ಕ್ರೀಡಾ ಕ್ಷೇತ್ರದ ಭ್ರಷ್ಟರ ತೂಕವೂ, ಕಳೆದುಕೊಂಡ ಬಂಗಾರದ ಪದಕವೂ!

Update: 2024-08-08 04:20 GMT

ವಿಶ್ವ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಗೆಲುವಿನ ನಿರೀಕ್ಷೆಯಲ್ಲಿ ಇಡೀ ಭಾರತ ತುದಿಗಾಲಿನಲ್ಲಿ ನಿಂತು ಕಾಯುತ್ತಿತ್ತು. ಅದಾಗಲೇ ಒಬ್ಬ ಮಹಿಳೆ ಈ ದೇಶಕ್ಕೆ ಎರಡು ಕಂಚುಗಳನ್ನು ತಂದುಕೊಟ್ಟಿದ್ದರು. ಪುರುಷ ಪ್ರಧಾನ ದೇಶವಾಗಿ ಗುರುತಿಸಿಕೊಳ್ಳುತ್ತಿರುವ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಮೊದಲ ಪದಕವನ್ನು ತಂದುಕೊಟ್ಟದ್ದು ಮಹಿಳೆ ಎನ್ನುವ ಹೆಮ್ಮೆ ಈ ದೇಶದ ಸಕಲ ಮಹಿಳೆಯರದ್ದೂ ಆಗಿದೆ. ಶೂಟರ್ ಮನು ಭಾಕರ್ ಗುರಿಯಿಟ್ಟದ್ದು ಈ ದೇಶದ ಕ್ರೀಡಾ ಕ್ಷೇತ್ರವನ್ನು ಆಳುತ್ತಿರುವ ಪುರುಷ ಪ್ರಧಾನ ಮನಸ್ಥಿತಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಿನೇಶ್ ಫೋಗಟ್ ಗೆಲುವಿಗೆ ಇನ್ನಷ್ಟು ಮಹತ್ವವಿತ್ತು. ಅವರೇನಾದರೂ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆದ್ದರೆ ಅದು ಒಬ್ಬ ಕ್ರೀಡಾಳುವಿನ ವೈಯಕ್ತಿಕ ಸಾಧನೆಯಾಗಿಯಷ್ಟೇ ಗುರುತಿಸಲ್ಪಡುತ್ತಿರಲಿಲ್ಲ. ಅಲ್ಲಿ ಸೋಲುವುದು ಎದುರಾಳಿ ಮಾತ್ರವಲ್ಲ, ಭಾರತದ ಭ್ರಷ್ಟ ರಾಜಕೀಯ ವ್ಯವಸ್ಥೆ, ಕ್ರೀಡಾ ವಿರೋಧಿ ಮನಸ್ಥಿತಿ, ಮಹಿಳಾ ಕ್ರೀಡಾಳುವಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಎಲ್ಲದರ ವಿರುದ್ಧದ ಗೆಲುವಾಗಿ ಬಿಡುತ್ತಿತ್ತು. ಈ ಹಿನ್ನೆಲೆಯಲ್ಲಿ ಪದಕವನ್ನು ಗೆಲ್ಲಲೇ ಬೇಕಾದ ಒತ್ತಡವೂ ವಿನೇಶ್ ಫೋಗಟ್ ಮೇಲೆ ಇತ್ತು. ಒಲಿಂಪಿಕ್ಸ್‌ನಲ್ಲಿ ಆಕೆ ಭಾಗವಹಿಸದಂತೆ ತಡೆಯುವ ಎಲ್ಲ ಸಂಚುಗಳನ್ನು ಮೀರಿ ಆಕೆ ಮಹಿಳೆಯರ ಫ್ರಿಸ್ಟೈಲ್ 50 ಕೆಜಿ ವಿಭಾಗದಲ್ಲಿ ಭಾಗವಹಿಸುವ ನಿರ್ಧಾರವನ್ನು ಮಾಡಿದ್ದರು. ಮಂಗಳವಾರ ಕ್ಯೂಬಾದ ಕುಸ್ತಿಪಟುವನ್ನು 5-0 ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿಯೇ ಬಿಟ್ಟರು. ಬೆಳ್ಳಿ ಖಚಿತವಾಗಿತ್ತು. ಬುಧವಾರ ನಡೆಯುವ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಕುಸ್ತಿಯಲ್ಲಿ ಮೊದಲ ಚಿನ್ನವೂ ದೊರಕುತ್ತಿತ್ತು. ಆದರೆ ಬುಧವಾರ ನಡೆದ ಅನಿರೀಕ್ಷಿತ ಬೆಳವಣಿಗೆ ಎಲ್ಲವನ್ನು ತಲೆ ಕೆಳಗೆ ಮಾಡಿತು. 100 ಗ್ರಾಂ ತೂಕ ಹೆಚ್ಚು ತೂಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲ್ಪಟ್ಟರು. ಇನ್ನೇನು ಚಿನ್ನ ಕೈಗೆಟಕಿ ಬಿಟ್ಟಿತು ಎನ್ನುವಷ್ಟರಲ್ಲಿ, ಸಣ್ಣದೊಂದು ತಾಂತ್ರಿಕ ಕಾರಣದಿಂದ ಅನರ್ಹಗೊಳಿಸಲ್ಪಟ್ಟದ್ದು ಭಾರತೀಯರನ್ನು ತೀವ್ರ ಆಘಾತಕ್ಕೆ ತಳ್ಳಿದೆ.

ವಿಪರ್ಯಾಸವೆಂದರೆ, ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ಭಾರತೀಯ ಕ್ರೀಡಾಳುಗಳು ಸೋಲುವುದನ್ನೇ ಸಂಭ್ರಮಿಸುವ ಒಂದು ‘ದೇಶದ್ರೋಹಿ ವರ್ಗ’ ಸೃಷ್ಟಿಯಾಗಿದೆ. ಆ ವರ್ಗಕ್ಕೆ ಕುಸ್ತಿಯಲ್ಲಿ ವಿನೇಶ್ ಗೆಲ್ಲುವುದು ಬೇಕಾಗಿರಲಿಲ್ಲ. ಯಾಕೆಂದರೆ, ವಿನೇಶ್ ಮತ್ತು ಅವರ ಸಂಗಡಿಗರು ಭಾರತದ ಕುಸ್ತಿ ಒಕ್ಕೂಟದೊಳಗಿರುವ ಭ್ರಷ್ಟ ರಾಜಕೀಯ ಶಕ್ತಿಗಳ ವಿರುದ್ಧ ಕುಸ್ತಿಗಿಳಿದು, ಇಲ್ಲಿನ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಮಹಿಳಾ ಕುಸ್ತಿ ಪಟುಗಳ ಮೇಲೆ ಭಾರತೀಯ ಕುಸ್ತಿ ಒಕ್ಕೂಟದ ಅಂದಿನ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದಾನೆ ಎಂದು ಆರೋಪಿಸಿ ಅಂತರ್‌ರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ವಿನೇಶ್ ಫೋಗಟ್, ಈ ಪ್ರತಿಭಟನೆಯ ಜೊತೆಗಿದ್ದರು. ಸಾಧಾರಣವಾಗಿ ಮಹಿಳೆಯರ ಮೇಲೆ ಯಾವುದೇ ರಾಜಕಾರಣಿ ಇಂತಹದೊಂದು ಕೃತ್ಯ ಎಸಗಿದ್ದಾನೆ ಎಂದರೆ ತಕ್ಷಣ ಆತನ ಮೇಲೆ ಕ್ರಮ ಕೈಗೊಂಡು ಸರಕಾರ ತನ್ನ ‘ಬೇಟಿ ಬಚಾವೋ’ ಘೋಷಣೆಯನ್ನು ಸಾರ್ಥಕಪಡಿಸಿಕೊಳ್ಳಬೇಕು. ಇಲ್ಲಿ ಸಂಸದನೊಬ್ಬ ಬರಿಯ ಮಹಿಳೆಯರ ಮೇಲೆ ಅಲ್ಲ, ಮಹಿಳಾ ಕ್ರೀಡಾಪಟುಗಳಿಗೆ ದೌರ್ಜನ್ಯ ಎಸಗಿದ ಆರೋಪಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ತಕ್ಷಣ ಪ್ರಧಾನಮಂತ್ರಿ ಮೋದಿಯವರು ಮಧ್ಯ ಪ್ರವೇಶಿಸಿ ಆತನ ಮೇಲೆ ಕ್ರಮ ತೆಗೆದುಕೊಳುವಂತೆ ನೋಡಿಕೊಳ್ಳಬೇಕಾಗಿತ್ತು. ಈ ಮೂಲಕ ಮಹಿಳೆಗೂ, ಕ್ರೀಡೆಗೂ ಏಕಕಾಲದಲ್ಲಿ ನ್ಯಾಯ ನೀಡುವುದು ಅವರ ಕರ್ತವ್ಯವಾಗಿತ್ತು. ಆದರೆ ಸರಕಾರ ಈ ಸಂಸದನ ಬೆನ್ನಿಗೆ ನಿಂತು, ಕುಸ್ತಿಪಟುಗಳ ಪ್ರತಿಭಟನೆಯನ್ನು ದಮನಿಸಲು ಮುಂದಾಯಿತು. ಮಹಿಳೆಯರಿಗೂ, ಕ್ರೀಡೆಗೂ ಏಕಕಾಲದಲ್ಲಿ ನ್ಯಾಯ ಸಿಗಬೇಕು ಎಂದು ಈ ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡಾಳುಗಳು ರಸ್ತೆಗಿಳಿದು ಪ್ರತಿಭಟಿಸುವುದು ಅನಿವಾರ್ಯವಾಯಿತು. ನ್ಯಾಯ ನೀಡಬೇಕಾಗಿದ್ದ ಪೊಲೀಸರು ಇವರ ಮೇಲೆ ಲಾಠಿಚಾರ್ಜ್ ನಡೆಸಿದ್ದರು. ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು, ಈ ಮಹಿಳೆಯರ ವಿರುದ್ಧ ಅತ್ಯಂತ ಹೀನ ಭಾಷೆಯನ್ನು ಬಳಸಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸಿದರು.

‘‘ಈ ಪದಕಗಳು ನಮ್ಮ ಜೀವ ಮತ್ತು ಆತ್ಮವಾಗಿವೆ. ಆದರೆ ಅವುಗಳನ್ನು ನಾವು ಗಂಗಾನದಿಗೆ ಎಸೆಯಲಿದ್ದೇವೆ. ಅದಾದ ಬಳಿಕ ಬದುಕುವ ಪ್ರಶ್ನೆಯೇ ಇಲ್ಲ. ಸಾಯುವವರೆಗೆ ಇಂಡಿಯಾ ಗೇಟ್ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ’’ ನ್ಯಾಯ ಸಿಗದೇ ಇದ್ದಾಗ ಕುಸ್ತಿಪಟುಗಳು ಹತಾಶೆಯಿಂದ ಹೇಳಿದ ಮಾತುಗಳು ಇವು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಸಾಕ್ಷಿ ಮಲಿಕ್, ಈ ರಾಜಕೀಯ ಸಂಘರ್ಷದಲ್ಲಿ ಅಂತಿಮವಾಗಿ ಕಣ್ಣೀರು ಸುರಿಸುತ್ತಾ ತನ್ನ ಕುಸ್ತಿ ಬದುಕಿಗೆ ವಿದಾಯ ಹೇಳಿದರು. ಕ್ರೀಡೆ ಮಹಿಳೆಗೆ ಸಂಬಂಧಿಸಿದ್ದಲ್ಲ ಎನ್ನುವ ಮನಸ್ಥಿತಿ ಇನ್ನೂ ಭಾರತದಲ್ಲಿದೆ. ಕುಸ್ತಿಯಂತೂ ಪುರುಷ ಪ್ರಧಾನವಾದ ಆಟವೆಂದೇ ಗುರುತಿಸಲ್ಪಟ್ಟಿದೆ. ಈ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಬೇಕಾದರೆ ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಮಹಿಳೆಯರು ಸಮಾಜದ ಪ್ರತಿರೋಧವನ್ನು ಎದುರಿಸಿ, ಅಲ್ಲಿ ಗೆದ್ದ ಬಳಿಕ ಕುಸ್ತಿ ಅಖಾಡವನ್ನು ಪ್ರವೇಶಿಸಬೇಕಾಗುತ್ತದೆ. ಹೀಗೆ ಎಲ್ಲ ಅಡೆತಡೆಗಳನ್ನು ಎದುರಿಸಿ ಕುಸ್ತಿಯಲ್ಲಿ ಸಾಧನೆ ಮಾಡಲು ಹೊರಟ ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ನೀಡಿದ ತನ್ನದೇ ಪಕ್ಷದ ಸಂಸದನ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿಗೆ ಸಾಧ್ಯವಾಗಲಿಲ್ಲ . ಇದಾದ ಬಳಿಕವೂ, ಕುಸ್ತಿ ಒಕ್ಕೂಟದ ಹಿಡಿತ ಬ್ರಿಜ್‌ಭೂಷಣ್ ಸಂಗಡಿಗರ ಕೈಯಲ್ಲೇ ಇದೆ. ವಿನೇಶ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಏನಾದರೂ ಸಾಧನೆ ಮಾಡಿದ್ದೇ ಆಗಿದ್ದರೆ, ಅದು ಪರೋಕ್ಷವಾಗಿ ಈ ರಾಜಕೀಯ ಶಕ್ತಿಗಳಿಗೆ ಬಹುದೊಡ್ಡ ಹಿನ್ನಡೆಯಾಗಿ ಬಿಡುತ್ತಿತ್ತು. ಈ ಕಾರಣಕ್ಕಾಗಿಯೇ, ಕೆಲವರಿಗೆ ಕುಸ್ತಿಯಲ್ಲಿ ಭಾರತದ ಮಹಿಳೆಯರು ಪದಕ ಪಡೆಯುವುದು ಇಷ್ಟವಿರುವ ಸಂಗತಿಯಾಗಿರಲಿಲ್ಲ.

ವಿನೇಶ್ ಫೋಗಟ್ ಫೈನಲ್ ತಲುಪಿ ಬೆಳ್ಳಿ ಖಚಿತಪಡಿಸುತ್ತಿದ್ದಂತೆಯೇ ಆಕೆಗೆ ಅಭಿನಂದನೆಯ ಮಹಾಪೂರವೇ ಹರಿದು ಬಂತು. ಅದರ ಜೊತೆ ಜೊತೆಗೆ ಈ ದೇಶದ ಮಹಿಳಾ ಕುಸ್ತಿ ಪಟುಗಳನ್ನು ದಮನಿಸಲು ಯತ್ನಿಸಿದ ರಾಜಕೀಯ ಶಕ್ತಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯಾಯಿತು. ಆಕೆಯೇನಾದರೂ ಚಿನ್ನ ಗೆದ್ದಿದ್ದರೆ, ಅದು ಪರೋಕ್ಷವಾಗಿ ಕುಸ್ತಿ ಒಕ್ಕೂಟದ ಮೇಲೆ ಮತ್ತು ಅದರ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತ ರಾಜಕಾರಣಿಗಳ ಮೇಲೆ ಭಾರೀ ಪರಿಣಾಮ ಬೀರುತ್ತಿತ್ತು. ಆದುದರಿಂದ ಭಾರತದ ಕೆಲವು ಕ್ಷುದ್ರ ರಾಜಕೀಯ ಶಕ್ತಿಗಳಿಗೇ ವಿನೇಶ್ ಫೋಗಟ್ ಚಿನ್ನದ ಪದಕ ಪಡೆಯುವುದು ಬೇಕಾಗಿರಲಿಲ್ಲ. ಆಕೆ ಫೈನಲ್ ತಲುಪಿದಾಗ ಭಾರತಕ್ಕೊಂದು ಚಿನ್ನ ಖಚಿತವಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆಕೆಯ ತೂಕ ಒಂದೇ ದಿನದಲ್ಲಿ ಹೆಚ್ಚಿದ್ದು ಎಲ್ಲವನ್ನು ಬುಡಮೇಲು ಮಾಡಿತು.

ಸಾಧಾರಣವಾಗಿ ರಕ್ತ ಪರೀಕ್ಷೆಯ ಸಂದರ್ಭದಲ್ಲಿ ಉದ್ದೀಪನ ದ್ರವ್ಯ ಪತ್ತೆಯಾಗಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಿತ್ತು. ಇಲ್ಲಿ 100 ಗ್ರಾಂನಷ್ಟು ತೂಕ ಜಾಸ್ತಿಯಾಗಿದೆ. ಒಲಿಂಪಿಕ್ಸ್ ಸಮಿತಿಯ ನಿಯಮಗಳಿಂದ ಈ ಬಗ್ಗೆ ನಾವು ಯಾವುದೇ ವಿನಾಯಿತಿಯನ್ನು ನಿರೀಕ್ಷಿಸಲಾಗುವುದಿಲ್ಲ ಎನ್ನುವುದು ನಿಜವಾದರೂ, ಫೈನಲ್‌ನಲ್ಲಿ ವಿನೇಶ್ ತೂಕ ಅಧಿಕವಾದದ್ದು ಹೇಗೆ? ಎನ್ನುವುದು ತನಿಖೆಯಾಗುವುದು ಅತ್ಯಗತ್ಯವಾಗಿದೆ. ವಿನೇಶ್ 53 ಕೆಜಿಯಲ್ಲಿ ಅನರ್ಹವಾದ ಕಾರಣಕ್ಕಾಗಿ, ಆಕೆ 50 ಕೆಜಿ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರೆ. ಈ ಬಗ್ಗೆ ಕ್ರೀಡಾಳುಗಳು ಮುನ್ನೆಚ್ಚರಿಕೆಯನ್ನು ಹೊಂದಿರುತ್ತಾರೆ ಮಾತ್ರವಲ್ಲ, ವೈದ್ಯರು ಅವರ ಜೊತೆಗಿದ್ದು ಮಾರ್ಗದರ್ಶನವನ್ನು ಮಾಡುತ್ತಿರುತ್ತಾರೆ. ಆದರೆ ವಿನೇಶ್ ಕೈಗೆ ಇನ್ನೇನು ಚಿನ್ನ ಕೈಗೆಟಕುತ್ತದೆ ಎನ್ನುವಷ್ಟರಲ್ಲಿ ಆಕೆಯ ತೂಕ ಒಮ್ಮೆಲೆ ಅಧಿಕವಾಯಿತು ಹೇಗೆ? ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ. ಈ ಬಗ್ಗೆ ಈಗಾಗಲೇ ಹಿರಿಯ ಕ್ರೀಡಾಳುಗಳೂ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ತನಿಖೆಗೆ ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಅನರ್ಹತೆಯನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಬೇಕು. ವಿನೇಶ್ ಜೊತೆಗೆ ನಿಂತು ಆಕೆಗೆ ನೈತಿಕ ಸ್ಥೈರ್ಯವನ್ನು ನೀಡಿ, ಸತ್ಯಾಸತ್ಯತೆ ಬೆಳಕಿಗೆ ಬರಲು ನೆರವಾಗಬೇಕು. ಒಂದು ವೇಳೆ ವಿನೇಶ್ ವಿರುದ್ಧ ಯಾವುದೇ ಸಂಚು ನಡೆದಿದ್ದೇ ಆದರೆ, ಅದು ಬಹಿರಂಗವಾಗಲೇ ಬೇಕು. ಕ್ರೀಡಾ ಕ್ಷೇತ್ರವನ್ನು ಆಳುತ್ತಿರುವ ಭ್ರಷ್ಟ ರಾಜಕೀಯದ ತೂಕವು ಭಾರತೀಯ ಕ್ರೀಡಾಳುಗಳನ್ನು ಬಲಿ ತೆಗೆದುಕೊಳ್ಳದಿರಲಿ. ಸರಕಾರವನ್ನು ಪ್ರಶ್ನಿಸುವವರನ್ನು ಅನರ್ಹಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಸಂಸತ್‌ನಲ್ಲಿ ಸಂಪ್ರದಾಯವಾಗಿ ಬಿಟ್ಟಿದೆ. ಆ ಸಂಪ್ರದಾಯ ಕ್ರೀಡಾ ಕ್ಷೇತ್ರಕ್ಕೂ ಕಾಲಿಡದಿರಲಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News