ಸಂವಿಧಾನದ ಆಶಯಗಳನ್ನು ತಿರುಚಲು ಹೊರಟ ಕಿಡಿಗೇಡಿಗಳು

Update: 2023-09-22 04:46 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಂಸತ್ತಿನಲ್ಲಿ ಮುಖ್ಯ ಮಸೂದೆ ಮಂಡನೆಯಾಗುವ ಸಂದರ್ಭದಲ್ಲಿ ಸಂಸತ್ತಿನ ಚರ್ಚೆಯ ಹಾದಿಯನ್ನು ತಪ್ಪಿಸಲು ಕಿಡಿಗೇಡಿ ಕೆಲಸಗಳನ್ನು ಬಿಜೆಪಿ ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಸಂಸತ್ತಿನಲ್ಲಿ ಮಹಿಳಾ ಮಸೂದೆಯ ಕುರಿತು ಮಹತ್ವದ ಚರ್ಚೆ ನಡೆಯುತ್ತಿರುವಾಗಲೇ, ಚರ್ಚೆಯನ್ನು ವಿಷಯಾಂತರಗೊಳಿಸಲು ಸಂವಿಧಾನದ ಪೀಠಿಕೆಯನ್ನು ತಿದ್ದುವ ಕಿಡಿಗೇಡಿತನವನ್ನು ಪ್ರದರ್ಶಿಸಿದೆ. ನೂತನ ಸಂಸತ್ ಭವನದ ಮೊದಲ ದಿನದಂದು ಸಂಸದರಿಗೆ ಕೊಡಲಾಗಿರುವ ಸಂವಿಧಾನದ ಪ್ರತಿಗಳ ಪೀಠಿಕೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಪದಗಳು ಕಾಣೆಯಾಗಿವೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಇದು ಆಕಸ್ಮಿಕವಾಗಿ ನಡೆದಿರುವ ಕೃತ್ಯ ಅಲ್ಲ ಎನ್ನುವುದನ್ನು ಬಿಜೆಪಿಯೂ ಸ್ಪಷ್ಟಪಡಿಸಿದೆ. ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ ‘‘೧೯೫೦ರಲ್ಲಿ ಅಂಗೀ ಕರಿಸಲಾದ ಸಂವಿಧಾನದ ಪ್ರತಿಗಳನ್ನು ವಿತರಿಸಲಾಗಿದೆ. ಸಂವಿಧಾನ ರಚನೆಯಾದಾಗ ಹೀಗಿತ್ತು. ಬಳಿಕ ಅದಕ್ಕೆ ತಿದ್ದುಪಡಿ ತರಲಾಯಿತು’’ ಎಂದು ವಿವರಿಸಿದ್ದಾರೆ. 

ಸಂವಿಧಾನದ ಮೂಲ ಪೀಠಿಕೆಯಲ್ಲಿ ‘‘ಭಾರತದ ಜನಗಳಾದ ನಾವು ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ....’’ ಹೀಗೆ ಮುಂದುವರಿಯುತ್ತದೆ. ಆದರೆ ೧೯೭೬ರಲ್ಲಿ  ಭಾರತದ ಸಂವಿಧಾನಕ್ಕೆ ತಂದ ೪೨ನೇ ತಿದ್ದುಪಡಿಯ ಬಳಿಕ ಈ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳು ಸೇರಿದವು. ಈ ಪದಗಳು ಸೇರದೇ ಇದ್ದರೂ ಸಂವಿಧಾನದ ಮೂಲ ಆಶಯ ಸಮಾಜವಾದಿ ಮತ್ತು ಜಾತ್ಯತೀತವಾಗಿತ್ತು ಎನ್ನುವುದನ್ನು ಪೀಠಿಕೆಯ ಪೂರ್ಣ ಪಾಠ ನಮಗೆ ತಿಳಿಸಿಕೊಡುತ್ತದೆ. ಇಷ್ಟಾದರೂ ತಿದ್ದುಪಡಿಯ ಬಳಿಕ ಸಂವಿಧಾನದ ಪೀಠಿಕೆಯನ್ನು ‘‘ಭಾರತದ ಜನಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ....’’ ಎಂದು ಓದಿಕೊಂಡು ಬಂದಿದ್ದೇವೆ. ಈ ತಿದ್ದುಪಡಿಯನ್ನು ಅಂದಿನ ನಾಯಕರು ತಮ್ಮ ಖಾಸಗಿ ಕೊಠಡಿಯಲ್ಲಿ ಕುಳಿತು ಮಾಡಿರುವುದಲ್ಲ. ಸಂವಿಧಾನವೇ ಪ್ರತಿಪಾದಿಸುವ ಪ್ರಜಾಸತ್ತಾತ್ಮಕವಾದ ದಾರಿಯಲ್ಲಿ ಸಂಸತ್‌ನ ಪೂರ್ಣ ಬೆಂಬಲದೊಂದಿಗೆ ಈ ಪದಗಳನ್ನು ಸೇರಿಸಲಾಗಿತ್ತು. ಒಂದು ವೇಳೆ ಈ ಎರಡು ಪದಗಳನ್ನು ತೆಗೆದು ಹಾಕುವುದಾದರೂ, ಪ್ರಜಾಸತ್ತಾತ್ಮಕವಾದ ದಾರಿಯಲ್ಲೇ ಸರಕಾರ ಮುಂದಡಿಯಿಡಬೇಕು. ಇದು ಆನಂತರ ಸೇರಿಸಿದ್ದು ಎನ್ನುವ ಕಾರಣ ಮುಂದಿಟ್ಟು ಸೇರಿಸಿದ ಪದಗಳನ್ನು ಬಿಜೆಪಿಯ ನಾಯಕರೇ ಕುಳಿತು ಅಳಿಸುವುದಕ್ಕಾಗುವುದಿಲ್ಲ. ಆದುದರಿಂದ, ನೂತನ ಸಂಸತ್ ಭವನದಲ್ಲಿ ವಿತರಿಸಿದ ಸಂವಿಧಾನದ ಪೀಠಿಕೆಯ ಪ್ರತಿಯನ್ನು ‘ಬಿಜೆಪಿ ನಾಯಕರಿಂದ ತಿರುಚಲ್ಪಟ್ಟ ಪ್ರತಿ’ ಎಂದು ಪರಿಗಣಿಸಬೇಕಾಗುತ್ತದೆ. ಇದು ಸಂವಿಧಾನದ ಜೊತೆಗೆ ಬಿಜೆಪಿಯ ನಾಯಕರು ಪ್ರದರ್ಶಿಸಿದ ಕಿಡಿಗೇಡಿತನವಾಗಿದೆ. ದೇಶದ ಮುಂದೆ ಕೇಂದ್ರ ಸರಕಾರ ಇದಕ್ಕಾಗಿ ಕ್ಷಮೆಯಾಚಿಸಬೇಕು.

ಇದನ್ನು ಆಕಸ್ಮಿಕವಾಗಿ ನಡೆದ ಪ್ರಮಾದವೆಂದು ಬದಿಗೆ ತಳ್ಳುವಂತಿಲ್ಲ. ಸಂವಿಧಾನದೊಳಗಿರುವ ಜಾತ್ಯತೀತ ಮತ್ತು ಸಮಾಜವಾದಿ ಪದದ ಕುರಿತಂತೆ ಬಿಜೆಪಿಯ ಹಲವು ನಾಯಕರಿಗೆ ಆಕ್ಷೇಪಗಳಿವೆ. ೨೦೨೦ರಲ್ಲಿ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರು ರಾಜ್ಯ ಸಭೆಯಲ್ಲಿ ‘ಸಮಾಜವಾದಿ’ ಪದವನ್ನು ಕೈ ಬಿಡಬೇಕು ಎಂದು ನಿರ್ಣಯವನ್ನು ಮಂಡಿಸಿದ್ದರು. ಇದೇ ಸಂದರ್ಭದಲ್ಲಿ ‘ಸೆಕ್ಯೂಲರ್’ ಪದದ ಕುರಿತಂತೆ ಆರೆಸ್ಸೆಸ್ ನಾಯಕರು ಸದಾ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ‘ಜಾತ್ಯತೀತ’ ಎನ್ನುವ ಪದ ಕೂಡ ಈ ದೇಶದ ಬ್ರಾಹ್ಮಣವಾದಿಗಳಿಗೆ ಅಸಹನೀಯವಾಗಿದೆ. ಯಾಕೆಂದರೆ, ಈ ದೇಶದಲ್ಲಿ ಸಂಘಪರಿವಾರ ಪ್ರತಿಪಾದಿಸುವ ಹಿಂದೂ ಧರ್ಮವೆನ್ನುವುದೇ ನೂರಾರು ಜಾತಿಗಳ ಸಂಘಟಿತರ ರೂಪ. ಜಾತಿಗಳೇ ಇಲ್ಲವಾದರೆ ಸಂಘಪರಿವಾರ ಪ್ರತಿಪಾದಿಸುವ ಹಿಂದೂಧರ್ಮ ಅಸ್ತಿತ್ವದಲ್ಲೇ ಉಳಿಯುವುದಿಲ್ಲ ಎನ್ನುವ ಭಯ ಅದರ ನಾಯಕರಿಗಿದೆ. ಈ ದೇಶದ ದೇವಸ್ಥಾನಗಳ ಉಸ್ತುವಾರಿ ಒಂದು ನಿರ್ದಿಷ್ಟ ಜಾತಿಯ ಕೈಯಲ್ಲೇ ಇರಬೇಕು ಎನ್ನುವುದು ಕೂಡ ಅವರ ಅಘೋಷಿತ ತೀರ್ಮಾನವಾಗಿದೆ. ನೆಹರೂ, ಅಂಬೇಡ್ಕರ್ ಅವರು ಜಾತ್ಯತೀತವಾಗಿ ಈ ದೇಶವನ್ನು ಕಟ್ಟಿ ಬೆಳೆಸಿದರು. ಆ ಮೂಲಕವೇ ಭಾರತದ ಅಭಿವೃದ್ಧಿ ಸಾಧ್ಯವಾಯಿತು. ಆದರೆ ಬಿಜೆಪಿ ಪಾಕಿಸ್ತಾನ ಮಾದರಿಯಲ್ಲಿ ಭಾರತವನ್ನು ಕಟ್ಟಲು ಮುಂದಾಗಿದೆ. ಪಾಕಿಸ್ತಾನದಂತೆಯೇ ಈ ದೇಶವೂ ಹಿಂದೂ ಅಥವಾ ವೈದಿಕ ಪ್ರಧಾನ ದೇಶವಾಗಬೇಕು ಎನ್ನುವುದು ಅವರ ಒಳಗಿನ ಬಯಕೆಯಾಗಿದೆ. ಸಂವಿಧಾನ ಈ ನಿಟ್ಟಿನಲ್ಲಿ ಅವರಿಗೆ ಬಹುದೊಡ್ಡ ತಡೆ. ಈ ದೇಶಕ್ಕೆ ಈ ಹಿಂದಿನ ನಾಯಕರು ಜಾತ್ಯತೀತ ಸ್ವರೂಪವನ್ನು ನೀಡದೇ ಇದ್ದಿದ್ದರೆ ಇಂದು ಭಾರತ ಇನ್ನೊಂದು ಪಾಕಿಸ್ತಾನವಾಗಿ ಬಿಡುತ್ತಿತ್ತು. ಸಮಾಜವಾದಿ ಆಶಯಗಳನ್ನು ಸಂವಿಧಾನ ಅಳವಡಿಸಿಕೊಳ್ಳದೇ ಇದ್ದಿದ್ದರೆ ದೇಶದಲ್ಲಿ  ಬಡತನ, ಅಸಮಾನತೆಯನ್ನು ಇಲ್ಲವಾಗಿಸುವುದು ಸುಲಭವಾಗುತ್ತಿರಲಿಲ್ಲ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ಆಹಾರವನ್ನು ಸಮಾನವಾಗಿ ಕಲ್ಪಿಸುವುದು ಸಮಾಜವಾದಿ ಆಶಯದ ಗುರಿಯಾಗಿದೆ. 

ಸಂವಿಧಾನದಿಂದ ಜಾತ್ಯತೀತ ಪದವನ್ನು ತೆಗೆದುಹಾಕುವುದೆಂದರೆ ಈ ದೇಶವನ್ನು  ಪರೋಕ್ಷವಾಗಿ ಇನ್ನೊಂದು ಪಾಕಿಸ್ತಾನವನ್ನಾಗಿಸುವುದೆಂದರ್ಥ. ‘ಪಾಕಿಸ್ತಾನ ಜಾತ್ಯತೀತ ದೇಶವಾಗಬೇಕು’ ಎನ್ನುವ ಮಹಾತ್ಮಾಗಾಂಧೀಜಿ ಮತ್ತು ಜಿನ್ನಾ ಅವರ ಹಂಬಲಿಕೆಯನ್ನು ತಿರಸ್ಕರಿಸಿದ ಕಾರಣಕ್ಕೆ ಪಾಕಿಸ್ತಾನ ಯಾವ ಸ್ಥಿತಿಗೆ ಬಂದು ನಿಂತಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ, ಸಮಾಜವಾದಿ ಪದವನ್ನು ತೆಗೆದುಹಾಕುವುದೆಂದರೆ, ಎಲ್ಲರಿಗೂ ಸಮಾನ ಆಹಾರ, ಶಿಕ್ಷಣ, ಆರೋಗ್ಯದ ಹಕ್ಕನ್ನು ತಿರಸ್ಕರಿಸುವುದು ಎಂದು ಅರ್ಥವಾಗಿದೆ. ಅಂದರೆ ಈ ದೇಶದ ಎಲ್ಲ ಪ್ರಜೆಗಳನ್ನು ಸಮಾನವಾಗಿ ನೋಡುವ, ಇಲ್ಲಿನ ಸಂಪನ್ಮೂಲಗಳನ್ನು ಎಲ್ಲರಿಗೂ ಸಮಾನವಾಗಿ ಹಂಚುವುದು ಸರಕಾರಕ್ಕೆ ಬೇಕಾಗಿಲ್ಲ. ಅದಾನಿ ಮತ್ತು ಅಂಬಾನಿಯ ಉದ್ಧಾರವೇ ಭಾರತದ ಉದ್ಧಾರವೆಂದು ತಿಳಿದುಕೊಂಡಿರುವ ಸರಕಾರಕ್ಕೆ ಸಮಾಜವಾದಿ ಆಶಯಗಳು ‘ಬಿಸಿ ತುಪ್ಪ’ದಂತಾಗಿದೆ. ಆದುದರಿಂದಲೇ ಸಂವಿಧಾನದಿಂದ ಆ ಪದವನ್ನು ತೆಗೆದು ಹಾಕಲು ಹೊರಟಿದೆ. ಅದರ ಭಾಗವಾಗಿಯೇ ಸಂವಿಧಾನದ ತಿರುಚಿದ ಪುಟಗಳನ್ನು ಸಂಸತ್‌ನಲ್ಲಿ ಹಂಚಿದೆ.

ಭಾರತದ ಅಭಿವೃದ್ಧಿಗೆ ಧರ್ಮಾಂಧತೆ ಮತ್ತು ಜಾತೀಯತೆ ಅತಿ ದೊಡ್ಡ ತೊಡಕಾಗಿದೆ. ಭಾರತದ ಸರಕಾರವನ್ನು ಇಲ್ಲಿನ ಧಾರ್ಮಿಕ ಮುಖಂಡರು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ, ಜಾತ್ಯತೀತ ಪದವನ್ನು ಸಂವಿಧಾನದಿಂದ ಕಿತ್ತು ಹಾಕಲು ಮುಂದಾಗಿರುವುದು ಭಾರತದ ಪ್ರಜಾಸತ್ತೆಯ ಪಾಲಿಗೆ ಆತಂಕಕಾರಿಯಾಗಿದೆ. 

ಭಾರತದಲ್ಲಿ ಜಾತೀಯತೆ ಮೊದಲಿಗಿಂತಲೂ ತೀವ್ರ ರೀತಿಯಲ್ಲಿ ವಿಜೃಂಭಿಸುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ದೇವಾಲಯದ ಕಾರ್ಯಕ್ರಮವೊಂದರಲ್ಲಿ ದೀಪಬೆಳಗಿಸಲು ಅಲ್ಲಿನ ಸಚಿವರಿಗೇ ಅವಕಾಶ ಸಿಗದೇ ಇರುವುದು ಮಾಧ್ಯಮಗಳಲ್ಲಿ ವರದಿಯಾದವು. ಅಷ್ಟೇ ಯಾಕೆ, ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ದಲಿತ ಮಹಿಳೆ ಎನ್ನುವ ಕಾರಣಕ್ಕಾಗಿಯೇ ರಾಷ್ಟ್ರಪತಿಯನ್ನು ಹೊರಗಿಡಲಾಗಿತ್ತು ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇಂತಹ ಹೊತ್ತಿನಲ್ಲಿ, ಜಾತ್ಯತೀತ, ಸಮಾಜವಾದಿ ಆಶಯಗಳಿಗೆ ಇನ್ನಷ್ಟು ಬಲ ತುಂಬಬೇಕು. ಈ ದೇಶದ ದಲಿತರು, ಹಿಂದುಳಿದ ವರ್ಗಗಳ ಜನರನ್ನು ಆಡಳಿತದಲ್ಲಿ ಮುಂಚೂಣಿಗೆ ತರಲು ಪ್ರಯತ್ನಿಸಬೇಕು. ಆದರೆ ಬಿಜೆಪಿ ನೇತೃತ್ವದ ಸರಕಾರ ಇದಕ್ಕೆ ವಿರುದ್ಧ ಹೆಜ್ಜೆಗಳನ್ನು ಇಡುತ್ತಿದೆ. ಈ ಪ್ರಕರಣವನ್ನು ನಾವು 

ನಿರ್ಲಕ್ಷಿಸಿದ್ದೇ ಆದರೆ ಮುಂದೊಂದು  ದಿನ ಮನುಶಾಸ್ತ್ರದ ಪುಟಗಳನ್ನೇ ಸಂವಿಧಾನದ ಪುಟಗಳೆಂದು ಸಂಸತ್‌ಸದಸ್ಯರಿಗೆ ಹಂಚಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. 


Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News