ಇದು ಭ್ರೂಣ ಹತ್ಯೆಯಲ್ಲ, ಮನುಕುಲದ ಹತ್ಯೆ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕೆಳದಿ ಚೆನ್ನಮ್ಮ ಮೊದಲಾದ ಮಹಿಳಾ ಮಣಿಗಳಿಗಾಗಿಯೇ ಖ್ಯಾತಿವೆತ್ತ ನಾಡು ಕರ್ನಾಟಕ. ಸಾಧನೆಗಾಗಿ ಮಹಿಳೆಯರು ಇಲ್ಲಿ ಕೇವಲ ಇತಿಹಾಸ ಪುಸ್ತಕಕ್ಕೆ ಅಷ್ಟೇ ಸೀಮಿತರಾಗಿ ಉಳಿದಿಲ್ಲ. ವಿಜ್ಞಾನ, ಸಾಹಿತ್ಯ, ಪರಿಸರ, ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ನೂರಾರು ಮಹಿಳೆಯರು ನಮ್ಮ ನಡುವಿದ್ದಾರೆ. ಐಟಿ, ಬಿಟಿ ಕ್ಷೇತ್ರಗಳಲ್ಲೂ ಇವರ ಕೊಡುಗೆ ಸಣ್ಣದೇನೂ ಅಲ್ಲ. ಕನ್ನಡ ಸಮಾಜ ಕಟ್ಟುವಲ್ಲಿ ಮಹಿಳೆಯ ಪಾತ್ರ ಅತ್ಯಂತ ಹಿರಿದಾದುದು. ಮನೆಯ ಮೊದಲ ಪಾಠ ಶಾಲೆ ಎನ್ನುವ ಮಾತಿಗೆ ಅರ್ಥ ಬರುವುದು ಇಲ್ಲಿ ಮಹಿಳೆಯಿಂದ. ಮನೆಯಲ್ಲಿ ಎಳೆ ಮಗುವಿನ ಪೋಷಣೆಯಲ್ಲೂ ಈಕೆ ತನ್ನ ತನು, ಮನವನ್ನು ತೊಡಗಿಸಿಕೊಂಡಿರುತ್ತಾಳೆ. ಮಹಿಳೆ ಮತ್ತು ಪುರುಷರು ಸಮಾನರು ಎನ್ನುವ ಮಾತು ತೀರಾ ಕ್ಲೀಷೆಯಿಂದ ಕೂಡಿದೆ. ಯಾಕೆಂದರೆ ಶಕ್ತಿಯಲ್ಲಿ ಮಹಿಳೆ ಯಾವತ್ತೂ ಪುರುಷನಿಗಿಂತ ಒಂದು ಕೈ ಮೇಲು. ಪುರುಷನಂತೆ ಆಕೆ ಹೊರಗೆ ಕಚೇರಿಯಲ್ಲೂ ದುಡಿಯಬಲ್ಲಳು. ಕುಟುಂಬವನ್ನು ಪೋಷಿಸಬಲ್ಲಳು. ಇದೇ ಸಂದರ್ಭದಲ್ಲಿ ಮಗುವಿನ ಜನನದಿಂದ ಅದನ್ನು ಹಾಲುಣಿಸಿ ಸಾಕುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಲು ಪುರುಷ ದುರ್ಬಲ. ಕುಟುಂಬವೊಂದರಲ್ಲಿ ಮಹಿಳೆ ನಿರ್ವಹಿಸುವ ಎಲ್ಲ ಜವಾಬ್ದಾರಿಗಳನ್ನು ಪುರುಷನಿಗೆ ಅನೇಕ ಸಂದರ್ಭಗಳಲ್ಲಿ ನಿರ್ವಹಿಸಲು ಸಾಧ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆ ಇಂದು ಪುರುಷರಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ. ಶೈಕ್ಷಣಿಕ ಫಲಿತಾಂಶಗಳಲ್ಲಿ ವಿದ್ಯಾರ್ಥಿನಿಯರ ಕೈ ಮೇಲು ಎನ್ನುವ ತಲೆಬರಹಗಳೊಂದಿಗೆ ಪ್ರತೀ ವರ್ಷ ಎಸೆಸೆಲ್ಸಿ, ಪಿಯುಸಿ ಫಲಿತಾಂಶ ಹೊರಬೀಳುತ್ತವೆ. ಇಷ್ಟೆಲ್ಲ ಆದರೂ ಕರ್ನಾಟಕ ಮಹಿಳೆಯ ಮಾರಣ ಹೋಮಕ್ಕಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ‘ಮೀಸೆ’ ತಿರುವುತ್ತಿರುವ ಹೊತ್ತಿನಲ್ಲೇ ಬಹುದೊಡ್ಡ ಭ್ರೂಣ ಹತ್ಯೆ ಜಾಲವೊಂದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಭ್ರೂಣ ಲಿಂಗಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಭತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಂದೂವರೆ ಸಾವಿರಕ್ಕೂ ಅಧಿಕ ಭ್ರೂಣ ಪತ್ತೆ ಪ್ರಕರಣವನ್ನು ತನಿಖೆಯ ಮೂಲಕ ಬಹಿರಂಗ ಪಡಿಸಿದ್ದಾರೆ. ಇವರೆಲ್ಲ ಸೇರಿ ಹುಟ್ಟುವ ಮೊದಲೇ ಕೊಂದು ಹಾಕಿದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರಿಗಾಗಿ ಇಡೀ ಕರ್ನಾಟಕ ಮರುಗುತ್ತಿದೆ. ಈ ಪ್ರಕರಣ, ಸಮಾಜದ ಆಳದಲ್ಲಿ ಇನ್ನೂ ಹೆಣ್ಣಿನ ಕುರಿತಂತೆ ಹೆಪ್ಪುಗಟ್ಟಿರುವ ಅಸಹನೆ, ಪೂರ್ವಾಗ್ರಹಗಳನ್ನು ಹೊರ ಹಾಕಿದೆ. ಇದರಿಂದ ಇಡೀ ಕರ್ನಾಟಕ ತಲೆತಗ್ಗಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ದೇಶದಲ್ಲಿ ಮಲ ಹೊರುವ ಪದ್ಧತಿ, ಬಾಲ್ಯ ವಿವಾಹ, ಜೀತ ಪದ್ಧತಿ ಮೊದಲಾದ ಅನಿಷ್ಟಗಳನ್ನು ನಾವು ಒಳಗೊಳಗೆ ಸಾಕುತ್ತಿದ್ದೇವೆ. ಇವುಗಳು ಇದೆಯೆನ್ನುವುದು ಲೋಕಕ್ಕೆ ಗೊತ್ತಾದರೆ ಅದಕ್ಕೆ ಸ್ಥಳೀಯ ಆಡಳಿತ ಅಥವಾ ಆಯಾ ಸರಕಾರ ಹೊಣೆ ಹೊರಬೇಕಾಗುತ್ತದೆ. ಆದುದರಿಂದ, ಇಂತಹ ಪ್ರಕರಣಗಳು ಎಲ್ಲೋ ಒಂದೆರಡು ಬಹಿರಂಗವಾದರೆ ಅಧಿಕಾರಿಗಳೇ ಅತ್ಯಾಸಕ್ತಿಯಿಂದ ಅದನ್ನು ಮುಚ್ಚಿ ಹಾಕುತ್ತಾರೆ. ‘ಸಮಾಜದಲ್ಲಿ ಅನಿಷ್ಟಗಳು ಇದ್ದರೂ ಪರವಾಗಿಲ್ಲ, ಅವುಗಳು ಸಾರ್ವಜನಿಕವಾಗಿ ಬಹಿರಂಗವಾಗದಂತೆ ನೋಡಿಕೊಳ್ಳುವುದು ನಿಮ್ಮ ಹೊಣೆ’ ಎನ್ನುವುದು ಆಯಾ ಜಿಲ್ಲಾಡಳಿತಕ್ಕೆ ಸರಕಾರ ನೀಡುವ ಪರೋಕ್ಷ ಸಂದೇಶ. ಆದುದರಿಂದಲೇ ಅಂಕಿ ಅಂಶಗಳ ಪ್ರಕಾರ ಈ ದೇಶದಲ್ಲಿ ಮಲಹೊರುವ ಪದ್ಧತಿಯೇ ಇಲ್ಲ. ಆದರೆ, ಆಗಾಗ ಮಲದ ಗುಂಡಿಯಲ್ಲಿ ಬಿದ್ದು ಸಾಯುವ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಭ್ರೂಣ ಹತ್ಯೆಯ ವಿಷಯದಲ್ಲೂ ನಮ್ಮ ಸಮಾಜದಲ್ಲಿ ಇದೇ ನಡೆಯುತ್ತಿದೆ. ನಮ್ಮದು ಹೆಣ್ಣನ್ನು ಪೂಜಿಸುವ ನಾಡು.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಹೆಣ್ಣು ಭ್ರೂಣ ಹತ್ಯೆ ವ್ಯವಸ್ಥಿತವಾಗಿ ನಡೆಯುತ್ತಿರುತ್ತವೆ. ನಕಲಿ ಡಾಕ್ಟರ್ಗಳಿಂದ ಮಾತ್ರವಲ್ಲ, ಅಸಲಿ ವೈದ್ಯರಿಂದ, ಅತ್ಯಾಧುನಿಕ ಆಸ್ಪತ್ರೆಗಳಲ್ಲೇ ಗುಟ್ಟಾಗಿ ನಡೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಜನರಷ್ಟೇ ಅಲ್ಲ, ನಗರ ಪ್ರದೇಶದ ವಿದ್ಯಾವಂತ ಕುಟುಂಬಗಳು ಕೂಡ ಈ ಭ್ರೂಣ ಹತ್ಯೆಯಲ್ಲಿ ವ್ಯವಸ್ಥಿತವಾಗಿ ಪಾಲುದಾರಿಕೆಯನ್ನು ಹೊಂದಿವೆ.
ಕರ್ನಾಟಕದಲ್ಲಿ ಬೆಳಕಿಗೆ ಬಂದಿರುವ ಭ್ರೂಣ ಹತ್ಯೆಯ ಬೃಹತ್ ಜಾಲದ ಹಿಂದೆ ನಕಲಿ ವೈದ್ಯರನ್ನು ಮಾತ್ರವಲ್ಲ, ಕೆಲವು ಅಸಲಿ ವೈದ್ಯರನ್ನೂ ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರ ಅಸಹಾಯಕತೆಯನ್ನು ಬಳಸಿಕೊಂಡು ಇವರು ಹಣಕ್ಕಾಗಿ ಅಕ್ರಮವಾಗಿ ಭ್ರೂಣ ಹತ್ಯೆಗಳನ್ನು ಮಾಡುತ್ತಿದ್ದರು. ನಗರದ ಕೆಲವು ವೈದ್ಯರು ಪರೋಕ್ಷವಾಗಿ ಇವರ ಜೊತೆಗೆ ಶಾಮೀಲಾಗಿದ್ದಾರೆ. ಭ್ರೂಣ ಹತ್ಯೆಯ ಹಣದ ಒಂದು ಪಾಲು ಇವರನ್ನೂ ತಲುಪುತ್ತಿತ್ತು. ಆಯುರ್ವೇದ ಆಸ್ಪತ್ರೆಗಳೆಂದು ಕರೆಸಿಕೊಂಡವರು ಕೂಡ ಇದರಲ್ಲಿ ಕೈ ಜೋಡಿಸಿದ್ದಾರೆ. ಮೈಸೂರು, ಮಂಡ್ಯದಂತಹ ಪ್ರದೇಶಗಳನ್ನು ಗುರಿಯಾಗಿಟ್ಟು ಇವರು ಕಾರ್ಯಾಚರಣೆ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಇವರು ೩,೦೦೦ ದಷ್ಟು ಭ್ರೂಣ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹತ್ಯೆಗಳಿಗೆ ಮುಖ್ಯ ಕಾರಣ, ಭ್ರೂಣ ಹೆಣ್ಣಾಗಿರುವುದು. ಅಕ್ರಮವಾಗಿ ಭ್ರೂಣ ಹತ್ಯೆ ನಡೆಸಿದ ಸಂದರ್ಭದಲ್ಲಿ ಮಹಿಳೆಯರ ಜೀವಕ್ಕೆ ಅಪಾಯವಾದರೆ ಅದನ್ನು ಮುಚ್ಚಿಡುವ ಸಾಧ್ಯತೆಗಳೇ ಅಧಿಕ. ಒಂದು ವೇಳೆ ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿದರೂ ಈ ಬಗ್ಗೆ ಕುಟುಂಬ ಯಾರ ಮೇಲೂ ದೂರು ನೀಡುವಂತಿಲ್ಲ. ಇದೀಗ ಅಕ್ರಮ ಜಾಲಕ್ಕೆ ಸಂಬಂಧಿಸಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರಾದರೂ, ಎಲ್ಲಿಯವರೆಗೆ ಹೆಣ್ಣಿನ ಕುರಿತಂತೆ ಜನರಲ್ಲಿರುವ ಪೂರ್ವಾಗ್ರಹವನ್ನು ನಿವಾರಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಇದನ್ನು ತಡೆಯಲು ಸಾಧ್ಯವಿಲ್ಲ. ಯಾಕೆಂದರೆ ಭ್ರೂಣ ಹತ್ಯೆಯಲ್ಲಿ ಶಾಮೀಲಾಗಿರುವ ವೈದ್ಯರು ಈ ಜಾಲದ ಒಂದು ಸಣ್ಣ ಭಾಗ. ಭ್ರೂಣ ಹೆಣ್ಣಾದರೆ ಅದನ್ನು ಹತ್ಯೆ ಮಾಡುವ ಪೋಷಕರ ತೀರ್ಮಾನಕ್ಕೆ ಅವರು ಸಹಾಯ ಮಾಡುತ್ತಾರೆ. ಒಂದು ರೀತಿಯಲ್ಲಿ ಸುಪಾರಿ ಕಿಲ್ಲರ್ ತರಹ. ಸುಪಾರಿ ನೀಡುವವರಿರುವವರೆಗೆ ಈ ಸುಪಾರಿ ಕಿಲ್ಲರ್ಗಳು ಬೇರೆ ಬೇರೆ ರೂಪದಲ್ಲಿ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಆದುದರಿಂದ ನಿಜವಾದ ಅಪರಾಧಿಗಳು ಸಮಾಜದಲ್ಲೇ ನಾಗರಿಕ ವೇಷದಲ್ಲಿದ್ದಾರೆ. ಅವರ ಬಂಧನ ಇನ್ನೂ ಆಗಿಲ್ಲ.
ದೇಶದಲ್ಲಿ ಭ್ರೂಣ ಹತ್ಯೆ ಇನ್ನೂ ವ್ಯವಸ್ಥಿತವಾಗಿ ನಡೆಯುತ್ತದೆ ಎಂದರೆ ಅದರ ಅರ್ಥ, ಹೆಣ್ಣಿನ ಕುರಿತಂತೆ ಭಾರತದ ಮನಸ್ಥಿತಿ ಬದಲಾಗಿಲ್ಲ ಎನ್ನುವುದಾಗಿದೆ. ಹೆಣ್ಣಿನ ಭ್ರೂಣ ಹತ್ಯೆಯಲ್ಲಿ ಕರ್ನಾಟಕವೇ ಇಷ್ಟು ಮುಂದುವರಿದಿರಬೇಕಾದರೆ, ಉತ್ತರ ಭಾರತದ ರಾಜ್ಯಗಳು ಯಾವ ಮಟ್ಟ ತಲುಪಿರಬಹುದು? ಮಹಿಳೆಯರ ಸ್ಥಿತಿ ಎಲ್ಲಿ ಹೆಚ್ಚು ಶೋಚನೀಯವಾಗಿರುತ್ತದೆಯೋ, ಯಾವ ರಾಜ್ಯದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆಯೋ ಅಲ್ಲಿ ಹೆಚ್ಚು ಭ್ರೂಣ ಹತ್ಯೆಗಳು ನಡೆಯುತ್ತವೆ ಎನ್ನುವುದನ್ನು ತಜ್ಞರು ಹೇಳುತ್ತಾರೆ. ಸರಕಾರದ ‘ಬೇಟಿ ಬಚಾವೋ’ ಅಂದೋಲನದ ನಡುವೆಯೂ ಈ ಭ್ರೂಣ ಹತ್ಯೆ ಯಾವ ಮಟ್ಟದಲ್ಲಿದೆ ಎಂದರೆ, ೨೦೩೦ರ ವೇಳೆಗೆ ಜನಿಸಲಿರುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ೭೦ ಲಕ್ಷದಷ್ಟು ಇಳಿಕೆಯಾಗಲಿದೆ ಎಂದು ಅಧ್ಯಯನ ಹೇಳುತ್ತದೆ. ೨೦೨೦ರಲ್ಲಿ ಭಾರತದ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು ೧೦೮.೧೮ ಪುರುಷರಿಗೆ ೧೦೦ ಮಹಿಳೆಯರ ಹಂತಕ್ಕೆ ಇಳಿಕೆಯಾಗಿತ್ತು. ಉತ್ತರ ಪ್ರದೇಶ ದೇಶದಲ್ಲೇ ಅತಿ ಹೆಚ್ಚು ಭ್ರೂಣ ಹತ್ಯೆ ನಡೆಯುವ ರಾಜ್ಯವೆಂದು ಗುರುತಿಸಲ್ಪಡುತ್ತಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅನಕ್ಷರತೆ ಮತ್ತು ಅತ್ಯಾಚಾರಗಳಿಗಾಗಿಯೂ ಇದೇ ಉತ್ತರ ಪ್ರದೇಶ ಗುರುತಿಸಲ್ಪಡುತ್ತಿದೆ ಎನ್ನುವುದು ಕಾಕತಾಳೀಯವಂತೂ ಖಂಡಿತ ಅಲ್ಲ.
ಎಲ್ಲಿಯವರೆಗೆ ಹೆಣ್ಣಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದುಕು ಸುಧಾರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಭ್ರೂಣ ಹತ್ಯೆಯನ್ನು ತಡೆಯುವ ಪ್ರಯತ್ನಗಳೆಲ್ಲ ವಿಫಲವಾಗುತ್ತಲೇ ಹೋಗುತ್ತವೆ. ಎಲ್ಲ ಧರ್ಮಗಳೂ ತಮ್ಮ ತಮ್ಮ ಹೆಣ್ಣು ಮಕ್ಕಳಿಗೆ ಸರ್ವ ಅಧಿಕಾರವನ್ನು ನೀಡಿರುವುದಾಗಿ ಘೋಷಿಸಿಕೊಳ್ಳುತ್ತಿವೆ. ಆದರೆ ಅದರ ಅನುಷ್ಠಾನದಲ್ಲಿ ಮಾತ್ರ ವಿಫಲವಾಗುತ್ತಿವೆ. ಇಂದು ಹೆಣ್ಣಿನ ಸ್ಥಿತಿ ಸಮಾಜದಲ್ಲಿ ಇಷ್ಟು ಹೀನಾಯವಾಗಲು ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡು ಆಚರಿಸುತ್ತಿರುವವರೇ ಕಾರಣ. ಧರ್ಮಗಳು ನೀಡಿರುವ ಅಧಿಕಾರ, ಗೌರವ, ಸ್ವಾತಂತ್ರ್ಯ ನಿಜಕ್ಕೂ ಹೆಣ್ಣಿಗೆ ಸಿಕ್ಕಿದ್ದಿದ್ದರೆ ಇಂದು ಹೆಣ್ಣು ಹುಟ್ಟುವ ಮನೆಯ ಸಂಭ್ರಮ ಮುಗಿಲು ಮುಟ್ಟಿರುತ್ತಿತ್ತು. ಯಾವ ತಾಯಿಯೂ ತನ್ನ ಕರುಳ ಕುಡಿಯನ್ನು ಕೊಲ್ಲುವಂತಹ ಸ್ಥಿತಿಗೆ ತಲುಪುತ್ತಿರಲಿಲ್ಲ. ಅತಿ ಹೆಚ್ಚು ಧರ್ಮಗಳನ್ನು ಹೊಂದಿರುವ ಭಾರತವೇ ಇಂದು ‘ಮಹಿಳೆಯರಿಗೆ ಅತಿ ಹೆಚ್ಚು ಅಪಾಯಕಾರಿ ಸ್ಥಳ’ವಾಗಿ ಗುರುತಿಸಿಕೊಳ್ಳುತ್ತಿರುವುದು ಆಕಸ್ಮಿಕವಲ್ಲ. ಒಂದು ರೀತಿಯಲ್ಲಿ ನೋಡಿದರೆ ಭ್ರೂಣ ಹತ್ಯೆಯ ರಕ್ತದ ಕಳಂಕ ಈ ಸಮಾಜದ ಪ್ರತಿಯೊಬ್ಬ ನಾಗರಿಕನ ಕೈಗೂ ಒಂದಲ್ಲ ಒಂದು ರೀತಿಯಲ್ಲಿ ಅಂಟಿಕೊಂಡಿದೆ. ನಮ್ಮ ನಮ್ಮ ಕೈಯ ರಕ್ತವನ್ನು ತೊಳೆದು ಶುಚಿಗೊಳಿಸುವ ದಾರಿಯನ್ನು ಹುಡುಕಿಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಕೊಲ್ಲುವ ಪುರುಷ ಪ್ರಧಾನ ವ್ಯವಸ್ಥೆ ಆ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದೆ. ಅದು ಅರ್ಥವಾಗುವ ಹೊತ್ತಿಗೆ ಎಲ್ಲ ಮುಗಿದಿರುತ್ತದೆ. ಅದಕ್ಕೆ ಮೊದಲು ಸಮಾಜ ಎಚ್ಚ್ಚೆತ್ತುಕೊಳ್ಳಬೇಕು.