ಏಕಾಂಗಿ ಬಿಎಸ್‌ಪಿಯಿಂದ ಯಾರಿಗೆ ಲಾಭ?

Update: 2024-01-17 04:46 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲೋಕಸಭಾ ಚುನಾವಣೆಗೆ ‘ಇಂಡಿಯಾ’ ಮೈತ್ರಿ ಕೂಟ ಸಿದ್ಧತೆ ನಡೆಸುತ್ತಿದೆ. ಈ ಸಿದ್ಧತೆಯ ಮೊದಲ ಹಂತವಾಗಿ ಮೈತ್ರಿ ಕೂಟದ ಭಾಗವಾಗಿರುವ ಎಲ್ಲ ಪಕ್ಷಗಳ ನಾಯಕರು ತಮ್ಮೊಳಗಿನ ಭಿನ್ನಮತಗಳನ್ನು ನಿವಾರಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಆದರೆ ಸದ್ಯದ ಸ್ಥಿತಿಯನ್ನು ಗಮನಿಸಿದರೆ ಇಂಡಿಯಾ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಕೇಜ್ರಿವಾಲ್ ನೇತೃತ್ವದ ಆಪ್, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ನಿತೀಶ್ ನೇತೃತ್ವದ ಜೆಡಿಯು ಈ ಪಕ್ಷಗಳ ನಿಲುವುಗಳೇ ‘ಇಂಡಿಯಾ’ದ ಭವಿಷ್ಯವನ್ನು ನಿರ್ಧರಿಸಲಿವೆ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ನಡುವಿನ ಸಂಘರ್ಷ, ಕೀಳರಿಮೆ, ಅಭದ್ರತೆ ಇತ್ಯಾದಿಗಳು ಇಂಡಿಯಾದೊಳಗೆ ಸಣ್ಣ ಸಣ್ಣ ಕಂಪನಗಳನ್ನು ಎಬ್ಬಿಸುತ್ತಲೇ ಇವೆ. ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿ ತಲೆಎತ್ತಿ ನಿಂತಿವೆ. ಈ ಮೈತ್ರಿ ಎಲ್ಲಿ ತಮ್ಮ ಅಸ್ತಿತ್ವವನ್ನು ಬಲಿ ತೆಗೆದುಕೊಳ್ಳುತ್ತದೆಯೋ ಎನ್ನುವ ಆತಂಕ ಪ್ರಾದೇಶಿಕ ನಾಯಕರಲ್ಲಿದೆ. ಆದುದರಿಂದ, ಪ್ರತೀ ಹೆಜ್ಜೆಯನ್ನು ಆಲೋಚಿಸಿ ಮುಂದಕ್ಕೆ ಇಡುತ್ತಿದೆ. ರಾಷ್ಟ್ರೀಯ ಪಕ್ಷಗಳು ಮೈತ್ರಿಯ ಹೆಸರಿನಲ್ಲಿ ನುಸುಳಿಕೊಂಡು ನಿಧಾನಕ್ಕೆ ಪ್ರಾದೇಶಿಕ ಪಕ್ಷಗಳನ್ನೇ ಕಬಳಿಸಿದ ಹಲವು ಉದಾಹರಣೆಗಳು ಇರುವುದರಿಂದ, ಇಂಡಿಯಾದಿಂದ ತಾವು ಕಳೆದುಕೊಳ್ಳುವುದೆಷ್ಟು, ಪಡೆದುಕೊಳ್ಳುವುದೆಷ್ಟು ಎಂದು ಅವುಗಳು ಲೆಕ್ಕ ಹಾಕುವುದು ಸಹಜವೇ ಆಗಿದೆ. ಸದ್ಯಕ್ಕೆ ಇಂಡಿಯಾ ನೇತೃತ್ವವನ್ನು ಖರ್ಗೆ ಕೈಗೆ ನೀಡಲಾಗಿದೆಯಾದರೂ, ನಿತೀಶ್‌ರಂತಹ ನಾಯಕರು ಎಷ್ಟರಮಟ್ಟಿಗೆ ಖರ್ಗೆಯ ಜೊತೆ ನಿಲ್ಲುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಜಾತ್ಯತೀತ ಪಕ್ಷಗಳು ಒಂದಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುವುದರ ಹೊರತಾಗಿ ಬೇರೆ ಆಯ್ಕೆಯೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದುದರಿಂದಲೇ ತಮ್ಮ ಪ್ರತಿಷ್ಠೆಗಳನ್ನು ಬದಿಗಿಟ್ಟು ಲೋಕಸಭಾ ಚುನಾವಣೆಯ ದೃಷ್ಟಿಯಿಂದಲಾದರೂ ಪರಸ್ಪರ ಕೈ ಚಾಚಬೇಕಾಗಿದೆ.

ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಪುನರುಚ್ಚರಿಸಿದ್ದಾರೆ. ‘‘ಮೈತ್ರಿಯಿಂದ ನಾವು ಸಾಕಷ್ಟು ನಷ್ಟ ಮಾಡಿಕೊಂಡಿದ್ದೇವೆ. ನಷ್ಟ ಉಂಟು ಮಾಡುವುದಕ್ಕೇ ದೇಶದ ಹೆಚ್ಚಿನ ಪಕ್ಷಗಳು ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿವೆ’’ ಎಂದು ಮಾಯಾವತಿ ಆರೋಪಿಸಿದ್ದಾರೆ. ಏಕಾಂಗಿ ಸ್ಪರ್ಧೆಯ ಕುರಿತಂತೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲೇ ಅವರು ಸ್ಪಷ್ಟಪಡಿಸಿದ್ದರು. ಇದೀಗ ಬಿಎಸ್‌ಪಿಯ ಉತ್ತರಾಧಿಕಾರಿಯಾಗಿ ಸೋದರಳಿಯ ಆಕಾಶ್ ಆನಂದ್ ಅವರನ್ನು ನೇಮಕ ಮಾಡಿದ ಬೆನ್ನಿಗೇ, ಏಕಾಂಗಿ ಸ್ಪರ್ಧೆಯ ಬಗ್ಗೆ ಮತ್ತೊಮ್ಮೆ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಮಾಯಾವತಿಯವರು ಈ ಏಕಾಂಗಿ ಹೋರಾಟದಿಂದ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುತ್ತಿರುವುದೇ ಹೆಚ್ಚು. ಒಂದು ಕಾಲದಲ್ಲಿ ಬಿಎಸ್‌ಪಿ ತನ್ನ ಸಾಧನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ರಾಷ್ಟ್ರ ರಾಜಕಾರಣಕ್ಕೆ ಬಿಎಸ್‌ಪಿ ಮೂಲಕ ಹೊಸ ದಿಕ್ಕು ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಮಾಯಾವತಿ ಅವರು ಈ ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದರು. ಜನಪ್ರಿಯತೆ ಅವರನ್ನು ಯಾವ ಹಂತಕ್ಕೆ ತಲುಪಿಸಿತು ಎಂದರೆ ಅವರನ್ನು ಬಹುಜನ ಚಳವಳಿಯಿಂದ ಸರ್ವಜನ ಚಳವಳಿಗೆ ಪ್ರೇರೇಪಿಸಿತು. ತನ್ನ ಸಿದ್ಧಾಂತದ ಜೊತೆಗೆ ರಾಜಿ ಮಾಡಿಕೊಳ್ಳುವುದು ಅವರಿಗೆ ಅನಿವಾರ್ಯವಾಯಿತು. ಆರಂಭದಲ್ಲಿ ಅದು ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನೂ ನೀಡಿತಾದರೂ, ಈ ‘ಸರ್ವಜನರು’ ಬಿಎಸ್‌ಪಿಯನ್ನು ಅರ್ಧದಲ್ಲೇ ಕೈ ಬಿಟ್ಟರು. ಇತ್ತೀಚಿನ ದಿನಗಳಲ್ಲಿ, ಮಾಯಾವತಿ ನೇತೃತ್ವದ ಬಿಎಸ್‌ಪಿಯು ಬಿಜೆಪಿಯನ್ನು ತನ್ನ ಪ್ರಧಾನ ಶತ್ರುವಾಗಿ ಭಾವಿಸುತ್ತಿಲ್ಲ. ತನ್ನ ಮತಗಳ ಪಾಲುದಾರ ಪಕ್ಷಗಳಾಗಿರುವ ಜಾತ್ಯತೀತ ಪಕ್ಷಗಳನ್ನೇ ಗುರಿಯಾಗಿಸಿಕೊಂಡು ಮಾಯಾವತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧವೂ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿಲ್ಲ. ಇಂಡಿಯಾ ಜೊತೆಗೆ ಸೇರದೇ ಏಕಾಂಗಿಯಾಗಿ ಸ್ಪರ್ಧಿಸಿದರೆ ಅದರ ಲಾಭ ತನಗೆಷ್ಟು, ಬಿಜೆಪಿಗೆಷ್ಟು ಎನ್ನುವುದು ತಿಳಿಯದಷ್ಟು ಅಮಾಯಕರಲ್ಲ ಮಾಯಾವತಿ. ಅವರು ಇಂಡಿಯಾದ ಜೊತೆಗೆ ಸೇರುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಎನ್‌ಡಿಎ ಜೊತೆಗೆ ಕೈಜೋಡಿಸಲು ಉತ್ಸುಕರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ೨೦೦೭ರಲ್ಲಿ ಬಿಎಸ್‌ಪಿ ಎಲ್ಲಿತ್ತು? ಮತ್ತು ಈಗ ಎಲ್ಲಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ೨೦೦೭ರಲ್ಲಿ ವಿದಾನಸಭಾ ಚುನಾವಣೆಯಲ್ಲಿ ೨೦೬ ಶಾಸಕರನ್ನು ಹೊಂದಿದ್ದ ಬಿಎಸ್‌ಪಿ ಇಂದು ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟು ಕೂತಿದೆ. ಇಂದು ಯಾರನ್ನು ಉತ್ತರಾಧಿಕಾರಿಯಾಗಿ ಮಾಯಾವತಿ ಘೋಷಿಸಿದ್ದಾರೆಯೋ, ಆ ಆಕಾಶ್ ಅನಂದ್ ಅವರು ಪಕ್ಷ ಚಟುವಟಿಕೆಗಳನ್ನು ಕೈಗೆತ್ತಿಕೊಂಡ ದಿನಗಳಿಂದ, ಪಕ್ಷ ಹಿನ್ನಡೆಯ ಮೇಲೆ ಹಿನ್ನಡೆಯನ್ನು ಅನುಭವಿಸುತ್ತಾ ಬಂದಿದೆ. ಬಿಜೆಪಿಗೆ ಪೂರಕವಾಗಿ ಬಿಎಸ್‌ಪಿ ರಾಜಕೀಯ ತಂತ್ರಗಳನ್ನು ರೂಪಿಸುತ್ತಿದೆ ಎನ್ನುವ ಆರೋಪ ಅದರ ಮೇಲಿದೆ. ೧೯೮೯ರಲ್ಲಿ ೧೩ ಸ್ಥಾನಗಳನ್ನು ಹೊಂದಿದ್ದ ಬಿಎಸ್‌ಪಿ ೧೯೯೩ರಲ್ಲಿ ೬೭ ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಮೊದಲು ಎಸ್‌ಪಿ ಬಳಿಕ ಬಿಜೆಪಿ ಬೆಂಬಲದಿಂದ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ೨೦೦೭ರಲ್ಲಿ ಭರ್ಜರಿ ಬಹುಮತದೊಂದಿಗೆ ಸ್ವತಂತ್ರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಅವರಿಗೆ ಸಾಧ್ಯವಾಯಿತು. ಈ ಬಹುಮತವೇ ಮಾಯಾವತಿಯ ತಲೆಕೆಡಿಸಿತು. ಈ ಸಂದರ್ಭದ ಅವರ ತಪ್ಪು ನಡೆಗಳು ಬಿಎಸ್‌ಪಿಗೆ ಬಹಳಷ್ಟು ಹಿನ್ನಡೆಯನ್ನುಂಟು ಮಾಡಿತು. ಮುಂದೆ ೨೦೧೨ರಲ್ಲಿ ಅವರು ಮತ್ತೆ ೮೦ ಸ್ಥಾನಗಳಿಗೆ ಇಳಿದರು. ೨೦೧೭ರಲ್ಲಿ ಅದು ೧೯ನ್ನು ತಲುಪಿತು. ೨೦೨೨ರಲ್ಲಿ ೧ ಸ್ಥಾನದೊಂದಿಗೆ ಬಿಎಸ್‌ಪಿ ನಿಜವಾದ ಅ ಅರ್ಥದಲ್ಲಿ ಏಕಾಂಗಿಯಾಯಿತು. ೨೦೦೭ರಲ್ಲಿ ಶೇ. ೩೦.೪೩ರಷ್ಟಿದ್ದ ವೋಟ್ ಶೇರಿಂಗ್, ೨೦೨೨ರ ಹೊತ್ತಿಗೆ ೧೨.೮೮ ಶೇ.ಕ್ಕಿಳಿಯಿತು. ಕಳೆದ ವಿಧಾನಸಭೆಯಲ್ಲೂ ಬಿಎಸ್‌ಪಿ ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಅಧಿಕ. ೨೦೧೮ರಲ್ಲಿ ರಾಜಸ್ಥಾನದಲ್ಲಿ ಬಿಎಸ್‌ಪಿ ಆರು ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಎರಡು ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಶೇ. ೪ರಷ್ಟಿದ್ದ ಮತ ಹಂಚಿಕೆ ಈ ಬಾರಿ ಶೇ. ೧.೮ಕ್ಕೆ ಇಳಿದಿದೆ. ೨೦೧೮ರಲ್ಲಿ ಮಧ್ಯಪ್ರದೇಶದಲ್ಲಿ ಎರಡು ಸ್ಥಾನಗಳನ್ನು ಬಿಎಸ್‌ಪಿ ಗೆದ್ದಿತ್ತು. ಈ ಬಾರಿ ಒಂದು ಸ್ಥಾನವನ್ನು ಪಡೆಯುವುದಕ್ಕೂ ವಿಫಲವಾಗಿದೆ. ಛತ್ತೀಸ್‌ಗಡದಲ್ಲೂ ಇರುವ ಎರಡು ಸ್ಥಾನವನ್ನು ಬಿಎಸ್‌ಪಿ ಕಳೆದುಕೊಂಡಿದೆ.

ಮಾಯಾವತಿಯ ಏಕಾಂಗಿ ಸ್ಪರ್ಧೆಯ ಅರ್ಥ ಸ್ಪಷ್ಟವಾಗಿದೆ. ಅವರು ಇಂಡಿಯಾದ ಬದಲು ಎನ್‌ಡಿಎಯ ಭಾಗವಾಗಲು ಇಚ್ಛಿಸಿದ್ದಾರೆ. ಎನ್‌ಡಿಎಯಲ್ಲಿ ನೇರವಾಗಿ ಭಾಗಿಯಾದರೆ ಅದರಿಂದ ಇರುವ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನುವುದು ಅವರಿಗೆ ಗೊತ್ತಿದೆ. ಬಿಎಸ್‌ಪಿಗೆ ಬೀಳುವ ಜಾತ್ಯತೀತ ಮತಗಳನ್ನು ಎಸ್‌ಪಿ ತನ್ನದಾಗಿಸಬಹುದು. ಆದುದರಿಂದ ಅವರು ಏಕಾಂಗಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ಒಂದು ರೀತಿಯಲ್ಲಿ, ಸ್ಥಳೀಯ ಎದುರಾಳಿಯ ಸೋಲೇ ತನ್ನ ಗೆಲುವು ಎನ್ನುವ ಮಟ್ಟಕ್ಕೆ ಅವರು ಇಳಿಯುತ್ತಿದ್ದಾರೆ. ಈಗಾಗಲೇ ಮಾಯಾವತಿ ರಾಜಕೀಯ ನಿವೃತ್ತಿಯನ್ನು ಪಡೆಯುವ ವದಂತಿ ಉತ್ತರ ಪ್ರದೇಶದಲ್ಲಿ ಹರಡಿದೆ. ಆ ವದಂತಿಗೆ ಪುಷ್ಟಿ ನೀಡುವಂತಿದೆ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮಾಯಾವತಿ ತೆಗೆದುಕೊಂಡಿರುವ ನಿರ್ಧಾರ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News