ಆರೆಸ್ಸೆಸ್ ಕಚೇರಿಯೊಳಗೆ ಪ್ರವೇಶ ನಿರಾಕರಣೆ ಯಾಕೆ ಸರಿ?
ತಾನು ದಲಿತ ಎನ್ನುವ ಕಾರಣಕ್ಕಾಗಿ ನಾಗಪುರದ ಆರೆಸ್ಸೆಸ್ ಕಚೇರಿಗೆ ಪ್ರವೇಶವನ್ನು ನಿರಾಕರಿಸಲಾಯಿತು ಎಂದು ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರ ಆರೋಪ ಸಂಘಪರಿವಾರಕ್ಕೆ ತೀವ್ರ ಮುಜುಗರವನ್ನು ತರಿಸಿದೆ. ಗೂಳಿಹಟ್ಟಿ ಆರೋಪ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನಗೆ ಆಗಿರುವ ಅವಮಾನವನ್ನು ಅವರು ಆಡಿಯೊ ಮೂಲಕ ಆರೆಸ್ಸೆಸ್ ಮುಖಂಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಜೊತೆಗೆ ಹಂಚಿಕೊಂಡಿದ್ದಾರೆ. ‘ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ಕಚೇರಿಗೆ ಭೇಟಿ ನೀಡಿದ್ದೆ. ಹೆಡಗೇವಾರ್ ವಸ್ತು ಸಂಗ್ರಹಾಲಯ ಪ್ರವೇಶದ ಸಂದರ್ಭದಲ್ಲಿ, ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆಯಿಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ನನ್ನೊಂದಿಗೆ ಇದ್ದ ಇನ್ನಿಬ್ಬರಿಗೆ ಪ್ರವೇಶ ನೀಡಲಾಗಿತ್ತು. ಇದಕ್ಕೆ ಕಾರಣವೇನು?’ ಎಂದು ಅವರು ಸಂತೋಷ್ ಬಳಿ ಸ್ಪಷ್ಟೀಕರಣ ಕೇಳಿದ್ದಾರೆ. ನಾನು ದಲಿತನಾಗಿರುವುದಕ್ಕಾಗಿಯೇ ಆರೆಸ್ಸೆಸ್ ಕಚೇರಿಯೊಳಗೆ ನನಗೆ ಪ್ರವೇಶ ಸಿಗಲಿಲ್ಲ ಎಂದು ಆಡಿಯೊದಲ್ಲಿ ಅವರು ನೋವು ತೋಡಿಕೊಂಡಿದ್ದಾರೆ. ಗೂಳಿಹಟ್ಟಿ ಆರೋಪ ವಿವಾದವಾಗುತ್ತ್ತಿದ್ದಂತೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು ‘‘ಗೂಳಿ ಹಟ್ಟಿ ಆರೋಪ ಸತ್ಯಕ್ಕೆ ದೂರ’’ ಎಂದು ಸ್ಪಷ್ಟ ಪಡಿಸಿದೆ. ‘‘ಆರೆಸ್ಸೆಸ್‌ನ ಯಾವುದೇ ಕಚೇರಿಯಲ್ಲಾಗಲಿ ಅಥವಾ ಸ್ಮಾರಕ ಕಟ್ಟಡಗಳಲ್ಲಾಗಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಯಾರಿಗೂ ಜಾತಿಯ ಹೆಸರಿನಲ್ಲಿ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ’’ ಎಂದು ಪ್ರಕಟಣೆಯಲ್ಲಿ ಸಂಘದ ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹಕ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಗೂಳಿಹಟ್ಟಿ ಈ ಹಿಂದೆಯೂ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು. ‘‘ನನ್ನ ತಾಯಿಯನ್ನು ಕ್ರಿಶ್ಚಿಯನ್ನರು ಮತಾಂತರ ಮಾಡಿದ್ದಾರೆ’’ ಎಂದು ಸದನದಲ್ಲಿ ಆರೋಪಿಸಿ ಪತ್ರಿಕೆಗಳ ಮುಖಪುಟದಲ್ಲಿ ಮಿಂಚಿದ್ದರು. ಅಂದಿನ ಬಿಜೆಪಿ ಸರಕಾರ ತಾನು ಜಾರಿಗೆ ತಂದ ಮತಾಂತರ ಕಾಯ್ದೆಯನ್ನು ಸಮರ್ಥಿಸಲು ಗೂಳಿಹಟ್ಟಿಯ ಹೇಳಿಕೆಯನ್ನು ಬಳಸಿಕೊಂಡಿತ್ತು. ಗೂಳಿಹಟ್ಟಿಯ ಅಂದಿನ ಆರೋಪವನ್ನೇ ಮುಂದಿಟ್ಟುಕೊಂಡು ಬಿಜೆಪಿಯ ಹಲವು ನಾಯಕರು ನಾಡಿನಲ್ಲಿ ಮತಾಂತರ ಹೆಚ್ಚುತ್ತಿದೆ ಎಂದು ಗದ್ದಲ ಎಬ್ಬಿಸಿದ್ದರು. ಗೂಳಿಹಟ್ಟಿಯ ಮತಾಂತರದ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡ ಅಂದಿನ ಬಿಜೆಪಿ ಸರಕಾರ ಮತಾಂತರದ ವಿರುದ್ಧ ಒಂದು ಕಾಯ್ದೆಯನ್ನೇ ಜಾರಿಗೊಳಿಸಿರುವಾಗ, ಆರೆಸ್ಸೆಸ್ ಕಚೇರಿಯಲ್ಲಿ ನಡೆದ ಅಸ್ಪಶ್ಯತೆಯ ಆರೋಪವನ್ನು ನಗಣ್ಯಗೊಳಿಸುವುದು ಎಷ್ಟು ಸರಿ? ಆದುದರಿಂದ, ‘ಗೂಳಿ ಹಟ್ಟಿ ಆರೋಪ’ದ ಬಗ್ಗೆ ಒಂದು ಪ್ರತ್ಯೇಕ ತನಿಖೆಯನ್ನು ನಡೆಸಲು ಆರೆಸ್ಸೆಸ್ಸನ್ನು ಒತ್ತಾಯಿಸಿ ತಮ್ಮ ಪಕ್ಷದ ನಾಯಕನಿಗೆ ನ್ಯಾಯ ದೊರಕುವಂತೆ ಮಾಡುವುದು ಬಿಜೆಪಿ ವರಿಷ್ಠರ ಕರ್ತವ್ಯ. ಆರೆಸ್ಸೆಸ್‌ನ ಸುದೀರ್ಘ ಇತಿಹಾಸವನ್ನು ಗಮನಿಸಿದವರಿಗೆ, ಅದು ದಲಿತರ ಜೊತೆಗೆ ಅನುಸರಿಸುತ್ತಾ ಬಂದಿರುವ ತಾರತಮ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೂಳಿಹಟ್ಟಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ ‘‘ಇಲ್ಲಿಯವರೆಗೆ ಆರೆಸ್ಸೆಸ್ ಯಾಕೆ ದಲಿತನೊಬ್ಬನನ್ನು ಸರಸಂಘ ಸಂಚಾಲಕನನ್ನಾಗಿ ಮಾಡಿಲ್ಲ’’ ಎಂದು ಕೇಳಿದ್ದಾರೆ. ದಲಿತನೊಬ್ಬನನ್ನು ತಳಸ್ತರದ ಕಾರ್ಯಕರ್ತನಾಗಿಯಷ್ಟೇ ಆರೆಸ್ಸೆಸ್ ಬಳಸಿಕೊಂಡು ಬಂದಿದೆಯಷ್ಟೇ ಹೊರತು, ತನ್ನ ಒಳಮನೆಗೆ ಪ್ರವೇಶಿಸಲು ಬಿಟ್ಟಿಲ್ಲ ಎನ್ನುವ ವಾಸ್ತವವನ್ನು ಈ ಹಿಂದೆಯೂ ಹಲವರು ಬೊಟ್ಟು ಮಾಡಿ ತೋರಿಸಿದ್ದಾರೆ.
ಆರೆಸ್ಸೆಸನ್ನು ಪಕ್ಕಕ್ಕಿಡೋಣ. ಆರೆಸ್ಸೆಸ್‌ನ ರಾಜಕೀಯ ಮುಖವಾಗಿರುವ ಬಿಜೆಪಿ ದಲಿತರನ್ನು ಹೇಗೆ ನಡೆಸಿಕೊಂಡಿದೆ? ತನ್ನ ರಾಜಕೀಯ ದುರುದ್ದೇಶಕ್ಕಾಗಿಯಷ್ಟೇ ದಲಿತರನ್ನು ಸಂದರ್ಭಕ್ಕೆ ತಕ್ಕಂತೆ ಬಿಜೆಪಿ ಬಳಸಿಕೊಂಡು ಬರುತ್ತಿದೆ. ಬಿಜೆಪಿಯ ಏಕೈಕ ದಲಿತ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾಗಿ ಗುರುತಿಸಿಕೊಂಡವರು ಬಂಗಾರು ಲಕ್ಷಣ್. ಒಂದು ವರ್ಷ ಕಾಲ ಅವರು ಆ ಸ್ಥಾನವನ್ನು ನಿರ್ವಹಿಸಿದರು. ಆದರೆ ಅದಕ್ಕಾಗಿ ಅವರು ತೆತ್ತ ಬೆಲೆ ದೊಡ್ಡದು. ತೆಹಲ್ಕಾ ಹಗರಣದಲ್ಲಿ ಬಿಜೆಪಿಯ ಹಲವು ಗಣ್ಯರು ಆರೋಪಿಗಳಾಗಿ ಗುರುತಿಸಲ್ಪಟ್ಟರಾದರೂ, ಅಂತಿಮವಾಗಿ ಬಿಜೆಪಿ ಬಲಿಕೊಟ್ಟದ್ದು ಬಂಗಾರು ಲಕ್ಷ್ಮಣ್ ಅವರನ್ನು. ಆ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸಿರುವುದು ಬಂಗಾರು ಲಕ್ಷ್ಮಣ್ ಒಬ್ಬರೇ. ತೆಹಲ್ಕಾ ಹಗರಣದ ನೆಪದಲ್ಲೇ ಲಕ್ಷ್ಮಣ್ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ಕೆಳಗಿಳಿಸಿತು. ದೋಷಿಯೆನ್ನುವ ಕಳಂಕ ಹೊತ್ತುಕೊಂಡೇ ಬಂಗಾರು ಲಕ್ಷ್ಮಣ್ ಅವರು ಇಹಲೋಕ ತ್ಯಜಿಸಿದರು. ಬಿಜೆಪಿಯಿಂದ ಆಯ್ಕೆಯಾದ ರಾಜ್ಯದ ಸಂಸದರೊಬ್ಬರಿಗೆ ದಲಿತರು ಎನ್ನುವ ಕಾರಣಕ್ಕಾಗಿಯೇ ದೇವಸ್ಥಾನವೊಂದರಲ್ಲಿ ಪ್ರವೇಶ ಸಿಗದಿರುವುದು ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ‘‘ದೇವಸ್ಥಾನದೊಳಗೆ ಪ್ರವೇಶಿಸಿ ಅವರಿಗೆ ನೋವುಂಟು ಮಾಡಲು ನಾನು ಸಿದ್ಧನಿಲ್ಲ’’ ಎಂದು ನೋವಿನಿಂದಲೇ ಅವರು ದೇವಸ್ಥಾನದ ಹೊರಗೆ ನಿಂತು ಪ್ರಸಾದ ಸ್ವೀಕರಿಸುತ್ತಿರುವ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ರಾಷ್ಟ್ರಾಧ್ಯಕ್ಷೆಯನ್ನಾಗಿ ಮಾಡಿದ ಬಿಜೆಪಿ ಆ ಬಳಿಕ ಅವರ ಜೊತೆಗೆ ಹೇಗೆ ನಡೆದುಕೊಂಡಿತು ಎನ್ನುವುದನ್ನೂ ನಾವು ನೋಡಿದ್ದೇವೆ. ನೂತನ ಸಂಸತ್ ಭವನ ಉದ್ಘಾಟನೆಯ ಸಂದರ್ಭದಲ್ಲಿ ಈ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದ ರಾಷ್ಟ್ರಾಧ್ಯಕ್ಷೆಗೆ ಆಹ್ವಾನವಿದ್ದಿರಲಿಲ್ಲ. ಯಾಕೆಂದರೆ ನೂತನ ಸಂಸತ್‌ಭವನವನ್ನು ವೈದಿಕ ಆಚರಣೆಗಳ ಮೂಲಕ ಉದ್ಘಾಟಿಸಲಾಗಿತ್ತು. ರಾಷ್ಟ್ರಪತಿಯಾಗಿದ್ದರೂ ದ್ರೌಪದಿ ಮುರ್ಮು ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದಲೇ ಕಾರ್ಯಕ್ರಮದಿಂದ ಅವರನ್ನು ಹೊರಗಿಡಲಾಯಿತು ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದರು. ಆರೆಸ್ಸೆಸ್ ಒಂದು ಖಾಸಗಿ ಸಂಸ್ಥೆ. ಅಲ್ಲಿ ಯಾರಿಗೆ ಪ್ರವೇಶ ನೀಡಬೇಕು, ನೀಡಬಾರದು ಎನ್ನುವುದು ಆ ಸಂಸ್ಥೆಯ ಮುಖ್ಯಸ್ಥರಿಗೆ ಬಿಟ್ಟದ್ದು. ಅದನ್ನು ಪ್ರಶ್ನಿಸುವ ಅಧಿಕಾರ ಗೂಳಿಹಟ್ಟಿಗೆ ಇಲ್ಲ. ಆರೆಸ್ಸೆಸ್ ಕಚೇರಿಗೂ ಈ ಪ್ರಜಾಸತ್ತಾತ್ಮಕ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲದೇ ಇರುವುದರಿಂದ ತನಗೆ ಪ್ರವೇಶ ಸಿಗಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುವುದು ತಪ್ಪಾಗುತ್ತದೆ. ಇಷ್ಟಕ್ಕೂ ಆರೆಸ್ಸೆಸ್‌ನ ಹಿರಿಯರಾಗಿರುವ ಗೋಳ್ವಾಲ್ಕರ್, ಹೆಡಗೇವಾರ್ ಅವರು ಜಾತಿ ವ್ಯವಸ್ಥೆಯ ಬಗ್ಗೆ, ಅಸ್ಪಶ್ಯರ ಬಗ್ಗೆ ತಮ್ಮ ನಿಲುವುಗಳನ್ನು ಬೇರೆ ಬೇರೆ ಬರಹಗಳಲ್ಲಿ ಬಹಿರಂಗ ಪಡಿಸಿದ್ದಾರೆ. ದಲಿತರ ಬಗ್ಗೆ ಆರೆಸ್ಸೆಸ್ ತಳೆದಿರುವ ನಿಲುವೇನು ಎಂದು ಗೊತ್ತಿದ್ದೂ ಅಲ್ಲಿಗೆ ಹೋಗಿರುವುದು ಗೂಳಿ ಹಟ್ಟಿಯವರು ಮಾಡಿರುವ ತಪ್ಪು. ಆದರೆ ನೂತನ ಸಂಸತ್ ಭವನ ಪ್ರಜಾಸತ್ತಾತ್ಮಕವಾದುದು. ಸಂವಿಧಾನದ ಆಶಯಗಳನ್ನು ಅಲ್ಲಿ ಎತ್ತಿ ಹಿಡಿಯಲಾಗುತ್ತದೆ. ಅಂತಹ ಸಂಸತ್‌ಭವನದಲ್ಲಿ ರಾಷ್ಟ್ರಪತಿಯವರಿಗೆ ಭಾಗವಹಿಸಲು ಅವಕಾಶ ನೀಡದ ಜನರು ತನಗೆ ಅವಕಾಶ ನೀಡುತ್ತಾರೆ ಎಂದು ಗೂಳಿಹಟ್ಟಿ ಯಾಕಾದರೂ ಭಾವಿಸಬೇಕು? ದಲಿತರು ಅಂಬೇಡ್ಕರ್ ಇರುವ ಜಾಗಕ್ಕೆ ಹೋಗದೆ ಹೆಡಗೇವಾರ್ ಇರುವ ಸ್ಥಳಕ್ಕೆ ಹೋದಾಗ ಅವಮಾನವಲ್ಲದೆ ಇನ್ನೇನು ಉಡುಗೊರೆಯಾಗಿ ಸಿಕ್ಕೀತು? ಇಂದು ಗೂಳಿಹಟ್ಟಿಯಂತಹ ಶೋಷಿತ ಸಮುದಾಯದಿಂದ ಬಂದ ನಾಯಕರಿಗೆ ರಾಜಕೀಯ ಅವಕಾಶಗಳು ಸಿಗುತ್ತಿರುವುದು ಹೆಡಗೇವಾರ್‌ನಿಂದಲ್ಲ, ಅಂಬೇಡ್ಕರ್ ಅವರಿಂದ. ಇದನ್ನು ಅರ್ಥಮಾಡಿಕೊಂಡಾಗ ಮಾತ್ರ ಆರೆಸ್ಸೆಸ್ ತನಗೆ ಯಾಕೆ ಹೆಡಗೇವಾರ್ ವಸ್ತು ಸಂಗ್ರಹಾಲಯದೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎನ್ನುವ ಪ್ರಶ್ನೆಗೆ ಗೂಳಿಹಟ್ಟಿಯವರಿಗೆ ಉತ್ತರ ಸಿಗುತ್ತದೆ. ಗೂಳಿಹಟ್ಟಿಯ ಸ್ಥಿತಿಯಿಂದ ಬಿಜೆಪಿಯೊಳಗಿರುವ ಇತರ ದಲಿತ ನಾಯಕರು ಕಲಿಯಬೇಕಾದುದು ಬಹಳಷ್ಟಿದೆ.