ನೂತನ ಸಂಸತ್ ಮೇಲಿನ ದಾಳಿಗೆ ಕಾರಣವಾದ ಸರಕಾರದ ವೈಫಲ್ಯ

Update: 2023-12-14 04:05 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

2001 ಡಿಸೆಂಬರ್ 13ರಂದು ನಡೆದ ಸಂಸತ್ ದಾಳಿಯ ಗಾಯವನ್ನು ಇಡೀ ದೇಶ ವಿಷಾದದಿಂದ ಮುಟ್ಟಿ ನೋಡುತ್ತಿರುವ ದಿನವೇ ನೂತನ ಸಂಸತ್‌ನ ಒಳಗೆ ಅಪರಿಚಿತ ಯುವಕರು ಪ್ರವೇಶಿಸಿ ದಾಂಧಲೆಗೈದಿದ್ದಾರೆ. ದೇಶಕ್ಕಾಗಿರುವ ಗಾಯವೊಂದರ ಮೇಲೆ ಬರೆ ಎಳೆಯುವಂತೆ ಯುವಕರು ಸಂಸತ್‌ನೊಳಗೆ ಪ್ರವೇಶಿಸಿದ್ದಾರೆ ಮಾತ್ರವಲ್ಲ, ಸಂಸದರೆಲ್ಲ ನೋಡು ನೋಡುತ್ತಿದ್ದಂತೆಯೇ ಗ್ಯಾಸ್‌ಕ್ಯಾನ್‌ನ್ನು ಸಿಡಿಸಿದ್ದಾರೆ. ಸರಕಾರದ ಈ ಭಾರೀ ಭದ್ರತಾ ವೈಫಲ್ಯಕ್ಕೆ ಇಡೀ ದೇಶ ಬೆಚ್ಚಿ ಬಿದ್ದಿದೆ. ಅಂದು ನಡೆದ ಸಂಸತ್ ದಾಳಿಯ ಅಣಕದಂತಿದೆ ಈ ಅನಿರೀಕ್ಷಿತ ದಾಳಿ. ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನುವ ಕಾರಣಕ್ಕಾಗಿ ಘಟನೆಯನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ, ಸಂಸತ್‌ನ ಒಳಗೆ ಪ್ರವೇಶಿಸಿದ ಯುವಕರು ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡಲು ಸರ್ವ ಶಕ್ತರಾಗಿದ್ದರು. ಅವರು ಹಾನಿಗೈದಿಲ್ಲ ಎನ್ನುವುದಕ್ಕಾಗಿ ನಮಗೆ ನಾವೇ ನಿರಾಳ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇಂತಹ ಸ್ಥಿತಿಯೊಂದನ್ನು ದೇಶಕ್ಕೆ ತಂದಿಟ್ಟ ಕೇಂದ್ರ ಸರಕಾರ ಖಂಡಿತವಾಗಿಯೂ ಜನರಿಗೆ ಉತ್ತರಿಸಲೇ ಬೇಕಾಗುತ್ತದೆ.

ಡಿಸೆಂಬರ್ 13ರಂದು ಸಂಸತ್ತಿಗೆ ಸಹಜವಾಗಿಯೇ ಭದ್ರತೆಯನ್ನು ಹೆಚ್ಚಿಸುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ಕಾಶ್ಮೀರದ ಪ್ರತ್ಯೇಕತಾವಾದಿಗಳು ಎಂದು ಕರೆಸಿಕೊಂಡವರು ಈ ದಿನ ಸಂಸತ್‌ನ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯನ್ನು ತಡೆಯುವ ಸಂದರ್ಭದಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಹುತಾತ್ಮರಾದರು. ಇವರ ಬಲಿದಾನದ ಕಾರಣದಿಂದ ಯಾವುದೇ ರಾಜಕೀಯ ನಾಯಕನಿಗೂ ಹಾನಿಯಾಗಿಲ್ಲ. ಸಂಸತ್ ಮೇಲಿನ ಈ ದಾಳಿಯನ್ನು ಒಂದು ಕಳಂಕವಾಗಿ ದೇಶ ಗುರುತಿಸಿದ್ದು ಪ್ರತಿ ವರ್ಷವೂ ಈ ಕರಾಳ ದಿನವನ್ನು ಸ್ಮರಿಸುತ್ತಾ ಬರುತ್ತಿದೆ. ಈ ಬಾರಿಯಂತೂ ಡಿಸೆಂಬರ್ 13ರಂದು ಸಂಸತ್‌ನ ಮೇಲೆ ಭಾರೀ ದಾಳಿಯೊಂದನ್ನು ಸಂಯೋಜಿಸಿರುವುದಾಗಿ ಅಮೆರಿಕದಲ್ಲಿರುವ ಖಾಲಿಸ್ತಾನ್ ಉಗ್ರವಾದಿ ಗುರುಪತ್ವತ್ ಸಿಂಗ್ ಪನ್ನೂನ್ ಬೆದರಿಕೆಯೊಡ್ಡಿದ್ದ. ತನ್ನನ್ನು ಭಾರತ ಸರಕಾರ ಹತ್ಯೆಗೈಯಲು ನಡೆಸಿದ ಪ್ರಯತ್ನಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗುತ್ತಿರುವುದಾಗಿ ಹೇಳಿಕೊಂಡಿದ್ದ. ಅಧಿವೇಶನ ನಡೆಯುತ್ತಿರುವ ಈ ಹೊತ್ತಿನಲ್ಲಿ ಸಂಸತ್‌ನಲ್ಲಿ ಯಾವುದೇ ಭದ್ರತಾ ವೈಫಲ್ಯ ಸಂಭವಿಸಿದರೂ ಅದರ ಪರಿಣಾಮ ಘೋರವಾಗುತ್ತಿತ್ತು. ಆದುದರಿಂದ ವೈಫಲ್ಯ ಸಂಭವಿಸದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿತ್ತು. ಆದರೆ, ಆ ಹೊಣೆಯನ್ನು ನಿಭಾಯಿಸುವಲ್ಲಿ ಅತ್ಯಂತ ಹೀನಾಯ ರೀತಿಯಲ್ಲಿ ವಿಫಲವಾಯಿತು.

ಈ ದಾಳಿಗೆ ಕಾರಣವಾದ ಮೂರು ಅಂಶಗಳನ್ನು ನಾವು ವಿಶ್ಲೇಷಿಸಬೇಕಾಗಿದೆ. ಒಂದು, ದಾಳಿಕೋರರು ಸಂಸತ್‌ನೊಳಗೆ ಗ್ಯಾಸ್‌ಕ್ಯಾನ್ ಜೊತೆಗೆ ಹೇಗೆ ಪ್ರವೇಶಿಸಿದರು? ಇದರ ಜೊತೆಗೆ ಯುವಕರು ಮಾರಕವಾದ ಆಯುಧಗಳನ್ನೋ, ಇನ್ನಿತರ ಶಸ್ತ್ರಗಳನ್ನೋ ತೆಗೆದುಕೊಂಡು ಹೋಗಿದ್ದಿದ್ದರೆ ಅಲ್ಲಿ ನಡೆಯುವ ಅನಾಹುತಗಳು ಇನ್ನೂ ಭೀಕರವಾಗಿರುತ್ತಿತ್ತು. ಯುವಕರು ಸಾವು ನೋವುಗಳನ್ನು ಬಯಸಿರಲಿಲ್ಲ ಎನ್ನುವುದನ್ನು ಇದು ತಿಳಿಸುತ್ತದೆಯೇ ಹೊರತು, ಅದನ್ನು ಮುಂದಿಟ್ಟುಕೊಂಡು ಭದ್ರತಾ ಲೋಪವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಗಮನಿಸಬೇಕಾದ ಎರಡನೆಯ ಅಂಶವೆಂದರೆ, ಈ ದಾಳಿಯಲ್ಲಿ ಬಿಜೆಪಿಯ ಸಂಸತ್ ಸದಸ್ಯನ ಪಾತ್ರ. ದಾಳಿ ನಡೆಸಿದ ಆರೋಪಿಗಳಿಗೆ ಬಿಜೆಪಿಯ ಸಂಸದನೊಂದಿಗೆ ಅನ್ಯೋನ್ಯ ಸಂಬಂಧವಿರುವುದು ಮೇಲ್ನೋಟದ ತನಿಖೆಯಿಂದ ಬೆಳಕಿಗೆ ಬಂದಿದೆ. ಸಂಸತ್‌ನೊಳಗೆ ಪ್ರವೇಶಿಸಲು ಯುವಕರಿಗೆ ಪಾಸ್‌ಗಳನ್ನು ನೀಡಿರುವುದು ಮೈಸೂರಿನ ಸಂಸದ ಪ್ರತಾಪ ಸಿಂಹ ಎನ್ನುವುದು ಬಹಿರಂಗವಾಗಿದೆ. ಸಂಸತ್ ಸದಸ್ಯನ ಜೊತೆಗೆ ಆರೋಪಿಗಳು ಹಲವು ಬಾರಿ ವ್ಯವಹರಿಸಿದ್ದಾರೆ. ಓರ್ವ ಆರೋಪಿ ಬಿಜೆಪಿಯ ಐಟಿ ಸೆಲ್ ಜೊತೆಗೂ ಸಂಬಂಧವನ್ನು ಹೊಂದಿದ್ದಾನೆ. ‘ಆರೋಪಿ ಮನೋರಂಜನ್ ಎಂಬಾತ ಪ್ರಧಾನಿ ಮೋದಿಯವರ ಅಭಿಮಾನಿಯಾಗಿದ್ದ’ ಎನ್ನುವುದನ್ನು ಆರೋಪಿಯ ತಂದೆಯೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇವೆಲ್ಲದರಿಂದ, ಆರೋಪಿಗಳು ಸಂಸತ್ತನ್ನು ಪ್ರವೇಶಿಸುವಂತೆ ನೋಡಿಕೊಳ್ಳುವಲ್ಲಿ ಸಂಸದರ ಪಾತ್ರ ಎದ್ದು ಕಾಣುತ್ತಿದೆ. ಇಂದು ಈ ತಪ್ಪು ಕಾಂಗ್ರೆಸ್ ಸಂಸದರಿಂದ ನಡೆದಿದ್ದರೆ ಅದನ್ನು ಬಿಜೆಪಿ ಹೇಗೆ ಬಳಸಿಕೊಳ್ಳುತ್ತಿತ್ತು ಎನ್ನುವುದನ್ನೊಮ್ಮೆ ಊಹಿಸೋಣ. ಆದುದರಿಂದ, ದಾಳಿಯಲ್ಲಿ ಬಿಜೆಪಿ ಅಥವಾ ಸರಕಾರದೊಳಗಿರುವ ಯಾವುದೇ ಶಕ್ತಿಯು ಭಾಗಿಯಾಗಿದೆಯೇ ಎನ್ನುವುದನ್ನು ತನಿಖೆಗೊಳಪಡಿಸುವುದು ಅತ್ಯಗತ್ಯವಾಗಿದೆ.

ಇದೇ ಸಂದರ್ಭದಲ್ಲಿ ದಾಳಿ ಹೇಗೆ ನಡೆಯಿತು ಎನ್ನುವುದು ಎಷ್ಟು ಮುಖ್ಯವೋ ಯಾಕೆ ನಡೆಯಿತು ಎನ್ನುವುದು ಕೂಡ ಅಷ್ಟೇ ಮುಖ್ಯ. ಭದ್ರತಾ ವೈಫಲ್ಯಗಳಷ್ಟೇ ಮುಖ್ಯವಾಗದೆ, ಇಂತಹ ಕೃತ್ಯಗಳಿಗೆ ಯುವಕರನ್ನು ಪ್ರೇರೇಪಿಸುತ್ತಿರುವ ವರ್ತಮಾನ ಮತ್ತು ಅದಕ್ಕೆ ಕಾರಣವಾಗಿರುವ ಮೋದಿಯ ಆಡಳಿತ ತೀವ್ರ ಚರ್ಚೆಗೆ ಒಳಗಾಗಬೇಕಾಗಿದೆ. ದಾಳಿ ನಡೆಸಿದವರು ಕಾಶ್ಮೀರ ಅಥವಾ ಪಂಜಾಬಿನ ಪ್ರತ್ಯೇಕತಾವಾದಿಗಳಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅವರು ವಿದ್ಯಾವಂತ ಯುವಕರು. ಅಷ್ಟೇ ಅಲ್ಲ, ಬಿಜೆಪಿಯ ಜೊತೆಗೆ ಒಲವನ್ನು ವ್ಯಕ್ತಪಡಿಸಿದವರು ಎನ್ನುವುದನ್ನು ಯುವಕನ ಕುಟುಂಬವೇ ತಿಳಿಸಿದೆ. ಇಷ್ಟಾದರೂ ಅವರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಲು ತಮ್ಮ ಜೀವವನ್ನೇ ಒತ್ತೆಯಿಟ್ಟು ಸಂಸತ್‌ನೊಳಗೆ ಪ್ರವೇಶಿಸಿದರು. ಅವರು ಮುಂದಿಟ್ಟಿರುವುದು ದೇಶ ವಿರೋಧಿ ಬೇಡಿಕೆಗಳಾಗಿರಲಿಲ್ಲ. ‘ನಿರುದ್ಯೋಗ ಹೆಚ್ಚಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿಯಿಂದ ಯುವಕರು ಸಂಕಷ್ಟದಲ್ಲಿದ್ದಾರೆ’ ಎಂದು ಪ್ರತಿಭಟನಾಕಾರರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕೇಂದ್ರ ಸರಕಾರದ ಜನವಿರೋಧಿ ಆಡಳಿತದ ವಿರುದ್ಧ ಅವರು ಈ ದಾಳಿಯ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಹಿಂದೆ, ಬ್ರಿಟಿಷರ ವಿರುದ್ಧ ಭಗತ್ ಸಿಂಗ್ ಮತ್ತು ಅವರ ಸಂಗಡಿಗರು ಇಂತಹದೇ ದಾಳಿಯನ್ನು ಸಂಘಟಿಸಿದ್ದರು. ಸಂಸತ್‌ನೊಳಗೆ ಪ್ರವೇಶಿಸಿ ಯಾರಿಗೂ ಹಾನಿಯಾಗದಂತೆ ಅಲ್ಲಿ ಬಾಂಬೊಂದನ್ನು ಸಿಡಿಸಿದ್ದರು.

ಈ ಯುವಕರಿಗೆ ನಿಜಕ್ಕೂ ದುಷ್ಕೃತ್ಯಗಳನ್ನು ಎಸಗುವ ಉದ್ದೇಶವಿದ್ದಿದ್ದರೆ ಸಂಸತ್‌ನೊಳಗೆ ಮಾರಕ ಆಯುಧಗಳನ್ನು ಕೊಂಡೊಯ್ದು ದಾಳಿ ನಡೆಸುತ್ತಿದ್ದರು. ಜೀವಹಾನಿಯನ್ನುಂಟು ಮಾಡುತ್ತಿದ್ದರು. ಗ್ಯಾಸ್ ಡಬ್ಬಿಯನ್ನು ಕೊಂಡೊಯ್ದವರಿಗೆ ಚೂರಿಯನ್ನೋ ಇನ್ನಿತರ ಸಣ್ಣ ಶಸ್ತ್ರಗಳನ್ನು ಕೊಂಡೊಯ್ಯುವುದು ಕಷ್ಟವಾಗುತ್ತಿರಲಿಲ್ಲ. ಸದನದೊಳಗೆ ಅವರು ಯಾರ ಮೇಲೂ ಹಲ್ಲೆ ನಡೆಸಲಿಲ್ಲ. ಬದಲಿಗೆ ಘೋಷಣೆಗಳನ್ನಷ್ಟೇ ಕೂಗಿದ್ದಾರೆ. ಇಂದು ಸಂಸತ್‌ನೊಳಗೆ ಅವರು ಹೇಗೆ ಪ್ರವೇಶಿಸಿದರು ಎನ್ನುವ ಪ್ರಶ್ನೆಗಳ ಗದ್ದಲದಲ್ಲಿ, ಯಾಕೆ ಪ್ರವೇಶಿಸಿದರು ಎನ್ನುವ ಪ್ರಶ್ನೆ ಬದಿಗೆ ಸರಿಯುವಂತಾಗಬಾರದು. ‘ನಾವು ಯಾವ ಸಂಘಟನೆಗಳಿಗೂ ಸೇರಿದವರಲ್ಲ’ ಎಂದು ಯುವಕರು ಹೇಳಿಕೆ ನೀಡಿದ್ದಾರಾದರೂ ಅವರು ಯಾವುದಾದರೂ ಸಂಘಟನೆಗಳಲ್ಲಿದ್ದಾರೆಯೇ ಎನ್ನುವುದು ಗಂಭೀರ ತನಿಖೆಯಿಂದಷ್ಟೇ ಬಹಿರಂಗವಾಗಬೇಕು. ಯುವಕರನ್ನು ವಶಕ್ಕೆ ತೆಗೆದುಕೊಂಡಂತೆಯೇ ಅವರೊಂದಿಗೆ ಸಂಬಂಧವನ್ನು ಹೊಂದಿರುವ ಸಂಸದ ಪ್ರತಾಪ ಸಿಂಹ ಅವರನ್ನೂ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಬೇಕಾಗಿದೆ. ಈ ದಾಳಿಯ ಹಿಂದೆ ಯಾವುದಾದರೂ ರಾಜಕೀಯ ದುರುದ್ದೇಶಗಳಿವೆಯೇ, ರಾಜಕೀಯ ನಾಯಕರು ಈ ದಾಳಿಯ ಜೊತೆಗೆ ಕೈ ಜೋಡಿಸಿದ್ದಾರೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾದರೆ ಸ್ವತಂತ್ರ ತನಿಖಾ ಸಂಸ್ಥೆ ತನಿಖೆಯನ್ನು ಕೈಗೆತ್ತಿಕೊಳ್ಳಬೇಕು. ಸದ್ಯಕ್ಕೆ ಸರಕಾರದ ಭಾಗವಾಗಿರುವ ರಾಜಕೀಯ ವ್ಯಕ್ತಿಗಳ ಹೆಸರುಗಳೂ ಆರೋಪಿಗಳ ಜೊತೆಗೆ ಕೇಳಿ ಬರುತ್ತಿರುವುದರಿಂದ ಅಂತಹದೊಂದು ತನಿಖೆಗೆ ಸರಕಾರ ಅವಕಾಶ ಮಾಡಿಕೊಡುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News