ಭಾರತದ ವಿರುದ್ಧ ನಡೆಯುತ್ತಿರುವ ಬುಲ್ಡೋಜರ್ ಕಾರ್ಯಾಚರಣೆ

Update: 2024-02-09 05:13 GMT

Photo: Twitter/ Indianexpress 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಎರಡು ರೀತಿಯ ರಾಜಕೀಯಗಳಿಗೆ ಭಾರತ ಸಾಕ್ಷಿಯಾಗುತ್ತಿದೆ. ಒಂದು ಕಟ್ಟುವ ರಾಜಕಾರಣ, ಇನ್ನೊಂದು, ಕೆಡಹುವ ರಾಜಕಾರಣ. ಈ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಮುಂದೆ ಕುಸಿದು ಬಿದ್ದ ಭಾರತವಿತ್ತು. ಅದನ್ನು ಮರು ನಿರ್ಮಿಸುವುದು ಅವರ ಮುಂದಿದ್ದ ಅತಿ ದೊಡ್ಡ ಸವಾಲಾಗಿತ್ತು. ಶಿಕ್ಷಣ, ಆರೋಗ್ಯ, ಅರ್ಥವ್ಯವಸ್ಥೆ ಎಲ್ಲವನ್ನೂ ಅವರು ಹೊಸದಾಗಿ ಕಟ್ಟಿ ನಿಲ್ಲಿಸಬೇಕಾಗಿತ್ತು. ಸ್ವಾತಂತ್ರ್ಯ ಸಿಕ್ಕಿದಾಗ ಭಾರತ ಹೇಗಿತ್ತು ಮತ್ತು ಈಗ ಹೇಗಿದೆ ಎನ್ನುವುದನ್ನು ನಾವೊಮ್ಮೆ ಅವಲೋಕನ ಮಾಡಿದಾಗ ನೆಹರೂ ಅವರ ‘ಕಟ್ಟುವ ರಾಜಕೀಯ’ದ ಮಹತ್ವ ಅರಿವಾಗುತ್ತದೆ. ಅವರು ಅಣೆಕಟ್ಟುಗಳನ್ನು, ಆಸ್ಪತ್ರೆಗಳನ್ನು, ಶಾಲಾ ಕಾಲೇಜುಗಳನ್ನಷ್ಟೇ ಕಟ್ಟುತ್ತಾ ಹೋಗಲಿಲ್ಲ, ಜೊತೆ ಜೊತೆಗೇ ಜನರ ಮನಸ್ಸುಗಳನ್ನು ಕಟ್ಟಲು ಬಹಳಷ್ಟು ಕೊಡುಗೆಗಳನ್ನು ನೀಡುತ್ತಾ ಬಂದರು. ಸ್ವಾತಂತ್ರ್ಯ ಸಿಕ್ಕಿದ ಹೊತ್ತಿಗೆ ದೇಶಕ್ಕೆ ದೇಶವೇ ಒಡೆದು ಹೋಗಿತ್ತು. ಅಂತಹ ದೇಶವನ್ನು ಮತ್ತೆ ಒಂದಾಗಿ ಜೋಡಿಸಿದ ಹೆಗ್ಗಳಿಕೆ ನೆಹರೂ ಅವರದು. ಇದೀಗ ಮೋದಿ ಕಾಲದಲ್ಲಿ, ಒಡೆಯುವ ರಾಜಕೀಯಕ್ಕೆ ಮಹತ್ವ ನೀಡಲಾಗಿದೆ. ಧರ್ಮ, ಜಾತಿ, ವರ್ಗಗಳ ಆಧಾರದಲ್ಲಿ ಶಿಕ್ಷಣವನ್ನು ಒಡೆಯಲಾಗುತ್ತಿದೆ. ಆಹಾರವನ್ನೂ ಜಾತಿ, ಧರ್ಮದ ಆಧಾರದಲ್ಲಿ ವಿಂಗಡಿಸಲಾಗಿದೆ. ಮಾಂಸಾಹಾರದ ಕುರಿತಂತೆ ಸಂಘಪರಿವಾರ ನಡೆಸುತ್ತಿರುವ ರಾಜಕಾರಣ ದೇಶದಲ್ಲಿ ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ. ಆರ್ಥಿಕತೆಯ ಮೇಲೂ ಇದು ಪರಿಣಾಮಗಳನ್ನು ಬೀರುತ್ತಿದೆ. ಮನಸ್ಸುಗಳನ್ನು ಒಡೆಯುವುದಕ್ಕೆ ಕಟ್ಟಡಗಳನ್ನು ನೆಪವಾಗಿ ಬಳಸಲಾಗುತ್ತಿದೆ. ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಇದೀಗ ದಿಲ್ಲಿಯಲ್ಲಿ ಧ್ವಂಸಗೊಂಡಿರುವ 600 ವರ್ಷ ಹಳೆಯ ಕಟ್ಟಡ ಧ್ವಂಸಗಳು ಬಿಜೆಪಿಯ ಒಡೆಯುವ ರಾಜಕಾರಣದ ಭಾಗವಾಗಿದೆ. ಕಟ್ಟುವ ರಾಜಕಾರಣ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಿದ್ದರೆ, ಈ ಒಡೆಯುವ ರಾಜಕಾರಣ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ. ಭಾರತವನ್ನು ವೇದ ಕಾಲದ ‘ಸುವರ್ಣಯುಗ’ಕ್ಕೆ ಕೊಂಡೊಯ್ಯುವುದು ಅವರ ಉದ್ದೇಶ. ಆ ಉದ್ದೇಶ ಈಡೇರಬೇಕಾದರೆ, ಮೊದಲು ಸಂವಿಧಾನದ ಮೂಲಕ ನಾವು ಕಟ್ಟಿದ ಎಲ್ಲವೂ ಧ್ವಂಸವಾಗಬೇಕು. ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಆಧುನಿಕ ಶಿಕ್ಷಣ ವ್ಯವಸ್ಥೆ ಧ್ವಂಸವಾಗಿ ಕೇವಲ ಕ್ಷತ್ರಿಯರು ಮತ್ತು ಬ್ರಾಹ್ಮಣರಿಗಷ್ಟೇ ಸೀಮಿತವಾದ ಗುರುಕುಲ ಶಿಕ್ಷಣ ಆರಂಭವಾಗಬೇಕು. ಎಲ್ಲರ ಆರೋಗ್ಯಕ್ಕಾಗಿ ಕಟ್ಟಿದ ಆಧುನಿಕ ಆಸ್ಪತ್ರೆಗಳು ಧ್ವಂಸವಾಗಿ ಅಲ್ಲಿ ಬಾಬಾ ರಾಮ್‌ದೇವ್ ಕಟ್ಟುವ ಯೋಗಾಶ್ರಮಗಳು ನಿರ್ಮಾಣವಾಗಬೇಕು. ಕೆರೆ ನೀರನ್ನು ಮುಟ್ಟುವ, ದೇವಸ್ಥಾನಗಳಿಗೆ ಪ್ರವೇಶಿಸುವ ಅಧಿಕಾರ ಕೆಲವರಿಗಷ್ಟೇ ಇರಬೇಕು. ಅದಕ್ಕಾಗಿ ಮೊತ್ತ ಮೊದಲು ನೆಹರೂ ರಾಜಕೀಯ ಬೆಸೆದ ಮನಸ್ಸುಗಳನ್ನು ಬೇರೆ ಬೇರೆ ನೆಪಗಳನ್ನು ಮುಂದಿಟ್ಟು ಒಡೆಯಬೇಕು.

ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ವರದಿಗಳ ಪ್ರಕಾರ ಬಿಜೆಪಿ ಆಡಳಿತದ ನಾಲ್ಕು ರಾಜ್ಯಗಳು ಮತ್ತು ಆಪ್ ಆಳ್ವಿಕೆಯ ಕೇಂದ್ರಾಡಳಿತ ದಿಲ್ಲಿಯಲ್ಲಿ ಅಧಿಕಾರಿಗಳು ದಂಡನೀಯ ಕ್ರಮವಾಗಿ ಬಹುತೇಕ ಮುಸ್ಲಿಮರಿಗೆ ಸೇರಿದ 128 ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ. 2022ರ ಎಪ್ರಿಲ್‌ನಿಂದ ಜೂನ್ ನಡುವೆ ಈ ಬುಲ್ಡೋಜರ್ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ವರದಿ ಹೇಳಿದೆ. ಧ್ವಂಸಗೊಂಡ ಕಟ್ಟಡಗಳಲ್ಲಿಯ ನಿವಾಸಿಗಳು, ಕಾನೂನು ತಜ್ಞರು ಮತ್ತು ಪತ್ರಕರ್ತರನ್ನು ಸಂದರ್ಶಿಸುವ ಮೂಲಕ 128 ನೆಲಸಮ ಪ್ರಕರಣಗಳ ಪೈಕಿ 63ನ್ನು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಆಳವಾಗಿ ತನಿಖೆ ನಡೆಸಿದೆ. ನೆಲಸಮ ಕಾರ್ಯಾಚರಣೆಗಳಿಗೆ ಮುನ್ನ ಮುಸ್ಲಿಮ್ ಸಮುದಾಯದಿಂದ ಸರಕಾರದ ವಿರುದ್ಧ ಪ್ರತಿಭಟನೆಗಳು, ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. ಇದರ ವಿರುದ್ಧ ಸೇಡಿನ ಕ್ರಮವಾಗಿ ಅಮಾಯಕರ ಮನೆಗಳನ್ನು, ಅಂಗಡಿಗಳನ್ನು ಧ್ವಂಸಗೊಳಿಸಲಾಗಿತ್ತು.

ಸಾಧಾರಣವಾಗಿ ಅಕ್ರಮಗಳೆಂದು ಕಂಡು ಬಂದ ಕಟ್ಟಡಗಳನ್ನು ಕೆಡವುದಿದೆ. ಅಭಿವೃದ್ಧಿ ಕಾಮಗಾರಿಗಳಿಗಾಗಿಯೂ ಕಟ್ಟಡಗಳನ್ನು ಅನಿವಾರ್ಯವಾಗಿ ಕೆಡವಬೇಕಾಗುತ್ತದೆ. ಆದರೆ ಆ ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಕಾನೂನು ಪ್ರಕ್ರಿಯೆಗಳಿರುತ್ತವೆ. ಏಕಾಏಕಿ ಕೆಡಹುವಂತಿಲ್ಲ. ಆದರೆ ಇಲ್ಲಿ, ಒಂದು ನಿರ್ದಿಷ್ಟ ಸಮುದಾಯದ ಜನರು ಸರಕಾರದ ನೀತಿಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರನ್ನು ಅಪರಾಧಿಯನ್ನಾಗಿ ಘೋಷಿಸಿ ಅವರಿಗೆ ಸಂಬಂಧಿಸಿದ ನಿವಾಸಗಳನ್ನು ಕೆಡಹುವ ಹೊಸ ಕಾನೂನು ಜಾರಿಗೊಂಡಿದೆ. ಇಲ್ಲಿ ಸರಕಾರವೇ ಆರೋಪಿಯ ಅಪರಾಧವನ್ನು ನಿರ್ಧರಿಸುತ್ತದೆ ಮತ್ತು ಶಿಕ್ಷೆಯನ್ನು ಘೋಷಿಸುತ್ತದೆ. ವಿಪರ್ಯಾಸವೆಂದರೆ, ಒಬ್ಬ ಮಾಡಿದ ತಪ್ಪಿಗೆ ಇಡೀ ಕುಟುಂಬವೇ ಈ ಮೂಲಕ ಶಿಕ್ಷೆಯನ್ನು ಅನುಭವಿಸಬೇಕು. ಈ ಮೂಲಕ ಅಲ್ಪಸಂಖ್ಯಾತರಿಗೆ, ಶೋಷಿತ ಸಮುದಾಯಕ್ಕೆ ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುವ ಯಾವ ಅಧಿಕಾರವೂ ಇಲ್ಲ ಎನ್ನುವ ಸೂಚನೆಯನ್ನು ಆಳುವವರು ನೀಡುತ್ತಿದ್ದಾರೆ. ಒಬ್ಬ ಅಪರಾಧ ನಡೆಸಿದರೆ ಆತನ ನಿವಾಸದ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಬಹುದು ಎಂದಾದರೆ, ಮೊತ್ತ ಮೊದಲು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರುವ ರಾಜಕಾರಣಿಗಳ ನಿವಾಸಗಳ ಮೇಲೆ ಬುಲ್ಡೋಜರ್ ಹರಿಸಬೇಕಾಗಿದೆ. ಆದರೆ ಬುಲ್ಡೋಜರ್ ನ್ಯಾಯವ್ಯವಸ್ಥೆಯ ಪರಿದಿಗೆ ರಾಜಕಾರಣಿಗಳು ಒಳಪಡುವುದಿಲ್ಲ. ಇಲ್ಲಿ ಸರಕಾರ ಬಡವರು, ಶೋಷಿತ ಸಮುದಾಯದ ಮೇಲಷ್ಟೇ ಅಲ್ಲ, ಬೆಸೆದ ಮನಸ್ಸುಗಳನ್ನು ಒಡೆಯುವುದಕ್ಕಾಗಿಯೇ ಈ ಬುಲ್ಡೋಜರ್‌ಗಳನ್ನು ಒಂದು ಆಯುಧವಾಗಿ ಬಳಸುತ್ತಿದೆ ಎನ್ನುವುದನ್ನು ಆ್ಯಮ್ನೆಸ್ಟಿ ವರದಿ ಗುರುತಿಸಿದೆ.

ಕಳೆದ ಜನವರಿಯಲ್ಲಿ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು 600 ವರ್ಷದ ಹಳೆಯ ಮಸೀದಿಯೊಂದನ್ನು ಧ್ವಂಸಗೊಳಿಸಿತು. ಯಾವ ಹಿಂಸಾಚಾರ, ಪ್ರತಿಭಟನೆಗಳು ನಡೆಯದೇ ಇದ್ದರೂ, ಒಂದು ನಿರ್ದಿಷ್ಟ ಸಮುದಾಯದ ಜನರಿಗೆ ಸಂಬಂಧಿಸಿದೆ ಎನ್ನುವ ಕಾರಣಕ್ಕೆ ಪುರಾತನ ಮಸೀದಿಯೊಂದನ್ನು ಪ್ರಾಧಿಕಾರ ಬುಲ್ಡೋಜರ್‌ನಿಂದ ಇಲ್ಲವಾಗಿಸಿತು. ಇದೀಗ ನ್ಯಾಯಾಲಯ ಮಧ್ಯ ಪ್ರವೇಶಿಸಿದೆ. ‘ಜಾಗದಲ್ಲಿ ಯಥಾಸ್ಥಿತಿ ಕಾಪಾಡಿ’ ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಸರಕಾರ ಏನು ಮಾಡಬೇಕೋ ಅದನ್ನು ಮಾಡಿ ಮುಗಿಸಿದೆ. ಇನ್ನು ಯಥಾಸ್ಥಿತಿಯನ್ನು ಕಾಪಾಡಿ ಎನ್ನುವ ನ್ಯಾಯಾಲಯದ ಆದೇಶದಿಂದ ವಿಶೇಷ ಪ್ರಯೋಜನವಾಗಬಹುದು ಎನ್ನುವುದನ್ನು ನಿರೀಕ್ಷಿಸುವಂತಿಲ್ಲ. ಅಕ್ರಮವಾಗಿ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದು ಅಧಿಕಾರಿಗಳ ವಾದವಾಗಿದೆ. ಅಧಿಕಾರಿಗಳ ಈ ವಾದವೇ ‘ಅಕ್ರಮ’ವಾದುದು ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಲಾಲ್‌ಕೋಟ್ ಬಳಿಯಿದ್ದ ಈ 12ನೇ ಶತಮಾನದ ಮಸೀದಿ ಅಕ್ರಮವಾಗುವುದು ಹೇಗೆ ಎಂದು ತಜ್ಞರು ಪ್ರಶ್ನಿಸಿದ್ದಾರೆ. ಇಷ್ಟಕ್ಕೂ ಅಲ್ಲಿದ್ದದ್ದು ಬರೇ ಮಸೀದಿಯಾಗಿರಲಿಲ್ಲ. 12ನೇ ಶತಮಾನದಲ್ಲಿ ಬದುಕಿದ ಸೂಫಿ ಸಂತರ ಸಮಾಧಿಯೂ ಇಲ್ಲಿತ್ತು. ಹಿಂದೂ-ಮುಸ್ಲಿಮ್ ಧರ್ಮೀಯರು ಜೊತೆಯಾಗಿ ಈ ದರ್ಗಾದ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರು. ಹಿಂದೂ-ಮುಸ್ಲಿಮರನ್ನು ಬೆಸೆದ ಎಲ್ಲ ಸೇತುವೆಗಳನ್ನು ಧ್ವಂಸಗೊಳಿಸುವುದು ಸರಕಾರದ ಉದ್ದೇಶವಾಗಿರುವಾಗ, ಈ ದರ್ಗಾ ಸರಕಾರದ ಪಾಲಿಗೆ ಅಕ್ರಮವಾಗಿ ಕಾಣುವುದು ಸಹಜ. ಬಾಬರಿ ಮಸೀದಿಯಾಗಿರಲಿ, ದಿಲ್ಲಿಯ ಬಾಬಾ ಹಾಜಿ ರಿಝ್ವಿ ದರ್ಗಾ ಆಗಿರಲಿ ಎರಡೂ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಸೊತ್ತು ಮಾತ್ರವಾಗಿರಲಿಲ್ಲ. ಈ ದೇಶದ ಇತಿಹಾಸಕ್ಕೆ ಸೇರಿದ ಸೊತ್ತಾಗಿತ್ತು. ಒಂದು ಧರ್ಮದ ಧಾರ್ಮಿಕ ಕಟ್ಟಡ ಎನ್ನುವುದಕ್ಕಿಂತ, ಈ ದೇಶದ ಇತಿಹಾಸಕ್ಕೆ ಸಂಬಂಧಿಸಿದ ಮಹತ್ವದ ಸ್ಮಾರಕಗಳು ಎನ್ನುವ ಕಾರಣಕ್ಕೆ ಅದಕ್ಕೆ ರಕ್ಷಣೆ ನೀಡುವುದು ಸರಕಾರದ ಕರ್ತವ್ಯವಾಗಿತ್ತು. ಬಾಬರಿ ಮಸೀದಿಯನ್ನು ಧ್ವಂಸಗೈದವರು ಯಾರು ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ಇನ್ನೂ ಸ್ಪಷ್ಟವಿಲ್ಲ. ಆದರೆ ದಿಲ್ಲಿಯಲ್ಲಿ ನಡೆದ ಧ್ವಂಸದ ನೇತೃತ್ವವನ್ನು ಸರಕಾರವೇ ವಹಿಸಿಕೊಂಡಿದೆ. ಧ್ವಂಸ ಮಾಡಿರುವುದು ಒಂದು ವೇಳೆ ತಪ್ಪೇ ಆಗಿದ್ದರೆ, ಧ್ವಂಸಗೈದವರಿಗೆ ಶಿಕ್ಷೆಯಾಗುವ ಅಗತ್ಯವಿಲ್ಲವೆ?ಅಲ್ಲಿ ಧ್ವಂಸಗೈದವರ ಗುರಿ ಕೇವಲ ಕಟ್ಟಡ ಮಾತ್ರ ಆಗಿರಲಿಲ್ಲ. ನೆಹರೂ ಕಟ್ಟಿದ ಸೌಹಾರ್ದ ಭಾರತವನ್ನೇ ಅವರು ಧ್ವಂಸಗೈಯುತ್ತಿದ್ದಾರೆ. ಇಡೀ ಭಾರತದ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ, ಅದರ ಒಡಲೊಳಗೆ ಸಮಾಧಿಯಾಗಿರುವ ವರ್ಣ, ಜಾತಿಯ ಅಸಮಾನತೆಗಳನ್ನೊಳಗೊಂಡ ಮನುವಿನ ಕಾಲದ ಪಳೆಯುಳಿಕೆಗಳನ್ನು ಹೊರತೆಗೆದು ಅದರ ಮೂಲಕ ವರ್ಣಾಶ್ರಮ ವ್ಯವಸ್ಥೆಯ ಹಳೆಯ ಭಾರತವನ್ನು ಮರುನಿರ್ಮಿಸುವ ಕನಸು ಕಾಣುತ್ತಿದ್ದಾರೆ. ಇಂದು ನ್ಯಾಯಾಲಯ ಹಳೆಯ ಸ್ಮಾರಕಗಳನ್ನು ಬುಲ್ಡೋಜರ್‌ನಿಂದ ರಕ್ಷಿಸುವುದರ ಜೊತೆಗೆ, ಈ ದೇಶದ ಸೌಹಾರ್ದ ಸೇತುವೆಗಳನ್ನು ಉಳಿಸಲು ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News