ಮನುಷ್ಯ ಘನತೆಯ ಮೇಲೆ ಮೂತ್ರ ವಿಸರ್ಜಿಸುವವರು !

Update: 2023-07-06 07:38 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದ ಪ್ರಧಾನಿ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುತ್ತಿರುವ ಹೊತ್ತಿನಲ್ಲೇ, ‘ನಾಗರಿಕತೆ’ಗೆ ಕಳಂಕ ತರುವ ಕೃತ್ಯವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಬಿಜೆಪಿ ಮುಖಂಡನೆಂದು ಕರೆಸಿಕೊಂಡ ಪ್ರವೇಶ್ ಶುಕ್ಲಾ ಎಂಬಾತ ಆದಿವಾಸಿ ಯುವಕನೊಬ್ಬನ ಮೇಲೆ ಮೂತ್ರ ಹೊಯ್ಯುವ ನೀಚ ಕೃತ್ಯ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿದೆ. ಈ ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯೊಂದು ಜಾರಿಗೆ ಬರುವ ಮೊದಲು, ಎಲ್ಲರೂ ಸಮಾನವಾಗಿ ಬದುಕುವ ಸಮಾಜವೊಂದನ್ನು ಕಟ್ಟುವ ಅಗತ್ಯವನ್ನು ಇದು ಹೇಳುತ್ತಿದೆ. ಈ ಕೃತ್ಯಕ್ಕೆ ಸಂಬಂಧಿಸಿದ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಮಧ್ಯಪ್ರದೇಶ ಸರಕಾರ ತಕ್ಷಣ ಎಚ್ಚೆತ್ತು, ಆತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದೆ. ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದೆ. ವಿಪರ್ಯಾಸವೆಂದರೆ, ಈತ ಸಾಮಾಜಿಕ ತಾಣದಲ್ಲಿ ‘ಹಿಂದುತ್ವವಾದಿ’ಯಾಗಿ ಗುರುತಿಸಿಕೊಂಡವನು. ಈತನ ಪ್ರೊಫೈಲ್ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವಿದೆ. ಮಾತ್ರವಲ್ಲ, ಅಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿದೆ. ಈ ಮೂಲಕ ತನ್ನ ಕೃತ್ಯದಲ್ಲಿ ಈತ ಈ ದೇಶದ ಗೃಹ ಸಚಿವರಿಗೂ, ಕೇಸರಿ ಧ್ವಜಕ್ಕೂ ಪರೋಕ್ಷ ಪಾಲನ್ನು ನೀಡಿದ್ದಾನೆ. ಹಿಂದುತ್ವವಾದದ ಹೆಸರಿನಲ್ಲಿ ಬೀದಿಗಿಳಿದು ದ್ವೇಷ ರಾಜಕಾರಣ ನಡೆಸುವವರ ಆಳದೊಳಗಿರುವ ಕ್ರೌರ್ಯಗಳನ್ನು ಇದು ಬಹಿರಂಗಗೊಳಿಸಿದೆ. ದಮನಿತ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ ಮೂತ್ರ ಮಾಡುವವನು ಒಬ್ಬನಾದರೆ, ಅದಕ್ಕೆ ಕನಿಷ್ಠ ಪ್ರತಿಭಟನೆಯನ್ನೂ ವ್ಯಕ್ತಪಡಿಸಲಾಗದ ಆದಿವಾಸಿ ಇನ್ನೊಬ್ಬ. ಈ ಅಸಮಾನ ವ್ಯವಸ್ಥೆಯನ್ನು ಮಾನ್ಯಗೊಳಿಸುವ ಪ್ರಯತ್ನದ ಭಾಗವಾಗಿದೆ ಹಿಂದುತ್ವವಾದ. ಹಿಂದುತ್ವವಾದವನ್ನು ಪ್ರತಿಪಾದಿಸುವ ಪ್ರಧಾನಿ ಮೋದಿಯವರ ಸಮಾನ ನಾಗರಿಕ ಸಂಹಿತೆಗೆ ಈ ಆದಿವಾಸಿಯನ್ನೂ, ಮೂತ್ರಗೈದ ಶುಕ್ಲಾನನ್ನು ಸಮಾನ ವೇದಿಕೆಗೆ ತರುವ ಯಾವ ಶಕ್ತಿಯೂ ಇಲ್ಲ.

ಇದೇ ಮೊದಲ ಬಾರಿಗೆ ಇಂತಹದೊಂದು ಸುದ್ದಿಯನ್ನು ಕೇಳುತ್ತಿರುವಂತೆ ಸಮಾಜ ವರ್ತಿಸುತ್ತಿದೆ. ಆತ ಮೂತ್ರಿಸುವ ಕೃತ್ಯ ವೀಡಿಯೋದಲ್ಲಿ ನೇರವಾಗಿ ದಾಖಲಾಗಿರುವುದರಿಂದಾಗಿ ಕೃತ್ಯದ ನೀಚತನ ಸಮಾಜದ ಎದೆಯನ್ನು ತಾಕಿತು. ಆದರೆ ಇಂತಹ ಕೃತ್ಯಗಳು ಪದೇ ಪದೇ ಉತ್ತರ ಭಾರತದಲ್ಲಿ ವರದಿಯಾಗುತ್ತಲೇ ಇವೆ. ಜಾತಿಯ ಕಾರಣಕ್ಕಾಗಿ ಹೇಲು ತಿನ್ನಲು ಒತ್ತಾಯಿಸಿದ, ಮೂತ್ರ ಕುಡಿಸಿದ ಘಟನೆಗಳು ನಡೆದಿವೆ. ದಲಿತರು ಕುಡಿಯುವ ನೀರಿಗೆ ಹೇಲು ಸುರಿದ ಘಟನೆಗಳು ನಡೆದಾಗಲೂ ಸಮಾಜ ಅದನ್ನು ಗಂಭೀರವಾಗಿ ತೆಗೆದುಕೊಂಡದ್ದು ಕಡಿಮೆ. ಹಿಂದೂ-ನಾವೆಲ್ಲ ಒಂದು ಎನ್ನುವ ಹಿಂದುತ್ವವಾದಿಗಳು, ಅವರ ನೇತೃತ್ವವನ್ನು ವಹಿಸಿದ ಸ್ವಾಮೀಜಿಗಳು ಇವುಗಳ ವಿರುದ್ಧ ಕನಿಷ್ಠ ಖಂಡನಾ ಹೇಳಿಕೆಗಳನ್ನು ನೀಡಿದ ಉದಾಹರಣೆಗಳೂ ಇಲ್ಲ. ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ಆದಿವಾಸಿಯೊಬ್ಬ ಹಸಿವಿನಿಂದ ಕಳ್ಳತನ ನಡೆಸಿದಾಗ ಆತನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಅದರ ವಿರುದ್ಧ ಮಾನವ ಹಕ್ಕು ಸಂಘಟನೆಗಳು ಧ್ವನಿಯೆತ್ತಿದ್ದವು. ಕೇರಳದಲ್ಲಂತೂ ಈ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದೀಗ ಮಧ್ಯ ಪ್ರದೇಶದಲ್ಲಿ ನಡೆದಿರುವ ಘಟನೆ ಇದಕ್ಕಿಂತ ಭಿನ್ನವಾದುದೇನೂ ಅಲ್ಲ. ಮನುಷ್ಯನ ಮೇಲೆ ಸಾರ್ವಜನಿಕವಾಗಿ ಒಬ್ಬ ಮೂತ್ರ ವಿಸರ್ಜನೆ ಮಾಡುವುದೆಂದರೆ, ಆತನನ್ನು ಕೊಂದು ಹಾಕಿದಂತೆಯೇ. ತನ್ನ ಮೇಲೆ ಒಬ್ಬ ಮೂತ್ರ ವಿಸರ್ಜಿಸುತ್ತಿರುವಾಗ ಅದನ್ನು ಪ್ರತಿಭಟಿಸುವ ಕನಿಷ್ಠ ಚೈತನ್ಯವೂ ಇಲ್ಲದ ಆದಿವಾಸಿ ತರುಣನನ್ನು ಜೀವಂತ ವ್ಯಕ್ತಿ ಎಂದು ಕರೆಯಲು ಸಾಧ್ಯವೆ? ಇಲ್ಲಿ, ಆರೋಪಿಯನ್ನು ಶಿಕ್ಷಿಸುವುದರಿಂದಷ್ಟೇ ಸರಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ, ದಮನಿತ ಆದಿವಾಸಿ ಸಮುದಾಯವನ್ನು ಸಬಲೀಕರಣಗೊಳಿಸುವಲ್ಲಿ ಸರಕಾರದ ವೈಫಲ್ಯವನ್ನೂ ಇದು ಹೇಳುತ್ತಿದೆ. ಪ್ರಧಾನಿ ಮೋದಿಯವರ ಸಮಾನ ನಾಗರಿಕ ಸಂಹಿತೆ, ಆದಿವಾಸಿಗಳನ್ನು ಸಮಾನ ನಾಗರಿಕರನ್ನಾಗಿಸುವಲ್ಲಿ ಎಷ್ಟರಮಟ್ಟಿಗೆ ಆಸಕ್ತಿ ವಹಿಸಿದೆ ಎನ್ನುವ ಪ್ರಶ್ನೆಯೂ ಇದರ ಜೊತೆ ಜೊತೆಗೇ ಮುನ್ನೆಲೆಗೆ ಬಂದಿದೆ.

ಬಿಜೆಪಿ ಸುದೀರ್ಘ ಕಾಲದಿಂದ ಆಳ್ವಿಕೆ ನಡೆಸಿರುವ ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಬದುಕು ಇಂದಿಗೂ ಚಿಂತಾಜನಕವಾಗಿಯೇ ಇದೆ. ವರ್ಷದಿಂದ ವರ್ಷಕ್ಕೆ ಆದಿವಾಸಿಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ ಎನ್ನುವುದನ್ನು ಸಮೀಕ್ಷೆ ಬಹಿರಂಗಪಡಿಸಿವೆ. ೨೦೨೦ರಲ್ಲಿ ಈ ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಜನರ ಮೇಲೆ ೨,೪೦೧ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದು ೨೦೧೯ಕ್ಕೆ ಹೋಲಿಸಿದರೆ ಶೇ. ೨೫ರಷ್ಟು ಹೆಚ್ಚು. ಬುಡಕಟ್ಟು ಜನರ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ಮಧ್ಯಪ್ರದೇಶ ಅಗ್ರ ಸ್ಥಾನದಲ್ಲಿದ್ದರೆ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ದೇಶದಲ್ಲೂ ಆದಿವಾಸಿಗಳು ಮತ್ತು ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳೇ ಬಹಿರಂಗಪಡಿಸಿವೆ. ೨೦೨೦ರಲ್ಲಿ ದಲಿತರ ಮೇಲೆ ೫೦,೨೯೧ ದೌರ್ಜ ನ್ಯ ಪ್ರಕರಣಗಳು ದಾಖಲಾಗಿದ್ದರೆ, ೨೦೨೧ರಲ್ಲಿ ಇದು ೧.೨ ಶೇ. ದಷ್ಟು ಹೆಚ್ಚಾಗಿದೆ. ಪರಿಶಿಷ್ಟ ಜಾತಿಗಳ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ನಡೆದಿರುವುದು ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಒಡಿಶಾ, ಮಧ್ಯ ಪ್ರದೇಶ ಈ ಒಟ್ಟು ಐದು ರಾಜ್ಯಗಳಲ್ಲಿ ಶೇ. ೭೦.೮ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಬಲಾಢ್ಯ ಜಾತಿಗಳು ಯಾವೆಲ್ಲ ರಾಜ್ಯಗಳಲ್ಲಿ ಪ್ರಾಬಲ್ಯವನ್ನು ಹೊಂದಿವೆಯೋ ಅಲ್ಲಿ ದಲಿತರು, ಬುಡಕಟ್ಟು ಸಮುದಾಯದ ಮೇಲೆ ದೌರ್ಜನ್ಯ ನಡೆಸುವುದು ಅವರ ಅಲಿಖಿತ ಹಕ್ಕಾಗಿ ಬಿಟ್ಟಿದೆ. ಮೇಲಿನ ಅಂಕಿಅಂಶಗಳನ್ನು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಆಧಾರದ ಮೇಲೆ ಗುರುತಿಸಲಾಗಿದೆ. ಈ ದೇಶದಲ್ಲಿ ದಲಿತರು, ಬುಡಕಟ್ಟು ಜನರ ಮೇಲೆ ನಡೆಯುವ ಬಹುತೇಕ ದಾಳಿಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುವುದೇ ಇಲ್ಲ. ಮಧ್ಯಪ್ರದೇಶದಲ್ಲಿ ನಡೆದ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಯಾರೂ ಆರೋಪಿಯ ಮೇಲೆ ಪ್ರಕರಣವನ್ನು ದಾಖಲಿಸಿರಲಿಲ್ಲ. ವೀಡಿಯೊ ವೈರಲ್ ಆದ ಕಾರಣದಿಂದಾಗಿ ಪೊಲೀಸರು ಅನಿವಾರ್ಯವಾಗಿ ಆರೋಪಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕಾಯಿತು. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಧ್ಯಪ್ರದೇಶ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದೇ ಸಂದರ್ಭದಲ್ಲಿ ಮಲ ಗುಂಡಿ ಶುಚಿಗೊಳಿಸುವ ಸಂದರ್ಭದಲ್ಲಿ ಮೃತಪಡುವ ದಲಿತ ಕಾರ್ಮಿಕರನ್ನು ನಾವು ಮರೆತು ಬಿಟ್ಟಿದ್ದೇವೆ. ಇನ್ನೊಬ್ಬ ವಿಸರ್ಜಿಸಿದ ಮಲದ ಗುಂಡಿಯನ್ನು ಶುಚಿಗೊಳಿಸಲು ದಲಿತನೊಬ್ಬನನ್ನು ಇಳಿಸುವುದು ಮತ್ತು ಒಬ್ಬ ಮೇಲ್ಜಾತಿಯ ವ್ಯಕ್ತಿ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸುವುದು ಒಂದೇ ನಾಣ್ಯದ ಎರಡು ಮುಖಗಳು.

ಈಶಾನ್ಯ ಭಾರತದಲ್ಲಿ ಸರಕಾರದ ನೇತೃತ್ವದಲ್ಲೇ ಆದಿವಾಸಿಗಳ ಮೇಲೆ ಸಂಘಟಿತ ದಾಳಿಗಳು ನಡೆಯುತ್ತಿವೆ. ಕಾಡಿನಲ್ಲಿ ತಲೆತಲಾಂತರಗಳಿಂದ ಬದುಕು ಸವೆಸುತ್ತಿರುವ ಆದಿವಾಸಿಗಳನ್ನು ಅಲ್ಲಿಂದ ಒಕ್ಕಲೆಬ್ಬಿಸುವುದಕ್ಕಾಗಿ ಸೇನೆಯ ನೇತೃತ್ವದಲ್ಲೇ ಬಗೆ ಬಗೆಯ ಕಾರ್ಯಾಚರಣೆಗಳು ನಡೆಯುತ್ತಿವೆ. ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ಕಣ್ಣು ಲಾಭದಾಯಕ ಅರಣ್ಯ ಭೂಮಿಯ ಮೇಲೆ ಬಿದ್ದಿರುವುದರಿಂದ, ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದು ಅವರಿಗೆ ಅಗತ್ಯವಾಗಿದೆ. ನಕ್ಸಲ್ ಕಾರ್ಯಾಚರಣೆಯ ಹೆಸರಿನಲ್ಲಿ ಸಾವಿರಾರು ಆದಿವಾಸಿಗಳು ಈಗಾಗಲೇ ಬಲಿಯಾಗಿದ್ದ್ದಾರೆ. ಆದಿವಾಸಿ ಮಹಿಳೆಯರು ಬರ್ಬರವಾಗಿ ಅತ್ಯಾಚಾರಕ್ಕೀಡಾಗಿದ್ದಾರೆ. ಯಾವುದನ್ನು ನಾಗರಿಕತೆ ಎಂದು ಕರೆಯುತ್ತಾ ಬಂದಿದ್ದೇವೆಯೋ ಆ ನಾಗರಿಕತೆಯ ಮೇಲೆಯೇ ವ್ಯವಸ್ಥೆ ಹಲವು ದಶಕಗಳಿಂದ ಮೂತ್ರ ಒಯ್ಯುತ್ತಾ ಬಂದಿದೆ. ಸಮಾಜ ಕಣ್ಣಿದ್ದೂ ಅದಕ್ಕೆ ಕುರುಡಾಗಿವೆ. ಇಂದು ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಸಾವಿರಾರು ಜನರು ಮನೆ ಮಠಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸರಕಾರದ ವೈಫಲ್ಯವೇ ಇದಕ್ಕೆ ಕಾರಣ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಮಧ್ಯ ಪ್ರದೇಶದಲ್ಲಿ ಆದಿವಾಸಿಯ ಮೇಲೆ ಮೂತ್ರ ಹೊಯ್ದವನ ಮನೆಯನ್ನು ಬುಲ್ಡೋಜರ್ ಕಿತ್ತು ಹಾಕಿದಂತೆ, ಆದಿವಾಸಿಗಳನ್ನು ಸಾಮೂಹಿಕವಾಗಿ ಇಲ್ಲವಾಗಿಸಲು ಹೊರಟಿರುವ ಸರಕಾರದ ಮೇಲೂ ಬುಲ್ಡೋಜರ್ಗಳನ್ನು ಹರಿಸುವ ಅಗತ್ಯವಿಲ್ಲವೆ? ಭಾರತ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News