ಎಸೆಸೆಲ್ಸಿ ಫಲಿತಾಂಶ: ಕತ್ತಲಲ್ಲೂ ಬೆಳಕಿನ ಕಿರಣಗಳು

Update: 2024-05-11 10:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಎಸೆಸೆಲ್ಸಿ ಫಲಿತಾಂಶ ಹೊರಬಿದ್ದಿದೆ. ಹೊಸ ಶಿಕ್ಷಣ ನೀತಿಯ ಹಲವು ಗೊಂದಲಗಳ ನಡುವೆಯೂ ರಾಜ್ಯದಲ್ಲಿ ಶೇ. ೭೩.೪೦ ಫಲಿತಾಂಶ ಬಂದಿದೆ. ಈ ಬಾರಿಯ ಫಲಿತಾಂಶ ಕೆಲವು ಕಾರಣಗಳಿಗಾಗಿ ನಾಡಿನ ಶಿಕ್ಷಣ ವಲಯದ ಮೇಲೆ ಬೆಳಕಿನ ಕಿರಣಗಳನ್ನು ಹೊತ್ತು ತಂದಿದೆ. ಇಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಗಳನ್ನು ಅವರ ಪ್ರತಿಭೆಗೆ ಮಾನದಂಡವಾಗಿ ಬಳಸುವುದು ಎಂದಿಗೂ ಸೂಕ್ತವಲ್ಲ. ಕಡಿಮೆ ಅಂಕಗಳನ್ನು ಪಡೆದವರು ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ‘ದಡ್ಡರು’ ಎನ್ನುವ ನಿರ್ಧಾರಕ್ಕೆ ಬರುವುದು ಯಾವತ್ತೂ ಸರಿಯಲ್ಲ. ಅನುತ್ತೀರ್ಣರಾದ ಅಥವಾ ಕಡಿಮೆ ಅಂಕಗಳನ್ನು ಪಡೆದ ನೂರಾರು ವಿದ್ಯಾರ್ಥಿಗಳು ಒಳ್ಳೆಯ ಚಿತ್ರಕಲಾವಿದರಾಗಿ, ತಂತ್ರಜ್ಞರಾಗಿ, ವಿಜ್ಞಾನಿಗಳಾಗಿ, ಕೃಷಿಕರಾಗಿ, ಉದ್ಯಮಿಗಳಾಗಿ ನಾಡನ್ನು ಕಟ್ಟಲು ತಮ್ಮ ಕೊಡುಗೆಗಳನ್ನು ನೀಡಬಹುದು. ಕಡಿಮೆ ಅಂಕಗಳನ್ನು ಪಡೆದ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯಕ್ಕೂ ಒಳ್ಳೆಯದನ್ನು ಹಾರೈಸುತ್ತಾ, ಸದ್ಯದ ಫಲಿತಾಂಶವನ್ನು ನಾವು ವಿಶ್ಲೇಷಣೆಗೆ ಒಳಪಡಿಸಬೇಕಾಗಿದೆ.

ಮುಖ್ಯವಾಗಿ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಇದು ನಿಜಕ್ಕೂ ಸಮಾಧಾನ ತರುವ ವಿಷಯವಾಗಿದೆ. ಕೊರೋನೋತ್ತರ ದಿನಗಳಲ್ಲಿ ಬಾಲಕಿಯರ ಶಿಕ್ಷಣ ಮತ್ತೆ ಹಿಂದಕ್ಕೆ ಚಲಿಸುವ ಅಪಾಯಗಳಿದ್ದವು. ರಾಜ್ಯಾದ್ಯಂತ ಲಾಕ್ಡೌನ್ ವಿಧಿಸಲ್ಪಟ್ಟಾಗ ಶಾಲೆಗಳಿಗೂ ಬೀಗ ಜಡಿಯಲಾಯಿತು. ಬಳಿಕ ಏಕಾಏಕಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ಆನ್ಲೈನ್ ಶಿಕ್ಷಣವನ್ನು ಹೇರಲಾಯಿತು. ಲಾಕ್ಡೌನ್ ಮತ್ತು ಆನ್ಲೈನ್ ಶಿಕ್ಷಣ ಇವೆರಡು ನೇರವಾಗಿ ದುಷ್ಪರಿಣಾಮವನ್ನು ಬೀರಿದ್ದು ವಿದ್ಯಾರ್ಥಿನಿಯರ ಶಿಕ್ಷಣದ ಮೇಲೆ. ಲಾಕ್ಡೌನ್ ಗ್ರಾಮೀಣ ಪ್ರದೇಶದಲ್ಲಿ ತೀವ್ರ ಬಡತನ, ನಿರುದ್ಯೋಗ, ಹಸಿವಿಗೆ ಕಾರಣವಾಯಿತು. ಪರಿಣಾಮವಾಗಿ ಪೋಷಕರು ಕುಟುಂಬವನ್ನು ಸಾಕುವುದಕ್ಕಾಗಿ ಸಾಕಷ್ಟು ಹೆಣಗಾಡತೊಡಗಿದರು. ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನೂ ದುಡಿಮೆಗೆ ಹಚ್ಚುವುದು ಅವರಿಗೆ ಅನಿವಾರ್ಯವಾಯಿತು. ಲಾಕ್ಡೌನ್ ಕಾರಣದಿಂದಾಗಿ ಬಿಸಿಯೂಟಕ್ಕೂ ತತ್ವಾರ ಉಂಟಾದಾಗ, ಗ್ರಾಮೀಣ ಪ್ರದೇಶದ ಬಡ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಕೆಯನ್ನು ವ್ಯಕ್ತಪಡಿಸಿದವು. ಜೊತೆಗೇ, ಆನ್ಲೈನ್ ಶಿಕ್ಷಣವನ್ನು ಹೇರಿದಾಗ ಮಕ್ಕಳಿಗೆ ಸ್ಮಾರ್ಟ್ ಫೋನ್ ಒದಗಿಸುವಲ್ಲಿ ಪೋಷಕರು ಅಸಹಾಯಕರಾದರು. ಇಂತಹ ಸಂದರ್ಭದಲ್ಲಿ, ಗಂಡು ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಗಮನವನ್ನು ನೀಡಿ, ಹೆಣ್ಣು ಮಕ್ಕಳ ಶಿಕ್ಷಣ ಅರ್ಧದಲ್ಲೇ ಮೊಟಕು ಗೊಳಿಸಿದರು. ಲಾಕ್ಡೌನ್ ತೆರವುಗೊಂಡು ಮತ್ತೆ ಶಾಲೆ ಆರಂಭವಾದಾಗ, ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿಗಳನ್ನು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿನಿಯರನ್ನು ಮರಳಿ ಶಾಲೆಗೆ ಕರೆ ತರಲು ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆರ್ಥಿಕ ಅಡಚಣೆೆ, ಪ್ರೋತ್ಸಾಹದ ಕೊರತೆ, ಸಮಾಜದ ತುಚ್ಛೀಕಾರ ಇವೆಲ್ಲದರ ನಡುವೆಯೂ ಬಾಲಕಿಯರು ಶೈಕ್ಷಣಿಕ ಸಾಧನೆಯಲ್ಲಿ ಈ ಬಾರಿಯೂ ಹಿಂದೆ ಬಿದ್ದಿಲ್ಲ ಎನ್ನುವುದು ‘ಅತ್ಯುತ್ತಮ ಫಲಿತಾಂಶ’ವೆಂದು ಪರಿಗಣಿಸುವುದಕ್ಕೆ ಮಾನದಂಡವಾಗಿದೆ.

ಈ ಬಾರಿಯ ಫಲಿತಾಂಶದಲ್ಲಿ ನಾವು ಇನ್ನೊಂದು ಅಂಶವನ್ನು ಗುರುತಿಸಿ, ಅದಕ್ಕಾಗಿ ಹೆಮ್ಮೆ ಪಡಬೇಕಾಗಿದೆ. ರಾಜ್ಯಕ್ಕೆ ಈ ಬಾರಿ ಪ್ರಥಮ ಸ್ಥಾನ ಪಡೆದಿರುವುದು ಕೂಡ ವಿದ್ಯಾರ್ಥಿನಿಯೇ ಆಗಿದ್ದಾಳೆ. ಅವಳ ಇನ್ನೊಂದು ಹೆಗ್ಗಳಿಕೆಯೆಂದರೆ, ಆಕೆ ಸರಕಾರಿ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿನಿ. ಅಷ್ಟೇ ಅಲ್ಲ, ಸರಕಾರವು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಮೇಲೆತ್ತುವುದಕ್ಕಾಗಿ ಸ್ಥಾಪಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ. ಒಂದೆಡೆ ಸರಕಾರಿ ಶಾಲೆಗಳ ಬಗ್ಗೆ ಪೋಷಕರು ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಸರಕಾರಿ ಶಾಲೆಗೆ ಸೂಕ್ತ ಸವಲತ್ತುಗಳನ್ನು ನೀಡಿದರೆ ಅದು ಅತ್ಯುತ್ತಮ ಫಲಿತಾಂಶವನ್ನು ತರಬಲ್ಲುದು’ ಎನ್ನುವುದಕ್ಕೆ ಮುಧೋಳದ ಮೆಳ್ಳಿಗೇರಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರು ಉದಾಹರಣೆಯಾಗಿದ್ದಾರೆ. ಕೆಲ ಸಮಯಗಳ ಹಿಂದೆ ತಪ್ಪು ಕಾರಣಗಳಿಗಾಗಿ ಮೊರಾರ್ಜಿ ವಸತಿ ಶಾಲೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದವು. ಆದರೆ ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡುವ ಮೂಲಕ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸುದ್ದಿಯಲ್ಲಿದೆ. ಸರಕಾರಿ ಶಾಲೆಗಳ ಕಡೆಗೆ ಸರಕಾರ ಹೆಚ್ಚಿನ ಗಮನವನ್ನು ನೀಡಿದರೆ, ಯಾವುದೇ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಫಲಿತಾಂಶವನ್ನು ಅವುಗಳು ನೀಡಬಹುದು ಎನ್ನುವ ಸಂದೇಶವನ್ನು ಇದು ನೀಡಿದೆ. ಸರಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ಇರುವ ಕೀಳರಿಮೆಗಳನ್ನು ಅಂಕಿತಾ ಸಾಧನೆ ಅಳಿಸಿ ಹಾಕಿದೆ. ೭೮೫ ಸರಕಾರಿ ಶಾಲೆಗಳು ನೂರು ಶೇಕಡ ಫಲಿತಾಂಶವನ್ನು ನೀಡಿದೆ ಎನ್ನುವುದು ಸಣ್ಣ ಸಾಧನೆಯೇನೂ ಅಲ್ಲ. ಭವಿಷ್ಯದಲ್ಲಿ ಸರಕಾರಿ ಶಾಲೆಗಳಿಗೆ ಸರಕಾರ ಇನ್ನಷ್ಟು ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಕನ್ನಡ ಮಾಧ್ಯಮಗಳಿಗೆ ಮಕ್ಕಳ ಕೊರತೆಯಿದೆ ಎಂದಾದರೆ, ಸರಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವಾಗಿಸಿ ಅಥವಾ ಇಂಗ್ಲಿಷ್-ಕನ್ನಡವನ್ನು ಜೊತೆ ಜೊತೆಯಾಗಿಸಿಕೊಂಡು ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳ ಕಡೆಗೆ ಸೆಳೆಯಬೇಕು. ಯಾಕೆಂದರೆ ಈ ನಾಡಿನ ಶೋಷಿತ ಸಮುದಾಯ, ಬಡವರ್ಗ ಇಂದಿಗೂ ಸರಕಾರಿ ಶಾಲೆಗಳನ್ನೇ ಶಿಕ್ಷಣಕ್ಕಾಗಿ ನೆಚ್ಚಿಕೊಂಡಿದೆ.

ಕಳೆದ ಬಾರಿಗಿಂತ ಈ ಬಾರಿಯ ಫಲಿತಾಂಶ ಶೇ. ೧೦.೪೯ ಕುಸಿತ ಕಂಡಿದೆ ಎಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ಇದರ ಬಗ್ಗೆಯೂ ಇಲಾಖೆ ಗಮನ ಹರಿಸಬೇಕಾಗಿದೆ. ಇದೇ ಮೊದಲ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಮೂಲಕ ವೆಬ್ಕಾಸ್ಟಿಂಗ್ ಅಳವಡಿಸಿದ್ದರಿಂದ ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದೆ ಎನ್ನುವುದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಮರ್ಥನೆಯಾಗಿದೆ. ಅಂದರೆ ಈ ಹಿಂದೆ ಅಕ್ರಮಗಳು ನಡೆಯುತ್ತಿದ್ದವು ಎನ್ನುವುದನ್ನು ಮಂಡಳಿ ಪರೋಕ್ಷವಾಗಿ ಒಪ್ಪಿಕೊಂಡಿದೆ. ಇಂತಹ ಅಕ್ರಮಗಳು ಅಸಮರ್ಥರನ್ನು ಸಮರ್ಥರೆಂದು ತೋರಿಸುವುದಷ್ಟೇ ಅಲ್ಲ, ನಿಜವಾದ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಬಹಳ ದುಷ್ಪರಿಣಾಮಗಳನ್ನು ಬೀರುತ್ತವೆ. ಈ ನಿಟ್ಟಿನಲ್ಲಿ, ಈ ಬಾರಿ ಅಕ್ರಮಗಳು ನಡೆದಿಲ್ಲ ಎಂದರೆ ಅದು ಶ್ಲಾಘನೀಯ್ನ. ಮತ್ತು ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಗೆ ಶೇ. ೧೦೦ರಷ್ಟು ಕಡಿವಾಣ ಹಾಕುವುದು ಮಂಡಳಿಯ ಕರ್ತವ್ಯವಾಗಿದೆ. ಇಲ್ಲವಾದರೆ, ಈ ಫಲಿತಾಂಶ ಪ್ರಕಟಣೆಗೆ ಯಾವ ಅರ್ಥವೂ ಇರುವುದಿಲ್ಲ. ಪರೀಕ್ಷೆ ಶಿಕ್ಷಣ ವ್ಯವಸ್ಥೆಯ ಒಂದು ಅಣಕವಾಗದಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕು.

ಇದೇ ಸಂದರ್ಭದಲ್ಲಿ ಈ ಫಲಿತಾಂಶಗಳ ಉದ್ದೇಶವನ್ನೇ ಬುಡಮೇಲು ಗೊಳಿಸುವಂತೆ, ಮಂಡ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಓರ್ವ ವಿದ್ಯಾರ್ಥಿನಿ ಹಾಗೂ ಅನುತ್ತೀರ್ಣನಾದ ಓರ್ವ ವಿದ್ಯಾರ್ಥಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆೆ. ನೂರಾರು ವಿದ್ಯಾರ್ಥಿಗಳ ಮೇಲೆ ಈ ಫಲಿತಾಂಶ ಕೆಟ್ಟ ಪರಿಣಾಮವನ್ನು ಬೀರಿದೆ. ನಿರೀಕ್ಷಿತ ಫಲಿತಾಂಶ ಬರದೇ ಇರುವುದರಿಂದ ಮಕ್ಕಳು ಖಿನ್ನತೆಗೊಳಗಾಗಿರುವ ಪ್ರಕರಣಗಳು ಬಹಳಷ್ಟು ಬೆಳಕಿಗೆ ಬರುತ್ತಿವೆ. ಜೊತೆಗೆ ಮನೆತೊರೆದು ಹೋಗುವುದು, ಆತ್ಮಹತ್ಯೆಗೆ ಪ್ರಯತ್ನಿಸುವುದು ಮೊದಲಾದ ಪ್ರಕರಣಗಳು ನಡೆಯುತ್ತಿವೆ. ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವನ್ನು ಇದು ತೋರಿಸುತ್ತದೆ. ಕಲಿಕೆಯೆನ್ನುವುದು ಅಂಕಗಳನ್ನು ಸಂಪಾದಿಸುವುದಷ್ಟೇ ಅಲ್ಲ ಎನ್ನುವುದನ್ನು ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದು ಶಿಕ್ಷಕರ ಹೊಣೆಗಾರಿಕೆಯಾಗಿದೆ. ಪರೀಕ್ಷೆಯ ತಯಾರಿಯೆಂದರೆ ಅವರ ಮೇಲೆ ಒತ್ತಡಗಳನ್ನು ಹಾಕುವುದಲ್ಲ, ಬದಲಿಗೆ ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು. ಉತ್ತೀರ್ಣರಾಗುವುದಕ್ಕೆ ಮಾರ್ಗದರ್ಶನ ನೀಡುವುದರ ಜೊತೆಗೇ ಅನುತ್ತೀರ್ಣರಾದರೆ ಏನು ಮಾಡಬೇಕು ಎನ್ನುವುದನ್ನು ಅವರಿಗೆ ತಿಳಿಸಿಕೊಡುವುದು ಶಿಕ್ಷಕರ ಕೆಲಸವಾಗಿದೆ. ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದಾದರೆ ಅದಕ್ಕೆ ಪೋಷಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸಮಾನ ಹೊಣೆಗಾರರಾಗಿದ್ದಾರೆ. ಆದುದರಿಂದ, ಇಂತಹ ಆತ್ಮಹತ್ಯೆಗಳು ನಡೆದರೆ , ಇವರೆಲ್ಲರನ್ನೂ ನ್ಯಾಯಾಲಯದ ಕಟಕಟೆಗೆ ಹತ್ತಿಸಬೇಕು. ಆಗ ಮಾತ್ರ, ಇಂತಹ ಆತ್ಮಹತ್ಯೆಗಳನ್ನು ಸಮಾಜ ಗಂಭೀರವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ತಡೆ ಬೀಳಬಹುದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News