ಕಡತ ವಿಲೇವಾರಿಗೆ ವಿಳಂಬವೇಕೆ?

Update: 2024-03-05 03:57 GMT

Photo: PTI

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ದುರಾಡಳಿತವನ್ನು ತಿರಸ್ಕರಿಸಿ ಜನರು ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಹೊಸ ಸರಕಾರ ಬಂದ ನಂತರ ಗ್ಯಾರಂಟಿ ಯೋಜನೆಗಳ ಹೊರತಾಗಿ ಉಳಿದ ಯಾವ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ ಎಂಬ ಭಾವನೆ ವ್ಯಾಪಕವಾಗಿ ಮೂಡತೊಡಗಿದೆ. ಸರಕಾರದ ಚುಕ್ಕಾಣಿ ಹಿಡಿದವರು ಬದಲಾದರೂ ಆಡಳಿತಾಂಗ ಮತ್ತು ಅಧಿಕಾರಿಶಾಹಿಯ ಕಾರ್ಯವೈಖರಿ ಬದಲಾಗಿಲ್ಲ. ಇದಕ್ಕೆ ಪ್ರತ್ಯಕ್ಷ ಉದಾಹರಣೆಯೆಂದರೆ ಕಡತ ವಿಲೇವಾರಿಯಲ್ಲಿ ಉಂಟಾಗುತ್ತಿರುವ ವಿಳಂಬ. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ 1.37ಲಕ್ಷಕ್ಕಿಂತ ಹೆಚ್ಚು ಕಡತಗಳು ವಿಲೇವಾರಿಗಾಗಿ ಕಾದು ಕುಳಿತಿವೆ. ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಆಗಾಗ ಎಚ್ಚರಿಕೆ ನೀಡಿದ್ದಾರೆ. ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಯೂ ನಡೆದಿದೆ. ಆದರೂ ಕಡತಗಳು ಮುಂದೆ ಚಲಿಸುತ್ತಿಲ್ಲ. ರಾಜ್ಯದೆಲ್ಲೆಡೆ ಇದೇ ಪರಿಸ್ಥಿತಿ ಇರುವುದರಿಂದ ಮುಖ್ಯಮಂತ್ರಿ ಗಳ ಜನತಾದರ್ಶನಕ್ಕೆ ಸಾವಿರಾರು ಜನ ನಾಡಿನ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದಿದ್ದರು.

ಕಂದಾಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗೃಹ, ವಾಣಿಜ್ಯ ಹಾಗೂ ಕೈಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಭಾರೀ ಪ್ರಮಾಣದಲ್ಲಿ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಅದರಲ್ಲೂ ರಾಜ್ಯದ ನಗರ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತದ ಹೊಣೆ ಹೊತ್ತ ನಗರಾಭಿವೃದ್ಧಿ ಇಲಾಖೆಯಲ್ಲಿ 16,155 ಕಡತಗಳು ವಿಲೇವಾರಿಯಾಗಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ಆಡಳಿತ ಯಂತ್ರ ಚುರುಕುಗೊಳ್ಳದಿದ್ದರೆ ಎಷ್ಟು ಗ್ಯಾರಂಟಿ ಯೋಜನೆಗಳನ್ನು ತಂದರೂ ಪ್ರಯೋಜನವಿಲ್ಲ.

ಅಧಿಕಾರಶಾಹಿಯ ಲೋಪದಿಂದ ಕಡತ ವಿಲೇವಾರಿಯಲ್ಲಿ ವಿಳಂಬವಾಗಬಾರ ದೆಂದು ತಂತ್ರಜ್ಞಾನ ಆಧರಿತವಾದ ಇ-ಆಫೀಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಈ ವ್ಯವಸ್ಥೆಯ ಮೂಲಕ ಸಂಪೂರ್ಣ ಕಡತ ವಿಲೇವಾರಿ ಮಾಡುವ ಕಾರ್ಯ ಎಲ್ಲ ಇಲಾಖೆಗಳಲ್ಲಿ ಆರಂಭವಾಗಿಲ್ಲ. ಈಗ ಇ-ಆಫೀಸ್ ವ್ಯವಸ್ಥೆಯಲ್ಲೂ 94,492 ಕಡತಗಳು ಬಾಕಿ ಉಳಿದಿವೆ ಎಂದು ಅಂಕಿಅಂಶಗಳಿಂದ ತಿಳಿದು ಬರುತ್ತದೆ. ಈ ರೀತಿ ವಿಳಂಬವಾಗಬಾರದೆಂದು ‘ಸಕಾಲ’ ಎಂಬ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಆಡಳಿತ ವ್ಯವಸ್ಥೆಯ ಸೋಮಾರಿತನದ ಕಾಯಿಲೆ ನಿವಾರಣೆಯಾಗಿಲ್ಲ. ಅಧಿಕಾರಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ. ಹೀಗಾಗಿ ಕಡತಗಳು ಸಾವಿರಾರು ಸಂಖ್ಯೆಯಲ್ಲಿ ಬಾಕಿ ಉಳಿಯುತ್ತಲೇ ಇವೆ.

ಸರಕಾರ ಯಾವುದೇ ಪಕ್ಷದ್ದಿರಲಿ ಜನಸಾಮಾನ್ಯರ ಅರ್ಜಿಗಳ ಕಡತಗಳನ್ನು ದೀರ್ಘಕಾಲದಿಂದ ಬಾಕಿ ಉಳಿಸಿಕೊಳ್ಳುವುದು, ಜನರಿಗೆ ತೊಂದರೆ ಕೊಡುವುದು ಅಧಿಕಾರಶಾಹಿಯ ಚಾಳಿಯಾಗಿದೆ. ಇದನ್ನು ಸರಕಾರಿ ನೌಕರರು ಉದ್ದೇಶಪೂರ್ವಕವಾಗಿ ಮಾಡುತ್ತಾರೆ. ಕೆಲಸ ಮಾಡಿಸಿಕೊಳ್ಳಲು ಜನರು ಲಂಚ ಕೊಡಲಿ ಎಂದು ಇಂತಹ ಕರಾಮತ್ತು ಮಾಡುತ್ತಾರೆ. ನಾನಾ ತಾಂತ್ರಿಕ ಕಾರಣಗಳನ್ನು ನೀಡುತ್ತಾರೆ. ಇದಕ್ಕೆ ಬರೀ ಸರಕಾರಿ ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ಮಂತ್ರಿಗಳು ಎಚ್ಚರ ವಹಿಸಿದರೆ ಹೀಗಾಗುವುದಿಲ್ಲ.

ಸರಕಾರಿ ನೌಕರರ ವರ್ಗಾವಣೆ, ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಗುತ್ತಿಗೆ ನೀಡುವುದು, ಬಿಲ್ ಪಾವತಿ ಇಂತಹ ಕಡತಗಳ ವಿಲೇವಾರಿಯಲ್ಲಿ ಎಂದೂ ವಿಳಂಬವಾಗುವುದಿಲ್ಲ. ಅದೇ ಮಾದರಿಯಲ್ಲಿ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಕಡತಗಳು ಯಾಕೆ ವಿಲೇವಾರಿ ಆಗುವುದಿಲ್ಲ ಎಂಬುದು ಚಿಕ್ಕ ಮಗುವಿಗೂ ಗೊತ್ತಾಗುತ್ತದೆ. ಕೈ ಬೆಚ್ಚಗೆ ಮಾಡುವವರ ಕಡತಗಳು ತ್ವರಿತವಾಗಿ ವಿಲೇವಾರಿ ಆಗುತ್ತವೆ.

ಬಾಕಿ ಉಳಿದ ಕಡತಗಳಲ್ಲಿ ಶೇ.10ರಷ್ಟು ಕಡತಗಳನ್ನು ಆಯಾ ತಿಂಗಳ ಕೊನೆಯಲ್ಲಿ ವಿಲೇವಾರಿ ಮಾಡಲೇಬೇಕೆಂದು ಮುಖ್ಯ ಕಾರ್ಯದರ್ಶಿಗಳು ಗಡುವು ವಿಧಿಸಿದ್ದಾರೆ. ಆದರೆ ಇಷ್ಟು ಮಾತ್ರ ಸಾಕಾಗುವುದಿಲ್ಲ. ಗ್ರಾಮ ಪಂಚಾಯತ್‌ನಿಂದ ವಿಧಾನಸೌಧದವರೆಗೆ ಎಲ್ಲಾ ಹಂತಗಳಲ್ಲೂ ಕಡತಗಳ ವಿಲೇವಾರಿ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕಾಗಿದೆ. ದುರುದ್ದೇಶದಿಂದ ವಿಳಂಬ ಮಾಡುವವರ ಮೇಲೆ ಕಠಿಣ ಕ್ರಮವನ್ನು ಜರುಗಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಗಳ ಮಂತ್ರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು.

ನಮ್ಮ ಅಧಿಕಾರಶಾಹಿ ವ್ಯವಸ್ಥೆ ಬ್ರಿಟಿಷ್ ವಸಾಹತು ಕಾಲದಲ್ಲಿ ರೂಪುಗೊಂಡಿದ್ದು. ಜನಸಾಮಾನ್ಯರ ಬಗ್ಗೆ ತಾತ್ಸಾರ, ದಪರ್, ನಿರ್ಲಕ್ಷ್ಯ ಅದರ ಚಾಳಿ. ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಅದನ್ನು ಮರು ರೂಪಿಸುವುದು ಅಗತ್ಯವಾಗಿದೆ. ಈಗಿರುವ ವ್ಯವಸ್ಥೆಯಲ್ಲೇ ಅದನ್ನು ಸರಿದಾರಿಗೆ ತರಬೇಕೆಂದರೆ ಜನಪ್ರತಿನಿಧಿಗಳು ಚುರುಕಾಗಬೇಕು. ಹಾಗೆ ಮಾಡಬೇಕೆಂದರೆ ಆಡಳಿತ ವ್ಯವಸ್ಥೆಯ ಸಂಪೂರ್ಣ ಜ್ಞಾನ ಮಂತ್ರಿಗಳಿಗೆ ಇರಬೇಕಾಗುತ್ತದೆ. ಹಿಂದೆ ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಮುಖ್ಯಮಂತ್ರಿಯಾಗಿ ಅಧಿಕಾರಶಾಹಿ ಯನ್ನು ಪಳಗಿಸುವುದರಲ್ಲಿ ಹೆಸರು ಮಾಡಿದ್ದರು. ಕರ್ನಾಟಕದ ಮುಖ್ಯಮಂತ್ರಿ ಗಳಾಗಿದ್ದ ದೇವರಾಜ ಅರಸು ಮತ್ತು ಬಂಗಾರಪ್ಪನವರು ಅಧಿಕಾರಶಾಹಿಯನ್ನು ನಿಯಂತ್ರಿಸಿ ಕೆಲಸ ಮಾಡಿಸುತ್ತಿದ್ದರು. ಈಗ ಸಿದ್ದರಾಮಯ್ಯನವರಿಗೂ ಆ ಸಾಮರ್ಥ್ಯವಿದೆ. ಉಳಿದ ಮಂತ್ರಿಗಳು ಚುರುಕಾಗಬೇಕಾಗಿದೆ.

ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಸಂಬಂಧಿಸಿದ ಕಡತಗಳು ಬಾಕಿ ಉಳಿಯಬಾರದು. ಕಡತಗಳ ತ್ವರಿತ ವಿಲೇವಾರಿ ಸರಕಾರದ ಮೊದಲ ಆದ್ಯತೆಯಾಗಿರಬೇಕು. ಕೆಲಸ ಮಾಡದ ಸೋಮಾರಿ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯಬಾರದು. ಮಂತ್ರಿಗಳೂ ಬರೀ ವಿಧಾನಸೌಧದಲ್ಲಿ ಕುಳಿತುಕೊಳ್ಳುವ ಬದಲಾಗಿ ತಾವು ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಲ್ಲಿ ಸಂಚರಿಸಿ ಅಧಿಕಾರಶಾಹಿಗೆ ಚುರುಕು ಮುಟ್ಟಿಸಬೇಕು.ಆಗ ಮಾತ್ರ ಕಡತಗಳು ಬಾಕಿ ಉಳಿಯುವುದಿಲ್ಲ.

ಮುಖ್ಯಮಂತ್ರಿಗಳ ಜನತಾದರ್ಶನ ಮಾದರಿಯಲ್ಲಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಆಯಾ ಜಿಲ್ಲೆಯ ಮಂತ್ರಿಗಳು, ಜಿಲ್ಲಾಧಿಕಾರಿಗಳು ಜನತಾದರ್ಶನ ಕಾರ್ಯಕ್ರಮ ನಡೆಸುವುದು ಅಗತ್ಯವಾಗಿದೆ. ಜನಸಾಮಾನ್ಯರು ತಮ್ಮ ಅರ್ಜಿಗಳನ್ನು ಹಿಡಿದುಕೊಂಡು ಬೆಂಗಳೂರಿಗೆ ಬರುವುದು ತಪ್ಪಬೇಕು.ಜನರಿದ್ದಲ್ಲಿ ಸರಕಾರ ಹೋಗಬೇಕು. ತಮ್ಮ ಸಂಬಳ, ಸಾರಿಗೆಯ ಬಗ್ಗೆ ಮಾತಾಡುವ ಸರಕಾರಿ ನೌಕರರು ಜನರ ಸಮಸ್ಯೆಗೂ ಸ್ಪಂದಿಸಬೇಕು. ಯಾವುದೇ ಕಡತ ಒಂದು ತಿಂಗಳಿಗಿಂತ ಜಾಸ್ತಿ ಉಳಿಸಿಕೊಳ್ಳಬಾರದು. ಸರಕಾರ ಈ ನಿಟ್ಟಿನಲ್ಲಿ ದಿಟ್ಟ ಕ್ರಮವನ್ನು ಕೈಗೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News