ಜಾತಿ ಗಣತಿಗೆ ವಿರೋಧವೇಕೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರಕಾರ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ರಾಜಸ್ಥಾನದ ಕಾಂಗ್ರೆಸ್ ಸರಕಾರವೂ ಜಾತಿ ಸಮೀಕ್ಷೆಗೆ ಆದೇಶ ನೀಡಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಒಂದು ತಿಂಗಳಲ್ಲಿ ಜಾತಿ ಗಣತಿ ಕುರಿತ ಕಾಂತರಾಜ್‌ವರದಿ ಸರಕಾರದ ಕೈಗೆ ಬಂದ ನಂತರ ಪರಿಶೀಲಿಸುವುದಾಗಿ ಹೇಳಿದ್ದಾರೆ. ಈ ಜಾತಿ ಗಣತಿ ಅನೇಕರಲ್ಲಿ ದಿಗಿಲು ಹುಟ್ಟಿಸಿದೆ. ಜಾತಿ ಗಣತಿ ಸಮಾಜವನ್ನು ವಿಭಜಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಹಿರಂಗವಾಗಿ ಹೇಳಿದ್ದಾರೆ. ಇದೀಗ ಬಿಜೆಪಿ ಜೊತೆ ಸೇರಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ‘‘ಜಾತಿ ಗಣತಿಯಿಂದ ಜಾತಿ ದ್ವೇಷ ಹೆಚ್ಚಾಗುತ್ತದೆ’’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇವರಲ್ಲದೆ ಕರ್ನಾಟಕದ ಕೆಲವು ಬಿಜೆಪಿ ನಾಯಕರೂ ಜಾತಿ ಗಣತಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೋದಿಯವರು ಸೇರಿದಂತೆ ಜಾತಿ ಗಣತಿಯನ್ನು ವಿರೋಧಿಸುವವರ ವಿರೋಧ ಪ್ರಾಮಾಣಿಕವಾದುದಲ್ಲ. ರಾಜಕೀಯ ಕಾರಣಕ್ಕಾಗಿ ಅವರಿಗೆ ಈ ವರದಿ ಬೇಡವಾಗಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕೋಮು ದ್ವೇಷದ ರಾಜಕಾರಣ ಮಾಡಲು ‘ಶೌರ್ಯ ಯಾತ್ರೆ’ ಆರಂಭಿಸಿರುವವರಿಗೆ, ಗಣೇಶೋತ್ಸವ ಮೆರವಣಿಗೆಯಲ್ಲಿ ನಾಥೂರಾಮ್ ಗೋಡ್ಸೆಯ ಫೋಟೊ ಹಿಡಿದುಕೊಂಡು ಹೊರಟವರಿಗೆ ಜಾತಿ ಗಣತಿಯ ಬಗ್ಗೆ ಎಲ್ಲಿ ತಮ್ಮ ಲೆಕ್ಕಾಚಾರ ತಪ್ಪುವುದೋ ಎಂದು ಹೆದರಿಕೆ ಶುರುವಾಗಿದೆ. ಧರ್ಮದ ಹೆಸರಿನಲ್ಲಿ ಹಿಂದುಳಿದ ಸಮುದಾಯಗಳನ್ನು ವಿಭಜಿಸಿ ಸಾಮಾಜಿಕ ನ್ಯಾಯದ ಸಮಾಧಿ ಮಾಡಲು ಹೊರಟವರಿಗೆ ಸಹಜವಾಗಿ ಜಾತಿ ಗಣತಿ ಆತಂಕ ಮೂಡಿಸಿದೆ. ೧೯೯೦ರಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಶತಮಾನಗಳಿಂದ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸುವುದಕ್ಕಾಗಿ ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲಾಗಿತ್ತು. ಆನಂತರ ಇದು ದೇಶದ ರಾಜಕಾರಣ ದಿಕ್ಕನ್ನೇ ಬದಲಿಸಿತು. ಇದನ್ನು ತಡೆಯಲು ‘ಕಮಂಡಲ’ ರಾಜಕಾರಣವನ್ನು ಮುನ್ನೆಲೆಗೆ ತಂದು ಯಾರು ಅಯೋಧ್ಯೆಗೆ ರಥಯಾತ್ರೆ ಹೊರಟರೆಂದು ಎಲ್ಲರಿಗೂ ಗೊತ್ತಿದೆ.
ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಗೊಳಿಸಿದ ಮಂಡಲ ಆಯೋಗದ ವರದಿ ನಿಖರವಾದ ಅಂಕಿಅಂಶಗಳನ್ನು ಹೊಂದಿರಲಿಲ್ಲ. ೧೯೩೧ರ ಜನಗಣತಿಯ ದತ್ತಾಂಶಗಳ ಆಧಾರದಲ್ಲಿ ಈ ವರದಿ ಸಿದ್ಧವಾಗಿತ್ತು. ಅಂದಿಗೂ ಇಂದಿಗೂ ಸಾಕಷ್ಟು ಬದಲಾವಣೆಯಾಗಿದೆ. ಬಿಹಾರದ ಇತ್ತೀಚಿನ ಜಾತಿ ಜನಗಣತಿ ಪ್ರಕಾರ ಅತ್ಯಂತ ಹಿಂದುಳಿದ ವರ್ಗಗಳ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ. ೬೩ರಷ್ಟಿದೆ. ಇದರಲ್ಲಿ ಅತ್ಯಂತ ಹಿಂದುಳಿದ (ಇಬಿಸಿ) ಸಮುದಾಯಗಳ ಪಾಲು ಶೇ. ೩೬ ರಷ್ಟಿದೆ. ಇತರ ಹಿಂದುಳಿದ (ಒಬಿಸಿ) ಸಮುದಾಯಗಳ ಪಾಲು ಶೇ. ೨೭.೧೩ರಷ್ಟಿದೆ. ಇದರಿಂದ ಈ ಸಮುದಾಯಗಳನ್ನು ವಿಭಜಿಸಿ ತಮ್ಮ ಮನುವಾದಿ, ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಂಡವರಿಗೆ ಸಹಜವಾಗಿ ದಿಗಿಲು ಉಂಟಾಗಿದೆ.
ತೊಂಭತ್ತರ ದಶಕದಲ್ಲಿ ಮಂಡಲ್ ರಾಜಕೀಯ ಉತ್ತರ ಭಾರತದ ಮೇಲೆ ಅದರಲ್ಲೂ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ರಾಜಕಾರಣದ ಮೇಲೆ ಯಾವ ಪರಿಣಾಮ ಬೀರಿತೆಂಬುದು ಎಲ್ಲರಿಗೂ ಗೊತ್ತಿದೆ. ಯಾದವ ಎಂಬ ಹಿಂದುಳಿದ ಸಮುದಾಯಗಳನ್ನು ಪ್ರತಿನಿಧಿಸುವ ಪಕ್ಷಗಳು ಈ ರಾಜ್ಯಗಳಲ್ಲಿ ಪ್ರಾಬಲ್ಯ ಗಳಿಸಿದವು. ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ಹೊಸ ನಾಯಕರಾಗಿ ಹೊರಹೊಮ್ಮಿದರು.ಇದನ್ನು ವಿಫಲಗೊಳಿಸಲು ಆರೆಸ್ಸೆಸ್ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ಉಪಯೋಗಿಸಿದ ‘ಹಿಂದುತ್ವ’ ಎಂಬ ಅಸ್ತ್ರ ಹಿಂದುಳಿದ ಸಮುದಾಯಗಳು ರಾಜಕೀಯ ಶಕ್ತಿಯಾಗುವುದನ್ನು ತಡೆದು ಕೋಮು ಆಧಾರದಲ್ಲಿ ಈ ಸಮುದಾಯಗಳನ್ನು ಒಡೆಯಲಾಯಿತು. ನಂತರದ ರಾಜಕೀಯ ವಿದ್ಯಮಾನಗಳು ಎಲ್ಲರಿಗೂ ಗೊತ್ತಿವೆ. ಈ ಅಪಾಯಕಾರಿ ಹಿಂದುತ್ವ ರಾಜಕಾರಣಕ್ಕೆ ಪ್ರತಿಯಾಗಿ ನಿತೀಶ್ ಕುಮಾರ್ ಜಾತಿಗಣತಿ ನಡೆಸಿದ ಪರಿಣಾಮವಾಗಿ ಅತ್ಯಂತ ಹಿಂದುಳಿದ (ಇಬಿಸಿ) ಸಮುದಾಯಗಳು ಹೊಸ ಶಕ್ತಿಯಾಗಿ ಹೊರ ಹೊಮ್ಮಿದ್ದು ಇದು ಸಂಘಪರಿವಾರದ ಬಿಜೆಪಿಯ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಹೊಸ ಬದಲಾವಣೆಗೆ ಕಾರಣವಾಗಬಹುದು ಎಂಬ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಹಾಗಾಗಿಯೇ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯನ್ನು ನಡೆಸಬೇಕೆಂದು ಜಾತ್ಯತೀತ ಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷಗಳು ಒತ್ತಾಯಿಸತೊಡಗಿವೆ. ಇಂತಹ ಸಮೀಕ್ಷೆಯಿಂದ ಸಮಾಜದ ವಿವಿಧ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಸ್ಪಷ್ಟ ಚಿತ್ರಣ ಸಿಗಬಹುದು ಎಂಬ ವಾದದಲ್ಲಿ ಹುರುಳಿಲ್ಲದಿಲ್ಲ. ಒಂದು ವೇಳೆ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿ ನಡೆದು ಅದರ ಫಲಿತಾಂಶ ಬಹಿರಂಗವಾದರೆ ರಾಜಕೀಯ ಮಾತ್ರವಲ್ಲ ಈಗಿರುವ ಮೀಸಲಾತಿ ಸ್ವರೂಪವೂ ಬದಲಾಗಬಹುದು.
ಶತಮಾನಗಳಿಂದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಹೊಡೆತದಿಂದ ತತ್ತರಿಸಿ ಹೋಗಿರುವ ಸಮುದಾಯಗಳನ್ನು ಕೋಮು ನಿಶೆ ಏರಿಸಿ ಹಿಡಿದಿಟ್ಟುಕೊಳ್ಳುವ ದಿನಗಳು ಕೊನೆಯಾಗುವ ಸೂಚನೆಗಳು ಮೇಲ್ನೋಟಕ್ಕೆ ಗೋಚರಿಸುತ್ತಿವೆ. ಇತರ ಹಿಂದುಳಿದ ವರ್ಗಗಳ ರಾಜಕೀಯ ಮತ್ತೆ ಮುಂಚೂಣಿಗೆ ಬರಬಹುದಾದ ಬೆಳವಣಿಗೆಗಳು ನಡೆಯುತ್ತಿವೆ. ಮಹಿಳಾ ಮೀಸಲಾತಿ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾದಾಗ ಒಳ ಮೀಸಲಾತಿ ಬೇಕೆಂಬ ಬೇಡಿಕೆ ಪ್ರತಿಧ್ವನಿಸಿತ್ತು. ನ್ಯಾಯಮೂರ್ತಿ ಜಿ. ರೋಹಿಣಿ ಆಯೋಗವು ಹಿಂದುಳಿದ ವರ್ಗಗಳಲ್ಲಿ ಉಪವರ್ಗೀಕರಣಕ್ಕೆ ಸಂಬಂಧಿಸಿದ ವರದಿಯನ್ನು ಇತ್ತೀಚೆಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಆದರೆ ಕೇಂದ್ರದ ಚುಕ್ಕಾಣಿ ಹಿಡಿದ ಸಂಘ ಪರಿವಾರ ನಿಯಂತ್ರಿತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಾಷ್ಟ್ರವ್ಯಾಪಿ ಜಾತಿಗಣತಿಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಇಂತಹ ಸಮೀಕ್ಷೆಯಿಂದ ಈಗಿರುವ ಸಂವಿಧಾನವನ್ನು ನಿಷ್ಕ್ರಿಯಗೊಳಿಸಿ ಮನುವಾದಿ ‘ಹಿಂದೂರಾಷ್ಟ್ರ’ವನ್ನು ನಿರ್ಮಿಸುವ ತಮ್ಮ ಕನಸು ಭಗ್ನಗೊಳ್ಳಬಹುದು ಎಂಬ ಭೀತಿ ಇದಕ್ಕೆ ಕಾರಣವಾಗಿರಬಹುದು.
ತನ್ನ ರಾಜಕೀಯ ಲೆಕ್ಕಾಚಾರಗಳು ತಲೆ ಕೆಳಗಾಗಬಹುದು ಎಂದು ಹೆದರಿರುವ ಬಿಜೆಪಿ ಸರಕಾರ ೨೦೧೧ರಲ್ಲಿ ಮಾಡಿರುವ ಆರ್ಥಿಕ, ಸಾಮಾಜಿಕ ಗಣತಿಯ ವರದಿಯನ್ನು ಪ್ರಕಟಿಸಲು ನಿರಾಕರಿಸುತ್ತಿದೆ. ಜಾತಿ ಗಣತಿ ಆಡಳಿತಾತ್ಮಕ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ಕಷ್ಟಕರ ಎಂದು ಮೋದಿ ಸರಕಾರ ಇತ್ತೀಚೆಗೆ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಛತ್ತೀಸ್‌ಗಡ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ತಾನು ಹಿಂದುಳಿದ ವರ್ಗದಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳು ಜಾತಿ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಯತ್ನಿಸುತ್ತಿವೆ ಎಂದು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಚಿಕ್ಕ ಮಗುವಿಗೂ ಗೊತ್ತಾಗುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಇತರ ಹಿಂದುಳಿದ ವರ್ಗಗಳ ಕುರಿತ ಕಾಂತರಾಜ್ ವರದಿಯನ್ನು ಜಾರಿಗೆ ತರಲು ಬಿಜೆಪಿ ಮಾತ್ರವಲ್ಲ ಜೆಡಿಎಸ್ ಮತ್ತು ಕಾಂಗ್ರೆಸ್ ಒಳಗಿನ ಮೇಲ್ಜಾತಿಯ ಹಿತಾಸಕ್ತಿಗಳು ಅಡ್ಡಗಾಲು ಹಾಕಬಹುದು. ಕುಮಾರಸ್ವಾಮಿಯವರು ಮಾತ್ರವಲ್ಲ, ಕೆಲವು ವೀರಶೈವ ಮಠಾಧೀಶರ ಮತ್ತು ರಾಜಕಾರಣಿಗಳ ಇತ್ತೀಚಿನ ಹೇಳಿಕೆಗಳಿಂದ ಇದು ಸ್ಪಷ್ಟವಾಗುತ್ತದೆ. ಆದರೆ ಬಿಜೆಪಿ ಎಷ್ಟೇ ಅಡ್ಡಿ ಮಾಡಿದರೂ ‘ಇಂಡಿಯಾ’ ಮೈತ್ರಿ ಕೂಟದ ಪಕ್ಷಗಳು ಹಾಗೂ ಹಿಂದುಳಿದ ಸಮುದಾಯಗಳ ಸಂಘಟನೆಗಳು ಈ ಪ್ರಶ್ನೆಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯದಿದ್ದೀತೇ?.ಬಹುಶಃ ಮುಂಬರುವ ಕೆಲ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಫಲಿತಾಂಶದ ಮೇಲೆ ಇದು ಪ್ರಭಾವ ಬೀರುವ ಸಾಧ್ಯತೆ ಇದೆಯೆಂದರೆ ಅತಿಶಯೋಕ್ತಿಯಲ್ಲ.