ಕತ್ತಲನ್ನು ಹೊತ್ತು ತಂದ ಪಟಾಕಿ ದುರಂತ!

Update: 2023-10-09 05:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಾಡಿನ ಜನತೆ ಬೆಳಕಿನ ಹಬ್ಬ ‘ದೀಪಾವಳಿ’ಯ ನಿರೀಕ್ಷೆಯಲ್ಲಿರುವಾಗಲೇ ಪಟಾಕಿ ದೊಡ್ಡ ಸದ್ದು ಮಾಡುತ್ತಾ ಕತ್ತಲನ್ನು ಹೊತ್ತು ತಂದಿದೆ. ಬೆಂಗಳೂರಿನ ಹೊರ ವಲಯದ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನ ಬಳಿ ಬೃಹತ್ ಪ್ರಮಾಣದಲ್ಲಿ ಪಟಾಕಿಗಳು ಸ್ಫೋಟಗೊಂಡು ಭಾರೀ ಸಾವು ನೋವುಗಳು ಸಂಭವಿಸಿವೆ. ದುರಂತದಲ್ಲಿ ಸುಮಾರು 13 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಮೃತರೆಲ್ಲರೂ ಕೂಲಿಕಾರ್ಮಿಕರು ಎನ್ನುವುದು ಕೂಡ ಗಮನಾರ್ಹ. ಜೊತೆಗೆ ಹಲವು ವಾಹನಗಳೂ ಭಸ್ಮವಾಗಿವೆ. ಪಟಾಕಿಯ ಮೂಲಕ ದೀಪಾವಳಿಯ ಸಂಭ್ರಮವನ್ನು ಹುಡುಕುವವರಿಗೆ ಬಹು ದೊಡ್ಡ ಎಚ್ಚರಿಕೆಯ ಗಂಟೆಯೊಂದು ಈ ಮೂಲಕ ಬಾರಿಸಿದಂತಾಗಿದೆ. ಮುಂಬರುವ ದೀಪಾವಳಿಯ ಹೊತ್ತಿಗೆ ಇನ್ನಷ್ಟು ಅನಾಹುತಗಳು ಸಂಭವಿಸುವುದಕ್ಕೆ ಮೊದಲೇ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

ಪಟಾಕಿಗೂ ದೀಪಾವಳಿಗೂ ಯಾವುದೇ ಅಧ್ಯಾತ್ಮಿಕ, ಸಾಂಸ್ಕೃತಿಕ ಸಂಬಂಧಗಳಿಲ್ಲ. ಈ ಸಂಬಂಧವನ್ನು ಬೆಸೆದವರು ಪಟಾಕಿ ಉದ್ಯಮವನ್ನು ನೆಚ್ಚಿಕೊಂಡಿರುವ ಕೆಲವು ಹಿತಾಸಕ್ತಿಗಳು. ಕೋಟ್ಯಂತರ ರೂ. ವ್ಯವಹಾರಗಳನ್ನೊಳಗೊಂಡ ಈ ಉದ್ಯಮ ಅಕ್ರಮಗಳ ಮಹಾ ಕೂಪವಾಗಿದೆ. ಮೇಲ್ನೋಟಕ್ಕೆ ‘ಪಟಾಕಿ ಎಂದರೆ ಪರಿಸರ ಮಾಲಿನ್ಯ. ಆದುದರಿಂದ ಅದರಿಂದ ದೂರವಿರಿ’ ಎಂಬ ಸಲಹೆಯನ್ನು ನೀಡಲಾಗುತ್ತದೆ. ಆದರೆ ಈ ಪಟಾಕಿ ಉದ್ಯಮ ಕೇವಲ ಪರಿಸರಕ್ಕಷ್ಟೇ ಮಾರಕ ಅಲ್ಲ, ಇಡೀ ಮನುಕುಲವನ್ನು ಬೇರೆ ಬೇರೆ ರೂಪಗಳಲ್ಲಿ ಇದು ಆಹುತಿ ತೆಗೆದುಕೊಳ್ಳುತ್ತಾ ಬಂದಿದೆ. ಆದರೆ ಸರಕಾರ ಕಣ್ಣಿದ್ದು ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ನಟಿಸುತ್ತಾ ಬರುತ್ತಿದೆ. ಕೇವಲ ತಮಿಳುನಾಡಿನ ಶಿವಕಾಶಿಯೊಂದರಲ್ಲೇ, 1,100ಕ್ಕೂ ಅಧಿಕ ಪಟಾಕಿ ಕಾರ್ಖಾನೆಗಳು ನೋಂದಣಿಯಾಗಿವೆ. ಅಕ್ರಮ ಕಾರ್ಖಾನೆಗಳ ಸಂಖ್ಯೆ ಬೇರೆಯೇ ಇದೆ. ಇಲ್ಲಿ ಎಂಟು ಲಕ್ಷಕ್ಕೂ ಅಧಿಕ ಜನರು ನೇರ ಅಥವಾ ಪರೋಕ್ಷವಾಗಿ ಈ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಶಿವಕಾಶಿಯೂ ಸೇರಿದಂತೆ ದೇಶಾದ್ಯಂತ ಈ ಪಟಾಕಿ ಕಾರ್ಖಾನೆಗಳು ಮಕ್ಕಳನ್ನು ಮತ್ತು ಮಹಿಳೆಯರನ್ನು ನೆಚ್ಚಿಕೊಂಡಿವೆೆ. ಅತಿ ಹೆಚ್ಚು ಬಾಲಕಾರ್ಮಿಕರು ಪಟಾಕಿ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ಈಗಾಗಲೇ ಬಹಿರಂಗಪಡಿಸಿವೆ. ಪಟಾಕಿ ಕಾರ್ಖಾನೆಗಳಲ್ಲಿ ದುರಂತ ಸಂಭವಿಸಿದಾಗಲೆಲ್ಲ ಮಕ್ಕಳು ಮತ್ತು ಮಹಿಳೆಯರೇ ನೇರ ಬಲಿಪಶುಗಳಾಗಿರುತ್ತಾರೆ. ಶಿವಕಾಶಿಯಲ್ಲಿ ಪ್ರತಿವರ್ಷ ನಡೆಸುವ ಸ್ಫೋಟಗಳಿಗೆ ಪ್ರಾಣತೆತ್ತವರಿಗೆ ಲೆಕ್ಕವಿಲ್ಲ. 2009ರಲ್ಲಿ ನಡೆದ ಸ್ಫೋಟದಲ್ಲಿ 40ಕ್ಕೂ ಅಧಿಕ ಮಂದಿ ಮೃತಪಟ್ಟರು. ಈ ದುರಂತದ ತನಿಖೆ ನಡೆದಾಗ ಶಿವಕಾಶಿಯಲ್ಲಿ ನೂರಾರು ಅಕ್ರಮ ಕಾರ್ಖಾನೆಗಳು ಅಸ್ತಿತ್ವದಲ್ಲಿರುವುದು ಬೆಳಕಿಗೆ ಬಂದವು. ಹಾಗೆಯೇ ಅನಧಿಕೃತವಾಗಿ ದುಡಿಯುವ ಕಾರ್ಮಿಕರ ಸಂಖ್ಯೆಯೂ ದೊಡ್ಡದಿದೆ. ಇಲ್ಲಿ ದುರಂತ ಸಂಭವಿಸದೇ ಇದ್ದರೂ, ಇಲ್ಲಿನ ಸಿಬ್ಬಂದಿ ಬಹುಬೇಗ ಹತ್ತು ಹಲವು ಮಾರಕ ಕಾಯಿಲೆಗಳಿಗೆ ಈಡಾಗುತ್ತಾರೆ. ಯಾವುದೇ ಆರೋಗ್ಯಕ್ಕೆ ಸಂಬಂಧಿಸಿದ ವಿಮೆಗಳೂ ಇವರಿಗಿಲ್ಲ. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಇವರು ಕೆಲಸ ಮಾಡುತ್ತಾರಾದರೂ, ಇವರಿಗೆ ಸಿಗುವ ವೇತನ ಅತ್ಯಲ್ಪ. ಈ ದೇಶದ ಕೋಟ್ಯಂತರ ಜನರ ಹಬ್ಬದ ಸಂಭ್ರಮಗಳಿಗಾಗಿ ಇವರು ಪಟಾಕಿ ಕಾರ್ಖಾನೆಗಳಲ್ಲಿ ಉರಿದು ಬೂದಿಯಾಗುತ್ತಾರೆ. ಹಬ್ಬದ ದಿನಗಳಲ್ಲಿ ನಾವು ಬೂದಿ ಮಾಡುವ ಪಟಾಕಿಗಳಲ್ಲಿ ಈ ಮಕ್ಕಳು ಮತ್ತು ಮಹಿಳೆಯರ ಕನಸುಗಳಿವೆ ಎನ್ನುವ ಪ್ರಜ್ಞೆ ನಮಗಿದ್ದರೂ ಪಟಾಕಿಗಳ ಜೊತೆಗೆ ಹಬ್ಬಗಳನ್ನು ಸಂಭ್ರಮಿಸಲು ಯಾರೂ ಮುಂದಾಗಲಾರರು.

ಪಟಾಕಿಗಳನ್ನು ಸಂಗ್ರಹಿಸುವ ಬಹುತೇಕ ಗೋದಾಮುಗಳು ಅಕ್ರಮವಾಗಿರುತ್ತವೆ. ಬೆಂಗಳೂರಿನ ದುರಂತಕ್ಕೆ ಕಾರಣವಾಗಿರುವ ದಾಸ್ತಾನು ಕೇಂದ್ರಕ್ಕೂ ಸರಿಯಾದ ಪರವಾನಿಗೆ ಇರದೇ ಇರುವುದು ಬೆಳಕಿಗೆ ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಟಾಕಿಗಳ ಜೊತೆ ಜೊತೆಗೇ ಹಬ್ಬದ ಜೊತೆಗೆ ಯಾವ ಸಂಬಂಧವೂ ಇಲ್ಲದ ಇತರ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗುತ್ತದೆ. ದುಷ್ಕೃತ್ಯಗಳಿಗೆ ಬಳಕೆಯಾಗುವ ಸ್ಫೋಟಕಗಳಿಗಾಗಿ ಈ ಪಟಾಕಿ ಕಾರ್ಖಾನೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಆರೋಪಗಳಿವೆ. ಉಗ್ರ ವಾದಿಗಳು, ಭಯೋತ್ಪಾದಕರು, ಸಮಾಜ ಘಾತುಕರ ಜೊತೆಗೆ ಈ ‘ಸ್ಫೋಟಕ’ ಉದ್ಯಮ ಪರೋಕ್ಷ ನಂಟನ್ನು ಬೆಳೆಸಿಕೊಂಡಿದೆ. ಅಕ್ರಮ ಕಾರ್ಖಾನೆಗಳು ಇಂತಹ ಸ್ಫೋಟಕಗಳನ್ನು ತಯಾರಿಸುವ ಅಡ್ಡೆಗಳಾಗಿವೆ. ಅಕ್ರಮ ಸ್ಫೋಟಕಗಳನ್ನು ಸಂಗ್ರಹಿಸಲು ಪಟಾಕಿ ಗೋದಾಮುಗಳನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆಯೂ ವ್ಯಾಪಕ ಆರೋಪಗಳಿವೆ. ಹಾಗೆಯೇ ಹಬ್ಬದ ಹೆಸರಿನಲ್ಲೇ ಕಲ್ಲು ಕೋರೆ ಮೊದಲಾದೆಡೆ ಬಳಸುವ ಸ್ಫೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುವ ಬಗ್ಗೆ ಹಲವೆಡೆ ತನಿಖೆಯಿಂದ ಬೆಳಕಿಗೆ ಬಂದಿವೆ. ಈ ದೇಶದಲ್ಲಿ ಪಟಾಕಿ ಉದ್ಯಮಕ್ಕೆ ಹಬ್ಬ ಒಂದು ನೆಪ ಮಾತ್ರ. ಅದರ ತೆರೆಮರೆಯಲ್ಲಿ ಬೇರೆಯದೇ ಒಂದು ಕತ್ತಲ ಜಗತ್ತು ಈ ಉದ್ಯಮದ ಜೊತೆಗೆ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದೆ. ಕೆಲವೊಮ್ಮೆ ಪಟಾಕಿ ಗೋದಾಮಿನಲ್ಲಿ ಸಂಭವಿಸುವ ಭಾರೀ ಸ್ಫೋಟಗಳು ಕೇವಲ ಪಟಾಕಿಗಳಿಂದಲೇ ಸಂಭವಿಸಿರುವುದಿಲ್ಲ. ತನಿಖೆ ನಡೆಸಿದರೆ, ಅದರ ಹಿಂದಿರುವ ಪಾತಕ ಜಗತ್ತು ಬಹಿರಂಗವಾಗಬಹುದು. ಆದರೆ ಈ ಜಗತ್ತಿನ ಜೊತೆಗೆ ರಾಜಕೀಯ ಶಕ್ತಿಗಳು ಶಾಮೀಲಾಗಿರುವುದರಿಂದ ಅಷ್ಟು ಆಳವಾಗಿ ಯಾವುದೇ ಪಟಾಕಿ ಗೋದಾಮು ದುರಂತಗಳೂ ತನಿಖೆಗೊಳಗಾಗುವುದಿಲ್ಲ.

ಮಕ್ಕಳು, ಮಹಿಳೆಯರ ಕಣ್ಣೀರು, ಉದ್ಯಮಿಗಳು- ಪಾತಕಿಗಳ ಪಾಲುದಾರಿಕೆಯಲ್ಲಿ ಸಿದ್ಧಗೊಳ್ಳುವ ಈ ಪಟಾಕಿಗಳ ಹಿಂದಿರುವ ಎಲ್ಲ ಕಳಂಕಗಳನ್ನು ದೀಪಾವಳಿಯಂತಹ ಮಹತ್ವದ ಹಬ್ಬಗಳಿಗೆ ಅಂಟಿಸಲಾಗುತ್ತ್ತದೆ. ಕನಿಷ್ಠ ದೀಪಾವಳಿಯೊಂದಿಗೆ ಯಾವ ರೀತಿಯಲ್ಲಾದರೂ ಪಟಾಕಿಗಳಿಗೆ ಸಂಬಂಧವಿದೆಯೇ ಎಂದರೆ ಅದೂ ಇಲ್ಲ. ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವೆಂದು ಕರೆಯುತ್ತಾರೆ. ಈ ದೇಶದ ಕುಂಬಾರರು ಮಾಡಿದ ಮಣ್ಣಿನ ಹಣತೆಯಿಂದ, ಗಾಣಿಗರು ಅರೆದ ಎಣ್ಣೆ ಸುರಿದು, ಮಹಿಳೆಯರು ಸುತ್ತಿದ ಬತ್ತಿ ಇಟ್ಟು ಮನೆಮನೆಗಳನ್ನು ಬೆಳಗಲಾಗುತ್ತದೆ. ದೀಪಾವಳಿಯ ಸಂಜೆ ಹಚ್ಚಿಟ್ಟ ಬೆಳಕು ಬಹುಕಾಲ ಉಳಿದು, ಹಬ್ಬದ ಮೌಲ್ಯವನ್ನು ಸಾರುತ್ತಿರುತ್ತವೆ. ಪಟಾಕಿ ಹಾಗಲ್ಲ. ಅದು ಭಾರೀ ಸದ್ದು ಮಾಡುತ್ತಾ ಉರಿದು ಮುಗಿದು ಹೋಗುತ್ತದೆ. ಮಕ್ಕಳು, ವೃದ್ಧರು, ರೋಗಿಗಳನ್ನು ತನ್ನ ಸದ್ದಿನ ಜೊತೆಗೆ ಬೆಚ್ಚಿ ಬೀಳಿಸಿ ಇಲ್ಲವಾಗುತ್ತದೆ. ಉಳಿಯುವುದು ಗಂಧಕದ ವಾಸನೆ, ಬೂದಿಯಾದ ಹಣ, ಕಸ ಕಡ್ಡಿಗಳು. ದೀಪಾವಳಿಯ ಮರುದಿನ ಪತ್ರಿಕೆಗಳಲ್ಲಿ ಕಣ್ಣು ಕಳೆದುಕೊಂಡ ಮಕ್ಕಳ ಅಂಕಿಸಂಕಿಗಳ ಬಗ್ಗೆ ವರದಿಗಳಿರುತ್ತವೆ. ಹಬ್ಬ ಆ ಮಕ್ಕಳ ಬದುಕಿಗೆ ಹೊಸ ಭರವಸೆಯನ್ನು ನೀಡಬೇಕಾಗಿತ್ತು. ಆದರೆ ಪಟಾಕಿಗಳು ಅವರ ಬದುಕಿನಲ್ಲಿ ಶಾಶ್ವತ ಕತ್ತಲನ್ನು ತುಂಬಿ ಹೋಗುತ್ತವೆ.

ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಕೊಳ್ಳುವವರಿಗೆಲ್ಲ ಬೆಂಗಳೂರು ಸಮೀಪ ಪಟಾಕಿ ಗೋದಾಮು ಸ್ಫೋಟದಿಂದ ಮೃತಪಟ್ಟ ಕಾರ್ಮಿಕರು ಕಣ್ಣೆದುರು ಬರಬೇಕು. ಪಟಾಕಿಗಳ ಬದಲು ಹಣತೆಯ ಮೂಲಕ ದೀಪಾವಳಿಯ ಸಂಭ್ರಮವನ್ನು, ಬೆಳಕನ್ನು ನಮ್ಮದಾಗಿಸಿಕೊಳ್ಳೋಣ. ಪಟಾಕಿ ಸುಟ್ಟು ನಾವು ಬೂದಿ ಮಾಡುವ ಹಣವನ್ನು ಬಡ ಮಕ್ಕಳಿಗೆ ಉಡುಗೊರೆಗಳನ್ನು ಕೊಂಡು ಅವರ ಕಣ್ಣ ಹಣತೆಯಲ್ಲಿ ಬೆಳಕನ್ನು ಕಂಡು ಹಬ್ಬವನ್ನು ಅರ್ಥಪೂರ್ಣವಾಗಿಸಿಕೊಳ್ಳೋಣ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News