ಬಿಚ್ಚಿದಷ್ಟೂ ತೆರೆದುಕೊಳ್ಳುತ್ತಿರುವ ರಾಜ್ಯ ಬಿಜೆಪಿ ಟಿಕೆಟ್ ಕಾಳದಂಧೆ

Update: 2023-10-23 05:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ


Full View

ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳು ಸಂದಿವೆ. ಈ ಐದು ತಿಂಗಳಲ್ಲಿ ಸರಕಾರದ ಆಡಳಿತ ವೈಫಲ್ಯಗಳನ್ನು ಗುರುತಿಸಿ ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪರಿಣಾಮಕಾರಿ ವಿರೋಧಪಕ್ಷ ಸ್ಥಾನವನ್ನು ತುಂಬುವ ಅವಕಾಶ ಬಿಜೆಪಿಗಿತ್ತು. ಈಗಾಗಲೇ ಬಿಜೆಪಿಯು ಜೆಡಿಎಸ್ ಜೊತೆಗೆ ಮೈತ್ರಿಯನ್ನು ಘೋಷಿಸಿರುವುದರಿಂದ ವಿರೋಧಪಕ್ಷವಾಗಿ ಇನ್ನಷ್ಟು ದೊಡ್ಡ ಧ್ವನಿಯಲ್ಲಿ ಮಾತನಾಡಬಹುದು ಎಂದು ಜನರು ನಿರೀಕ್ಷಿಸಿದ್ದರು. ಆದರೆ ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬಿಜೆಪಿ ತನ್ನದೇ ಭೂತಕಾಲದ ಭ್ರಷ್ಟಾಚಾರದ ಕೂಪದಿಂದ ಹೊರ ಬರಲು ಸಾಧ್ಯವಾಗದೆ ಒದ್ದಾಡುತ್ತಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯೊಳಗೆ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ನಡೆದ ಕಾಳದಂಧೆ ಬಿಚ್ಚಿದಷ್ಟೂ ತೆರೆದುಕೊಳ್ಳುತ್ತಿದೆ. ಪಕ್ಷದ ಟಿಕೆಟ್ ಕೊಡಿಸುತ್ತೇನೆ ಎಂದು ಬಿಜೆಪಿ ನಾಯಕರು ನಡೆಸಿದ ಕೋಟ್ಯಂತರ ರೂ. ದಂಧೆ ಬಜರಂಗದಳ ನಾಯಕಿ ಚೈತ್ರಾ ಮತ್ತು ಆಕೆಯ ಸಂಗಡಿಗರ ಬಂಧನದೊಂದಿಗೆ ಮುಕ್ತಾಯವಾಗಿಲ್ಲ. ರಾಜ್ಯಾದ್ಯಂತ ಬೇರೆ ಬೇರೆ ಕಡೆ ಬಿಜೆಪಿಯೊಳಗಿನ ನಾಯಕರೆಂದು ಕರೆಸಿಕೊಂಡವರು ಈ ದಂಧೆಯಲ್ಲಿ ಭಾಗಿಯಾಗಿ ಹಲವರನ್ನು ವಂಚಿಸಿರುವುದು ಬೆಳಕಿಗೆ ಬರುತ್ತಿದೆ. ಇದೀಗ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ತನಗೆ ಕೋಟ್ಯಂತರ ರೂ. ವಂಚಿಸಲಾಗಿದೆ ಎಂದು ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬ ಈ ನಿವೃತ್ತ ಅಧಿಕಾರಿಯನ್ನು ಸಂಪರ್ಕಿಸಿದ್ದಲ್ಲದೆ, ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸುವ ಬಗ್ಗೆ ಮಾತುಕತೆ ನಡೆಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಅವರ ಸೂಚನೆಯಂತೆ ಈತ ನನ್ನ ಬಳಿಯಿಂದ ಹಣವನ್ನು ಪಡೆದುಕೊಂಡಿದ್ದಾನೆ ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚೈತ್ರಾ ಪ್ರಕರಣವಿರಲಿ, ಇದೀಗ ಈ ನಿವೃತ್ತ ಅಧಿಕಾರಿಯ ಪ್ರಕರಣವಿರಲಿ ಎರಡರಲ್ಲೂ ಒಂದು ಸಾಮ್ಯತೆಯಿದೆ. ಟಿಕೆಟ್ ಕಾಳದಂಧೆ ಮಾರಾಟದ ಎರಡೂ ಪ್ರಕರಣಗಳಲ್ಲಿ ಆರೋಪಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ನಂಟಿದೆ. ಬಿಜೆಪಿ ರಾಜ್ಯಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆಯವರಾಗಿರುವುದು ಮತ್ತು ಕಾಳದಂಧೆಯಲ್ಲಿ ದಕ್ಷಿಣ ಕನ್ನಡ ಮೂಲದ ಜನರ ಹೆಸರು ಕೇಳಿ ಬರುತ್ತಿರುವುದನ್ನು ಕಾಕತಾಳೀಯ ಎಂದು ಹೇಳುವಂತಿಲ್ಲ. ತಾನು ನೀಡಿದ ಹಣಕ್ಕೆ ದಾಖಲೆಗಳೂ ಇವೆ ಎಂದು ನಿವೃತ್ತ ಅಧಿಕಾರಿ ತಿಳಿಸಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಪ್ರಕರಣದಲ್ಲಿ ದುಡ್ಡು ಪಡೆದುಕೊಂಡ ಆರೋಪಿಗಳೆಲ್ಲರೂ ಬಿಜೆಪಿ ಮುಖಂಡರೇ ಆಗಿದ್ದಾರೆ. ಆದುದರಿಂದ ಚೈತ್ರಾ ಪ್ರಕರಣ ವಿರಲಿ, ಇದೀಗ ಕೊಟ್ಟೂರಿನ ರೇವಣಸಿದ್ದಪ್ಪರಿಗಾದ ವಂಚನೆಯ ಪ್ರಕರಣವಿರಲಿ ಎರಡೂ ವಂಚನೆಯ ಪ್ರಕರಣಗಳಿಗೆ ರಾಜ್ಯ ಬಿಜೆಪಿಯೇ ನೇರ ಹೊಣೆಗಾರನಾಗಿದೆ.

ವಿಶೇಷವೆಂದರೆ ಇನ್ನೂ ಒಂದಿಬ್ಬರು ಟಿಕೆಟ್ ಹೆಸರಿನಲ್ಲಿ ವಂಚಿಸಲ್ಪಟ್ಟಿರುವ ಕುರಿತಂತೆ ಆರೋಪಗಳನ್ನು ಮಾಡಿದ್ದಾರೆ. ಒಂದೊಂದಾಗಿ ಪ್ರಕರಣಗಳು ಹೊರಬರುತ್ತಿರುವುದು ನೋಡಿದರೆ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಕಾಳದಂಧೆಯಲ್ಲಿ ಸಾವಿರಾರು ಕೋಟಿ ರೂ.ವ್ಯವಹಾರ ನಡೆದಿರುವ ಸಾಧ್ಯತೆಗಳಿವೆ. ಕೆಲವರು ತಮ್ಮ ಮಾನ ಮರ್ಯಾದಿಗೆ ಅಂಜಿ ದೂರುಗಳನ್ನು ನೀಡುತ್ತಿಲ್ಲ. ಇನ್ನು ಕೆಲವರು ಸಂಘಪರಿವಾರ ಮತ್ತು ಆರೆಸ್ಸೆಸ್‌ನ ಮುಖಂಡರಿಗೆ ಅಂಜಿ ಬಾಯಿ ಮುಚ್ಚಿ ಕೂತಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದುತ್ವದ ಹೆಸರಿನಲ್ಲಿ ಮೋಸ ಹೋಗಿರುವುದರಿಂದಲೂ ಹಲವರು ಬಾಯಿ ತೆರೆಯಲಾಗದ ಸ್ಥಿತಿಯಲ್ಲಿದ್ದಾರೆ. ಕೆಲವರು ಕಪ್ಪು ಹಣವನ್ನು ಟಿಕೆಟ್‌ಗಾಗಿ ಹೂಡಿಕೆ ಮಾಡಿರುವುದರಿಂದ ಅದರ ಬಗ್ಗೆ ಬಾಯಿತೆರೆದರೆ ತಾವೇ ಜೈಲಿಗೆ ಹೋಗಬೇಕಾಗಬಹುದು ಎನ್ನುವ ಭಯದಲ್ಲಿದ್ದಾರೆ. ಕೆಲವರಿಗಂತೂ ‘‘ಬಹಿರಂಗಪಡಿಸಿದರೆ ನಿಮ್ಮ ಮೇಲೆ ಐಟಿ ದಾಳಿಯಾಗುವ ಸಾಧ್ಯತೆಗಳಿವೆ’’ ಎಂದು ಬೆದರಿಕೆ ಹಾಕಿರುವ ಬಗ್ಗೆಯೂ ವದಂತಿಗಳು ಹರಿದಾಡುತ್ತಿವೆ. ಆದುದರಿಂದ ಟಿಕೆಟ್ ಮೇಲಿನ ಆಸೆಗಾಗಿ ದುಡ್ಡು ಚೆಲ್ಲಿದ ಹಲವು ಉದ್ಯಮಿಗಳು ಬಾಯಿ ಮುಚ್ಚಿ ಕೂತಿದ್ದಾರೆ. ಬಹುಶಃ ಇವರೆಲ್ಲರೂ ಒಂದಾಗಿ ಮಾಧ್ಯಮಗಳ ಮುಂದೆ ಬಂದದ್ದೇ ಆದರೆ, ದೇಶದ ಪ್ರಮುಖ ಹಗರಣಗಳಲ್ಲಿ ಒಂದಾಗಿ ಈ ಟಿಕೆಟ್ ಕಾಳದಂಧೆಯೂ ಗುರುತಿಸಲ್ಪಡಬಹುದು. ಭವಿಷ್ಯದಲ್ಲಿ ರಾಜ್ಯ ಬಿಜೆಪಿಯ ಮೇಲೆ ಈ ಹಗರಣ ಭಾರೀ ಪರಿಣಾಮ ಬೀರುವುದರಲ್ಲಿ ಯಾವ ಅನುಮಾನವೂ ಇಲ್ಲ. ಇಷ್ಟೆಲ್ಲ ಹಣ ಯಾರ ಖಜಾನೆ ಸೇರಿದೆ ಎನ್ನುವುದು ತನಿಖೆಗೆ ಅರ್ಹವಾದ ವಿಷಯ.

ಬಜರಂಗದಳ ನಾಯಕಿ ಚೈತ್ರಾ ಬಂಧನವಾದಾಗ ಆಕೆಯ ಜೊತೆ ಜೊತೆಗೆ ಹಲವು ಆರೋಪಿಗಳ ಹೆಸರುಗಳು ಬಹಿರಂಗವಾದವು. ಸಂಘಪರಿವಾರದೊಂದಿಗೆ ನಂಟು ಹೊಂದಿದ್ದ, ಚಕ್ರವರ್ತಿ ಸೂಲಿಬೆಲೆಯಂತಹ ಹಿಂದುತ್ವವಾದಿಯೊಂದಿಗೆ ವೇದಿಕೆ ಹಂಚಿ ಉದ್ವಿಗ್ನ ಭಾಷಣಗಳನ್ನು ಮಾಡಿ ಕುಖ್ಯಾತನಾಗಿದ್ದ ಸ್ವಾಮೀಜಿಯ ಬಂಧನವಾಗಿದೆ. ಆರೆಸ್ಸೆಸ್ ಮುಖಂಡರೂ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸಂಶಯಗಳು ವ್ಯಕ್ತವಾಗಿದ್ದವು. ಚೈತ್ರಾ ಬಂಧನದ ಬಳಿಕ ತನಿಖೆ ಸರಿಯಾದ ಹಾದಿಯಲ್ಲಿ ಸಾಗಿದ್ದರೆ ಈಗಾಗಲೇ ಬಿಜೆಪಿಯ ಪ್ರಮುಖ ನಾಯಕರು, ಬ್ರಿಗೇಡ್ ಮುಖಂಡರು ಜೈಲುಪಾಲಾಗುವ ಸಾಧ್ಯತೆಗಳಿದ್ದವು. ಆದರೆ ನಿರೀಕ್ಷಿಸಿದಂತೆ ತನಿಖೆ ಮುಂದಕ್ಕೆ ಸಾಗುತ್ತಿಲ್ಲ ಎನ್ನುವ ಆರೋಪ ಬಿಜೆಪಿ ವಲಯದೊಳಗೇ ಕೇಳಿ ಬರುತ್ತಿದೆ. ನಿಜಕ್ಕೂ ಈ ಟಿಕೆಟ್ ಕಾಳ ದಂಧೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಾದರೆ ಈಗಾಗಲೇ ಬಿಜೆಪಿಯ ನಾಯಕರು ಪಕ್ಷದೊಳಗೇ ಈ ಬಗ್ಗೆ ತನಿಖೆ ಘೋಷಣೆ ಮಾಡಬೇಕಾಗಿತ್ತು. ಬಿಜೆಪಿಯ ನಾಯಕರ ಹೆಸರಿನಲ್ಲಿ ಟಿಕೆಟ್ ಮಾರಾಟ ಮಾಡಿರುವುದು ಸ್ವತಃ ಬಿಜೆಪಿಯ ವರ್ಚಸ್ಸಿಗೆ ಭಾರೀ ಕುಂದುಂಟು ಮಾಡಿದೆ. ಆದುದರಿಂದ, ನಿಜವಾದ ಆರೋಪಿಗಳ ಬಂಧನವಾಗುವುದು ಸಂತ್ರಸ್ತರಿಗಿಂತ ಬಿಜೆಪಿಗೇ ಅತ್ಯಗತ್ಯವಾಗಬೇಕಾಗಿತ್ತು. ಆದುದರಿಂದ ತಕ್ಷಣದ ತನಿಖೆಯ ಆಗತ್ಯ ಬಿಜೆಪಿಯದ್ದು. ರಾಜ್ಯ ಸರಕಾರದ ಮೇಲೆ ನಂಬಿಕೆಯಿಲ್ಲದೇ ಇದ್ದರೆ, ಕೇಂದ್ರದ ಸಿಬಿಐ ಮೂಲಕ ಇದನ್ನು ತನಿಖೆಗೊಳಪಡಿಸುವ ಅವಕಾಶ ರಾಜ್ಯ ಬಿಜೆಪಿ ಮುಖಂಡರಿಗಿದೆ.

ಈ ಮೂಲಕ ಬಿಜೆಪಿಯ ನಾಯಕರು ತಮ್ಮ ಪ್ರಾಮಾಣಿಕತೆಯನ್ನು, ವಿಶ್ವಾಸಾರ್ಹತೆಯನ್ನು ರಾಜ್ಯದ ಜನತೆಗೆ ಸಾಬೀತು ಪಡಿಸಬೇಕಾಗಿದೆ. ಒಂದೋ ಬಿಜೆಪಿ ವಂಚನೆಗೈದಿದೆ ಎಂದು ಯಾರು ದೂರು ನೀಡಿದ್ದಾರೆಯೋ ಅವರ ವಿರುದ್ಧ ಬಿಜೆಪಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅಥವಾ ಆಂತರಿಕವಾಗಿ ಒಂದು ತಂಡವನ್ನು ಮಾಡಿ ಆರೋಪಗಳ ಸತ್ಯಾಸತ್ಯತೆ ಹೊರ ಬರುವಂತೆ ಈ ಬಗ್ಗೆ ಸಮಗ್ರ ತನಿಖೆಯೊಂದನ್ನು ಮಾಡಬೇಕು. ಅದಕ್ಕೂ ಮೊದಲು, ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಅವರನ್ನು ಕೆಳಗಿಳಿಸಬೇಕು ಮಾತ್ರವಲ್ಲ ಆರೋಪ ಮುಕ್ತರಾಗುವವರೆಗೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು. ಯಾಕೆಂದರೆ, ಈ ಎಲ್ಲ ಅಕ್ರಮಗಳು ನಡೆದಿರುವುದು ನಳಿನ್ ಕುಮಾರ್ ಕಟೀಲು ಅಧಿಕಾರಾವಧಿಯಲ್ಲಿ ಮತ್ತು ಅಕ್ರಮದಲ್ಲಿ ಭಾಗಿಯಾದ ಆರೋಪಿಗಳಲ್ಲಿ ಬಹುತೇಕರಿಗೆ ದಕ್ಷಿಣ ಕನ್ನಡ ಜಿಲ್ಲೆಯ ನಂಟಿದೆ. ಆದರೆ ಬಿಜೆಪಿ ಈವರೆಗೆ ಈ ಬಗ್ಗೆ ಯಾವುದೇ ತನಿಖೆ ನಡೆಸುವುದಕ್ಕೆ ಆಸಕ್ತಿಯನ್ನು ತೋರಿಸಿಲ್ಲ. ಇದರ ಅರ್ಥ, ಟಿಕೆಟ್ ಕಾಳದಂಧೆಯಲ್ಲಿ ಬಿಜೆಪಿಯ ವರಿಷ್ಠರು ಅಧಿಕೃತವಾಗಿಯೇ ಭಾಗಿಯಾಗಿದ್ದಾರೆ ಎಂದಲ್ಲವೆ? ಬಿಜೆಪಿಯ ವರಿಷ್ಠರು ತಕ್ಷಣ ಸ್ಪಷ್ಟೀಕರಣ ನೀಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News