ಬೆಂದು ಬಂದವರು. ಬಿಸಿಲು ಬಿದ್ದು ಅವರು ಕರ್ರಗಾಗಿದ್ದಾರೆ. ಆ ಕಾರಣದಿಂದ ಅವರಿಗೆ ಪಶ್ಚಿಮಘಟ್ಟದ ಪರಿಸರದ ಬಗ್ಗೆ ಯಾವ ಮಾಹಿತಿಯೂ ಇಲ್ಲ’ ಇದು ಕಸ್ತೂರಿ ರಂಗನ್ ವರದಿಯನ್ನು ಯಾಕೆ ಜಾರಿಗೊಳಿಸಬಾರದು ಎನ್ನುವುದಕ್ಕೆ ಆರಗ ಜ್ಞಾನೇಂದ್ರರ ಬಳಿ ಇರುವ ಉತ್ತರ.

ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಅವರು ಕಲ್ಯಾಣ ಕರ್ನಾಟಕದ ಜನರ ಕುರಿತಂತೆ ಕೀಳಾಗಿ ಮಾತನಾಡಿದ್ದಾರೆ. ಮಲ್ಲಿಕಾರ್ಜುನರು ಕರ್ರಗಿರುವುದು ಅವರ ಅನರ್ಹತೆಯೆಂದು ಅವರು ಭಾವಿಸಿದ್ದಾರೆ. ಇವರ ಪ್ರಕಾರ ಕರ್ರಗಿರುವವರಾರೂ ಪರಿಸರದ ಬಗ್ಗೆ ಮಾತನಾಡಬಾರದು. ಕಪ್ಪು ಶ್ರಮದ ಸಂಕೇತ. ಕಪ್ಪು ನೆಲವನ್ನು ಅತ್ಯಂತ ಫಲವತ್ತಾದ ನೆಲವೆಂದು ರೈತರು ಭಾವಿಸುತ್ತಾರೆ. ಪ್ರಾಚೀನ ಭಾರತೀಯರು ಕಪ್ಪು ಬಣ್ಣಕ್ಕೆ ಅದೆಷ್ಟು ಪಾವಿತ್ರತೆಯನ್ನು ನೀಡಿದ್ದಾರೆ ಎಂದರೆ, ರಾಮ, ಕೃಷ್ಣ, ಶಿವನನ್ನು ಕಪ್ಪು ಬಣ್ಣದಲ್ಲಿ ಗುರುತಿಸಿದ್ದಾರೆ. ಲಿಂಗದ ಬಣ್ಣವೂ ಕಪ್ಪು. ಬಿಳಿಯರು ವಿದೇಶದಿಂದ ಬಂದರು ಎಂದು ನಂಬಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಮಧ್ಯ ಏಶ್ಯದಿಂದ ಆರ್ಯನ್ನರು ಬಂದರು. ಆ ಬಳಿಕ ಇಂಗ್ಲೆಂಡ್‌ನಿಂದ ವಿದೇಶಿಯರು ಬಂದರು. ಬಿಳಿ ಬಣ್ಣ ವಸಾಹತುಶಾಹಿ ಸಂಕೇತವಾದರೆ, ಕಪ್ಪು ಈ ನೆಲದ ಬಣ್ಣವಾಗಿದೆ. ಮೂಲ ನಿವಾಸಿಗಳ ಬಣ್ಣ ಕಪ್ಪು. ಆರಗ ಜ್ಞಾನೇಂದ್ರರಿಗೆ ಕಪ್ಪು ಬಣ್ಣ ಯಾಕೆ ಅಜೀರ್ಣ ಎನ್ನುವುದನ್ನು ನಾವು ಈ ಮೂಲಕ ಅರ್ಥ ಮಾಡಿಕೊಳ್ಳಬಹುದು. ಇಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆಯವರು ತಳಸ್ತರ ಸಮುದಾಯದಿಂದ ಬಂದವರು. ಆರಗ ಜ್ಞಾನೇಂದ್ರ ಅವರ ಮಾತಿನಲ್ಲಿ ಕೆಳಜಾತಿಯ ಬಗ್ಗೆ ಇರುವ ತಾತ್ಸಾರವೂ ಎದ್ದು ಕಾಣುತ್ತಿದೆ. ಜ್ಞಾನೇಂದ್ರ ಅವರ ಒಳಗಿರುವ ಜನಾಂಗೀಯ ಮನಸ್ಥಿತಿ ಖರ್ಗೆಯಂತಹ ಹಿರಿಯ ನಾಯಕರ ಬಣ್ಣದ ಕುರಿತು ಕೀಳಾಗಿ ಮಾತನಾಡಿಸಿದೆ.. ಇಂದು ಖರ್ಗೆ ತನ್ನ ಹಿರಿತನ, ಮುತ್ಸದ್ದಿ ಕಾರಣದಿಂದಲೇ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದು ನಿಂತಿದ್ದಾರೆ. ಭವಿಷ್ಯದ ಪ್ರಧಾನಿಯಾಗಿಯೂ ಗುರುತಿಸಲ್ಪಡುತ್ತಿದ್ದಾರೆ. ಕರ್ನಾಟಕವನ್ನು ಅವರು ದಿಲ್ಲಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕವನ್ನು ದಿಲ್ಲಿಯಲ್ಲಿ ಪ್ರತಿನಿಧಿಸುವ ಇನ್ನೊಬ್ಬ ಮುತ್ಸದ್ದಿ ನಾಯಕನನ್ನು ನಾವು ಬಿಜೆಪಿಯಲ್ಲಿ ಕಾಣಲು ಸಾಧ್ಯವಿಲ್ಲ.

ಪರಿಸರದ ಬಗ್ಗೆ ಮಾತನಾಡಬಾರದವರು ಮಾತನಾಡಲು ಹೊರಟರೆ ಅಂತಿಮವಾಗಿ ಆ ಚರ್ಚೆ ವಿರೂಪಗೊಳ್ಳುತ್ತದೆ. ಆರಗ ಜ್ಞಾನೇಂದ್ರ ಅವರ ಪಶ್ಚಿಮಘಟ್ಟದ ಕುರಿತ ಕಾಳಜಿ ಅಂತಿಮವಾಗಿ ಖರ್ಗೆಯ ಬಣ್ಣದ ಚರ್ಚೆಯಾಗಿ ಹಳಿ ತಪ್ಪಿದೆ. ಆದರೆ ಇದೇ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳ್ಳಬೇಕೇ ಬೇಡವೆ? ಎನ್ನುವುದು ಚರ್ಚೆಯಾಗುವ ಅಗತ್ಯವಂತೂ ಇದೆ. ಈ ವರದಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹಲವರು ಈ ಹಿಂದಿನ ಗಾಡ್ಗೀಳ್ ವರದಿಯೇ ಜಾರಿಗೊಳ್ಳಲಿ, ಕಸ್ತೂರಿ ರಂಗನ್ ವರದಿ ಬೇಡ ಅನ್ನುತ್ತಿದ್ದಾರೆ. ಸರಕಾರ ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಆಸಕ್ತಿಯನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಬಿಜೆಪಿ, ಸಂಘಪರಿವಾರದ ಒಂದು ಗುಂಪು ಕಸ್ತೂರಿ ರಂಗನ್ ವರದಿ ಬೇಡ ಎನ್ನುತ್ತಿದೆ. ಆದರೆ ಅವರು ಪಶ್ಚಿಮಘಟ್ಟದ ಮೇಲಿನ ಪ್ರೀತಿಯಿಂದ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುತ್ತಿರುವುದಲ್ಲ. ಪಶ್ಚಿಮಘಟ್ಟವನ್ನು ದೋಚಲು ಅವರಿಗೆ ಕಸ್ತೂರಿ ರಂಗನ್ ವರದಿ ಕೂಡ ಸಮಸ್ಯೆಯನ್ನು ಒಡ್ಡುತ್ತಿದೆ. ಆದುದರಿಂದ, ಪಶ್ಚಿಮಘಟ್ಟದ ಮೇಲೆ ಹಕ್ಕು ಸ್ಥಾಪಿಸಲು ಅನುಕೂಲವಾಗುವಂತಹ ಹೊಸ ವರದಿಯ ನಿರೀಕ್ಷೆಯಲ್ಲಿದ್ದಾರೆ. ಅವರು ನಿರೀಕ್ಷಿಸುವ ವರದಿ ಪಶ್ಚಿಮ ಘಟ್ಟದ ಸ್ಥಿತಿಯನ್ನು ಇನ್ನಷ್ಟು ವಿರೂಪಗೊಳಿಸಲಿದೆ ಎನ್ನುವುದು ಪರಿಸರವಾದಿಗಳ ಆತಂಕ. ‘ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸಿಯೇ ಸಿದ್ಧ’ ಎನ್ನುವ ಸರಕಾರದ ಸರ್ವಾಧಿಕಾರಿ ಮನಸ್ಥಿತಿಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ಕಸ್ತೂರಿರಂಗನ್ ವರದಿಯ ಕುರಿತಂತೆ ಪಶ್ಚಿಮಘಟ್ಟದ ಕುರಿತಂತೆ ಕಾಳಜಿಯಿರುವ ಪರಿಸರವಾದಿಗಳ ಆತಂಕಗಳೇನು ಎನ್ನುವುದನ್ನು ಸರಕಾರ ಆಲಿಸಬೇಕು. ಕಸ್ತೂರಿ ರಂಗನ್ ವರದಿಯಲ್ಲಿರುವ ಪರಿಸರ ವಿರೋಧಿ ಹಾಗೆಯೇ ಜನ ವಿರೋಧಿ ಅಂಶಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವ ಬಗ್ಗೆ ಸರಕಾರ ಯೋಚಿಸಬೇಕು.

ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಐದನೇ ಕರಡು ಅಧಿಸೂಚನೆಯನ್ನು ಕಳೆದ ವರ್ಷ ಜುಲೈಯಲ್ಲಿ ಕೇಂದ್ರ ಸರಕಾರ ಹೊರಡಿಸಿತ್ತು. ಆಗ ಇದರ ಕುರಿತಂತೆ ಸ್ಪಷ್ಟವಾಗಿ ಮಾತನಾಡುವ, ಖಂಡಿಸುವ ಅವಕಾಶ ಬಿಜೆಪಿ ಸರಕಾರಕ್ಕಿತ್ತು. ಆದರೆ ಅಧಿಕಾರ ಕಳೆದುಕೊಂಡ ಬಳಿಕ ಅದು ಕಸ್ತೂರಿ ರಂಗನ್ ವರದಿ ಜಾರಿಗೊಳ್ಳುವ ಬಗ್ಗೆ ತನ್ನ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದೆ. ಪಶ್ಚಿಮಘಟ್ಟವನ್ನು ಉಳಿಸಲು ಈ ಹಿಂದೆ ಹತ್ತು ಹಲವು ಆಂದೋಲನಗಳು ನಡೆದಿದ್ದವು. ಅದರ ಫಲವಾಗಿಯೇ ಯುಪಿಎ ಸರಕಾರದ ಅವಧಿಯಲ್ಲಿ ಅಂದಿನ ಪರಿಸರ ಖಾತೆಯ ಸಚಿವ ಜೈರಾಮ್ ರಮೇಶ್ ಅವರು ಈ ಬಗ್ಗೆ ಅಧ್ಯಯನಕ್ಕೆ ಗಾಡ್ಗೀಳ್ ಸಮಿತಿಯನ್ನು ರಚಿಸಿದರು. ಪಶ್ಚಿಮಘಟ್ಟಕ್ಕೆ ಸಂಬಂಧಿಸಿದ ೧೧ ಮಂದಿ ಈ ಸಮಿತಿಯಲ್ಲಿ ಇದ್ದುದರಿಂದ ಈ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಹೆಚ್ಚು ಚರ್ಚೆಗಳಿರಲಿಲ್ಲ. ಆದರೆ ವರದಿ ಸಲ್ಲಿಕೆಯಾದ ಬಳಿಕವೂ ಇದನ್ನು ಸರಕಾರ ಬಹಿರಂಗಗೊಳಿಸಲಿಲ್ಲ. ಪಶ್ಚಿಮಘಟ್ಟದ ಶೇ. ೭೮ ಪ್ರದೇಶಗಳಿಗೆ ಅಂದರೆ ಸುಮಾರು ೧,೨೯,೦೩೭ ಚದರ ಕಿ. ಮೀ. ಪ್ರದೇಶಕ್ಕೆ ರಕ್ಷಣೆ ನೀಡಬೇಕು ಎನ್ನುವ ವರದಿಯನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ ಕಸ್ತೂರಿ ರಂಗನ್ ನೇತೃತ್ವದ ಹೊಸ ಸಮಿತಿಯನ್ನು ನೇಮಿಸಿತು. ಈ ಸಮಿತಿಯ ಶಿಫಾರಸು ಪರೋಕ್ಷವಾಗಿ ಸರಕಾರದ ಹಲವು ಯೋಜನೆಗಳಿಗೆ ಪೂರಕವಾಗಿದೆ ಎನ್ನುವ ಆರೋಪಗಳನ್ನು ಪರಿಸರ ತಜ್ಞರು ಮಾಡುತ್ತಿದ್ದಾರೆ. ಕಾಡಿನ ಜೊತೆಜೊತೆಗೇ ಕಾಡಿನಲ್ಲಿರುವ ಮನುಷ್ಯರ ಬಗ್ಗೆಯೂ ಸರಕಾರ ಕಾಳಜಿ ವಹಿಸಬೇಕಾಗಿದೆ. ಪರಿಸರದ ಹೆಸರಿನಲ್ಲಿ ಅಲ್ಲಿರುವ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿ ಅಲ್ಲಿ ಮತ್ತೆ ಅತ್ಯಾಧುನಿಕ ಯೋಜನೆಗಳಿಗೆ ಚಾಲನೆ ಸಿಗುವಂತಾಗಬಾರದು. ಪರಿಸರ ಮತ್ತು ಮನುಷ್ಯ ಇವರ ನಡುವಿನ ಸಂಘರ್ಷಗಳಿಗೆ ಒಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ಪುನರ್ ಪರಿಶೀಲಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಸರಕಾರ ಮುಂದಾಗಬೇಕು. ಕಾರ್ಪೊರೇಟ್ ದನಿಗಳ ಕೈಗೊಂಬೆಗಳಾಗಿರುವ ರಾಜಕಾರಣಿಗಳನ್ನು ಪಶ್ಚಿಮಘಟ್ಟದಿಂದ ದೂರ ಇಟ್ಟು ಪರಿಸರ ತಜ್ಞರು ಮತ್ತು ಅಲ್ಲಿನ ನಿವಾಸಿಗಳ ಅಭಿಪ್ರಾಯದಂತೆ ಸರಕಾರ ಮುಂದಿನ ಹೆಜ್ಜೆಗಳನ್ನಿಡಬೇಕು.

   

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News