ಮುಚ್ಚಳಿಕೆ ಯಾರು, ಯಾರಿಗೆ ನೀಡಬೇಕು?

Update: 2023-07-27 04:01 GMT

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಥವಾ ಸಮಾಜಕ್ಕೆ ಕಂಟಕರು ಎನ್ನಿಸುವ ಆರೋಪಿಗಳನ್ನು ಪೊಲೀಸರು ಠಾಣೆಗೆ ಕರೆಸಿ ಅವರಿಂದ ಮುಚ್ಚಳಿಕೆ ಬರೆಸುವ ಪದ್ಧತಿಯಿದೆ. ಇದೀಗ ನಾಡಿನ ಸಾಹಿತಿಗಳು, ಚಿಂತಕರ ಕೈಯಲ್ಲೂ ಇಂತಹದೊಂದು ಮುಚ್ಚಳಿಕೆಯನ್ನು ಬರೆಸುವ ಇಂಗಿತ ವ್ಯಕ್ತಪಡಿಸಿರುವ ಕೇಂದ್ರ ಸರಕಾರ ಆ ಮೂಲಕ ಸಾಹಿತಿಗಳನ್ನು ಸಮಾಜಘಾತುಕರ ಪಟ್ಟಿಗೆ ಸೇರಿಸಲು ಹೊರಟಂತಿದೆ. ಇದರ ಭಾಗವಾಗಿ, ಸಾಹಿತ್ಯ ಅಕಾಡಮಿಯೂ ಸೇರಿದಂತೆ ಸರಕಾರ ಪ್ರಾಯೋಜಿತವಾಗಿರುವ ಯಾವುದೇ ಪ್ರಶಸ್ತಿಗಳನ್ನು ಪಡೆಯುವ ಸಾಹಿತಿಗಳು ‘ಪ್ರಶಸ್ತಿಯನ್ನು ವಾಪಸ್ ಮಾಡುವುದಿಲ್ಲ’ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂದು ಸಂಸದೀಯ ಸಮಿತಿಯೊಂದು ಸರಕಾರಕ್ಕೆ ಶಿಫಾರಸು ಮಾಡಿದೆ.

‘‘ಪ್ರಶಸ್ತಿ ವಾಪಸ್ ಮುಂತಾದ ಅನುಚಿತ ಘಟನೆಗಳು ಇತರ ಪ್ರಶಸ್ತಿ ವಿಜೇತರ ಸಾಧನೆಗಳನ್ನು ಕಡೆಗಣಿಸುತ್ತವೆ ಹಾಗೂ ಪ್ರಶಸ್ತಿಗಳ ಒಟ್ಟಾರೆ ಘನತೆ ಮತ್ತು ಪ್ರತಿಷ್ಠೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ’’ ಎಂದು ಸಮಿತಿ ಹೇಳಿದೆ. ‘‘ಪ್ರಶಸ್ತಿಯೊಂದನ್ನು ನೀಡುವಾಗ ಪ್ರಶಸ್ತಿ ವಿಜೇತನ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು. ಯಾಕೆಂದರೆ ಅವರು ಮುಂದೆ ರಾಜಕೀಯ ಕಾರಣಗಳಿಗಾಗಿ ಅದನ್ನು ವಾಪಸ್ ಮಾಡಬಾರದು. ಹಾಗೆ ಮಾಡುವುದು ದೇಶಕ್ಕೆ ಅವಮಾನ ಮಾಡಿದಂತೆ. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು, ಕಿರುಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಗಳಿಂದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡುತ್ತದೆ’’ ಎಂದು ವರದಿ ಹೇಳಿದೆ. ಇದೇ ಸಂದರ್ಭದಲ್ಲಿ ಸಮಿತಿಯ ಶಿಫಾರಸನ್ನು ಓರ್ವ ಸದಸ್ಯರು ಆಕ್ಷೇಪಿಸಿದ್ದಾರೆ. ‘‘ಭಾರತ ಪ್ರಜಾಸತ್ತಾತ್ಮಕ ದೇಶ. ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ನೀಡಿದೆ. ಯಾವುದೇ ವಿಧದಲ್ಲಿ ಪ್ರತಿಭಟಿಸುವ ಸ್ವಾತಂತ್ರವನ್ನೂ ನೀಡಿದೆ. ಪ್ರಶಸ್ತಿಗಳನ್ನು ವಾಪಸ್ ಕೊಡುವುದು ಪ್ರತಿಭಟನೆಯ ಒಂದು ವಿಧವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತನ್ನ ವಿರುದ್ಧ ನಡೆಯುವ ಯಾವುದೇ ಪ್ರತಿಭಟನೆಗಳನ್ನು ಅಪರಾಧವಾಗಿ ಕಾಣುತ್ತಿರುವ ಸರಕಾರವೊಂದು 'ಸಾಹಿತಿಗಳ ಪ್ರಶಸ್ತಿ ವಾಪಸ್' ವಿರುದ್ಧ ಮುಚ್ಚಳಿಕೆ ಬರೆಸಲು ಹೊರಡುವುದು ಸಹಜವೇ ಆಗಿದೆ. ಕಲಬುರ್ಗಿ, ದಾಭೋಲ್ಕರ್, ಪನ್ಸಾರೆ, ಗೌರಿ ಲಂಕೇಶ್ ಮೊದಲಾದವರ ಹತ್ಯೆಗಳಾದ ಸಂದರ್ಭಗಳಲ್ಲಿ ಅವುಗಳನ್ನು ವಿರೋಧಿಸಿ ಈ ನಾಡಿನ ಚಿಂತಕರು, ಬರಹಗಾರರು ತಮಗೆ ದೊರಕಿದ ಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸಿದ್ದರು. ಈ ಆಂದೋಲನದ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ಅಸಹಿಷ್ಣುತೆಯನ್ನು ಜಗತ್ತಿಗೆ ತಲುಪಿಸಿದ್ದರು. ಸರಕಾರ ಇದರಿಂದ ತೀವ್ರ ಮುಜುಗರವನ್ನು ಅನುಭವಿಸಿತ್ತು. ಇಂದು ಸರಕಾರ ಈ ನಾಡಿನ ಚಿಂತಕರು, ಸಾಹಿತಿಗಳು, ಬರಹಗಾರರನ್ನೇ ವಿರೋಧಪಕ್ಷವಾಗಿ ಪರಿಗಣಿಸಿದೆ. ಆದುದರಿಂದ ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನದಲ್ಲಿದೆ. ಆ ಪ್ರಯತ್ನದ ಒಂದು ಭಾಗವಾಗಿದೆ ಈ ಮುಚ್ಚಳಿಕೆ. 'ನಾನು ಸರಕಾರದ ಯಾವುದೇ ಜನವಿರೋಧಿ ನೀತಿಯ ವಿರುದ್ಧ ಧ್ವನಿಯೆತ್ತುವುದಿಲ್ಲ' ಎನ್ನುವ ವಚನವನ್ನು ಸರಕಾರ ಪ್ರಶಸ್ತಿ ಪಡೆಯುವ ಬರಹಗಾರರಿಂದ ಪರೋಕ್ಷವಾಗಿ ಬಯಸುತ್ತಿದೆ. ಅಂದರೆ ಒಬ್ಬ ಬರಹಗಾರ ಮುಂದಿನ ದಿನಗಳಲ್ಲಿ ಸರಕಾರದಿಂದ ಯಾವುದೇ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಬೇಕಾದರೆ ಅವನಲ್ಲಿ ಮೊತ್ತ ಮೊದಲಾಗಿ ಇರಬೇಕಾಗಿರುವ ಅರ್ಹತೆಯೆಂದರೆ 'ಸರಕಾರಕ್ಕೆ ವಿಧೇಯನಾಗಿರುವುದು'. ಮುಂದಿನ ದಿನಗಳಲ್ಲಿ ಒಬ್ಬ ಸೃಜನಶೀಲ ಬರಹಗಾರ, ಸಾಧಕ ತನ್ನ ಆತ್ಮಾಭಿಮಾನವನ್ನು ಬಲಿಕೊಟ್ಟು ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಬೇಕಾಗುತ್ತದೆ. ಅಂತಹ ಪ್ರಶಸ್ತಿ ಲೇಖಕ ತನ್ನ ಕೊರಳಿಗೆ ತಾನೇ ಸುತ್ತಿಕೊಂಡ ಸರಪಳಿಯಾಗಿದೆ.

ರವೀಂದ್ರನಾಥ ಟಾಗೋರ್ ತನಗೆ ಸಿಕ್ಕಿದ ನೈಟ್‌ ಹುಡ್ ಪ್ರಶಸ್ತಿಯನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ಬ್ರಿಟಿಷರಿಗೆ ಮರಳಿಸಿದ್ದರು. ಆದರೆ ಆ ಸಂದರ್ಭದಲ್ಲಿ ಅದನ್ನು ಬ್ರಿಟಿಷರು ಅಪರಾಧವಾಗಿ ಪರಿಗಣಿಸಿ ಟಾಗೋರರನ್ನು ಬಂಧಿಸಿರಲಿಲ್ಲ. ಅವರನ್ನು ದೇಶದ್ರೋಹಿ ಎಂದೂ ಪರಿಗಣಿಸಿರಲಿಲ್ಲ. ವಿಪರ್ಯಾಸವೆಂದರೆ ಇಂದು ಭಾರತವನ್ನು ಆಳುತ್ತಿರುವುದು ಪ್ರಜಾಸತ್ತಾತ್ಮಕ ಸರಕಾರ. ಬ್ರಿಟಿಷರ ಕಾಲದಲ್ಲಿ ರವೀಂದ್ರನಾಥ ಟಾಗೋರರಿಗೆ ಇದ್ದ ಸ್ವಾತಂತ್ರವೂ ಮೋದಿ ನೇತೃತ್ವದ ಸರಕಾರದಲ್ಲಿ ನಮ್ಮ ಬರಹಗಾರರಿಗೆ ಇಲ್ಲವಾಗಿದೆ. ಇಂದು ಭಾರತದ ಬರಹಗಾರರಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರ ನಾಥ ಟಾಗೋರರು ಮಾದರಿಯಾಗಬೇಕು. ಈ ದೇಶದ ಪ್ರಜಾಸತ್ತೆಯು ಚಿಂತಕರು, ಬರಹಗಾರರ ಕಣ್ಗಾವಲಿನಲ್ಲಿದ್ದಾಗ ಮಾತ್ರ ಉಳಿದೀತು, ಇನ್ನಷ್ಟು ಗಟ್ಟಿಯಾಗಿ ಬೇರಿಳಿಸೀತು. ಸರಕಾರ ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕು ಎನ್ನುವುದಕ್ಕೆ ಬರಹಗಾರರು ಮಾರ್ಗದರ್ಶಿಗಳಾಗಬೇಕೇ ಹೊರತು, ಬರಹಗಾರರು ಏನನ್ನು ಬರೆಯಬೇಕು, ಹೇಗೆ ವರ್ತಿಸಬೇಕು ಎಂದು ಸರಕಾರ ನೀತಿ ಸಂಹಿತೆಗಳನ್ನು ಹೇರುವಂತಾಗಬಾರದು. 

ನಿಜಕ್ಕೂ ಮುಚ್ಚಳಿಕೆಯನ್ನು ಬರೆದು ಕೊಡಬೇಕಾಗಿರುವುದು ಬರಹಗಾರರಲ್ಲ, ಸರಕಾರ. ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎನ್ನುವ ಪ್ರತಿಜ್ಞೆಯನ್ನು ಸ್ವೀಕರಿಸಿದ ಸರಕಾರ ಅದಕ್ಕೆ ಬದ್ಧವಾಗದೆ ಜನವಿರೋಧಿ ನೀತಿಯನ್ನು ಅನುಸರಿಸಿದಾಗ ಅದನ್ನು ವಿರೋಧಿಸಿ ಸಾಹಿತಿಗಳು ತಮಗೆ ಸಿಕ್ಕಿದ ಪ್ರಶಸ್ತಿಗಳನ್ನು ಮರಳಿಸಿದರೆ ಅದರಿಂದ ದೇಶಕ್ಕೆ ಅವಮಾನವಾಗುವುದಿಲ್ಲ. ದೇಶಕ್ಕೆ ಅವಮಾನವಾಗುವುದು ಸರಕಾರವೊಂದು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಾಗ. ಇಂತಹ ಸಂದರ್ಭದಲ್ಲಿ ಸರಕಾರವನ್ನು ಎಚ್ಚರಿಸಿ ಸಂವಿಧಾನವನ್ನು, ಮಾನವೀಯತೆಯನ್ನು ರಕ್ಷಿಸುವುದು ಬರಹಗಾರರ ಹೊಣೆಗಾರಿಕೆ. ಬರಹಗಾರನೊಬ್ಬ ಪ್ರಶಸ್ತಿ ಮರಳಿಸುವಂತಹ ಸ್ಥಿತಿ ನಿರ್ಮಾಣವಾದುದರ ಬಗ್ಗೆ ಸರಕಾರ ಆತ್ಮವಿಮರ್ಶೆ ನಡೆಸಿ ತನ್ನನ್ನು ತಾನು ತಿದ್ದಿಕೊಳ್ಳಬೇಕೇ ಹೊರತು, ಬರಹಗಾರನನ್ನು ನಿಯಂತ್ರಿಸಲು ಹೊರಡುವುದಲ್ಲ. ಜನವಿರೋಧಿ ಸರಕಾರವೊಂದು ಬರಹಗಾರನಿಗೆ ನೀಡುವ ಪ್ರಶಸ್ತಿ ಅವನ ಬಾಯಿಯನ್ನು ಮುಚ್ಚಿಸಲು ನೀಡುವ ಆಮಿಷವಾಗಿದೆ. ಸರಕಾರ ದಾರಿ ತಪ್ಪಿದಾಗ ತನಗೆ ದೊರಕಿದ ಪ್ರಶಸ್ತಿಯನ್ನು ಮರಳಿಸುವ ಮೂಲಕ ಆತ ತನ್ನ ಸ್ವಂತಿಕೆಯನ್ನು ಪ್ರಶಸ್ತಿಗೆ ಮಾರಿಕೊಂಡಿಲ್ಲ ಎನ್ನುವುದನ್ನು ಓದುಗ ಸಮೂಹಕ್ಕೆ ಸಾಬೀತು ಪಡಿಸುತ್ತಾನೆ. ಸಾಹಿತಿ, ಬರಹಗಾರ ಮುಚ್ಚಳಿಕೆ ಬರೆದುಕೊಡಬೇಕಾದುದು ಸರಕಾರಕ್ಕಲ್ಲ, ತಾನು ಬದುಕುತ್ತಿರುವ ಸಮಾಜಕ್ಕೆ, ತನ್ನ ಓದುಗರಿಗೆ. ಇದನ್ನು ಅರ್ಥ ಮಾಡಿಕೊಂಡ ಯಾವೊಬ್ಬ ಬರಹಗಾರನೂ ಮುಚ್ಚಳಿಕೆ ಬರೆದುಕೊಟ್ಟು ಸರಕಾರದಿಂದ ಪ್ರಶಸ್ತಿ ಪಡೆದುಕೊಳ್ಳುವ ಹೀನ ಮಟಕ್ಕೆ ಇಳಿಯುವುದಿಲ್ಲ. ಪ್ರಶಸ್ತಿ ನೀಡುವುದೆಂದರೆ, ಸರಕಾರವೊಂದು ಸಾಧಕನಿಗೆ ತೋರುವ ಔದಾರ್ಯವಲ್ಲ. ಯೋಗ್ಯನನ್ನು ಗುರುತಿಸಿ ಆತನನ್ನು ಗೌರವಿಸುವ ಮೂಲಕ ಸರಕಾರ ಸ್ವಯಂ ತನ್ನನ್ನು ತಾನೇ ಗೌರವಿಸಿಕೊಳ್ಳುತ್ತದೆ. ತನ್ನ ಸಾಧನೆಗಳ ಮೂಲಕ ಈ ದೇಶಕ್ಕೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ಸರಕಾರ ವ್ಯಕ್ತಪಡಿಸುವ ಕೃತಜ್ಞತೆಯಾಗಿದೆ ಅದು. ತಾನು ಪ್ರೀತಿಸುವ ದೇಶಕ್ಕೆ ಆಳುವವನಿಂದ ಅನ್ಯಾಯವಾದಾಗ ಅದರ ವಿರುದ್ಧ ಧ್ವನಿಯೆತ್ತುವುದು ಲೇಖಕನ ಕರ್ತವ್ಯ. ಲೇಖಕನ ಪಾಲಿಗೆ ಸರಕಾರ ನೀಡುವ ಪ್ರಶಸ್ತಿಗಿಂತ ತಾನು ಬದುಕುತ್ತಿರುವ ಸಮಾಜ ದೊಡ್ಡದು, ದೇಶ ದೊಡ್ಡದು. ಸರಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲು ವಿಫಲವಾದಾಗ ಲೇಖಕ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವುದು ಅನಿವಾರ್ಯ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News