ತನ್ನ ಬುಡಕ್ಕೆ ತಾನೇ ಕೊಡಲಿ ಇಡುತ್ತಿರುವ ಬಾರ್ ಕೌನ್ಸಿಲ್

Update: 2024-04-01 05:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪಟ್ಟ ಭದ್ರ ಹಿತಾಸಕ್ತಿ ಗುಂಪುಗಳು ನ್ಯಾಯಾಲಯದ ಮೇಲೆ ಒತ್ತಡಗಳನ್ನು ಹೇರುತ್ತಿವೆ ಮತ್ತು ಕ್ಷುಲ್ಲಕ ತರ್ಕ ಹಾಗೂ ಹಳಸಿದ ರಾಜಕೀಯ ಅಜೆಂಡಾಗಳ ಆಧಾರದಲ್ಲಿ ನ್ಯಾಯಾಲಯಗಳ ಮಾನಹಾನಿಗೆ ಯತ್ನಿಸುತ್ತಿವೆ ಎಂದು ಆರೋಪಿಸಿ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಸುಮಾರು 600ಕ್ಕೂ ಅಧಿಕ ವಕೀಲರು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪಟ್ಟ ಭದ್ರ ಹಿತಾಸಕ್ತಿಗಳ ಈ ದಾಳಿಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ದೃಢವಾಗಿ ನಿಲ್ಲಬೇಕು ಮತ್ತು ನ್ಯಾಯಾಲಯಗಳನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮುಖ್ಯ ನ್ಯಾಯಮೂರ್ತಿಗಳನ್ನು ಆಗ್ರಹಿಸಿದ್ದಾರೆ. ‘‘ಕೆಲವು ರಾಜಕೀಯ ಶಕ್ತಿಗಳು ತಮ್ಮ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಧೀಶರ ಮೇಲೆ ಪ್ರಭಾವ, ಒತ್ತಡಗಳನ್ನು ಹೇರಲು ಪ್ರಯತ್ನಿಸುತ್ತಿವೆ. ಕೆಲವು ಪ್ರಕರಣಗಳನ್ನು ನಿರ್ದಿಷ್ಟ ರೀತಿಯಲ್ಲಿ ನಿರ್ಣಯಿಸುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಡ ಹಾಕುತ್ತಿವೆ’’ಎನ್ನುವುದು ಈ 600ಕ್ಕೂ ಅಧಿಕ ವಕೀಲರ ಆತಂಕವಾಗಿದೆ. ನ್ಯಾಯಾಲಯ ರಾಜಕೀಯ ಶಕ್ತಿಗಳಿಂದ, ಮುಖ್ಯವಾಗಿ ಕೇಂದ್ರ ಸರಕಾರದಿಂದ ಬೇರೆ ಬೇರೆ ರೀತಿಯಲ್ಲಿ ಒತ್ತಡಗಳನ್ನು ಎದುರಿಸುತ್ತಿರುವ ಆತಂಕ ಇಂದು ನಿನ್ನೆಯದಲ್ಲ. ಹಲವು ಸಂವಿಧಾನ ತಜ್ಞರು, ಹಿರಿಯ ನಿವೃತ್ತ ನ್ಯಾಯಾಧೀಶರು, ವಕೀಲರು ಇದರ ವಿರುದ್ಧ ಧ್ವನಿಯೆತ್ತಿದ್ದಾರೆ. ಆದರೆ ಈ ಬಾರಿ ಏಕಾಏಕಿ 600ಕ್ಕೂ ಅಧಿಕ ವಕೀಲರು ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರ ಮಹತ್ವವನ್ನು ಪಡೆಯಲು ಮುಖ್ಯ ಕಾರಣ, ಆ ಪತ್ರವನ್ನು ತಕ್ಷಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಂಚಿಕೊಂಡಿರುವುದು. ಅಷ್ಟೇ ಅಲ್ಲ, ಆ ಪತ್ರವನ್ನು ಉಲ್ಲೇಖಿಸಿ ವಿರೋಧ ಪಕ್ಷಗಳನ್ನು ಅದರಲ್ಲೂ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವುದು. ಅಂದರೆ ಪತ್ರ ಬರೆದಿರುವ ವಕೀಲರ ಪ್ರಕಾರ ಸುಪ್ರೀಂಕೋರ್ಟ್‌ನ ಮೇಲೆ ಒತ್ತಡಗಳನ್ನು ಹೇರುತ್ತಿರುವ ಹಿತಾಸಕ್ತಿಗಳು ವಿರೋಧಪಕ್ಷಗಳಲ್ಲಿದ್ದಾರೆ. ವಿರೋಧ ಪಕ್ಷಗಳ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ತೀರ್ಪನ್ನು ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರು ಈ ಒತ್ತಡಗಳಿಗೆ ಮಣಿಯಬಾರದು ಎಂದು ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಕೇಂದ್ರ ಸರಕಾರದ ಸರ್ವಾಧಿಕಾರದ ವಿರುದ್ಧ, ಅದು ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ ಹಲವು ಹಿರಿಯರು ಸರಕಾರಕ್ಕೆ ಪತ್ರ ಬರೆದಾಗ ಕಂಡೂ ಕಾಣದಂತೆ ಇದ್ದ ಪ್ರಧಾನಿ ಮೋದಿಯವರು, ಏಕಾಏಕಿ ಈ ವಕೀಲರ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡದ್ದು, ‘ಕುಂಬಳ ಕಾಯಿ ಕಳ್ಳ ಎಂದಾಗ ಹೆಗಲು ಮುಟ್ಟಿ ನೋಡಿಕೊಂಡ’ ಎಂಬಂತಾಗಿದೆ.

ಚುನಾವಣೆ ಘೋಷಣೆಯಾದ ಬೆನ್ನಿಗೇ ವಿರೋಧ ಪಕ್ಷಗಳ ನಾಯಕರ ಕೈ, ಕಾಲುಗಳನ್ನು ಕಟ್ಟಿ ಹಾಕಲು ವಿವಿಧ ತನಿಖಾ ಸಂಸ್ಥೆಗಳ ಜೊತೆಗೆ ನ್ಯಾಯಾಂಗವನ್ನು ಕೂಡ ಕೇಂದ್ರ ಸರಕಾರ ದುರುಪಯೋಗಗೊಳಿಸಲು ಯತ್ನಿಸುತ್ತಿದ್ದು, ವಿರೋಧ ಪಕ್ಷದ ನಾಯಕರು ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆಕ್ರೋಶವನ್ನೇ ನ್ಯಾಯಾಂಗದ ಮೇಲಿನ ಒತ್ತಡ ಎಂದು ಈ ವಕೀಲರು ನಂಬಿಸಲು ಯತ್ನಿಸುತ್ತಿದ್ದಾರೆ. ಒಂದು ರೀತಿಯಲ್ಲಿ, ಈ ಪತ್ರದ ಮೂಲಕ ಕೇಂದ್ರ ಸರಕಾರದ ಪರವಾಗಿ, ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಈ 600ಕ್ಕೂ ಅಧಿಕ ವಕೀಲರು ಒತ್ತಡವನ್ನು ಹೇರಿದ್ದಾರೆ. ಪ್ರಧಾನಿ ಮೋದಿಯ ಪರವಾಗಿ ವಕಾಲತ್ತು ವಹಿಸಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ವಿರೋಧ ಪಕ್ಷದ ನಾಯಕರ ಮೇಲಿರುವ ಪ್ರಕರಣದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ಮೋದಿಯವರು ಬರೆದ ಪತ್ರಕ್ಕೆ ಈ 600 ವಕೀಲರು ಸಹಿಯನ್ನು ಹಾಕಿದ್ದಾರೆ. ವಕೀಲರ ಮೂಲಕ ತಾನೇ ಬರೆಸಿದ ಪತ್ರವನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ, ಕಾಂಗ್ರೆಸನ್ನು ನಿಂದಿಸಿದ್ದಾರೆ. ನ್ಯಾಯಾಧೀಶರ ನೇಮಕ, ವರ್ಗಾವಣೆಯ ಸಂದರ್ಭದಲ್ಲಿ ಕೊಲಿಜಿಯಂ ನಿರ್ಧಾರಗಳನ್ನು ಕಾಲಕಸ ಮಾಡಿ, ತನ್ನ ನಿರ್ಧಾರಗಳನ್ನು ನ್ಯಾಯ ವ್ಯವಸ್ಥೆಯ ಮೇಲೆ ಹೇರುತ್ತಿರುವ ಕೇಂದ್ರ ಸರಕಾರದ ವಿರುದ್ಧ ಮೌನವಾಗಿರುವ ಈ ವಕೀಲರು, ಸರಕಾರದ ಪರವಾಗಿ ಸುಪ್ರೀಂಕೋರ್ಟ್‌ಗೆ ಬುದ್ಧಿವಾದ ಹೇಳಲು ಹೊರಟಿರುವುದು ಅತ್ಯಂತ ವಿಷಾದನೀಯವಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಶಾಸಕಾಂಗ ವ್ಯವಸ್ಥೆಯ ಪದತಳಕ್ಕೆ ಒಪ್ಪಿಸಲು ಹೊರಟಿರುವ ಈ ವಕೀಲರೇ ನ್ಯಾಯ ವ್ಯವಸ್ಥೆಯ ಮುಂದಿರುವ ಅತಿ ದೊಡ್ಡ ಆತಂಕವಾಗಿದ್ದಾರೆ.

ಪ್ರಧಾನಿ ಮೋದಿಯವರು ನಿಜಕ್ಕೂ ನ್ಯಾಯಾಂಗದ ಬಗ್ಗೆ ಕಾಳಜಿ ಹೊಂದಿದ್ದಾರಾದರೆ, ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ನ್ಯಾಯಾಧೀಶರಾಗಿದ್ದ ಬಿ. ಎಚ್. ಲೋಯಾ ಅವರ ನಿಗೂಢ ಸಾವಿನ ತನಿಖೆಯಾಗಬೇಕು ಎಂದು ಮುಂಬೈ ವಕೀಲರ ಸಂಘ ಒತ್ತಾಯಿಸಿದಾಗ ಅದಕ್ಕೆ ಸ್ಪಂದಿಸಬೇಕಾಗಿತ್ತು. ಸರಕಾರದ ಹಲವು ನಿಲುವುಗಳನ್ನು ವಿರೋಧಿಸಿ ಈ ದೇಶದ ಪತ್ರಕರ್ತರು, ನಿವೃತ್ತ ಯೋಧರು, ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ನೇರವಾಗಿ ಪ್ರಧಾನಿ ಮೋದಿಯವರಿಗೇ ಪತ್ರಗಳನ್ನು ಬರೆದಿದ್ದಾರೆ, ಮನವಿಗಳನ್ನು ನೀಡಿದ್ದಾರೆ. ಈ ಪತ್ರವನ್ನು ಗಮನಿಸಿ ಸಣ್ಣ ಪ್ರತಿಕ್ರಿಯೆಯನ್ನೂ ನೀಡಿರದ ಮೋದಿಯವರು, ಇದೀಗ ಸಾಳ್ವೆ ನೇತೃತ್ವದಲ್ಲಿ ವಕೀಲರು ಬರೆದ ಪತ್ರವನ್ನು ಕಾಳಜಿಯಿಂದ ಹಂಚಿಕೊಂಡಿರುವುದು ವಿಪರ್ಯಾಸವಾಗಿದೆ. ಹಾಗೆ ನೋಡಿದರೆ, ಈ ಪತ್ರವನ್ನು ಓದಿದಾಕ್ಷಣ, ವಕೀಲರು ಉಲ್ಲೇಖಿಸಿದ ಪಟ್ಟಭದ್ರ ಹಿತಾಸಕ್ತಿಯ ಗುಂಪಾಗಿ ನಮ್ಮ ಕಣ್ಣೆದುರು ನಿಲ್ಲುವುದು ಪ್ರಧಾನಿ ಮೋದಿ ಮತ್ತು ಅವರ ಸಹೋದ್ಯೋಗಿಗಳು. ಅಂತಹದೊಂದು ತಪ್ಪು ಕಲ್ಪನೆ ಬೇಡ ಎನ್ನುವ ಕಾರಣಕ್ಕೆ ಪ್ರಧಾನಿ ಮೋದಿಯವರು ಪತ್ರವನ್ನು ತಕ್ಷಣವೇ ಹಂಚಿ, ಕಾಂಗ್ರೆಸ್ ಹೆಸರನ್ನು ಉಲ್ಲೇಖಿಸಿರಬೇಕು.

ಇತ್ತೀಚೆಗೆ ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ ಎಲ್ಲ ಒತ್ತಡಗಳನ್ನು ಮೀರಿ ನೀಡಿರುವ ತೀರ್ಪು ಬಾರ್ ಕೌನ್ಸಿಲ್‌ನೊಳಗಿರುವ ವಕೀಲರ ನಿದ್ದೆಗೆಡಿಸಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಪತ್ರಬರೆದವರಲ್ಲಿ ಬಹುತೇಕರು ಬಿಜೆಪಿಯ ಜೊತೆಗೆ ಅಧಿಕೃತವಾಗಿ ಗುರುತಿಸಿಕೊಂಡವರು. ಪ್ರಧಾನಿಯವರು ಈ ಪತ್ರವನ್ನು ಹಂಚಿಕೊಂಡ ಕಾರಣಕ್ಕಾಗಿ ಮಾತ್ರ ಅದು ಮಹತ್ವವನ್ನು ಪಡೆಯಿತು. ಇಲ್ಲವಾದರೆ ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ನ್ಯಾಯಾಲಯದ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ಒತ್ತಡ ಹೇರುತ್ತಿರುವುದರ ಬಗ್ಗೆ ಪ್ರಧಾನಿ ನಿಜಕ್ಕೂ ಆತಂಕವನ್ನು ಹೊಂದಿದ್ದಾರೆ ಎಂದಾದರೆ ಮೊತ್ತ ಮೊದಲು, ಕೇಂದ್ರ ಸರಕಾರದ ಮೇಲಿರುವ ಆರೋಪಗಳಿಗೆ ಅವರು ಸ್ಪಷ್ಟೀಕರಣ ನೀಡಬೇಕು. ಕೊಲಿಜಿಯಂ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರ ಹಿಂಜರಿಕೆ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಈ ಹಿಂದೆ ಸುಪ್ರೀಂಕೋರ್ಟ್ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಸ್ತಕ್ಷೇಪ ಆರೋಪಗಳಿಗೆ ಮೋದಿಯವರು ಸ್ಪಷ್ಟೀಕರಣ ನೀಡಲಿ. ಕೇಂದ್ರ ಸರಕಾರದ ಪರವಾಗಿ ಹಲವು ಮಹತ್ವದ ತೀರ್ಪುಗಳನ್ನು ನೀಡಿದ ಮುಖ್ಯ ನ್ಯಾಯಾಧೀಶರು ನಿವೃತ್ತಿಯ ಬಳಿಕ ಕೇಂದ್ರ ಸರಕಾರದ ಮಹತ್ವದ ಹುದ್ದೆಗಳನ್ನು ತನ್ನದಾಗಿಸಿಕೊಂಡರು. ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರಿಗೆ ಆಮಿಷಗಳನ್ನು ನೀಡಿ ತೀರ್ಪುಗಳನ್ನು ತನ್ನ ಪರವಾಗಿಸುತ್ತಿದೆ ಎನ್ನುವ ಆರೋಪಗಳಿಗೂ ಮೋದಿಯವರು ಉತ್ತರಿಸಬೇಕು. ನಿವೃತ್ತ ನ್ಯಾಯಮೂರ್ತಿಗಳನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದು, ರಾಜ್ಯಪಾಲ ಹುದ್ದೆಗಳಿಗೆ ನೇಮಿಸುವುದು, ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಇವೆಲ್ಲವೂ ನ್ಯಾಯಾಧೀಶರ ತೀರ್ಪಿನ ಮೇಲೆ ಪರಿಣಾಮವನ್ನು ಬೀರುವುದಿಲ್ಲವೆ? ಈ ಬಗ್ಗೆ ಈ ವಕೀಲರು ಯಾಕೆ ಮೌನವಾಗಿದ್ದಾರೆ? ಅಥವಾ ಈ ಪತ್ರ ಬರೆಯುವ ಮೂಲಕ, ಕೇಂದ್ರ ಸರಕಾರದ ಉನ್ನತ ಹುದ್ದೆಗಳಿಗೆ ಪರೋಕ್ಷವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆಯೆ?

ಬಾರ್ ಕೌನ್ಸಿಲ್ ರಾಜಕೀಯವಾಗಿ ಸ್ಪಷ್ಟವಾಗಿ ಧ್ರುವೀಕರಣಗೊಂಡಿರುವುದು ಈ ಪತ್ರದಿಂದ ಬಟಾ ಬಯಲಾಗಿದೆ ಎಂದು ಹಿರಿಯ ನ್ಯಾಯವಾದಿಗಳೇ ಅಭಿಪ್ರಾಯ ಪಟ್ಟಿದ್ದಾರೆ. ಅಖಿಲಭಾರತೀಯ ಅಧಿವಕ್ತ ಪರಿಷತ್ ಎನ್ನುವ ಆರೆಸ್ಸೆಸ್ ಘಟಕ ವಕೀಲರನ್ನು ನ್ಯಾಯಾಂಗದ ವಿರುದ್ಧವೇ ಎತ್ತಿ ಕಟ್ಟಲು ಯಶಸ್ವಿಯಾಗುತ್ತಿರುವುದನ್ನು ಇದು ಹೇಳುತ್ತಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭುತ್ವ ಒತ್ತಡ ಹೇರುವ ಸಂದರ್ಭದಲ್ಲಿ ಅದನ್ನು ಸಂಘಟಿತವಾಗಿ ಎದುರಿಸಬೇಕಾಗಿರುವ ನ್ಯಾಯವಾದಿಗಳೇ ಇದೀಗ ಪ್ರಭುತ್ವದ ಪರವಾಗಿ ಸುಪ್ರೀಂಕೋರ್ಟ್‌ನ ಮೇಲೆ ಒತ್ತಡ ಹೇರಲು ಹೊರಟಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News