ಮಾಹಿತಿ ಹಕ್ಕು ಕಾಯ್ದೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ

Update: 2023-08-04 03:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೇಂದ್ರ ಸರಕಾರವು ಪ್ರತಿಭಟನೆ, ಗದ್ದಲಗಳ ನಡುವೆ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ, 2023ನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಇದು ದತ್ತಾಂಶ ಖಾಸಗಿತನಕ್ಕೆ ಸಂಬಂಧಿಸಿದ ಭಾರತದ ಮೊದಲ ಕಾನೂನು ಆಗಲಿದೆ. ಆದರೆ ಸಾಮಾಜಿಕ ಹೋರಾಟಗಾರರು ಮತ್ತು ಪರಿಣತರು ಈ ಮಸೂದೆಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯನ್ನು ಗಣನೀಯ ಪ್ರಮಾಣದಲ್ಲಿ ದುರ್ಬಲಗೊಳಿಸಲು ಮೋದಿ ಸರಕಾರವು ಈ ಮಸೂದೆಯನ್ನು ದುರ್ಬಳಕೆ ಮಾಡುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಮಸೂದೆಯ ಕರಡು ಪ್ರತಿಯನ್ನು ಕಳೆದ ವರ್ಷ ನವೆಂಬರ್ನಲ್ಲಿ ಪ್ರಕಟಿಸಲಾಗಿತ್ತು. ಈ ಸಂದರ್ಭದಲ್ಲಿ ಇದರ ಕುರಿತ ಪರ ವಿರೋಧ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಸರಕಾರವು ಸಾರ್ವಜನಿಕರಿಗೆ ಮನವಿ ಮಾಡಿತ್ತು. ಆ ಸಂದರ್ಭದಲ್ಲಿ ಮಸೂದೆಯ ವಿರುದ್ಧ ವಿವಿಧ ಸಂಘಟನೆಗಳು, ಹೋರಾಟಗಾರರು ತಮ್ಮ ಆಕ್ಷೇಪಗಳನ್ನು ಆನ್ಲೈನ್ ಆಂದೋಲನದ ಮೂಲಕ ವ್ಯಕ್ತಪಡಿಸಿದ್ದರು.

ಪ್ರಜೆಗಳೇ ಪ್ರಭುಗಳು ಎನ್ನುವ ಸಾಲನ್ನು ಅರ್ಥಪೂರ್ಣಗೊಳಿಸಿರುವುದು ಮಾಹಿತಿ ಹಕ್ಕು ಕಾಯ್ದೆ. ತಾನು ನೀಡಿದ ತೆರಿಗೆಯ ಹಣವನ್ನು ಸರಕಾರ ಯಾವ ರೀತಿಯಲ್ಲಿ ಸದುಪಯೋಗಗೊಳಿಸಿದೆ, ಎಲ್ಲಿ ದುರುಪಯೋಗವಾಗಿದೆ ಎನ್ನುವುದನ್ನು ತಿಳಿಯುವ ಹಕ್ಕು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಈ ಕಾಯ್ದೆಯ ಮೂಲಕ ಯಾರೂ ಯಾರದೋ ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವಂತೆ ಸರಕಾರವನ್ನು ಒತ್ತಾಯಿಸುವುದಿಲ್ಲ. ಈ ಮಾಹಿತಿ ಹಕ್ಕು ಕಾಯ್ದೆಯ ಬಲದಿಂದಲೇ ಹಲವು ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಮಾಹಿತಿ ಹಕ್ಕು ಹೋರಾಟಗಾರರು ಬೆಳಕಿಗೆ ತಂದಿದ್ದಾರೆ. ಜನಕಲ್ಯಾಣ ಯೋಜನೆಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಹಿರಂಗಪಡಿಸಿದ್ದಾರೆ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಈ ಮಾಹಿತಿ ಹಕ್ಕು ಕಾಯ್ದೆ ಬಹುದೊಡ್ಡ ತಲೆನೋವಾಗಿದೆ. ಆದುದರಿಂದಲೇ ಈ ಕಾಯ್ದೆಯನ್ನು ದುರ್ಬಲಗೊಳಿಸಲು ಸರಕಾರ ಹೊಂಚು ಹಾಕಿ ಕಾಯುತ್ತಿದೆ. ಈ ಹಿಂದೆ ಮಾಹಿತಿ ಹಕ್ಕು ಹೋರಾಟಗಾರರನ್ನು ಸದೆಬಡಿಯುವ ಮೂಲಕ, ಅವರಿಗೆ ಕಿರುಕುಳ ನೀಡುವ ಮೂಲಕ, ಅಸಹಕಾರ ನೀಡುವ ಮೂಲಕ ಕಾಯ್ದೆಯನ್ನು ದುರ್ಬಲಗೊಳಿಸಿದ್ದರೆ, ಇದೀಗ ಮಾಹಿತಿ ಹಕ್ಕಿನ ವಿರುದ್ಧ ‘ಖಾಸಗಿ ಹಕ್ಕ’ನ್ನು ಗುರಾಣಿಯಾಗಿ ಬಳಸಲು ಮುಂದಾಗಿದೆ.

ಮಂಡಿಸಲಾಗಿರುವ ಮಸೂದೆಯ ಕುರಿತ ಮೊದಲ ಆಕ್ಷೇಪ ಏನು ಎಂದರೆ, ಇದು ಮಾಹಿತಿ ಹಕ್ಕು ಕಾಯ್ದೆಯ 8(1)(ಜೆ) ಪರಿಚ್ಛೇದಕ್ಕೆ ತಿದ್ದುಪಡಿ ತರುತ್ತದೆ. ಈ ಪರಿಚ್ಛೇದವು, ಸಾರ್ವಜನಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಪ್ರಯೋಜನವಿಲ್ಲದಿದ್ದರೆ ಮಾಹಿತಿ ಬಹಿರಂಗದಿಂದ ತಡೆಯುತ್ತದೆ. ಮಾತ್ರವಲ್ಲ, ಈ ಮಾಹಿತಿ ಬಹಿರಂಗವು ವ್ಯಕ್ತಿಯೊಬ್ಬರ ಖಾಸಗಿತನದ ಮೇಲೆ ಅನಗತ್ಯ ದಾಳಿ ನಡೆಸಿದರೆ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಈ ಮಾಹಿತಿ ಬಹಿರಂಗವು ಅನಿವಾರ್ಯ ಎನ್ನುವುದು ಸಾಬೀತಾಗದಿದ್ದರೆ ಮಾತ್ರ ಮಾಹಿತಿ ಬಹಿರಂಗ ಪಡಿಸುವಂತಿಲ್ಲ. ಮಸೂದೆಯು ಆ ಪರಿಚ್ಛೇದಕ್ಕೆ ತಿದ್ದುಪಡಿಯನ್ನು ಬಯಸುತ್ತದೆ. ಆ ಮೂಲಕ ವೈಯಕ್ತಿಕ ಮಾಹಿತಿಯನ್ನು ಬಹಿರಂಗ ಪಡಿಸುವುದಕ್ಕೆ ಪ್ರಾಧಿಕಾರದ ಮೇಲೆ ಪೂರ್ಣ ಪ್ರಮಾಣದಲ್ಲಿ ನಿರ್ಬಂಧ ಹೇರುತ್ತದೆ. ಈ ಮಸೂದೆಯು, ಮಾಹಿತಿ ಹಕ್ಕು ಕಾಯ್ದೆಯ 8(1)(ಜೆ) ವಿಧಿಯಡಿ ಮಾಹಿತಿ ಕೋರುವ ಅಧಿಕಾರಗಳನ್ನು ನಿರ್ಬಂಧಿಸುವ ಮೂಲಕ ಆ ಕಾಯ್ದೆಯ ಹಲ್ಲು ಉಗುರುಗಳನ್ನು ಕಿತ್ತು ಹಾಕಲು ಹೊರಟಿದೆ. ಮಸೂದೆಯು‘ಖಾಸಗಿ ಮಾಹಿತಿ’ಯ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ. ಈ ಮೂಲಕ, ‘ಇದು ನಮ್ಮ ಖಾಸಗಿ ವಿಷಯ’ ಎಂದು ತಮ್ಮ ಚಟುವಟಿಕೆಗಳ ಬಗ್ಗೆ ಕೋರಲಾದ ಮಾಹಿತಿಯನ್ನು ಅಡಗಿಸಿಡಲು ಸರಕಾರಿ ಅಧಿಕಾರಿಗಳಿಗೆ ನೂತನ ಮಸೂದೆಯು ಅವಕಾಶ ಮಾಡಿಕೊಡುತ್ತದೆ ಎನ್ನುವುದೇ ಮಂಡಿಸಲಾಗುತ್ತಿರುವ ತಿದ್ದುಪಡಿ ಮಸೂದೆಯ ವಿರುದ್ಧ ಇರುವ ಪ್ರಮುಖ ಆಕ್ಷೇಪ. ಸರಕಾರವೂ ಸಾರ್ವಜನಿಕರ ಖಾಸಗಿತನದ ಮೇಲೆ ಬೇರೆ ಬೇರೆ ರೂಪಗಳಲ್ಲಿ ಹಸ್ತಕ್ಷೇಪ ನಡೆಸುತ್ತಲೇ ಬಂದಿದೆ. ಈಗ ಅದೇ ಖಾಸಗಿತನದ ಹಕ್ಕನ್ನು ಬಳಸಿಕೊಂಡು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಗಿರುವುದು ದುರಂತ ಎಂದು ಮಾಹಿತಿ ಹಕ್ಕು ಹೋರಾಟಗಾರರು ಅಭಿಪ್ರಾಯ ಪಡುತ್ತಾರೆ. ‘‘ಸರಕಾರದೊಂದಿಗೆ ವ್ಯವಹರಿಸುವುದು ಎಂದರೆ ಸರಕಾರಿ ಅಧಿಕಾರಿಗಳು ಮತ್ತು ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ವ್ಯವಹರಿಸುವುದು. ಅಂಕಿಅಂಶಗಳು ಹೊರಹೋಗದಂತೆ ನೋಡಿಕೊಳ್ಳಲು ಸರಕಾರಕ್ಕೆ ಬಲವಾದ ಅಸ್ತ್ರವೊಂದನ್ನು ಈ ತಿದ್ದುಪಡಿ ನೀಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯು ಪರಿಣಾಮರಹಿತವಾದರೆ, ಸಾರ್ವಜನಿಕ ಸಂಪನ್ಮೂಲಗಳ ಕಳ್ಳತನ ಹೆಚ್ಚುತ್ತದೆ. ಯಾಕೆಂದರೆ, ಕಳವಾದ ಹಣದ ಮೇಲೆ ನಿಗಾ ಇಡಲು ಸಾಧ್ಯವಾಗುವುದಿಲ್ಲ’’ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ಪಡುತ್ತಾರೆ.

2020-21ರ ಸಾಲಿನಲ್ಲಿ, ಮಾಹಿತಿ ಕೋರಿ ಬಂದ ಅರ್ಜಿಗಳ ಪೈಕಿ ಶೇ. 34.4ರಷ್ಟನ್ನು ಕೇಂದ್ರೀಯ ಮಟ್ಟದ ಸಾರ್ವಜನಿಕ ಮಾಹಿತಿ ಪ್ರಾಧಿಕಾರಗಳು 8(1)(ಜೆ) ವಿಧಿಯನ್ನು ಉಲ್ಲೇಖಿಸಿ ತಿರಸ್ಕರಿಸಿವೆ ಎಂದು ಕೇಂದ್ರೀಯ ಮಾಹಿತಿ ಆಯೋಗದ 2020-21ರ ಸಾಲಿನ ವಾರ್ಷಿಕ ವರದಿ ತಿಳಿಸಿದೆ. ಅರ್ಜಿಗಳನ್ನು ತಿರಸ್ಕರಿಸಲು ಈ ವಿಧಿಯನ್ನು ಗರಿಷ್ಠ ಮಟ್ಟದಲ್ಲಿ ದುರುಪಯೋಗಪಡಿಸಲಾಗಿದೆ. 18 ವರ್ಷಗಳಲ್ಲಿ, ಮಾಹಿತಿ ಹಕ್ಕು ಕಾಯ್ದೆಯಿಂದಾಗಿ ಯಾವುದೇ ರಾಷ್ಟ್ರೀಯ ಅಥವಾ ವೈಯಕ್ತಿಕ ಹಿತಾಸಕ್ತಿಗೆ ಅನಪೇಕ್ಷಿತ ಹಾನಿ ಸಂಭವಿಸಿಲ್ಲ. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಯಾರೂ ಸರಕಾರದ ಆಂತರಿಕ ಭದ್ರತೆಗಾಗಲಿ, ಯಾರದೇ ಖಾಸಗಿ ಬದುಕಿಗಾಗಲಿ ಹಾನಿಯಾದ ಉದಾಹರಣೆಗಳಿಲ್ಲ. ದೂರುಗಳೂ ಇಲ್ಲ. ಹೀಗಿದ್ದಾಗ ಆತುರಾತುರವಾಗಿ ಮಾಹಿತಿ ಹಕ್ಕನ್ನು ದುರ್ಬಲಗೊಳಿಸುವುದಕ್ಕೆ ಸರಕಾರ ಯಾಕೆ ಮುಂದಾಗಿದೆ? ಎನ್ನುವ ಪ್ರಶ್ನೆಯನ್ನು ಸಾಮಾಜಿಕ ಹೋರಾಟಗಾರರು ಕೇಳುತ್ತಿದ್ದಾರೆ.

ಆಧಾರ್ ಮೂಲಕ ಸಾರ್ವಜನಿಕರ ಮಾಹಿತಿಗಳನ್ನು ಸರಕಾರ ಸಂಗ್ರಹಿಸುವ ಸಂದರ್ಭದಲ್ಲಿ ಸರಕಾರಕ್ಕೆ ಜನರ ಖಾಸಗಿತನದ ಮೇಲೆ ನಡೆಸುತ್ತಿರುವ ದಾಳಿ ಇದು ಎಂದು ಅನ್ನಿಸಿರಲಿಲ್ಲ. ಆಧಾರ್ ಪ್ರಕರಣದಲ್ಲಿ, ಖಾಸಗಿತನದ ಹಕ್ಕೆನ್ನುವುದು ಇಲ್ಲ ಎಂಬುದಾಗಿ ಸರಕಾರವು ಸುಪ್ರೀಂ ಕೋರ್ಟ್ನಲ್ಲಿ ವಾದಿಸಿತ್ತು. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಜನರು ಮಾಹಿತಿ ಕೋರುವಾಗ, ಖಾಸಗಿತನದ ಹಕ್ಕನ್ನು ಉಲ್ಲೇಖಿಸಿ ಮಾಹಿತಿ ನಿರಾಕರಿಸಲು ಮುಂದಾಗಿದೆ. ಮಸೂದೆಯ ಸಮಾಲೋಚನೆಗೆ ಸಾಮಾಜಿಕ ಹೋರಾಟಗಾರರ ವಲಯದಿಂದ ಯಾರನ್ನೂ ಸರಕಾರ ಆಹ್ವಾನಿಸಿಲ್ಲ ಮಾತ್ರವಲ್ಲ, ಮಸೂದೆಗೆ ಸಂಬಂಧಿಸಿ ನಾಗರಿಕರು ಕಳವಳ ವ್ಯಕ್ತಪಡಿಸಿರುವ ಆರ್ಜಿಗಳನ್ನು ತಮಗೆ ನೀಡಲಾಗಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಕುರಿತ ಸಂಸದೀಯ ಸ್ಥಾಯಿ ಸಮಿತಿಯಲ್ಲಿರುವ ಪ್ರತಿಪಕ್ಷ ಸಂಸದರು ಈಗಾಗಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಮಸೂದೆ ಮಂಡನೆಯಾಗಿ ಜಾರಿಗೊಂಡರೆ ಮುಂದಿನ ದಿನಗಳಲ್ಲಿ, ಲೋಕಸಭೆ ಮತ್ತು ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತನ್ನ ವೈಯಕ್ತಿಕ ಆಸ್ತಿಗಳ ವಿವರಗಳನ್ನು ನೀಡಲು ನಿರಾಕರಿಸಬಹುದಾಗಿದೆ. ಸರಕಾರಕ್ಕೆ, ರಾಜಕಾರಣಿಗಳಿಗೂ ಇದೇ ಬೇಕಾಗಿದೆ. ಜನಸಾಮಾನ್ಯರಿಗೆ ಸರಕಾರದ ವಿವರಗಳನ್ನು ತಿಳಿಸಿ ತಮ್ಮದೇ ಕುತ್ತಿಗೆಗೆ ಸರಪಳಿಯನ್ನು ಬಿಗಿಸಿಕೊಳ್ಳಲು ಇಷ್ಟವಿಲ್ಲ. ಆದುದರಿಂದಲೇ, ಈ ತಿದ್ದುಪಡಿ ಮಂಡನೆ ಪ್ರಜಾಸತ್ತೆಗೆ ಬಹುದೊಡ್ಡ ಹಿನ್ನಡೆಯಾಗಿದೆ. ಜನಸಾಮಾನ್ಯರು ಮಾಹಿತಿ ಹಕ್ಕಿನ ಮೂಲಕ ಜನಪ್ರತಿನಿಧಿಗಳ ಮೇಲೆ ಹೊಂದಿದ್ದ ಸಣ್ಣ ನಿಯಂತ್ರಣವೂ ಮುಂದಿನ ದಿನಗಳಲ್ಲಿ ಇಲ್ಲವಾಗುತ್ತದೆ. ಮೋದಿ ಸರಕಾರದ ವಿರುದ್ಧ ಸಾರ್ವಜನಿಕವಾಗಿ ಧ್ವನಿಯೆತ್ತಿದ ಎಲ್ಲ ಹೋರಾಟಗಾರರನ್ನು ಅರ್ಬನ್ ನಕ್ಸಲ್ ಹೆಸರಿನಲ್ಲಿ ಬಗ್ಗುಬಡಿಯಲಾಗಿದೆ. ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಂಡು ಸರಕಾರಿ ವಲಯದೊಳಗಿರುವ ಭ್ರಷ್ಟಾಚಾರಗಳನ್ನು ಬಯಲು ಮಾಡುತ್ತಾ ಸರಕಾರದ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಮಾಹಿತಿ ಹಕ್ಕು ಹೋರಾಟಗಾರರ ಬಾಯಿ ಮುಚ್ಚಿಸುವ ಕೆಲಸವನ್ನು ಈ ಮಸೂದೆ ಮಂಡನೆಯ ಮೂಲಕ ಸರಕಾರ ಮಾಡಿದೆ. ಈ ಮಸೂದೆ ಅಂತಿಮವಾಗಿ, ತಾನು ಆರಿಸಿದ ಸರಕಾರ ದಿಲ್ಲಿಯಲ್ಲಿ ಕುಳಿತು ಏನು ಮಾಡುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವ ಜನರ ಹಕ್ಕುಗಳನ್ನೇ ಕಿತ್ತುಕೊಳ್ಳಲು ಹೊರಟಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News