ರೋಗಗ್ರಸ್ತ ಸರಕಾರಿ ಆಸ್ಪತ್ರೆಗಳು

Update: 2023-10-06 04:16 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಕಾಲದಲ್ಲಿ ಆಸ್ಪತ್ರೆಗಳಲ್ಲಿ ಸರಣಿ ಸಾವುಗಳು ಸಂಭವಿಸಿದವು. ಆಸ್ಪತ್ರೆಗಳ ವೈಫಲ್ಯಗಳು, ಸರಕಾರಿ ಆಸ್ಪತ್ರೆಗಳ ಮೂಲಭೂತ ಕೊರತೆಗಳನ್ನೆಲ್ಲ ಕೊರೋನ ತಲೆಗೆ ಕಟ್ಟಲಾಯಿತು. ಕೊರೋನದಿಂದ ಭಾರತದಲ್ಲಿ ಸರಕಾರಿ ಅಂಕಿಅಂಶಗಳು ಹೇಳಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಸಾವು ನೋವುಗಳು ಸಂಭವಿಸಿವೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಆದರೆ ಇದನ್ನು ಭಾರತ ಸಾರಾಸಗಟಾಗಿ ಅಲ್ಲಗಳೆದಿದೆ. ಭಾರತ ಸರಕಾರದ ಅಂಕಿಅಂಶಗಳ ಪ್ರಕಾರ ಇಲ್ಲಿ ಕೊರೋನದಿಂದಾಗಿ ಸುಮಾರು 5 ಲಕ್ಷ ಜನರು ಮೃತಪಟ್ಟಿದ್ದಾರೆ. ಜನವರಿ 1, 2020ರಿಂದ ಡಿಸೆಂಬರ್ 31 2021ರವರೆಗೆ 4,81, 000 ಜನರು ಮೃತಪಟ್ಟಿದ್ದಾರೆ ಎಂದು ಭಾರತ ಸರಕಾರ ಹೇಳುತ್ತಿದೆ. ಆದರೆ ವಿಶ್ವಸಂಸ್ಥೆಯ ಪ್ರಕಾರ ಭಾರತದಲ್ಲಿ 40 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಭಾರತ ಸರಕಾರ ಹೇಳುವ ಅಂಕಿಅಂಶಗಳಿರಲಿ, ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶಗಳಿರಲಿ, ಇವರೆಲ್ಲರೂ ಕೇವಲ ಕೊರೋನ ಕಾರಣದಿಂದಲೇ ಮೃತಪಟ್ಟಿದ್ದರೆ? ಎನ್ನುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಇನ್ನೂ ಕಂಡುಕೊಳ್ಳಲು ಆಗಿಲ್ಲ. ಯಾಕೆಂದರೆ, ಕೊರೋನ ಕಾಲದಲ್ಲಿ ಮೃತಪಟ್ಟ ಲಕ್ಷಾಂತರ ಜನರು ಬೇರೆ ಬೇರೆ ರೋಗಗಳಿಂದ ನರಳುತ್ತಿದ್ದರು. ಕ್ಯಾನ್ಸರ್, ಎಚ್‌ಐವಿ, ಕಿಡ್ನಿ ವೈಫಲ್ಯ, ಕ್ಷಯ, ಅಸ್ತಮಾ ಮೊದಲಾದ ರೋಗಿಗಳೆಲ್ಲ ಈ ಸಂದರ್ಭದಲ್ಲಿ ತಜ್ಞ ವೈದ್ಯರು ಒದಗದ ಕಾರಣ, ಆಸ್ಪತ್ರೆಗಳಲ್ಲಿ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದ ಕಾರಣ ಮೃತಪಟ್ಟಿದ್ದಾರೆ. ಇವರಲ್ಲಿ ಸಹಜವಾಗಿಯೇ ಕೊರೋನ ಲಕ್ಷಣಗಳು ಕಂಡು ಬಂದಿದ್ದುದರಿಂದ ಇವರೆಲ್ಲ ಕೊರೋನದಿಂದಲೇ ಮೃತಪಟ್ಟರು ಎಂದು ಘೋಷಿಸಲಾಯಿತು. ಭಾರತ ಕೊರೋನ ಆಗಮಿಸುವ ಮೊದಲೇ ನಾನಾ ಭೀಕರ ರೋಗಗಳಿಂದ ತತ್ತರಿಸುತ್ತಿತ್ತು. ಈ ದೇಶದ ಬಡವರು ಕೊರೋನಕ್ಕೆ ಹೆದರಿರಲೇ ಇಲ್ಲ. ಅವರು ಕೊರೋನ ಹೆಸರಿನಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಎದುರಾದ ನಿರುದ್ಯೋಗ, ಹಸಿವಿಗೆ ಹೆದರಿದ್ದರು. ಕೊರೋನದ ಹೆಸರಿನಲ್ಲಿ ಇತರೆಲ್ಲ ರೋಗಿಗಳನ್ನು ಆಸ್ಪತ್ರೆಗಳಿಂದ ಹೊರಗಿಡಲಾಯಿತು. ಕೊರೋನ ಸೋಂಕಿತ ಇತರ ರೋಗಿಗಳು ಸೂಕ್ತ ಚಿಕಿತ್ಸೆಯ ವ್ಯವಸ್ಥೆಯಿಲ್ಲದೆ ಮೃತಪಟ್ಟರು. ಈ ಕಾರಣದಿಂದಲೇ, ಭಾರತ ಕೊರೋನ ಕಾಲದಲ್ಲಿ ಅತಿ ಹೆಚ್ಚು ಸಾವುನೋವುಗಳನ್ನು ನೋಡಬೇಕಾಯಿತು.

ಕೊರೋನ ಕಾಲಿಡುವ ಮೊದಲೇ ಭಾರತದ ಆಸ್ಪತ್ರೆಗಳು ಅಪಾರ ಸಾವು-ನೋವುಗಳಿಗೆ ಸಾಕ್ಷಿಯಾಗಿದ್ದವು. 2017ರಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದ ಆಸ್ಪತ್ರೆಯಲ್ಲಿ ಸಂಭವಿಸಿದ ಹಸುಳೆಗಳ ಮಾರಣ ಹೋಮ ಯಾವುದೇ ಕೊರೋನ ವೈರಸ್‌ನಿಂದ ಸಂಭವಿಸಿದ್ದುದಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ 40ಕ್ಕೂ ಅಧಿಕ ಸಾವುಗಳು ಸಂಭವಿಸಿದ್ದವು. ಸರಕಾರಿ ಆಸ್ಪತ್ರೆಗಳ ಈ ಕೊರತೆಗಳನ್ನೆಲ್ಲ ಒಬ್ಬ ವೈದ್ಯನ ತಲೆಗೆ ಕಟ್ಟಿ ಅಲ್ಲಿನ ಸರಕಾರ ಮಾನ ಉಳಿಸಿಕೊಳ್ಳಲು ಯತ್ನಿಸಿತು. ಹಸುಳೆಗಳನ್ನು ರಕ್ಷಿಸಲು ಸರ್ವ ಪ್ರಯತ್ನವನ್ನು ಮಾಡಿದ ಡಾ. ಕಫೀಲ್ ಎಂಬವರನ್ನೇ ಸರಕಾರ ಆರೋಪಿ ಸ್ಥಾನದಲ್ಲಿ ನಿಲ್ಲಿಸಿತು. ಸರಕಾರಿ ಆಸ್ಪತ್ರೆಗಳ ವೈಫಲ್ಯಗಳನ್ನು ಬಹಿರಂಗಪಡಿಸಿದ್ದೇ ಈತ ಮಾಡಿದ ತಪ್ಪು. ಸರಕಾರಿ ಆಸ್ಪತ್ರೆಗಳ ಲೋಪದೋಷಗಳನ್ನು ಸರಿಪಡಿಸುವ ಬದಲು, ಅದನ್ನು ಎತ್ತಿ ತೋರಿಸಿದ ವೈದ್ಯನನ್ನು ಸರಿಪಡಿಸುವುದಕ್ಕೆ ಸರಕಾರ ಮುಂದಾಯಿತು. ಆದರೆ ಮುಂದೆ ನ್ಯಾಯಾಲಯದಲ್ಲಿ ಡಾ. ಕಫೀಲ್ ಆರೋಪ ಮುಕ್ತರಾದರು. ಇದೀಗ ಕೊರೋನ ಮುಗಿದು ಎರಡು ವರ್ಷಗಳ ಬಳಿಕ ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಗಳು ಸರಣಿ ಸಾವಿಗಾಗಿ ಸುದ್ದಿಯಾಗುತ್ತಿವೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನಾಂದೇಡ್‌ನ ಡಾ. ಶಂಕರರಾವ್ ಚವಾಣ್ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ ನಾಲ್ಕು ದಿನಗಳ ಅವಧಿಯಲ್ಲಿ 49 ಸಾವುಗಳು ಸಂಭವಿಸಿವೆ. ಔಷಧಿಗಳ ಕೊರತೆ ಮತ್ತು ವೈದ್ಯರ ಅಲಭ್ಯತೆಯಿಂದಾಗಿಯೇ ಈ ಸಾವುಗಳು ಸಂಭವಿಸಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಮಂಗಳವಾರ ಬೆಳಗ್ಗಿನಿಂದ 24 ಗಂಟೆಗಳ ಅವಧಿಯಲ್ಲಿ ಒಂದು ಆಸ್ಪತ್ರೆಯಲ್ಲಿ 18 ಸಾವುಗಳು ಸಂಭವಿಸಿದ್ದರೆ, ಸೆ. 30-ಅ.1ರ ನಡುವೆ ಇನ್ನೊಂದು ಆಸ್ಪತ್ರೆಯಲ್ಲಿ 24 ಸಾವುಗಳು ಸಂಭವಿಸಿದ್ದವು. ಅ.4ರಂದು ಮಹಾರಾಷ್ಟ್ರದ ನಾಗಪುರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 14 ರೋಗಿಗಳು ಹಾಗೂ ಇನ್ನೊಂದು ಸರಕಾರಿ ಆಸ್ಪತ್ರೆಯಲ್ಲಿ 9 ರೋಗಿಗಳು ಮೃತಪಟ್ಟಿರುವುದು ವರದಿಯಾಗಿವೆ. ಕೆಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಿರುವುದು ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿವೆ. ಈ ಸಾವು ನೋವುಗಳ ಬಗ್ಗೆ ಬಾಂಬೆ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿದ್ದು, ಮಹಾರಾಷ್ಟ್ರ ಸರಕಾರದಿಂದ ವಿವರವನ್ನು ಕೋರಿದೆ. ರಾಜ್ಯ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಮಂಜೂರು ಮಾಡಿದ ನಿಧಿಯ ಕುರಿತ ವಿವರವನ್ನು ಪೀಠಕ್ಕೆ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳು, ಔಷಧಿಗಳ ಲಭ್ಯತೆ, ಸರಕಾರ ಮಾಡುತ್ತಿರುವ ವೆಚ್ಚದ ಶೇಕಡಾವಾರು ಹಾಗೂ ಇತರ ವಿವರಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸುವುದಕ್ಕೂ ಸೂಚನೆ ನೀಡಿದೆ.

ಯಾವುದೇ ಕೊರೋನದಂತಹ ಸಾಂಕ್ರಾಮಿಕ ರೋಗಗಳಿಲ್ಲದೇ ಇರುವ ಈ ದಿನಗಳಲ್ಲೇ ನಮ್ಮ ಸರಕಾರಿ ಆಸ್ಪತ್ರೆಗಳು ಸರಣಿ ಸಾವುಗಳಿಗೆ ಸುದ್ದಿಯಾಗುತ್ತವೆಯಾದರೆ, ಕೊರೋನ ಕಾಲದಲ್ಲಿ ಲಕ್ಷಾಂತರ ಸಾವುಗಳು ಸಂಭವಿಸುವುದು ಅಚ್ಚರಿಯ, ಆಘಾತದ ವಿಷಯವಲ್ಲ. ಕೊರೋನ ಕಾಲದಲ್ಲಿ ಸರಕಾರ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಪೂರ್ಣ ವಿಫಲವಾಗಿತ್ತು. ಆಕ್ಸಿಜನ್ ಸಿಲಿಂಡರ್‌ಗಳ ವಿತರಣೆಯಲ್ಲಿ ಪೂರ್ಣಪ್ರಮಾಣದಲ್ಲಿ ಎಡವಿತ್ತು. ಆತುರಾತುರವಾಗಿ ಆಸ್ಪತ್ರೆಗಳ ಮೂಲಸೌಕರ್ಯಗಳಿಗೆ, ಉಪಕರಣಗಳಿಗೆ ಹಣವನ್ನು ಬಿಡುಗಡೆ ಮಾಡಿತಾದರೂ ಇವುಗಳಲ್ಲಿ ಭಾರೀ ಅಕ್ರಮಗಳು ನಡೆದವು. ಕೊರೋನ ಮುಗಿದ ಬಳಿಕವಾದರೂ, ಈ ಅಕ್ರಮಗಳ ತನಿಖೆ ನಡೆಸುವುದು ಅತ್ಯಗತ್ಯವಾಗಿತ್ತು. ಕೊರೋನ ಸಂದರ್ಭದಲ್ಲಿ ಸರಕಾರ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಿರುವ ಹಣ, ಇವುಗಳಲ್ಲಿ ಸದುಪಯೋಗವಾಗಿರುವ ಹಣ ಇತ್ಯಾದಿಗಳ ತನಿಖೆ ಇನ್ನಾದರೂ ನಡೆಯುವ ಅಗತ್ಯವಿದೆ. ಸರಕಾರ ಕೊರೋನದ ಸಾವು ನೋವುಗಳಿಂದ ಪಾಠ ಕಲಿತಿದ್ದರೆ, ಇದೀಗ ಭಾರತದ ಸರಕಾರಿ ಆಸ್ಪತ್ರೆಗಳು ಮತ್ತೆ ಸರಣಿ ಸಾವಿಗಾಗಿ ಸುದ್ದಿಯಾಗುತ್ತಿರಲಿಲ್ಲ. ಉತ್ತರ ಭಾರತದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಇಂತಹ ಸಾವುಗಳು ಸಾಮಾನ್ಯವಾಗಿ ಬಿಟ್ಟಿವೆ. ತೀರಾ ಮಾಧ್ಯಮಗಳಲ್ಲಿ ಸುದ್ದಿಯಾದಾಗ ಮಾತ್ರ ಅವುಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ.

ಕೊರೋನದಂತಹ ಸಾಂಕ್ರಾಮಿಕ ರೋಗಗಳು ಅಳಿದಿಲ್ಲ ಎನ್ನುವ ಎಚ್ಚರಿಕೆಯನ್ನು ಈಗಾಗಲೇ ವಿಶ್ವಸಂಸ್ಥೆ ನೀಡಿದೆ. ಕೊರೋನಕ್ಕಿಂತಲೂ ಮಾರಕ ವೈರಸ್‌ಗಳು ಈ ಜಗತ್ತಿಗೆ ಅಪ್ಪಳಿಸುವ ಅಪಾಯದ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಕಾಲಿಟ್ಟ ಬಳಿಕ ಅವುಗಳನ್ನು ಎದುರಿಸಲು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಾಧ್ಯವಿಲ್ಲ ಎನ್ನುವುದು ಕೊರೋನದಿಂದ ಸಾಬೀತಾಗಿದೆ. ಆದುದರಿಂದ ಸರಕಾರ ಮುನ್ನೆಚ್ಚರಿಕೆಯಾಗಿ ನಮ್ಮ ಸರಕಾರಿ ಆಸ್ಪತ್ರೆಗಳನ್ನು ಮೇಲೆತ್ತುವ ಬಗ್ಗೆ ಕ್ರಮ ಕೈಗೊಳ್ಳಬೇಕು. ದೇಶಾದ್ಯಂತ ಎಲ್ಲ ಸರಕಾರಿ ಆಸ್ಪತ್ರೆಗಳು ಪುನರ್‌ನವೀಕರಣಗೊಳ್ಳಬೇಕಾಗಿದೆ. ಇರುವ ಸಾಂಕ್ರಾಮಿಕ ರೋಗಗಳ ಜೊತೆಗೆ, ಭವಿಷ್ಯದ ಮಾರಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಈಗಲೇ ತಯಾರಿ ನಡೆಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News