‘ಇಂಡಿಯಾ’ ಹೆಸರನ್ನು ‘ಬಿಜೆಪಿ’ ಎಂದು ಯಾಕೆ ಕರೆಯಬಾರದು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಭಾರತದ ಕೀರ್ತಿ ವಿಶ್ವಮಟ್ಟಕ್ಕೇರಿದೆ ಎಂದು ಬಿಜೆಪಿಯ ಮುಖಂಡರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆ ಪ್ರತಿಪಾದನೆಯನ್ನು ಯಾವ ಮಾನದಂಡದ ಆಧಾರದ ಮೇಲೆ ಮುಂದಿಡುತ್ತಿದ್ದಾರೆ ಎನ್ನುವುದು ಅವರಿಗೇ ಸ್ಪಷ್ಟವಿಲ್ಲ. ಆರ್ಥಿಕತೆಯಲ್ಲಿ ಭಾರತ ಹಿಂದಕ್ಕೆ ಚಲಿಸಿದೆ. ಡಾಲರ್ ಮುಂದೆ ರೂಪಾಯಿ ಬೆಲೆ ಭಾರೀ ಇಳಿಕೆಯಾಗಿದೆ. ನಿರುದ್ಯೋಗ ಹೆಚ್ಚಿದೆ. ಹಣದುಬ್ಬರ ಮಿತಿ ಮೀರಿದೆ. ಜೊತೆಗೆ ಕೋಮುಗಲಭೆಗಳಿಗಾಗಿಯೂ ದೇಶ ವಿಶ್ವಮಟ್ಟದಲ್ಲಿ ಸುದ್ದಿಯಲ್ಲಿದೆ. ಮಣಿಪುರದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡಗಳು ಭಾರತದ ವರ್ಚಸ್ಸಿನ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ. ಹಾಗಿದ್ದರೆ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಾಧನೆಗಳಾದರೂ ಯಾವುವು? ಎಂದು ಶ್ರೀಸಾಮಾನ್ಯರು ಪ್ರಶ್ನಿಸುವಂತಾಗಿದೆ.
ಮೊತ್ತ ಮೊದಲಾಗಿ ಮೋದಿ ನೇತೃತ್ವದ ಬಿಜೆಪಿ ಯಾವುದನ್ನು ಭಾರತ ಎಂದು ಭಾವಿಸುತ್ತಿದೆ ಎನ್ನುವುದನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಈ ಕಾರಣದಿಂದಲೇ, ದೇಶವನ್ನು ಪ್ರಧಾನಿ ಮೋದಿಯವರು ‘ಭಾರತ’ ಎಂದು ಕರೆಯಲಿ, ‘ಇಂಡಿಯಾ’ ಎಂದು ಕರೆಯಲಿ ಜನರ ಪಾಲಿಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಪ್ರಧಾನಿ ಮೋದಿಯವರು ಭಾವಿಸಿರುವ ಭಾರತವೆಂದರೆ ಅದಾನಿ, ಅಂಬಾನಿ ಮತ್ತು ಬಿಜೆಪಿ. ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಭಾರತದ ಜಿಡಿಪಿ ತಗ್ಗಿದೆ, ಡಾಲರ್ ಎದುರು ರೂಪಾಯಿ ಪಾತಾಳ ತಲುಪಿದೆಯಾದರೂ, ಅದಾನಿ, ಅಂಬಾನಿಯವರು ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಾಗಿ ಹೊರ ಹೊಮ್ಮಿದರು. ಇತ್ತೀಚೆಗೆ ಹತ್ತು ಹಲವು ಅಕ್ರಮಗಳಿಗಾಗಿ ಅದಾನಿ ಕಂಪೆನಿ ಸುದ್ದಿಯಾಗುತ್ತಿರುವಾಗ, ಅದಾನಿ ರಕ್ಷಣೆಗಾಗಿ ಪ್ರಧಾನಿ ಮೋದಿಯವರು ಬಲವಾಗಿ ನಿಂತರು. ಪರಿಣಾಮವಾಗಿ ಅದಾನಿಯ ಅಕ್ರಮಗಳನ್ನು ಪ್ರಶ್ನಿಸಿದ ರಾಹುಲ್‌ಗಾಂಧಿಯವರು ಸಂಸತ್‌ನಲ್ಲಿ ಮಾತನಾಡುವ ಹಕ್ಕನ್ನೇ ಕೆಲವು ಸಮಯ ಕಳೆದುಕೊಳ್ಳಬೇಕಾಯಿತು. ನೆರೆಯ ಚೀನಾ ಲಡಾಖ್‌ನಲ್ಲಿ ನಡೆಸುತ್ತಿರುವ ಅತಿಕ್ರಮಣದ ಬಗ್ಗೆಯೂ ಪ್ರಧಾನಿ ಇಷ್ಟು ತೀವ್ರವಾಗಿ ಪ್ರತಿಕ್ರಿಯಿಸಿರಲಿಲ್ಲ. ಇದರ ಅರ್ಥ ಭಾರತವೆಂದರೆ ಅದಾನಿ, ಅಂಬಾನಿಯೆಂದೇ ಪ್ರಧಾನಿ ಮೋದಿ ಭಾವಿಸಿದಂತಿದೆ. ಅದಾನಿ, ಅಂಬಾನಿಗಳು ಕಳೆದ ಏಳೆಂಟು ವರ್ಷಗಳಲ್ಲಿ ಬೆಳೆದ ರೀತಿಯನ್ನು ಗಮನಿಸಿದರೆ, ಈ ದೇಶ ವಿಶ್ವ ಮಟ್ಟದಲ್ಲಿ ಭಾರೀ ಸಾಧನೆಯನ್ನು ಮಾಡಿದೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ಉದ್ಯಮಗಳು ಮುಚ್ಚಿದವಾದರೂ ಅದಾನಿ ಸಂಪತ್ತಿನ ಮೇಲೆ ಯಾವುದೇ ದುಷ್ಪರಿಣಾಮ ಬೀರಲಿಲ್ಲ. ಅಂದರೆ ಅದಾನಿಯವರು ನಾವೆಲ್ಲ ಭಾವಿಸಿರುವ ಭಾರತಕ್ಕೆ ಹೊರತಾದವರು ಎಂದೇ ತಿಳಿಯಬೇಕಾಗುತ್ತದೆ.
ವಿಪರ್ಯಾಸವೆಂದರೆ, ನೋಟು ನಿಷೇಧ ಮತ್ತು ಕೊರೋನದ ಬಳಿಕ ಇಡೀ ದೇಶ ಆರ್ಥಿಕ ರಂಗದಲ್ಲಿ ಜಗ್ಗಿ ಕೂತಿರುವಾಗ , ಬಿಜೆಪಿ ನಂ. ೧ ಶ್ರೀಮಂತ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ. ಒಂದು ವೇಳೆ ಬಿಜೆಪಿಯನ್ನೇ ನಾವು ಭಾರತ ದೇಶವೆಂದು ಅಧಿಕೃತವಾಗಿ ಗುರುತಿಸಿದರೆ, ದೇಶ ವಿಶ್ವಮಟ್ಟದಲ್ಲಿ ಶ್ರೀಮಂತ ದೇಶವೆಂದು ಹೆಮ್ಮೆಪಡುವ ಅವಕಾಶ ನಮಗಿದೆ. ೨೦೨೧-೨೨ನೇ ವಿತ್ತ ವರ್ಷದಲ್ಲಿ ಎಂಟು ರಾಷ್ಟ್ರೀಯ ಪಕ್ಷಗಳು ೮,೮೨೯.೧೫೮ ಕೋಟಿ ರೂಪಾಯಿಗಳ ಒಟ್ಟು ಆಸ್ತಿಗಳನ್ನು ಘೋಷಿಸಿಕೊಂಡಿದ್ದು ಈ ಪೈಕಿ ಅತ್ಯಂತ ಶ್ರೀಮಂತ ಪಕ್ಷ ಎಂದು ಈಗಾಗಲೇ ಘೋಷಿಸಿಕೊಂಡಿರುವ ಬಿಜೆಪಿಯು ೬,೦೪೬.೮೧ ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದೆ. ದಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸೋಮವಾರ ತನ್ನ ವರದಿಯಲ್ಲಿ ಇದನ್ನು ಬಹಿರಂಗಪಡಿಸಿದೆ. ಕಳೆದ ಜನವರಿಯಲ್ಲಿ ಚುನಾವಣಾ ಆಯೋಗವು ಕೂಡ ಬಿಜೆಪಿಯು ದೇಶದ ಅತ್ಯಂತ ಶ್ರೀಮಂತ ಪಕ್ಷವೆಂದು ಘೋಷಿಸಿತ್ತು. ವಿಪರ್ಯಾಸವೆಂದರೆ ಇದನ್ನು ಕೂಡ ಬಿಜೆಪಿಯ ನಾಯಕರು ಪ್ರಧಾನಿ ಮೋದಿಯವರ ಸಾಧನೆಗಳಲ್ಲಿ ಗುರುತಿಸುತ್ತಾ ಬಂದಿದ್ದಾರೆ. ಈ ದೇಶ ಕೊರೋನದಿಂದ ತತ್ತರಿಸಿ, ಕೋಟ್ಯಂತರ ಜನರು ಕೆಲಸವೂ ಇಲ್ಲದೆ, ಊಟವೂ ಇಲ್ಲದೆ ನಿರ್ಗತಿಕರಾಗಿದ್ದ ಹೊತ್ತಿನಲ್ಲಿ ಬಿಜೆಪಿಯು ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನು ಕೊಂಡುಕೊಳ್ಳಲು ಕೋಟ್ಯಂತರ ಹಣ ಚೆಲ್ಲುತ್ತಿತ್ತು. ದೇಶದ ಬಳಿ ಯಾಕೆ ಹಣವಿರಲಿಲ್ಲ ಎಂದರೆ ಆ ಎಲ್ಲ ಹಣವೂ ಬಿಜೆಪಿಯ ಖಜಾನೆ ಸೇರಿತ್ತು. ಬಿಜೆಪಿಯು ಆರೆಸ್ಸೆಸ್‌ನ ರಾಜಕೀಯ ಮುಖವಾಡ ಎನ್ನುವುದನ್ನ್ನು ನಾವು ಗಮನದಲ್ಲಿಟ್ಟುಕೊಂಡು, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳಲ್ಲಿರುವ ಆಸ್ತಿಗಳನ್ನೆಲ್ಲ ಪರಿಗಣಿಸಿದ್ದೇ ಆದರೆ ಬಿಜೆಪಿ ವಿಶ್ವದಲ್ಲೇ ಅತಿ ದೊಡ್ಡ ಶ್ರೀಮಂತ ಪಕ್ಷ ಅಥವಾ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದ ಬಳಿಕವೂ ರಾಜ್ಯ ಬಿಜೆಪಿ ನಾಯಕರು ಆಪರೇಷನ್ ಕಮಲದ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ ಎಂದರೆ, ‘ಬಿಜೆಪಿಯ ಬಳಿ ಇರುವ ಹಣದ ಬಲದ’ ಧೈರ್ಯದಿಂದ.
೭೦ ವರ್ಷಗಳ ಆಳ್ವಿಕೆಯಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ನಡೆಸಿ ದೇಶವನ್ನು ದೋಚಿತು ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಪದೇ ಪದೇ ಆರೋಪಿಸುತ್ತಾ ಬಂದಿದೆ. ಭ್ರಷ್ಟಾಚಾರಗಳ ನಡುವೆಯೂ ೭೦ ವರ್ಷಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಈ ದೇಶ ಹಂತ ಹಂತವಾಗಿ ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಣ್ಣ ಪ್ರಮಾಣದಲ್ಲಾದರೂ ಸಾಧನೆಗಳನ್ನು ಮಾಡುತ್ತಾ ಬಂದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಕಾಲದಲ್ಲಿ ಆ ಸಾಧನೆಗಳು ಸಂಭವಿಸದೇ ಇದ್ದಿದ್ದರೆ, ಇತ್ತೀಚೆಗೆ ಚಂದ್ರಯಾನ-೩ ಹೆಸರಿನಲ್ಲಿ ಪ್ರಧಾನಿ ಮೋದಿಯವರಿಗೆ ಸಂಭ್ರಮಿಸುವ ಅವಕಾಶ ಲಭಿಸುತ್ತಿರಲಿಲ್ಲ. ಆದರೆ ಬರೇ ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕ ಸಾಧನೆಗಳೆಲ್ಲ ಹಿಂದಕ್ಕೆ ತಳ್ಳಲ್ಪಟ್ಟಿದ್ದು ಹೇಗೆ? ದೇಶ ಆರ್ಥಿಕವಾಗಿ ಹಿಂಜರಿಕೆ ಕಂಡಾಗಲೂ ಬಿಜೆಪಿ ದೇಶದಲ್ಲೇ ಅತಿ ಶ್ರೀಮಂತ ಪಕ್ಷವಾದುದು ಹೇಗೆ? ಬರೇ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತಲೂ ಹಲವು ಪಟ್ಟು ಶ್ರೀಮಂತ ಪಕ್ಷವಾಗಿ ಗುರುತಿಸಿಕೊಂಡಿದೆಯೆಂದಾದರೆ, ಕಾಂಗ್ರೆಸ್ ೭೦ ವರ್ಷಗಳಲ್ಲಿ ಮಾಡಿರುವ ಭ್ರಷ್ಟಾಚಾರ ದೊಡ್ಡದೋ ಅಥವಾ ಬಿಜೆಪಿ ಕಳೆದ ೯ ವರ್ಷಗಳಲ್ಲಿ ನಡೆಸಿದ ಭ್ರಷ್ಟಾಚಾರ ದೊಡ್ಡದೋ? ಇಷ್ಟಕ್ಕೂ ನೋಟು ನಿಷೇಧದಿಂದ ಈ ದೇಶದ ಕಪ್ಪು ಹಣವೆಲ್ಲ ಬಹಿರಂಗವಾಯಿತು ಎಂದು ಬಿಜೆಪಿ ಪ್ರತಿಪಾದಿಸುತ್ತಿರುವಾಗ, ಅದರ ಬೆನ್ನಿಗೇ ಬಿಜೆಪಿ ದೇಶದ ಅತಿ ದೊಡ್ಡ ಶ್ರೀಮಂತ ಪಕ್ಷವಾಗಿ ಗುರುತಿಸಿಕೊಂಡಿದ್ದು ಹೇಗೆ? ಜನಸಾಮಾನ್ಯರೆಲ್ಲ ತಾವು ದುಡಿದಿಟ್ಟ ಹಣವನ್ನು ಬ್ಯಾಂಕ್‌ಗೆ ಒಪ್ಪಿಸಿ ‘ಬಿಳಿ ಹಣ’ವೆಂದು ಘೋಷಿಸುತ್ತಿರುವಾಗಲೇ, ಬಿಜೆಪಿಯ ಖಜಾನೆ ಕೋಟ್ಯಂತರ ದೇಣಿಗೆಗಳಿಂದ ತುಂಬಿ ಹೋಗಿದ್ದು ಹೇಗೆ?
ಈ ದೇಶದ ಹಲವು ಆರ್ಥಿಕ ತಜ್ಞರು ‘ನೋಟು ನಿಷೇಧ ದೇಶ ಕಂಡ ಅತಿದೊಡ್ಡ ಪ್ರಮಾದ’ ಎಂದು ಕರೆದಿದ್ದಾರೆ. ನೋಟು ನಿಷೇಧ ಘೋಷಣೆಯಾದ ಬಳಿಕವೂ ದೇಶದ ಕಪ್ಪು ಹಣ ಯಾಕೆ ಬಹಿರಂಗವಾಗಲಿಲ್ಲ ಎಂದರೆ, ರಾಜಕೀಯ ಶಕ್ತಿಗಳ ನೆರವಿನಿಂದ ಸಾವಿರಾರು ಕೋಟಿ ರೂಪಾಯಿಯನ್ನು ಬಿಳಿಯಾಗಿಸಲಾಯಿತು. ಹಾಗೆ ಬಿಳಿಯಾದ ಆ ಹಣ ಎಲ್ಲಿಗೆ ಹೋಯಿತು ಎನ್ನುವುದು ತನಿಖೆ ನಡೆಸುವುದಕ್ಕೆ ಇದು ಸರಿಯಾದ ಸಮಯವಾಗಿದೆ. ಇಂಡಿಯಾ ಅಥವಾ ಭಾರತವೆಂದರೆ ಬಿಜೆಪಿ, ಅದಾನಿ, ಅಂಬಾನಿ ಅಲ್ಲ ಎನ್ನುವುದನ್ನು ಈ ಮೂಲಕ ವಿಶ್ವಕ್ಕೆ ಸ್ಪಷ್ಟಪಡಿಸಬೇಕಾಗಿದೆ.