ಸುಪ್ರೀಂ ಕೋರ್ಟ್ ಅಸಮಾಧಾನ

Update: 2023-11-28 03:52 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ನಕಾರಾತ್ಮಕ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್ ಪದೇ ಪದೇ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದೆ.ಮುಖ್ಯವಾಗಿ ಬಿಜೆಪಿಯೇತರ ರಾಜ್ಯ ಸರಕಾರಗಳಿರುವಲ್ಲಿ ರಾಜ್ಯಪಾಲರು ಅಲ್ಲಿನ ಸರಕಾರಗಳ ಜೊತೆ ಸಂಘರ್ಷಕ್ಕಿಳಿದಿರುವುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಪಂಜಾಬ್ ಮತ್ತು ತಮಿಳುನಾಡುಗಳಲ್ಲಿ ರಾಜ್ಯ ವಿಧಾನಸಭೆ ಅಂಗೀಕರಿಸಿ ಅನುಮೋದನೆಗಾಗಿ ಕಳಿಸಿರುವ ವಿಧೇಯಕಗಳನ್ನು ರಾಜ್ಯಪಾಲರು ಯಾವುದೇ ತೀರ್ಮಾನವನ್ನು ಕೈಗೊಳ್ಳದೆ ತಡೆಹಿಡಿದಿರುವುದು ಸರ್ವೋಚ್ಚ ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾದ ಅಂಶವಾಗಿದೆ. ವಿಧಾನಸಭೆಯ ಸಿಂಧುತ್ವವನ್ನೇ ಅನುಮಾನಿಸುವ ಯಾವುದೇ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟು ಮಾಡಲಿದೆ, ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ ಎಂದು ರಾಜ್ಯಪಾಲರಿಗೆ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ.

ಸಾಮಾನ್ಯವಾಗಿ ಕೇಂದ್ರ ಸರಕಾರದ ಪರೋಕ್ಷ ಸಮ್ಮತಿ ಇಲ್ಲದೆ ಯಾವುದೇ ರಾಜ್ಯದ ರಾಜ್ಯಪಾಲರುಗಳು ಈ ರೀತಿ ವರ್ತಿಸುವುದಿಲ್ಲ. ರಾಜ್ಯಪಾಲರ ಈ ನಕಾರಾತ್ಮಕ ವರ್ತನೆಯ ಬಗ್ಗೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಸಮಾಧಾನ ಪರೋಕ್ಷವಾಗಿ ಕೇಂದ್ರ ಸರಕಾರದ ಬಗೆಗಿನ ಮಡುಗಟ್ಟಿದ ಆಕ್ರೋಶವೆಂದರೆ ಅತಿಶಯೋಕ್ತಿಯಲ್ಲ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳ ರಾಜ್ಯಪಾಲರು ರಾಜ್ಯಗಳ ಚುನಾಯಿತ ಸರಕಾರಗಳ ಜೊತೆ ಕಾದಾಟಕ್ಕೆ ಇಳಿದಿರುವುದು ಸುಪ್ರೀಂ ಕೋರ್ಟ್ ಗಮನಕ್ಕೂ ಬಂದು ಪದೇ ಪದೇ ಎಚ್ಚರ ನೀಡುತ್ತಲೇ ಇದೆ.

ಎರಡನೆಯದಾಗಿ ನ್ಯಾಯಾಧೀಶರ ನೇಮಕದಲ್ಲಿ ಉಂಟಾಗುತ್ತಿರುವ ವಿಳಂಬ ನೀತಿಯಿಂದಾಗಿ ಪ್ರಕರಣಗಳು ಇತ್ಯರ್ಥವಾಗದೆ ಹಾಗೇ ಉಳಿಯುತ್ತಿವೆ. ದೇಶದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಂದ ಪ್ರಕರಣಗಳನ್ನು ಪದೇ ಪದೇ ಮುಂದಕ್ಕೆ ಹಾಕುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವಿಚಾರಣೆಯನ್ನು ಪದೇ ಪದೇ ಮುಂದಿನ ತಾರೀಕಿಗೆ ಹಾಕುವುದು ನ್ಯಾಯದಾನದ ಅಂತಿಮ ಉದ್ದೇಶವನ್ನು ಹಾಳು ಮಾಡುತ್ತದೆ, ಬಡವರಿಗೆ, ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ರೀತಿ ವಿಳಂಬ ಮಾಡುವುದೆಂದರೆ ನ್ಯಾಯದಾನವನ್ನು ನಿರಾಕರಿಸಿದಂತೆ ಎಂದು ಅವರು ಹೇಳಿರುವುದು ಸಮರ್ಥನೀಯವಾಗಿದೆ.

ದೇಶದ ಬಹುತೇಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ನ್ಯಾಯಾಂಗದ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಸುಪ್ರೀಂ ಕೋರ್ಟಿನ ಇನ್ನೊಬ್ಬ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅವರ ಸಮ್ಮುಖದಲ್ಲೇ ಹೇಳಿದ್ದರು. ಪ್ರಸಕ್ತ ದೇಶದಲ್ಲಿ ನ್ಯಾಯಾಧೀಶರ ಸಂಖ್ಯೆ ೨೧ ಸಾವಿರ. ಇದನ್ನು ೪೦ ಸಾವಿರಕ್ಕೆ ಹೆಚ್ಚಿಸಿದರೆ ಪ್ರಕರಣಗಳ ಇತ್ಯರ್ಥ ತ್ವರಿತವಾಗಿ ಆಗುತ್ತದೆ. ಈ ಬಗ್ಗೆ ಕಾನೂನು ಆಯೋಗ ಶಿಫಾರಸು ಮಾಡಿದರೂ ಸರಕಾರ ಕಿವಿಯ ಮೇಲೆ ಹಾಕಿಕೊಳ್ಳುತ್ತಿಲ್ಲ. ಇದು ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ.

ದೇಶದ ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ದೊಡ್ಡದಿದೆ. ಐದು ಕೋಟಿಗೂ ಹೆಚ್ಚು ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇವೆ ಎಂದು ಕೇಂದ್ರ ಕಾನೂನು ಮಂತ್ರಿ ಅರ್ಜುನರಾಮ್ ಮೇಘವಾಲ್ ಅವರು ಸಂಸತ್ತಿನಲ್ಲಿ ಹೇಳಿದ್ದರು.ಇವುಗಳು ಇತ್ಯರ್ಥವಾಗದಿರುವುದಕ್ಕೆ ಕಾರಣ ನ್ಯಾಯಾಧೀಶರ ಕೊರತೆಯಿಂದಾಗಿ ಪ್ರಕರಣಗಳನ್ನು ಪದೇ ಪದೇ ಮುಂದಕ್ಕೆ ಹಾಕುವುದಲ್ಲದೆ ಬೇರೇನೂ ಅಲ್ಲ. ಹೀಗಾಗಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ

ನ್ಯಾಯಾಲಯಗಳಲ್ಲಿ ಎಲ್ಲ ಹಂತಗಳಲ್ಲಿ ನ್ಯಾಯಾಧೀಶರ ಕೊರತೆ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಸದ್ಯ ಭಾರತದಲ್ಲಿ ೬೦೧ ಹೈಕೋರ್ಟ್ ನ್ಯಾಯಮೂರ್ತಿಗಳಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಇರುವ ನ್ಯಾಯಾಧೀಶರ ಸಂಖ್ಯೆ ೨೫. ಹೀಗಾಗಿ ಉನ್ನತ ನ್ಯಾಯಾಲಯಗಳಲ್ಲಿ ಇರುವ ನ್ಯಾಯಾಧೀಶರ ಒಟ್ಟು ಸಂಖ್ಯೆ ೬೨೬. ದೇಶದ ೧೨೫ ಕೋಟಿ ಜನಸಂಖ್ಯೆಗೆ ಇಷ್ಟು ನ್ಯಾಯಾಧೀಶರು ಸಾಕಾಗುತ್ತಾರೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳ ವಿಚಾರಣೆ ವಿಳಂಬವಾಗುವುದು ಮತ್ತು ಪ್ರಕರಣಗಳನ್ನು ಮುಂದಿನ ತಾರೀಕಿಗೆ ಹಾಕುವುದು ಸಾಮಾನ್ಯ. ಪ್ರಕರಣಗಳ ಕೂಲಂಕಷ ಪರಿಶೀಲನೆಗೆ ಅನುಕೂಲವಾಗಲೆಂದು ಮುಂದಕ್ಕೆ ಹಾಕಿದರೆ ಅಭ್ಯಂತರವಿಲ್ಲ. ಆದರೆ ಈಗ ಪ್ರಕರಣಗಳನ್ನು ಮುಂದಕ್ಕೆ ಹಾಕುತ್ತಿರುವುದು ನ್ಯಾಯಾಧೀಶರ ಕೊರತೆಯಿಂದ. ಇದಕ್ಕೆ ಸರಕಾರ ಅವಕಾಶ ಮಾಡಿ ಕೊಡಬಾರದು.

ನ್ಯಾಯದಾನ ವಿಳಂಬದಿಂದಾಗಿ ಸಾವಿರಾರು ಕೈದಿಗಳು ಜೈಲುಗಳಲ್ಲಿ ಯಾತನೆ ಅನುಭವಿಸುತ್ತಿದ್ದಾರೆ. ಇದು ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆ ತರುವುದಿಲ್ಲ. ಕಾರಣ ಖಾಲಿ ಉಳಿದ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲ ಹೆಚ್ಚಾದ ಜನಸಂಖ್ಯೆಗೆ, ಪ್ರಕರಣಗಳಿಗೆ ಅನುಗುಣವಾಗಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಬೇಕು, ಅಂದರೆ ತುರ್ತಾಗಿ ನ್ಯಾಯಾಧೀಶರ ನೇಮಕ ಮಾಡಿಕೊಳ್ಳಲು ಸರಕಾರ ಕ್ರಮ ಕೈಗೊಳ್ಳಬೇಕು.

ದೇಶದಲ್ಲಿ ೧೦ ಲಕ್ಷ ಜನರಿಗೆ ೫೦ ನ್ಯಾಯಾಧೀಶರು ಇರಬೇಕೆಂದು ಈ ಹಿಂದೆ ಪ್ರಣಬ್ ಮುಖರ್ಜಿ ಅವರ ನೇತೃತ್ವದ ಸ್ಥಾಯಿ ಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಸಹಮತವನ್ನು ವ್ಯಕ್ತಪಡಿಸಿತ್ತು. ಹೀಗಾಗಿ ಪ್ರಕರಣಗಳ ವಿಚಾರಣೆ ವಿಳಂಬವಾಗಿ ಜನಸಾಮಾನ್ಯರು ಕೋರ್ಟ್‌ಗಳಿಗೆ ಅಲೆದಾಡುವಂತಾಗಿದೆ. ಕೇಂದ್ರ ಸರಕಾರ ಈಗಲಾದರೂ ಎಚ್ಚೆತ್ತು ದೇಶದ ಎಲ್ಲ ಹಂತಗಳಲ್ಲಿ ನ್ಯಾಯಾಧೀಶರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News