ಉದ್ಘಾಟನೆಯ ದಿನವೇ ಸೋರಿಕೆಯಾಗಿದ್ದ ಪ್ರಜಾಪ್ರಭುತ್ವದ ದೇಗುಲ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಮೇ ೨೮ಕ್ಕೆ ನೂತನ ಸಂಸತ್ ಉದ್ಘಾಟನೆಯಾಗಿ ಒಂದು ವರ್ಷ ಪೂರ್ತಿಯಾಗಿತ್ತು. ಈ ಸಂಭ್ರಮವನ್ನು ಬಿಜೆಪಿ ನಾಯಕರು ಭರ್ಜರಿಯಾಗಿಯೇ ಆಚರಿಸಿದ್ದರು. ‘ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಹಿಡಿದ ಕನ್ನಡಿ ನೂತನ ಸಂಸತ್’ ಎಂದು ಅವರು ಈ ಸಂದರ್ಭದಲ್ಲಿ ಬಣ್ಣಿಸಿದ್ದರು. ಸಂಸತ್ ಭವನ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ತನ್ನು ‘ಪ್ರಜಾಪ್ರಭುತ್ವದ ದೇಗುಲ’ ಎಂದು ಬಣ್ಣಿಸಿದ್ದರು. ವಿಪರ್ಯಾಸವೆಂದರೆ ಈ ದೇಗುಲ ನಿರ್ಮಾಣವಾದ ಒಂದು ವರ್ಷದಲ್ಲೇ ಸೋರುತ್ತಿರುವ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಸುಮಾರು ೯೭೧ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ, ಭೂಕಂಪ ನಿರೋಧಕವಾಗಿ ೧೫೦ ವರ್ಷಗಳಿಗೂ ಹೆಚ್ಚು ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದ್ದ ನೂತನ ಸಂಸತ್ ಭವನದ ಮುಖ್ಯ ದ್ವಾರ ಉದ್ಘಾಟನೆಯಾದ ಒಂದೇ ವರ್ಷದಲ್ಲಿ ಸೋರಿಕೆಯಾಗುತ್ತಿರುವುದು ಭಾರೀ ಟೀಕೆ, ವ್ಯಂಗ್ಯಗಳಿಗೆ ಕಾರಣವಾಗಿದೆ. ಮೋದಿ ಅಭಿವೃದ್ಧಿಯ ಅಸಲಿ ಬಣ್ಣ ಈ ಮೂಲಕ ಬಹಿರಂಗವಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ. ಸಂಸತ್ ಭವನ ಸೋರುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಲೋಕಸಭೆ ಕಾರ್ಯಾಲಯ, ಸೋರಿಕೆಗೆ ತೇಪೆ ಹಚ್ಚಿದೆ. ‘‘ನೂತನ ಸಂಸತ್ ಭವನದ ಲಾಬಿ ಮೇಲ್ಭಾಗದಲ್ಲಿ ಇರುವ ಗಾಜಿನ ಗುಮ್ಮಟ ಅಳವಡಿಸಲು ಬಳಸಲಾದ ಅಂಟು ಕದಲಿರುವುದರಿಂದ ಸಣ್ಣ ಸೋರಿಕೆ ಉಂಟಾಗಿದೆ.ಅದನ್ನು ಅಗತ್ಯ ಕ್ರಮಗಳ ಮೂಲಕ ಸರಿಪಡಿಸಲಾಗಿದೆ’’ ಎಂದು ಲೋಕಸಭಾ ಕಾರ್ಯಾಲಯ ಸ್ಪಷ್ಟೀಕರಣ ನೀಡಿದೆ. ಆದರೆ ಈ ಸ್ಪಷ್ಟೀಕರಣಕ್ಕೆ ನೂತನ ಸಂಸತ್ ಭವದ ಸೋರಿಕೆಯನ್ನು ತಡೆಯುವಂತೆ ಶಕ್ತಿ ಇದ್ದಂತಿಲ್ಲ. ಸೋರಿಕೆ ಹೇಗಾಯಿತು ಎನ್ನುವ ಸ್ಪಷ್ಟೀಕರಣಕ್ಕಿಂತ, ಯಾರ ಬೇಜವಾಬ್ದಾರಿಯಿಂದ ಆಯಿತು ಮತ್ತು ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದು ಬಹಿರಂಗವಾಗುವುದು ಈಗಿನ ಅಗತ್ಯವಾಗಿದೆ.
ಮೋದಿ ಯುಗದಲ್ಲಿ ಭಾರತದ ಅಭಿವೃದ್ಧಿಯು ಸೋರಿಕೆಯ ಕಾರಣಕ್ಕಾಗಿ ಸುದ್ದಿಯಾಗುತ್ತಿರುವುದು ವಿಪರ್ಯಾಸವಾಗಿದೆ. ಸಾಲು ಸಾಲು ಸೇತುವೆಗಳು ಕುಸಿಯುವ ಮೂಲಕ ಬಿಹಾರದ ಅಭಿವೃದ್ಧಿ ಕೆಲ ದಿನಗಳಿಂದ ಮಾಧ್ಯಮಗಳಿಗೆ ಆಹಾರವಾಯಿತು. ಮಧ್ಯಪ್ರದೇಶ, ದಿಲ್ಲಿ, ಗುಜರಾತ್‌ನಲ್ಲಿ ಏರ್‌ಪೋರ್ಟ್ ಮೇಲ್ಛಾವಣಿಗಳೇ ಕುಸಿದು ಬೀಳತೊಡಗಿದವು. ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ದುಮ್ನಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಮುಂಭಾಗದ ಮೇಲ್ಛಾವಣಿಯ ಭಾಗವೊಂದು ಕುಸಿದು ಬಿತ್ತು. ಇದು ಮೂರು ದಿನಗಳ ಹಿಂದೆ ಅಂದರೆ ಕಳೆದ ಮಾರ್ಚ್ ೧೦ರಂದು ಪ್ರಧಾನಿ ಮೋದಿ ಉದ್ಘಾಟಿಸಿದ ಮೇಲ್ಛಾವಣಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇದಕ್ಕೆ ಬಿಜೆಪಿ ಸ್ಪಷ್ಟೀಕರಣ ನೀಡಿದ ಮರುದಿನ ದಿಲ್ಲಿಯ ಇಂದಿರಾಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್‌ನ ಮೇಲ್ಛಾವಣಿಯ ಒಂದು ಭಾಗ ಕುಸಿದು ಒಬ್ಬ ಮೃತಟ್ಟು, ಹಲವರು ಗಾಯಗೊಂಡರು. ಈ ಟರ್ಮಿನಲ್‌ನ ವಿಸ್ತರಣಾ ಭಾಗ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿತ್ತು. ಈ ಮೇಲ್ಛಾವಣಿ ಕುಸಿತದ ಬಗ್ಗೆ ತನಿಖೆ ನಡೆಸಲು ಸರಕಾರ ಆದೇಶ ನೀಡುತ್ತಿದ್ದಂತೆಯೇ ಗುಜರಾತಿನ ರಾಜ್‌ಕೋಟದಲ್ಲಿ ಏರ್‌ಪೋರ್ಟ್ ಮೇಲ್ಛಾವಣಿ ಕುಸಿತಗೊಂಡಿತು. ಕಳೆದ ಹತ್ತು ವರ್ಷಗಳಲ್ಲಿ ದೇಶವು ಭ್ರಷ್ಟಾಚಾರ ಸೂಚ್ಯಂಕದಲ್ಲಿ ಅಗ್ರಸ್ಥಾನಕ್ಕೇರುವುದಕ್ಕೂ ಈ ಕುಸಿತಕ್ಕೂ ಸಂಬಂಧಗಳಿರುವುದನ್ನು ಈಗಾಗಲೇ ಆರ್ಥಿಕ ತಜ್ಞರು ಗುರುತಿಸಿದ್ದಾರೆ.
ಕನಿಷ್ಠ ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ರಾಮಮಂದಿರ ನಿರ್ಮಾಣದಲ್ಲಾದರೂ ಬಿಜೆಪಿಯು ಪ್ರಾಮಾಣಿಕತೆಯನ್ನು ಮೆರೆಯಬಹುದು ಎಂದು ಜನರು ಭಾವಿಸಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವಸರವಸರವಾಗಿ ಉದ್ಘಾಟನೆಗೊಂಡಿದ್ದ ರಾಮಮಂದಿರವೂ ಸೋರುವ ಮೂಲಕ ಸುದ್ದಿಯಾಯಿತು. ರಾಮಮಂದಿರವನ್ನು ಬೆಸೆಯುವ ೧೪ ಕಿ.ಮೀ. ಉದ್ದದ ರಾಮಪಥವೂ ಮೊದಲ ಮಳೆಗೆ ಹೊಂಡಗುಂಡಿಗಳಿಂದ ತುಂಬಿಹೋಗಿದೆ. ತನ್ನ ಮಾನ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಸರಕಾರ ೬ ಇಂಜಿನಿಯರ್‌ಗಳನ್ನು ಅಮಾನತು ಮಾಡಿತು. ಆದರೆ ರಾಮನ ಹೆಸರಿನಲ್ಲಿ ಕೋಟ್ಯಂತರ ಹಣವನ್ನು ನುಂಗಿಹಾಕಿದ ರಾಜಕೀಯ ನಾಯಕರು ಮಾತ್ರ ಇನ್ನೂ ರಾಮಭಕ್ತರ ಮುಖವಾಡದಲ್ಲಿ ಸಾರ್ವಜನಿಕವಾಗಿ ಯಾವ ಲಜ್ಜೆಯೂ ಇಲ್ಲದೆ ಓಡಾಡುತ್ತಿದ್ದಾರೆ. ಇದೀಗ ಎಲ್ಲದಕ್ಕೂ ಕಲಶವಿಟ್ಟಂತೆ, ನೂತನ ಸಂಸತ್‌ಭವನವೂ ಸೋರುವ ಮೂಲಕ ಮೋದಿಯುಗದ ಅಭಿವೃದ್ಧಿಯ ‘ಗತಿ’ಯನ್ನು ವಿಶ್ವಕ್ಕೆ ಸಾರುತ್ತಿದೆ.
ನೂತನ ಸಂಸತ್‌ಗೆ ಪ್ರಧಾನಿ ಮೋದಿಯವರು ಅಡಿಗಲ್ಲು ಹಾಕುತ್ತಿರುವಾಗ, ಇಡೀ ದೇಶ ಕೊರೋನದಿಂದ ತತ್ತರಿಸಿ ಕೂತಿತ್ತು. ಒಂದೆಡೆ ಕೊರೋನ ಕಾರಣದಿಂದ ಸ್ಮಶಾನದ ಮುಂದೆ ಸಂಸ್ಕಾರಕ್ಕೆ ಕಾಯುತ್ತಿದ್ದ ಸಾಲು ಸಾಲು ಹೆಣಗಳು, ಮಗದೊಂದೆಡೆ ಲಾಕ್‌ಡೌನ್‌ನಿಂದ ಬುಡಮೇಲಾಗಿದ್ದ ದೇಶದ ಆರ್ಥಿಕತೆ. ಈ ಹೊತ್ತಿನಲ್ಲಿ ನರೇಂದ್ರಮೋದಿಯವರು ೨೦೨೦ ಡಿಸೆಂಬರ್‌ನಲ್ಲಿ ತನ್ನ ಆಡಳಿತದ ವೈಭವವನ್ನು ಜಗತ್ತಿಗೆ ಸಾರುವುದಕ್ಕಾಗಿಯೇ ಆತುರಾತುರವಾಗಿ ನೂತನ ಸಂಸತ್‌ಗೆ ಅಡಿಗಲ್ಲು ಹಾಕಿದರು. ‘ಜನಸಾಮಾನ್ಯರ ಬದುಕಿನ ಮೇಲೆ ಮೋದಿ ತನ್ನ ಅರಮನೆಯನ್ನು ಕಟ್ಟಲು ಹೊರಟಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕರು ಈ ಸಂದರ್ಭದಲ್ಲಿ ಟೀಕಿಸಿದ್ದರು. ೨೦೨೩ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿಯವರ ‘ಪ್ರಜಾಪ್ರಭುತ್ವದ ನೂತನ ದೇಗುಲ’ ಉದ್ಘಾಟನೆಗೊಂಡಿತ್ತು. ಒಂದು ರೀತಿಯಲ್ಲಿ ಉದ್ಘಾಟನೆಯ ದಿವಸವೇ ಈ ಪ್ರಜಾಪ್ರಭುತ್ವದ ಭವನ ಸೋರಿಕೆಯಾಗಿತ್ತು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವೈದಿಕ ಆಚರಣೆಯ ಮೂಲಕ ಸಂಸತ್‌ಭವನ ಪ್ರಜಾಸತ್ತೆಗೆ ತೆರೆದುಕೊಂಡಿತು. ಈ ದೇಶದ ರಾಷ್ಟ್ರಾಧ್ಯಕ್ಷೆಯಾಗಿದ್ದ ದ್ರೌಪದಿ ಮುರ್ಮು ಅವರಿಗೆ ಸಮಾರಂಭದಲ್ಲಿ ಆಹ್ವಾನವಿರಲಿಲ್ಲ. ಆದರೆ, ಸಂವಿಧಾನದ ಜೊತೆಗೆ ಯಾವ ಸಂಬಂಧವೂ ಇಲ್ಲದ ವೈದಿಕ ಅರ್ಚಕರು ಉದ್ಘಾಟನೆಯ ನೇತೃತ್ವ ವಹಿಸಿದ್ದರು. ಪ್ರಜಾಸತ್ತೆಯ ಮೌಲ್ಯಗಳಿಗೆ ಧಕ್ಕೆ ತರುವ, ವೈದಿಕ ಮತ್ತು ರಾಜಪ್ರಭುತ್ವವನ್ನು ಎತ್ತಿ ಹಿಡಿಯುವ ಸೆಂಗೋಲ್‌ನ್ನು ನೂತನ ಸಂಸತ್‌ನಲ್ಲಿ ಸ್ಥಾಪಿಸಲಾಯಿತು. ಇದು ಪ್ರಜಾಪ್ರಭುತ್ವದ ದೇಗುಲದಲ್ಲಿ ನಡೆದ ಬಹುದೊಡ್ಡ ಸೋರಿಕೆಯಾಗಿದೆ. ಕಟ್ಟಡ ಸೋರಿದರೆ ಅದಕ್ಕೆ ತೇಪೆ ಹಾಕಬಹುದು, ಪ್ರಜಾಸತ್ತೆಯ ಆಶಯದ ಸೌಧವೇ ಸೋರಿದರೆ ತೇಪೆ ಹಚ್ಚುವುದು ಹೇಗೆ?
ರಾಹುಲ್‌ಗಾಂಧಿಯೂ ಸೇರಿದಂತೆ ವಿರೋಧ ಪಕ್ಷದ ಶಾಸಕರ ಅನರ್ಹತೆಯ ಜೊತೆ ಜೊತೆಗೇ ನೂತನ ಸಂಸತ್ ಉದ್ಘಾಟನೆಯನ್ನು ಕೇಂದ್ರ ಸರಕಾರ ಸಂಭ್ರಮಿಸಿತು. ಹಿಂದಿನ ಕಾಲದಲ್ಲಿ ನೂತನ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ನರ ಬಲಿಕೊಡುವ ಪದ್ಧತಿಯಿತ್ತು. ಮೋದಿ ನೇತೃತ್ವದ ಸರಕಾರ ನೂತನ ಸಂಸತ್ ಉದ್ಘಾಟನೆಯ ಸಂದರ್ಭದಲ್ಲಿ ಪ್ರಜಾಸತ್ತೆಯ ಮೌಲ್ಯಗಳನ್ನೇ ಬಲಿಕೊಟ್ಟಿತು. ಡಿಸೆಂಬರ್ ೧೩ರಂದು ನೂತನ ಸಂಸತ್‌ನಲ್ಲಿ ಇನ್ನೊಂದು ಭಾರೀ ಸೋರಿಕೆಯಾಯಿತು. ನಿರುದ್ಯೋಗದಿಂದ ತತ್ತರಿಸಿದ್ದ ಇಬ್ಬರು ಯುವಕರು ಭದ್ರತೆಯನ್ನು ಭೇದಿಸಿ ಸಂಸತ್‌ನೊಳಗೆ ನುಗ್ಗಿ ಹೊಗೆ ಬಾಂಬ್ ಸ್ಫೋಟಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ೨೦೦೧ರಲ್ಲಿ ಭಾರತೀಯ ಸಂಸತ್‌ನ ಮೇಲೆ ಉಗ್ರರು ದಾಳಿ ನಡೆಸಿದ ೨೨ ವರ್ಷದ ಕರಾಳ ದಿನದಂದೇ ನೂತನ ಸಂಸತ್‌ನ ಮೇಲೆ ಈ ದಾಳಿ ನಡೆದಿತ್ತು. ಇದು ಕೇವಲ ಭದ್ರತಾ ವಿಷಯದಲ್ಲಿ ಸಂಭವಿಸಿದ ಸೋರಿಕೆಯಾಗಿರಲಿಲ್ಲ. ಕಳೆದ ೧೦ ವರ್ಷಗಳ ಮೋದಿ ಆಳ್ವಿಕೆಯಲ್ಲಿ ಸಂಭವಿಸಿದ ವಿವಿಧ ಸೋರಿಕೆಗಳ ಪರಿಣಾಮ ಇದಾಗಿತ್ತು. ಇದೀಗ ಅಧಿಕೃತವಾಗಿ ಸಂಸತ್‌ಭವನದ ಕಟ್ಟಡವೇ ಸೋರಿಕೆಯಾಗುವ ಮೂಲಕ, ಮೋದಿಯ ಆಡಳಿತದ ಅಭಿವೃದ್ಧಿಯ ವಾಸ್ತವ ಜಗತ್ತಿನ ಮುಂದೆ ಬಹಿರಂಗವಾಗಿದೆ. ಬಿರುಕು ಬಿಟ್ಟ ಜಾಗಕ್ಕೆ ತೇಪೆ ಹಾಕುವುದರಿಂದಷ್ಟೇ ಸಂಸತ್ ಭವನದ ಈ ಸೋರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಕೇಂದ್ರ ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.