ರಾಜ್ಯಪಾಲ ಹುದ್ದೆಯ ಔಚಿತ್ಯವೇನು?
ಒಕ್ಕೂಟ ಸರಕಾರದ ಸೂತ್ರ ಹಿಡಿದಿರುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ರಾಜಭವನಗಳನ್ನು ಹಾಗೂ ರಾಜ್ಯಪಾಲರನ್ನು ತನ್ನ ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಷ್ಟು ಹಿಂದಿನ ಯಾವ ಸರಕಾರಗಳೂ ಬಳಸಿಕೊಂಡಿರಲಿಲ್ಲ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರೆಂಬ ಈ ಬಿಳಿಯಾನೆಗಳು ಮಾಡುತ್ತಿರುವ ಕಿತಾಪತಿಗೆ ಈಗಾಗಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಕೇರಳದ ಎಡರಂಗದ ಸರಕಾರ ದೈನಂದಿನ ಆಡಳಿತದಲ್ಲಿ ರಾಜ್ಯಪಾಲರ ನಿರಂತರ ಕಿರುಕುಳದ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ರಾಜ್ಯ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕದೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ತಮ್ಮ ಬಳಿ ಸುದೀರ್ಘಕಾಲ ಇರಿಸಿಕೊಳ್ಳುವ ಮೂಲಕ ತಮ್ಮ ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ವಿಫಲಗೊಂಡಿದ್ದಾರೆ ಹಾಗಾಗಿ ಆದಷ್ಟು ಬೇಗ ವಿಧೇಯಕಗಳಿಗೆ ಅಂಕಿತ ಹಾಕಬೇಕೆಂದು ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದೆ. ಈ ಹಿಂದೆ ತಮಿಳುನಾಡು, ಪಂಜಾಬ್, ತೆಲಂಗಾಣ ರಾಜ್ಯ ಸರಕಾರಗಳು ಕೂಡ ಇಂಥದೇ ಮನವಿಯನ್ನು ಮಾಡಿಕೊಂಡಿದ್ದವು.
ಕೇರಳ ಸರಕಾರದ ಜನಪರ ಯೋಜನೆಗಳಿಗೆ ಸಂಬಂಧಿಸಿದ ಕೆಲ ವಿಧೇಯಕಗಳನ್ನು ಅಲ್ಲಿನ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಕಳೆದ ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಯಾವುದೇ ಸಕಾರಾತ್ಮಕ ಕಾರಣವಿಲ್ಲದೆ ತಮ್ಮ ಬಳಿ ಇಟ್ಟು ಕೊಂಡಿದ್ದಾರೆ ಎಂಬುದು ಕೇರಳ ಸರಕಾರದ ಅಸಮಾಧಾನ ವಾಗಿದೆ. ಈ ವಿಧೇಯಕಗಳಲ್ಲಿ ಲೋಕಾಯುಕ್ತ ವಿಧೇಯಕದಂತಹ ಮಹತ್ವದ ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೆ ಇಟ್ಟುಕೊಂಡ ಬಗ್ಗೆ ಕೇರಳ ವಿಧಾನಸಭೆ ಗೊತ್ತುವಳಿಯನ್ನೂ ಅಂಗೀಕರಿಸಿದೆ.
ರಾಜ್ಯಪಾಲರಾದವರು ಸರಕಾರ ಅಂಗೀಕರಿಸಿ ಕಳಿಸಿದ ವಿಧೇಯಕದ ಬಗ್ಗೆ ಆಕ್ಷೇಪವಿದ್ದರೆ ಅದನ್ನು ಬರೆದು ತಿಳಿಸಿ ವಿಧೇಯಕ ಪ್ರಸ್ತಾವನೆಯನ್ನು ವಾಪಸ್ ಕಳಿಸಬೇಕು. ಇಲ್ಲವೇ ರಾಷ್ಟ್ರಪತಿಗಳಿಗೆ ಕಳಿಸಬೇಕು. ಇದಾವುದನ್ನೂ ಮಾಡದೆ ವಿಧೇಯಕಕ್ಕೆ ಅಂಕಿತ ಹಾಕದೆ ಸುಮ್ಮನೆ ಇಟ್ಟು ಕೊಂಡು ಕುಳಿತುಕೊಳ್ಳುವುದು ಕೇಂದ್ರ ಸರಕಾರವನ್ನು ಓಲೈಸುವ ಕುಚೇಷ್ಟೆಯಾಗಿದೆ. ಇದು ಚುನಾಯಿತ ಸರಕಾರವೊಂದರ ದೈನಂದಿನ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುವ ವರ್ತನೆಯಲ್ಲದೆ ಬೇರೇನೂ ಅಲ್ಲ ಎಂದು ಟೀಕಿಸಲು ಸಾಕಷ್ಟು ಕಾರಣಗಳಿವೆ. ರಾಜ್ಯಪಾಲರು ಸಂವಿಧಾನದ ಸಂರಕ್ಷಕರಾಗಬೇಕೇ ಹೊರತು ಭಕ್ಷಕರಾಗಬಾರದು.
ರಾಜ್ಯಪಾಲರು ಈ ರೀತಿ ವರ್ತಿಸುವುದು ಬಿಜೆಪಿಯೇತರ ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಎಂಬುದು ಇದರ ಒಳಗಿನ ರಾಜಕೀಯ ಹಿತಾಸಕ್ತಿಯನ್ನು ಬಯಲುಪಡಿಸುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ರಾಜ್ಯಪಾಲರು ಸರಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡು ಶಾಸನಸಭೆ ಅಂಗೀಕರಿಸಿ ಕಳಿಸುವ ಮಸೂದೆಗಳಿಗೆ ಅಂಕಿತ ಹಾಕುತ್ತಾ ಸುಗಮ ಆಡಳಿತಕ್ಕೆ ಸಹಕಾರ ನೀಡುತ್ತಿದ್ದಾರೆ. ಕಿರುಕುಳ ಇರುವುದು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರ. ಈ ರಾಜ್ಯಪಾಲರುಗಳು ಚುನಾಯಿತ ರಾಜ್ಯ ಸರಕಾರಗಳ ಮೇಲೆ ತಾವೇ ನಿರಂಕುಶ ಪ್ರಭುಗಳೆಂಬಂತೆ ಸವಾರಿ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ತೆಲಂಗಾಣ ಸರಕಾರವು ಸುಪ್ರೀಂ ಕೋರ್ಟಿನ ಮೆಟ್ಟಲು ಹತ್ತಿದಾಗ ಮಧ್ಯಪ್ರವೇಶ ಮಾಡಿದ ಸುಪ್ರೀಂ ಕೋರ್ಟ್ ತೆಲಂಗಾಣ ರಾಜ್ಯಪಾಲರ ಕಿವಿ ಹಿಂಡಿದಂತೆ ಸಂವಿಧಾನದ 200ನೇ ಪರಿಚ್ಛೇದದ ಪ್ರಕಾರ ರಾಜ್ಯ ಸರಕಾರ ಶಾಸನಸಭೆಯಲ್ಲಿ ಅಂಗೀಕರಿಸಿ ಕಳಿಸಿದ ಮಸೂದೆಗಳಿಗೆ ತಕ್ಷಣ ಅಂಕಿತ ಹಾಕುವಂತೆ ಸೂಚನೆಯನ್ನು ನೀಡಿತ್ತು. ಆದರೂ ಸುಪ್ರೀಂ ಕೋರ್ಟ್ ಅಂಕಿತ ಹಾಕಲು ನಿರ್ದಿಷ್ಟ ಕಾಲಮಿತಿಯನ್ನು ವಿಧಿಸಿರಲಿಲ್ಲ. ಈ ತಾಂತ್ರಿಕ ಕಾರಣವನ್ನೇ ನೆಪ ಮಾಡಿಕೊಂಡು ಅಂಕಿತ ಹಾಕಲು ವಿಳಂಬ ಮಾಡುತ್ತಾ ಬಂದರು. ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಗಳಂತೆ ಸಂವಿಧಾನದ ಸಂರಕ್ಷಕರಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಕೇಂದ್ರ ಸರಕಾರದ ಏಜೆಂಟರಂತಲ್ಲ.
ಸಾಮಾನ್ಯವಾಗಿ ರಾಜ್ಯಪಾಲರಾಗಿ ಕೇಂದ್ರದಿಂದ ನೇಮಕವಾಗಿ ಬರುವವರು ಆಡಳಿತ ಪಕ್ಷದ ವಯಸ್ಸಾದ, ಅಧಿಕಾರಾಕಾಂಕ್ಷೆಯ ರಾಜಕಾರಣಿಗಳು. ಪಕ್ಷದೊಳಗೆ ಸದಾ ತಲೆ ನೋವಾಗಿರುವ ಅತೃಪ್ತ ರಾಜಕಾರಣಿಗಳನ್ನು ಸಮಾಧಾನ ಪಡಿಸಲು ಕೇಂದ್ರ ಸರಕಾರ ರಾಜ್ಯಪಾಲರನ್ನಾಗಿ ನೇಮಕ ಮಾಡಿ ರಾಜ್ಯಗಳಿಗೆ ಕಳಿಸಿಕೊಡುತ್ತದೆ.ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್‌ಖಾನ್‌ರಂಥವರು ಸಂಘಪರಿವಾರವನ್ನು ಓಲೈಸಿ ಹೇಗೆ ರಾಜ್ಯಪಾಲರಾದರೆಂಬ ಬಗ್ಗೆ ವಿವರಿಸುವುದು ಅಗತ್ಯವಿಲ್ಲ.
ವಾಸ್ತವವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಶಿಫಾರಸಿನ ಮೇಲೆ ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಕ ಮಾಡುತ್ತಾರೆ. ಆದರೆ ರಾಜ್ಯ ಸರಕಾರಗಳನ್ನು ಆಯಾ ರಾಜ್ಯದ ಜನರು ಆಯ್ಕೆ ಮಾಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಯಾರಿಗೆ ಹೆಚ್ಚು ಅಧಿಕಾರವಿರಬೇಕೆಂಬ ಪ್ರಶ್ನೆಗೆ ಸಂವಿಧಾನದಲ್ಲಿ ಸ್ಪಷ್ಟವಾದ ಉತ್ತರವಿದೆ. ಸಂವಿಧಾನದ ಪ್ರಕಾರ ಚುನಾಯಿತ ಸರಕಾರಗಳಿಗೆ ಹೆಚ್ಚು ಅಧಿಕಾರವಿದೆ. ಹಾಗಾದರೆ ರಾಜ್ಯಪಾಲರ ಹುದ್ದೆಯ ಔಚಿತ್ಯವೇನು? ಈ ಬಗ್ಗೆ ರಾಷ್ಟ್ರೀಯ ಚರ್ಚೆ ನಡೆಯಬೇಕಾಗಿದೆ.
ಇತ್ತೀಚೆಗೆ ಒಂದಿಲ್ಲೊಂದು ಕಾರಣದಿಂದ ರಾಜ್ಯಪಾಲರು ವಿವಾದದ ಕೇಂದ್ರ ಬಿಂದುವಾಗುತ್ತಿದ್ದಾರೆ. ಉದಾಹರಣೆಗೆ ತೆಲಂಗಾಣ ರಾಜ್ಯಪಾಲೆ ತಮಿಳು ಇಸೈ ಅವರು ರಾಜ್ಯದ ಬಿಆರ್‌ಎಸ್ ಸರಕಾರದ ಜೊತೆ ನಿತ್ಯ ಕಾದಾಡುತ್ತಲೇ ಇರುತ್ತಾರೆ. ಬಹಿರಂಗವಾಗಿ ರಾಜ್ಯ ಸರಕಾರದ ಆಡಳಿತ ವೈಖರಿಯನ್ನು ಟೀಕಿಸುತ್ತಾರೆ. ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರವಿದೆ.ಅಲ್ಲಿನ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಸರಕಾರದ ಸುಮಾರು 20 ಮಸೂದೆಗಳಿಗೆ ಅಂಕಿತ ಹಾಕಿಲ್ಲ. ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಕರ್ ಮತ್ತು ಮಮತಾ ಬ್ಯಾನರ್ಜಿಯವರ ಸರಕಾರದ ನಡುವಿನ ಸಂಘರ್ಷ ಎಲ್ಲರಿಗೂ ಗೊತ್ತಿದೆ. ಈಗಿನ ರಾಜ್ಯಪಾಲ ಆನಂದ ಬೋಸ್ ಅವರ ವರ್ತನೆ ಕೂಡ ವಿವಾದಾತ್ಮಕವಾಗಿದೆ. ಇನ್ನು ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಜ್ಯ ಸರಕಾರದ ಜೊತೆ ತಿಕ್ಕಾಟ ನಡೆಸುತ್ತಲೇ ಇದ್ದಾರೆ.
ಇದು ಬರಲಿರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸಂಭವವಿದೆ. ಹೀಗಾಗದಂತೆ ತಡೆಯಲು ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕು. ಅಷ್ಟೇ ಅಲ್ಲದೆ ರಾಜ್ಯಪಾಲರ ಹುದ್ದೆ ಎಂಬುದು ಇರಬೇಕೇ? ಎಂಬ ಬಗ್ಗೆ ರಾಷ್ಟ್ರೀಯ ಚರ್ಚೆ ನಡೆಯಬೇಕಾಗಿದೆ. ಅನಗತ್ಯ ಖರ್ಚಿನ, ಕೇವಲ ರಾಜ್ಯ ಸರಕಾರಗಳಿಗೆ ಕಿರುಕುಳ ನೀಡಲು ಮಾತ್ರ ಬಳಕೆಯಾಗುತ್ತಿರುವ ಬಿಳಿಯಾನೆಯಂತಿರುವ ರಾಜ್ಯಪಾಲರ ಹುದ್ದೆಯನ್ನು ರದ್ದು ಪಡಿಸುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ.