ಬಿಜೆಪಿ-ಜೆಡಿಎಸ್ ಮೈತ್ರಿಯೆನ್ನುವ ಪ್ರಹಸನ

Update: 2023-09-09 04:59 GMT

Photo: twitter.com/ANI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೈತ್ರಿಯಿಲ್ಲದೆ ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ. ಒಂದೋ ನೇರ ಮೈತ್ರಿ, ಇಲ್ಲವೇ ಒಳ ಮೈತ್ರಿಯ ಮೂಲಕ ಎಲ್ಲ ಚುನಾವಣೆಗಳಲ್ಲೂ ಅದು ಜೀವ ಉಳಿಸಿಕೊಂಡಿದೆ. ಅನೇಕ ಸಂದರ್ಭಗಳಲ್ಲಿ ಅದು ಇನ್ನೊಂದು ಪಕ್ಷದ ಸೋಲಿನಲ್ಲೇ ತನ್ನ ಗೆಲುವನ್ನು ಕಾಣುತ್ತಾ ಬಂದಿದೆ. ಚುನಾವಣೆಗಳಲ್ಲಿ ಅತಂತ್ರ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಯಶಸ್ವಿಯಾದಾಗ ಮಾತ್ರ ತನಗೆ ಅಧಿಕಾರವೆನ್ನುವುದನ್ನು ಕಂಡುಕೊಂಡಿರುವ ಜೆಡಿಎಸ್ ಪಾಲಿಗೆ ಮೈತ್ರಿ ಮತ್ತು ಸಮಯಸಾಧಕತನದ ನಡುವಿನ ಅಂತರ ತುಂಬಾ ತೆಳುವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಾದ ತೀವ್ರ ಮುಖಭಂಗದಿಂದ ಚಡಪಡಿಸುತ್ತಿರುವ ಜೆಡಿಎಸ್, ತನ್ನನ್ನು ಸೋಲಿಸಿದ ನಾಡಿನ ವಿರುದ್ಧ ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳಬಹುದು ಎನ್ನುವ ಜಿದ್ದಿಗೆ ಬಿದ್ದಂತಿದೆ. ಚುನಾವಣಾ ಫಲಿತಾಂಶ ಹೊರ ಬಿದ್ದ ದಿನದಿಂದ ಹಲವು ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿರುವ ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜೊತೆಗೆ ಮೈತ್ರಿ ಸೂಚನೆಯನ್ನು ಈ ಹಿಂದೆಯೇ ನೀಡಿದ್ದರು. ಆದರೆ ಕೆಲವೇ ದಿನಗಳಲ್ಲಿ ‘‘ಬಿಜೆಪಿಯೊಂದಿಗೆ ಮೈತ್ರಿ ಮಾಡುವ ದಾರಿದ್ರ್ಯ ನಮಗೆ ಬಂದಿಲ್ಲ’’ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದರು. ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜೆಡಿಎಸ್-ಬಿಜೆಪಿ ಮೈತ್ರಿ ಸುದ್ದಿಯಲ್ಲಿದೆ. ಉಭಯ ಪಕ್ಷಗಳ ವರಿಷ್ಠರಾಗಿರುವ ಅಮಿತ್ ಶಾ ಮತ್ತು ದೇವೇಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಯಡಿಯೂರಪ್ಪ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆಯೂ ಮಾತುಕತೆಯಲ್ಲಿ ನಿರ್ಧಾರವಾಗಿದೆಯಂತೆ.

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್‌ನೊಂದಿಗೆ ಮೈತ್ರಿ ಮಾತುಕತೆ ನಡೆಸಲು ಬಿಜೆಪಿ ವರಿಷ್ಠರು ಆಸಕ್ತಿ ತೋರಿಸಿದಷ್ಟು, ತನ್ನದೇ ಪಕ್ಷದೊಳಗೆ ಮೈತ್ರಿಯನ್ನು ಮೂಡಿಸಿ ಅವರನ್ನು ಒಟ್ಟಾಗಿಸಲು ಆಸಕ್ತಿಯನ್ನು ತೋರಿಸದೇ ಇರುವುದು ವಿಪರ್ಯಾಸವಾಗಿದೆ.

ರಾಜ್ಯ ಬಿಜೆಪಿಯು ಇನ್ನೂ ತನ್ನ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಕಾರಣಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ರಾಜ್ಯ ಬಿಜೆಪಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ರಾಜ್ಯಾಧ್ಯಕ್ಷರ ಅವಧಿ ಮುಕ್ತಾಯಗೊಂಡಿದೆಯಾದರೂ, ಇನ್ನೂ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠರಿಗೆ ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿ ಸಂಪೂರ್ಣ ಚದುರಿ ಬಿದ್ದಿದೆ. ಅವುಗಳನ್ನು ಮರು ಸಂಘಟಿಸುವ ಯಾವ ಪ್ರಯತ್ನವೂ ನಡೆದಿಲ್ಲ. ವಿರೋಧ ಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಪ್ರಕ್ರಿಯೆಗೆ ವರಿಷ್ಠರು ಆಸಕ್ತಿಯನ್ನು ತೋರಿಸಿದ್ದೇ ಆದಲ್ಲಿ ಬಿಜೆಪಿಯೊಳಗೆ ಭಿನ್ನಮತ ಮತ್ತೆ ಭುಗಿಲೇಳಬಹುದು ಎನ್ನುವ ಭಯ ಅವರಿಗಿದೆ. ಕಳೆದ ಚುನಾವಣೆಯಲ್ಲಿ ಆರೆಸ್ಸೆಸ್‌ನ ಹಸ್ತಕ್ಷೇಪದಿಂದ ಆಗಿರುವ ಅನಾಹುತಗಳು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ ಎನ್ನುವ ಆತಂಕದಿಂದ ವಿರೋಧ ಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆಯನ್ನು ಮುಂದೆ ಹಾಕುತ್ತಾ ಬರುತ್ತಿದ್ದಾರೆ. ಇವುಗಳ ನಡುವೆ ಆರೆಸ್ಸೆಸ್ ಮುಖಂಡ ಬಿ. ಎಲ್. ಸಂತೋಷ್ ನೇತೃತ್ವದಲ್ಲಿ ಒಂದು ಸಭೆಯನ್ನು ನಡೆಸುವ ಪ್ರಯತ್ನವಾಯಿತಾದರೂ, ಬಿಜೆಪಿಯ ಹಲವು ಮುಖಂಡರು ಆ ಸಭೆಗೆ ಗೈರು ಹಾಜರಾಗುವ ಮೂಲಕ, ಸಂತೋಷ್ ನೇತೃತ್ವಕ್ಕೆ ತಮ್ಮ ಅಸಮ್ಮತಿಯನ್ನು ಪ್ರದರ್ಶಿಸಿದರು. ಕೇಂದ್ರ ವರಿಷ್ಠರು ತುರ್ತಾಗಿ ಬಿಜೆಪಿಯೊಳಗೆ ಮೈತ್ರಿಯನ್ನು ಸಾಧಿಸಲು ಮಾತುಕತೆ ನಡೆಸಬೇಕಾಗಿದೆ. ದುರದೃಷ್ಟ ವಶಾತ್ ಅವರು, ಜೆಡಿಎಸ್‌ಜೊತೆಗೆ ಮೈತ್ರಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ.

ಸದ್ಯಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿರುವುದು ನಳಿನ್ ಕುಮಾರ್ ಕಟೀಲು. ಕಳೆದ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಿದ್ದರೂ, ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ವಾತಾವರಣ ಬಿಜೆಪಿಯಲ್ಲಿ ಇಲ್ಲದ ಕಾರಣ, ತಮ್ಮ ರಾಜೀನಾಮೆಯನ್ನು ಹಿಂದೆಗೆದುಕೊಂಡಿದ್ದರು. ಆದರೆ ರಾಜ್ಯಾಧ್ಯಕ್ಷ ಸ್ಥಾನದಿಂದ ಅಧಿಕೃತ ಹೇಳಿಕೆ ನೀಡುವುದನ್ನು ಅವರು ನಿಲ್ಲಿಸಿದ್ದಾರೆ. ‘ರಾಜಕೀಯದಿಂದ ನಿವೃತ್ತನಾಗಿದ್ದೇನೆ’ ಎಂದು ಅಧಿಕೃತವಾಗಿ ಈಗಾಗಲೇ ಘೋಷಿಸಿಕೊಂಡಿರುವ ಯಡಿಯೂರಪ್ಪ ಅವರು ಅಗತ್ಯಬಿದ್ದಾಗ ರಾಜ್ಯಾಧ್ಯಕ್ಷನ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಜೆಡಿಎಸ್‌ನೊಂದಿಗೆ ಮಾಡಿಕೊಂಡ ಮೈತ್ರಿಯ ಬಗ್ಗೆ ಸುದ್ದಿಗಾರರಿಗೆ ತಿಳಿಸಿರುವುದೂ ಯಡಿಯೂರಪ್ಪ ಅವರೇ. ಹಾಗಾದರೆ, ಯಡಿಯೂರಪ್ಪ ಅವರನ್ನು ವರಿಷ್ಠರು ಮತ್ತೆ ರಾಜ್ಯ ರಾಜಕೀಯದಲ್ಲಿ ಸಕ್ರಿಯಗೊಳಿಸಲಿದ್ದಾರೆಯೆ? ಎನ್ನುವ ಪ್ರಶ್ನೆಯೂ ತಲೆಯೆತ್ತುತ್ತದೆ. ಬಿಜೆಪಿಯೊಳಗೆ ಬ್ರಾಹ್ಮಣ್ಯ-ಲಿಂಗಾಯತ, ಹಿರಿಯರು-ಯುವಕರು, ಆರೆಸ್ಸೆಸ್-ಆರೆಸ್ಸೆಸೇತರರು, ಹೊರಗಿನವರು-ಒಳಗಿನವರು ಎನ್ನುವ ಬಿರುಕು ಎಷ್ಟರಮಟ್ಟಿಗೆ ಇದೆ ಎಂದರೆ ವರಿಷ್ಠರು ತೆಗೆದುಕೊಳ್ಳುವ ಸಣ್ಣ ನಿರ್ಧಾರವೂ ಬಿಜೆಪಿಯನ್ನು ಹಲವು ಚೂರಾಗಿಸಬಹುದು. ಆದುದರಿಂದ, ಲೋಕಸಭೆಯಲ್ಲಿ ಬಿಜೆಪಿ ಯಾವ ಪಕ್ಷದೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುತ್ತದೆ ಎನ್ನುವುದಕ್ಕಿಂತ ಮುಂಚೆ, ಬಿಜೆಪಿಯೊಳಗೇ ಮೈತ್ರಿಯನ್ನು ಮೂಡಿಸುವ ಕೆಲಸವಾಗಬೇಕಾಗಿದೆ.

ಅಥವಾ ಮುಂದಿನ ಲೋಕಸಭೆಯಲ್ಲಿ ಬಿಜೆಪಿಯು ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತದೆ ಎಂದು ಜನರು ಭಾವಿಸಬೇಕಾಗುದೆ. ಯಾಕೆಂದರೆ ರಾಜ್ಯದಲ್ಲಿ ಬಿಜೆಪಿಯು ನಿರ್ವಹಿಸಬೇಕಾದ ಪಾತ್ರವನ್ನು ಕುಮಾರಸ್ವಾಮಿಯವರು ನಿರ್ವಹಿಸುತ್ತಾ ಬರುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಟೀಕೆಗಳನ್ನು ಮಾಡಲು ಬಿಜೆಪಿಯ ರಾಜ್ಯ ನಾಯಕರು ಹಿಂಜರಿಯುತ್ತಿದ್ದರೆ, ಕುಮಾರಸ್ವಾಮಿಯವರು ಪದೇ ಪದೇ ಪತ್ರಿಕಾಗೋಷ್ಠಿಗಳನ್ನು ಮಾಡುತ್ತಾ ಆರೋಗ್ಯ ಕೆಡಿಸಿಕೊಂಡಿದ್ದಾರೆ. ಬಹುಶಃ ಈ ಕಾರಣಕ್ಕಾಗಿಯೇ ಬಿಜೆಪಿಯ ದಿಲ್ಲಿ ವರಿಷ್ಠರು ತಮ್ಮ ಪಕ್ಷದೊಳಗಿರುವ ನಾಯಕರನ್ನು ಕೈ ಬಿಟ್ಟು ಜೆಡಿಎಸ್ ಕಡೆಗೆ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಜೆಡಿಎಸ್ ರಾಜ್ಯದಲ್ಲಿ ತನ್ನ ಜಾತ್ಯತೀತ ಮತದಾರರನ್ನು ಕಳೆದುಕೊಳ್ಳುತ್ತಿರುವುದರಿಂದ, ಅದೀಗ ರಾಜ್ಯದ ಒಕ್ಕಲಿಗ ಮತಗಳನ್ನು ಸಂಘಟಿಸಿ ಬಿಜೆಪಿಗೆ ವರ್ಗಾಯಿಸುವ ಭರವಸೆಯನ್ನು ಅಮಿತ್ ಶಾ ಅವರಿಗೆ ನೀಡಿ ನಾಲ್ಕು ಲೋಕಸಭಾ ಸ್ಥಾನಗಳನ್ನು ಜೇಬಿಗಿಳಿಸಲು ಮುಂದಾಗಿದೆ. ಆ ನಾಲ್ಕು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಅವರದೇ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಸಿದ್ಧರಾಗಿ ನಿಂತಿದ್ದಾರೆ. ಜಾತ್ಯತೀತ ಮತಗಳ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡಿರುವ ಕುಮಾರಸ್ವಾಮಿ ಅವರು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿ ಸಿದ್ಧಾಂತದ ಜೊತೆಗೆ ಕೈ ಮೀಲಾಯಿಸುವುದೊಂದೇ ದಾರಿ ಎಂದು ನಂಬಿದಂತಿದೆ. ಒಕ್ಕಲಿಗರ ಮತಗಳನ್ನು ಬಿಜೆಪಿ ಕಡೆಗೆ ಹರಿದು ಹೋಗುವಂತೆ ಮಾಡಿ, ಆ ಮೂಲಕ ತನ್ನ ಕುಟುಂಬದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಏಕೈಕ ಉದ್ದೇಶದಿಂದ ಅವರು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಭವಿಷ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಸಂಪೂರ್ಣ ವಿಲೀನವಾಗುವ ಸಾಧ್ಯತೆಗಳನ್ನು ಇದು ಹೇಳುತ್ತಿದೆ. ಜೆಡಿಎಸ್‌ನ್ನು ನುಂಗಿ ನೀರು ಕುಡಿಯುವುದರ ಜೊತೆಗೆ, ಜೆಡಿಎಸ್‌ನ ಸಾಂಪ್ರದಾಯಿಕ ಒಕ್ಕಲಿಗ ಮತಗಳನ್ನು ತನ್ನದಾಗಿಸಿಕೊಳ್ಳುವುದು ಬಿಜೆಪಿಯ ಗುರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News