ದಲಿತನೆಂಬ ಕಾರಣಕ್ಕೆ ಜಿಗಜಿಣಗಿ ಸಚಿವ ಸ್ಥಾನದಿಂದ ವಂಚಿತರಾದರೆ?

Update: 2024-07-12 05:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಏಳು ಬಾರಿ ಸಂಸದನಾಗಿ ಅನುಭವವಿದ್ದರೂ ದಲಿತನೆನ್ನುವ ಕಾರಣಕ್ಕೆ ಮೋದಿ ಸರಕಾರದ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ’ ಎಂದು ಹಿರಿಯ ಸಂಸದ ರಮೇಶ್ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಬಹಿರಂಗವಾಗಿಯೇ ತನ್ನ ಅಸಮಾಧಾನವನ್ನು ಹೊರಗೆಡಹಿದ ಜಿಗಜಿಣಗಿ ‘‘ದಲಿತ ಸಮುದಾಯದಿಂದ ಇಡೀ ದಕ್ಷಿಣ ಭಾರತದಲ್ಲಿ ನಾನೊಬ್ಬನೇ ಏಳು ಬಾರಿ ಸಂಸದನಾಗಿ ಗೆದ್ದು ಬಂದಿರುವುದು. ಕೇಂದ್ರ ಸರಕಾರದಲ್ಲಿ ಈ ಬಾರಿ ಎಲ್ಲ ಮೇಲ್‌ಜಾತಿಯವರೇ ಸಚಿವರಾಗಿದ್ದಾರೆ. ಯಾಕೆ? ದಲಿತರು ಬಿಜೆಪಿಗೆ ಮತ ಹಾಕಿಲ್ಲವೆ? ಬಿಜೆಪಿಯೊಳಗಿನ ಈ ಜಾತಿ ಮನಸ್ಥಿತಿಯಿಂದ ನನ್ನ ಮನಸ್ಸಿಗೆ ಭಾರೀ ನೋವಾಗಿದೆ’’ ಎಂದು ಅಳಲು ತೋಡಿಕೊಂಡಿದ್ದಾರೆ. ‘‘ಬಿಜೆಪಿ ಪಕ್ಷವೆನ್ನುವುದು ದಲಿತರ ವಿರೋಧಿ ಎಂದು ಬಹಳಷ್ಟು ನಾಯಕರು ನನ್ನಲ್ಲಿ ವಾದ ಮಾಡಿದ್ದರು. ಇದೀಗ ಬಿಜೆಪಿಯು ನನಗೆ ಸಚಿವ ಸ್ಥಾನ ನೀಡದೆ ಇರುವುದರ ಹಿಂದೆ ದಲಿತರ ಕುರಿತಂತೆ ಅದರ ಧೋರಣೆ ಬಹಿರಂಗವಾಗಿದೆ’’ ಎಂದು ಅವರು ಹೇಳಿಕೊಂಡಿದ್ದಾರೆ. ತನ್ನ ರಾಜಕೀಯ ಜೀವನದ ಕಡೆಯ ದಿನಗಳಲ್ಲಾದರೂ ಬಿಜೆಪಿಯಲ್ಲಿ ದಲಿತರ ಸ್ಥಾನಮಾನದ ಬಗ್ಗೆ ಅವರಿಗೆ ಅರಿವು ಮೂಡಿರುವುದು ಒಂದು ಆಶಾದಾಯಕ ವಿಷಯವೇ ಆಗಿದೆ.

ಜಿಗಜಿಣಗಿಯವರು ಬಿಜೆಪಿಯೊಳಗೆ ತನ್ನ ಜಾತಿಯ ಬಗ್ಗೆ ಒಂದು ರೀತಿಯ ಕೀಳರಿಮೆಯಿಂದಲೇ ಬದುಕಿಕೊಂಡು ಬಂದವರು. ದೇವಸ್ಥಾನ ಪ್ರವೇಶದ ವಿಷಯದಲ್ಲಿ ಜಿಗಜಿಣಗಿ ಹೇಳಿಕೆ ಈ ಹಿಂದೆ ಪತ್ರಿಕೆಗಳಲ್ಲಿ ಚರ್ಚೆಯ ವಿಷಯವಾಗಿತ್ತು. ದಲಿತರಾದ ಕಾರಣಕ್ಕೆ ದೇವಸ್ಥಾನದೊಳಗೆ ಪ್ರವೇಶ ಸಿಗದೇ ಇದ್ದಾಗ, ದೇವಸ್ಥಾನದ ಹೊರಗೆ ನಿಂತೇ ಪ್ರಸಾದವನ್ನು ಸ್ವೀಕರಿಸಿ ಅವರು ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾದರು. ಒಬ್ಬ ದಲಿತನಾಗಿರುವ ಕಾರಣಕ್ಕೆ ಒಬ್ಬ ಸಂಸದನಿಗೂ ದೇವಸ್ಥಾನದಲ್ಲಿ ಪ್ರವೇಶವಿಲ್ಲ ಎಂದಾದರೆ, ಹಿಂದೂ ಧರ್ಮದಲ್ಲಿ ಉಳಿದ ದಲಿತರ ಸ್ಥಾನಮಾನ ಹೇಗಿರಬಹುದು ಎನ್ನುವುದು ಚರ್ಚೆಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡಿದ ಜಿಗಜಿಣಗಿ ‘‘ನಾನು ದೇವಸ್ಥಾನ ಪ್ರವೇಶಿಸುವುದರಿಂದ ಕೆಲವರ ಭಾವನೆಗಳಿಗೆ ಧಕ್ಕೆಯಾಗುವುದಾದರೆ ದೇವಸ್ಥಾನ ಪ್ರವೇಶಿಸುವುದಿಲ್ಲ. ಇದು ನನಗೆ ನನ್ನ ತಾಯಿ ನೀಡಿದ ನಿರ್ದೇಶನವಾಗಿದೆ. ಅದನ್ನು ಪಾಲಿಸುತ್ತಿದ್ದೇನೆ’’ ಎಂದು ಬಿಟ್ಟರು. ಒಂದು ಕಾಲದಲ್ಲಿ ಅಂಬೇಡ್ಕರ್ ಅವರು ‘‘ದಲಿತರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ ಎಂದಾದರೆ ಆ ದೇವಸ್ಥಾನವನ್ನೇ ನಿರಾಕರಿಸಬೇಕು’’ ಎಂದು ಕರೆ ನೀಡಿದ್ದರು. ದಲಿತ ಸಮುದಾಯದ ಹಕ್ಕುಗಳಿಗಾಗಿ ಅಂಬೇಡ್ಕರ್‌ರಂತಹ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ ಕಾರಣದಿಂದಲೇ ಇಂದು ಜಿಗಜಿಣಗಿಯಂತಹ ನಾಯಕರು ಸಂಸತ್ತ್ತನ್ನು ಪ್ರವೇಶಿಸಲು ಸಾಧ್ಯವಾಗಿದೆ. ಜಿಗಜಿಣಗಿಯವರು ದೇವಸ್ಥಾನ ಭೇಟಿಯನ್ನೇ ಮಾಡದೇ ಇದ್ದಿದ್ದರೆ ಯಾರೂ ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಅವರು ಅಸ್ಪಶ್ಯತೆಯನ್ನು ಆಚರಿಸುವ ದೇವಸ್ಥಾನದ ಹೊರಗಡೆ ನಿಂತು ಪ್ರಸಾದ ಸ್ವೀಕರಿಸಿರುವುದು ಹಲವು ದಲಿತ ನಾಯಕರ ಆಕ್ಷೇಪಕ್ಕೆ ಕಾರಣವಾಗಿತ್ತು. ವಿಪರ್ಯಾಸವೆಂದರೆ, ಈ ಸಂದರ್ಭದಲ್ಲಿ ಜಿಗಜಿಣಗಿಯವರ ಪರವಾಗಿ ಬಿಜೆಪಿ ನಾಯಕರು ಧ್ವನಿಯೆತ್ತಬೇಕಾಗಿತ್ತು. ‘‘ನಾವೆಲ್ಲ ಹಿಂದೂ ನಾವೆಲ್ಲ ಒಂದು’’ ಎಂದು ಮತ ಯಾಚಿಸುವ ಸಂಘಪರಿವಾರ, ಆರೆಸ್ಸೆಸ್ ಮುಖಂಡರು ಪತ್ರಿಕಾ ಹೇಳಿಕೆ ನೀಡಿ ‘‘ಜಿಗಜಿಣಗಿಯವರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬೇಕು’’ ಎಂದು ಆಗ್ರಹಿಸಬೇಕಿತ್ತು. ಹಿಂದೂ ಧರ್ಮದ ಪರವಾಗಿ ಮಾತನಾಡುವ ಸ್ವಾಮೀಜಿಗಳು ಜಿಗಜಿಣಗಿಯವರ ಪರವಾಗಿ ಮಾತನಾಡಬೇಕಾಗಿತ್ತು. ಆದರೆ ಎಲ್ಲರೂ ಮೌನವಾಗಿದ್ದು, ಜಿಗಜಿಣಗಿಯವರಿಗೆ ಆದ ಅವಮಾನವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಇದೀಗ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರದ ಸಂಪುಟದೊಳಗೂ ಜಿಗಜಣಗಿಯವರಿಗೆ ಪ್ರವೇಶ ಸಿಕ್ಕಿಲ್ಲ. ಹೊರಗಿನಿಂದಲೇ ಪ್ರಸಾದ ಸ್ವೀಕರಿಸಬೇಕಾದ ಸ್ಥಿತಿ ಅವರಿಗೆ ಎದುರಾಗಿದೆ. ಸಚಿವರಾಗಲು ಜಿಗಜಿಣಗಿ ಎಲ್ಲ ರೀತಿಯಲ್ಲೂ ಅರ್ಹತೆಯನ್ನು ಪಡೆದಿದ್ದಾರೆ. ಮೊತ್ತ ಮೊದಲಾಗಿ ಜಿಗಜಿಣಗಿ ಶೋಷಿತ ಸಮುದಾಯದಿಂದ ಬಂದವರು. ಇಡೀ ದಕ್ಷಿಣ ಭಾರತದಲ್ಲಿ ಏಳು ಬಾರಿ ಸಂಸದರಾಗಿ ಆಯ್ಕೆಯಾದ ದಲಿತ ನಾಯಕರು ಎನ್ನುವ ಹೆಗ್ಗಳಿಕೆಯನ್ನು ಹೊಂದಿದವರು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುತ್ತಾ ಬಂದವರು. ಈ ಬಾರಿ ರಾಜ್ಯದಿಂದ ನಾಲ್ವರು ಕೇಂದ್ರ ಸಚಿವರಾಗಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ, ಆಯ್ಕೆಯಾದ ಎಲ್ಲರೂ ಮೇಲ್‌ಜಾತಿಗೆ ಸೇರಿದವರು. ಪ್ರಹ್ಲಾದ್ ಜೋಷಿಯವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದರೆ, ಕುಮಾರಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಸೋಮಣ್ಣ ಅವರು ಲಿಂಗಾಯತರು. ಕನಿಷ್ಠ ಶೋಭಾ ಕರಂದ್ಲಾಜೆಯನ್ನು ಪಕ್ಕಕ್ಕಿಟ್ಟು ಅವರ ಬದಲಿಗೆ ಜಿಗಜಿಣಗಿಯವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ಅವಕಾಶ ಬಿಜೆಪಿಗಿತ್ತು. ರಾಜಕೀಯವಾಗಿ ಅತ್ಯಂತ ಅಪ್ರಬುದ್ಧರೂ, ಅಭಿವೃದ್ಧಿಯ ಬಗ್ಗೆ ಯಾವ ದೂರದೃಷ್ಟಿಯೂ ಇಲ್ಲದೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಘೇರಾವ್‌ಗೊಳಗಾಗಿದ್ದ ಶೋಭಾ ಕರಂದ್ಲಾಜೆಯನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿದ ಬಿಜೆಪಿಗೆ ಜಿಗಜಿಣಗಿಯ ಹಿರಿತನ ಯಾಕೆ ಕಣ್ಣಿಗೆ ಬೀಳಲಿಲ್ಲ? ಎನ್ನುವ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ಪಕ್ಷವು ದಲಿತ ನಾಯಕನನ್ನು ಮುಖ್ಯಮಂತ್ರಿ ಮಾಡಲಿ, ದಲಿತರಿಗೆ ನ್ಯಾಯ ನೀಡಲಿ ಎಂದು ಸಲಹೆ ನೀಡುವ ಬಿಜೆಪಿ ನಾಯಕರು, ಜಿಗಜಿಣಗಿಗೆ ಸಚಿವ ಸ್ಥಾನ ನೀಡುವ ವಿಷಯದಲ್ಲಿ ಯಾಕೆ ಮೌನವಾಗಿದ್ದಾರೆ?

ಶೋಷಿತ ಸಮುದಾಯವನ್ನು ‘ಹಿಂದುತ್ವ’ದ ಹೆಸರಿನಲ್ಲಿ ಮತಬ್ಯಾಂಕ್ ಆಗಿ ಬಳಸುವ ಬಿಜೆಪಿ, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಯಾಕೆ ಅವರನ್ನು ನಿರ್ಲಕ್ಷಿಸುತ್ತಿದೆ ಎನ್ನುವ ಪ್ರಶ್ನೆಗೆ ಮತ್ತೆ ಮಹತ್ವ ಬಂದಿದೆ. ದಕ್ಷಿಣ ಕನ್ನಡದಲ್ಲಿ ‘ಹಿಂದುತ್ವ’ವನ್ನು ಮುಂದಿಟ್ಟುಕೊಂಡು ಬಿಲ್ಲವ ಸಮುದಾಯದ ಮತಗಳನ್ನು ಬಿಜೆಪಿ ತನ್ನ ಜೋಳಿಗೆಗೆ ಹಾಕುತ್ತಾ ಬಂದಿದೆ. ಆದರೆ ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಬಿಲ್ಲವರನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎನ್ನುವ ಆರೋಪವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ನಾಯಕರೂ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಬಿಲ್ಲವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾಗ, ರಾಷ್ಟ್ರಮಟ್ಟದಲ್ಲಿ ಹಲವು ಬಿಲ್ಲವ ನಾಯಕರು ಹುಟ್ಟಿ ಬಂದರು. ಜನಾರ್ದನ ಪೂಜಾರಿಯವರು ಕೇಂದ್ರ ಸಚಿವರಾಗಿ, ಹಣಕಾಸು ಸಚಿವರಾಗಿ ‘ಸಾಲ ಮೇಳ’ದ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚಿದರು. ಈಡಿಗ ಸಮಾಜದಿಂದ ಬಂದ ಬಂಗಾರಪ್ಪ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾದರು. ಬಿ. ಕೆ. ಹರಿಪ್ರಸಾದ್‌ರಂತಹ ನಾಯಕರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಬಿಲ್ಲವ ಸಮಾಜ ತಲೆಯೆತ್ತಿ ನಿಂತದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಔನ್ನತ್ಯವನ್ನು ಸಾಧಿಸಿದ್ದು ಈ ಅವಧಿಯಲ್ಲಿ. ಬಿಜೆಪಿಯ ಹಿಂದುತ್ವದ ಭಾವನಾತ್ಮಕ ರಾಜಕೀಯಕ್ಕೆ ಬಲಿಯಾದ ಬಳಿಕ, ಬಿಲ್ಲವರು ಮತಬ್ಯಾಂಕ್‌ಗೆ ಸೀಮಿತರಾದರು. ರಾಷ್ಟ್ರಮಟ್ಟದಲ್ಲಿ ಅಧಿಕಾರವನ್ನು ಮೇಲ್‌ಜಾತಿಯ ಜನರು ತನ್ನದಾಗಿಸಿಕೊಳ್ಳತೊಡಗಿದರು. ಇಂದು ಬಿಲ್ಲವ ಸಮುದಾಯದಿಂದ ಬಿಜೆಪಿಯಲ್ಲಿ ಎಷ್ಟು ಜನರು ರಾಷ್ಟ್ರಮಟ್ಟದ ರಾಜಕೀಯ ನಾಯಕರಿದ್ದಾರೆ? ಬಿಲ್ಲವ ಸಮುದಾಯದ ನಾಯಕರನ್ನು ಯಾಕೆ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಬೆಳೆಸಲಿಲ್ಲ? ದಲಿತ ಸಮುದಾಯದಿಂದ ಬಂದು, ಸ್ವಂತ ರಾಜಕೀಯ ವರ್ಚಸ್ಸಿನಿಂದ ಏಳು ಬಾರಿ ಸಂಸದರಾಗಿಯೂ ಈ ಬಾರಿ ಸಚಿವರಾಗಲು ಸಾಧ್ಯವಾಗದ ಜಿಗಜಿಣಗಿಯವರ ಅಸಹಾಯಕತೆ, ವಿಷಾದದ ಹೇಳಿಕೆಗಳಲ್ಲೇ ಈ ಪ್ರಶ್ನೆಗಳಿಗೆ ಉತ್ತರಗಳಿವೆ. ಜಿಗಜಿಣಗಿಯವರಿಗೆ ಬಿಜೆಪಿಯಲ್ಲಾದ ಅನ್ಯಾಯದಿಂದ ಬಿಜೆಪಿಯೊಳಗಿರುವ ಇತರ ದಲಿತ ನಾಯಕರು ಪಾಠ ಕಲಿಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News