ಸೂರಜ್ ಗೌಡ ವಜಾ ಎಂದು?

Update: 2024-06-24 05:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜೆಡಿಎಸ್ ಮುಖಂಡ ಪ್ರಜ್ವಲ್ ಗೌಡ ಅವರ ಲೈಂಗಿಕ ಹಗರಣ ಅಂತಾರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಅವರ ಬಂಧನ, ವಿಚಾರಣೆ ನಡೆಯುತ್ತಿರುವ ಹೊತ್ತಿಗೇ ಅವರ ಅಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಜ್ವಲ್ ಗೌಡ ಅವರ ಲೈಂಗಿಕ ಹಗರಣ ಹಲವು ಕಾರಣಗಳಿಗಾಗಿ ನಾಡನ್ನು ಬೆಚ್ಚಿ ಬೀಳಿಸಿತ್ತು. ಒಬ್ಬ ಪ್ರತಿಷ್ಠಿತ ಕುಟುಂಬದ ಗಣ್ಯ ವ್ಯಕ್ತಿ, ಜನಪ್ರತಿನಿಧಿಯಾದ ಕಾರಣಕ್ಕಾಗಿ ಮಾತ್ರ ಈ ಲೈಂಗಿಕ ಹಗರಣ ಸುದ್ದಿಯಾದದ್ದಲ್ಲ. ಲೈಂಗಿಕ ದೌರ್ಜನ್ಯಗಳ ಸಂದರ್ಭದಲ್ಲಿ ಈತ ಮೆರೆದ ವಿಕೃತಿ, ಕ್ರೌರ್ಯಗಳಿಗೆ ನಾಡು ಬೆಚ್ಚಿ ಬಿದ್ದಿತ್ತು. ಯಾವುದೋ ಒಬ್ಬ ಹುಡುಗಿಯನ್ನು ಲೈಂಗಿಕವಾಗಿ ಶೋಷಿಸಿದ್ದಷ್ಟೇ ಆಗಿದ್ದರೆ ಅದು ಇಷ್ಟರಮಟ್ಟಿಗೆ ವಿವಾದವಾಗುತ್ತಿರಲಿಲ್ಲ. ರಾಜಕಾರಣಿಗಳು ಲೈಂಗಿಕ ಹಗರಣದಲ್ಲಿ ಗುರುತಿಸಿಕೊಳ್ಳುತ್ತಿರುವುದು ಇದೇ ಮೊದಲೇನೂ ಅಲ್ಲ. ಕೆಲವು ರಾಜಕಾರಣಿಗಳು ಹೊಟೇಲ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ ನಡೆಸಿದ ಅಶ್ಲೀಲ ಕೃತ್ಯಗಳ ಸಿಡಿಗಳು ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದಿವೆ. ಆದರೆ ಆ ಕಾರಣಕ್ಕಾಗಿ ಅವರು ಜೈಲು ಪಾಲಾಗುವಂತಹ ಸ್ಥಿತಿ ನಿರ್ಮಾಣವಾಗಿರಲಿಲ್ಲ. ಪ್ರಜ್ವಲ್ ಗೌಡ ಪ್ರಕರಣದ ಲೈಂಗಿಕ ಹಗರಣ ಅವೆಲ್ಲಕ್ಕಿಂತಲೂ ಭಿನ್ನವಾದುದು. ಇಲ್ಲಿ ಆತ ತನ್ನ ಲೈಂಗಿಕ ವಾಂಛೆಗಾಗಿ ಹತ್ತು ಹಲವು ತರುಣಿಯರನ್ನು ಬಳಸಿಕೊಂಡಿದ್ದಾನೆ ಮಾತ್ರವಲ್ಲ, ಅವುಗಳನ್ನೆಲ್ಲ ಚಿತ್ರೀಕರಿಸಿ ಪೆನ್‌ಡ್ರೈವ್‌ನಲ್ಲಿ ಭದ್ರ ಪಡಿಸಿಟ್ಟಿದ್ದ ಆರೋಪ ಅವನ ಮೇಲಿದೆ. ಈ ಪೆನ್‌ಡ್ರೈವ್‌ಗಳಿಗೆ ಆ ಹೆಣ್ಣು ಮಕ್ಕಳ ಬದುಕನ್ನು ಸರ್ವನಾಶಗೊಳಿಸುವ ಶಕ್ತಿಯಿತ್ತು. ಪೆನ್‌ಡ್ರೈವ್ ಬಳಸಿಕೊಂಡು ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ, ಅವರನ್ನು ಇನ್ನಷ್ಟು ಲೈಂಗಿಕ ಶೋಷಣೆಗೊಳಪಡಿಸುವ ಸಾಧ್ಯತೆಗಳಿದ್ದವು. ವಿಕೃತಿ, ಕ್ರೌರ್ಯಗಳು ಈ ಹಗರಣದಲ್ಲಿ ಬೆಸೆದುಕೊಂಡಿರುವುದರಿಂದಲೇ, ಇದು ದೇಶದಲ್ಲೇ ಮೊದಲ ಬೃಹತ್ ಲೈಂಗಿಕ ಹಗರಣವೆಂದು ಗುರುತಿಸಲ್ಪಟ್ಟಿತ್ತು. ವಿಪರ್ಯಾಸವೆಂದರೆ, ಇದೀಗ ಅಂತಹದೇ ಇನ್ನೊಂದು ವಿಕೃತ ಲೈಂಗಿಕ ದೌರ್ಜನ್ಯ ಆರೋಪ ಅವರ ಅಣ್ಣ ಸೂರಜ್‌ಗೌಡ ಅವರ ಮೇಲೆ ಕೇಳಿ ಬರುತ್ತಿದೆ.

ಈ ಪ್ರಕರಣವೂ ಪ್ರಜ್ವಲ್ ಹಗರಣಕ್ಕಿಂತ ಭಿನ್ನವಾಗಿಯೇನೂ ಇಲ್ಲ. ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿವೆ. ಕೆಲಸ ಕೇಳಿಕೊಂಡು ಬಂದ ಯುವಕನ ಮೇಲೆ ಸೂರಜ್ ಗೌಡ ಅತ್ಯಂತ ವಿಕೃತವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನುವ ಆರೋಪವನ್ನು ಜೆಡಿಎಸ್ ಕಾರ್ಯಕರ್ತನೆಂದು ಕರೆಸಿಕೊಂಡ ವ್ಯಕ್ತಿಯೇ ಪೊಲೀಸರಿಗೆ ದೂರು ನೀಡಿದ್ದಾನೆ. ದೌರ್ಜನ್ಯದ ಸಂದರ್ಭದಲ್ಲಿ ತನ್ನ ಮೈಮೇಲೆ ಗಾಯಗಳಾಗಿವೆ ಎಂದೂ ಆತ ದೂರಿನಲ್ಲಿ ಹೇಳಿಕೊಂಡಿದ್ದಾನೆ. ಆದರೆ ಈ ಪ್ರಕರಣಕ್ಕೆ ಇನ್ನೊಂದು ಮುಖವೂ ಇದೆ. ಆರೋಪಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುವುದಕ್ಕಾಗಿ ಈ ದೂರನ್ನು ನೀಡಿದ್ದಾನೆ ಎಂದು ಸೂರಜ್ ಗೌಡ ಪ್ರತಿಯಾಗಿ ಆರೋಪಿಸಿದ್ದಾರೆ. ‘‘ಆರೋಪಿ ನನ್ನಲ್ಲಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ. ನಾನು ಹಣ ನೀಡಲು ನಿರಾಕರಿಸಿದ ಕಾರಣಕ್ಕಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಾನೆ’’ ಎಂದು ಸೂರಜ್ ಗೌಡ ಪ್ರತಿಯಾಗಿ ದೂರು ಸಲ್ಲಿಸಿದ್ದಾರೆ. ಅಸಹಜವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಹೊರಿಸಿದಾತ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಒಂದು ವೇಳೆ ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ಸಾಬೀತಾದರೆ ಸೂರಜ್ ಗೌಡ ಅವರು ಮಾಡಿದ ಆರೋಪ ನೆಲೆ ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಆರೋಪ-ಪ್ರತ್ಯಾರೋಪಗಳೆರಡರ ಕೂಲಂಕಷ ತನಿಖೆ ನಡೆಯುವುದು ಅತ್ಯಗತ್ಯ.

ಇದೇ ಸಂದರ್ಭದಲ್ಲಿ ಸಂತ್ರಸ್ತ ಕೆಲವೊಮ್ಮೆ ತನಗಾದ ಅನ್ಯಾಯಕ್ಕಾಗಿ ಹಣದ ಬೇಡಿಕೆಯನ್ನು ಇಟ್ಟಿರಲೂ ಬಹುದು. ಹಣದ ಬೇಡಿಕೆಯಿಟ್ಟಿದ್ದಾನೆ ಅಥವಾ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನುವ ಆರೋಪವು ಸೂರಜ್ ಗೌಡ ಎಸಗಿದ ಲೈಂಗಿಕ ದೌರ್ಜನ್ಯವನ್ನು ಸಮರ್ಥಿಸುವುದಿಲ್ಲ. ತನಗಿಷ್ಟು ಹಣ ಪರಿಹಾರವಾಗಿ ನೀಡಿದರೆ, ತನಗಾದ ಅನ್ಯಾಯವನ್ನು ಯಾರಲ್ಲೂ ಹೇಳಿಕೊಳ್ಳುವುದಿಲ್ಲ ಎಂದು ಸಂತ್ರಸ್ತ ಬೇಡಿಕೆಯಿಟ್ಟರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಬ್ಲ್ಯಾಕ್‌ಮೇಲ್ ಎಂದು ಕರೆಯಲಾಗುವುದಿಲ್ಲ. ಕೆಲಸ ಕೇಳಿ ಬಂದ ಯುವಕನ ಜೊತೆಗೆ ಅಸಹಜವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಮಾತ್ರವಲ್ಲ, ಆತನನ್ನು ಲೈಂಗಿಕವಾಗಿ ಹಿಂಸಿಸಿರುವುದು ವಿಕೃತಿಯ ಪರಮಾವಧಿಯಾಗಿದೆ. ವಿಧಾನ ಪರಿಷತ್‌ನ್ನು ಮೇಲ್ಮನೆ ಎಂದು ಕರೆಯಲಾಗುತ್ತದೆ. ಅಂದರೆ ವಿಧಾನಸಭಾ ಸದಸ್ಯರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಅರ್ಹತೆಯುಳ್ಳ ಗಣ್ಯರನ್ನು ಈ ಮೇಲ್ಮನೆ ಒಳಗೊಂಡಿದೆ. ಇಂತಹ ಮೇಲ್ಮನೆಯ ಸದಸ್ಯರಾಗಿರುವ ಸೂರಜ್ ಗೌಡ ಇಂತಹದೊಂದು ವಿಕೃತಿಯ ಆರೋಪವನ್ನು ಹೊತ್ತಿರುವುದು ನಿಜಕ್ಕೂ ವಿಧಾನ ಪರಿಷತ್‌ನ ಘನತೆ, ಗೌರವಕ್ಕೆ ಕುಂದುಂಟು ಮಾಡಿದೆ. ಈಗಾಗಲೇ ಸೂರಜ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರೋಪ ಅತ್ಯಂತ ಗಂಭೀರವಾದದ್ದಾಗಿರುವುದರಿಂದ, ಸೂರಜ್ ಗೌಡ ಯಾವ ಕಾರಣಕ್ಕೂ ಪ್ರಜ್ವಲ್ ಗೌಡ ಮಾಡಿದ ತಪ್ಪನ್ನು ವಿಚಾರಣೆಯ ಸಂದರ್ಭದಲ್ಲಿ ಪುನರಾವರ್ತಿಸಬಾರದು.

ತನ್ನ ಮೇಲೆ ಆರೋಪ ಕೇಳಿ ಬಂದಾಕ್ಷಣ ಪ್ರಜ್ವಲ್ ಗೌಡ ಪೊಲೀಸರಿಗೆ ಶರಣಾಗಿ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದ್ದಿದ್ದರೆ ಅವರ ಮಾತಿನ ವಿಶ್ವಾಸಾರ್ಹತೆ ಹೆಚ್ಚುತ್ತಿತ್ತು. ಆದರೆ, ಪ್ರಜ್ವಲ್ ಗೌಡ ತಕ್ಷಣ ವಿದೇಶಕ್ಕೆ ಪರಾರಿಯಾದರು. ರಾಜ್ಯ ಮತ್ತು ಕೇಂದ್ರ ಸರಕಾರದ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಸಿದರು. ಸ್ವತಃ ದೇವೇಗೌಡರೇ ಬಹಿರಂಗ ಪತ್ರ ಬರೆದು ಆತನನ್ನು ಕರೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಇದೀಗ ಸೂರಜ್ ಗೌಡ, ತನ್ನ ಮೇಲಿನ ಆರೋಪವನ್ನು ಮರೆ ಮಾಚಲು, ದೂರು ನೀಡಿದ ಸಂತ್ರಸ್ತನ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಆದರೆ ಸಂತ್ರಸ್ತ ನೀಡಿದ ದೂರು, ಸಾಕ್ಷಿಗಳ ಆಧಾರದಲ್ಲಿ ಪೊಲೀಸರು ಸೂರಜ್‌ಗೌಡರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೂರಜ್ ಗೌಡ ಅವರು ತನ್ನನ್ನು ತಾನು ನಿರಪರಾಧಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ತನ್ನ ಮೇಲೆ ಬಂದಿರುವ ಆರೋಪ ಅತ್ಯಂತ ಗಂಭೀರವಾದದ್ದಾಗಿರುವುದರಿಂದ, ಅವರು ತಕ್ಷಣ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ಸ್ಥಾನದ ಘನತೆಯನ್ನು ಉಳಿಸಬೇಕು. ತನಿಖೆ, ವಿಚಾರಣೆಯಿಂದ ನಿರಪರಾಧಿ ಎಂದು ಸಾಬೀತಾದ ಬಳಿಕ ಆ ಸ್ಥಾನವನ್ನು ಮತ್ತೆ ಸ್ವೀಕರಿಸಬೇಕು.

ಸೂರಜ್ ಗೌಡ ಅವರ ಮೇಲಿನ ಆರೋಪದ ಬಗ್ಗೆ ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರ ಬೆನ್ನಿಗೇ ಜೆಡಿಎಸ್ ನಾಯಕನ ಮೇಲೆ ಇಂತಹದೊಂದು ಆರೋಪ ಕೇಳಿ ಬರುತ್ತಿದೆ. ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯವನ್ನು ಕೇಂದ್ರದಲ್ಲಿ ಪ್ರತಿನಿಧಿಸುತ್ತಿರುವ ಕುಮಾರ ಸ್ವಾಮಿಯವರ ವರ್ಚಸ್ಸಿಗೆ ಇದು ದೊಡ್ಡ ಪ್ರಮಾಣದಲ್ಲಿ ಧಕ್ಕೆ ತಂದಿದೆ. ಕುಮಾರಸ್ವಾಮಿಯ ಮೂಲಕ ಕರ್ನಾಟಕವನ್ನು ಗುರುತಿಸುವ ದಿಲ್ಲಿಯ ನಾಯಕರಿಗೆ ಅವರು ಯಾವ ಸಂದೇಶವನ್ನು ನೀಡಲಿದ್ದಾರೆ? ಆದುದರಿಂದ ಕುಮಾರಸ್ವಾಮಿಯವರು ಸೂರಜ್ ಗೌಡರ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆಯನ್ನು ನೀಡಬೇಕು. ಸೂರಜ್ ಗೌಡ ಅವರನ್ನು ಕೂಡ ಪಕ್ಷದಿಂದ ತಕ್ಷಣದಿಂದಲೇ ವಜಾಗೊಳಿಸಿ ತನ್ನ ಕುಟುಂಬದ ಮತ್ತು ಜೆಡಿಎಸ್‌ನ ಮಾನವನ್ನು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಉಳಿಸುವ ಸಣ್ಣ ಪ್ರಯತ್ನವನ್ನಾದರೂ ಮಾಡಬೇಕಾಗಿದೆ. ಹಾಗೆಯೇ, ತನ್ನ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಲೈಂಗಿಕತೆಗೆ ಸಂಬಂಧಿಸಿ ಮಾನಸಿಕ ಕಾಯಿಲೆಗಳಿದ್ದರೆ ಅವರಿಗೆ ಸೂಕ್ತ ವೈದ್ಯಕೀಯ ಸಹಾಯವನ್ನು ಕಲ್ಪಿಸುವ ನೇತೃತ್ವವನ್ನು ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರು ಹೊತ್ತುಕೊಳ್ಳಬೇಕು. ಇಲ್ಲವಾದರೆ, ಇನ್ನಷ್ಟು ಹಗರಣಗಳು ಬೆಳಕಿಗೆ ಬಂದು, ಜೆಡಿಎಸ್‌ನೊಳಗೆ ಗುರುತಿಸಿಕೊಳ್ಳಲು ಮಹಿಳೆಯರು ಮಾತ್ರವಲ್ಲ, ಪುರುಷರೂ ಅಂಜಿಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News