ಮೋದಿ ನಿಜಕ್ಕೂ ಬದಲಾಗುವರೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿಯವರು 72 ಸದಸ್ಯರ ಸಚಿವ ಸಂಪುಟವನ್ನು ರಚಿಸಿದ್ದಾರೆ. ನೂತನ ಸಚಿವರು ರವಿವಾರ ಪ್ರಮಾಣ ವಚನವನ್ನು ಸ್ವೀಕರಿಸಿದರು. ಇದರಿಂದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸರಿಸಾಟಿ ತಾನೆಂದು ಅವರು ತೋರಿಸಿಕೊಂಡರು. ಇಷ್ಟು ದೊಡ್ಡ ಮಂತ್ರಿಮಂಡಲವನ್ನು ರಚಿಸಿದರೂ ದೇಶದ ಸುಮಾರು 20 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಮ್ ಸಮಾಜಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ತೆಲುಗು ದೇಶಂನ ಚಂದ್ರಬಾಬು ನಾಯ್ಡು ಮತ್ತು ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ಆಸರೆಯನ್ನು ಅವಲಂಬಿಸಿದ್ದರೂ ಸೈದ್ಧಾಂತಿಕವಾಗಿ ತಾವು ಬದಲಾಗಿಲ್ಲ ಎಂದು ಬಹಿರಂಗವಾಗಿ ತೋರಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ನೂತನ ಮಂತ್ರಿ ಮಂಡಲದ ಸ್ವರೂಪವನ್ನು ಗಮನಿಸಿದರೆ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಮೋದಿಯವರಿಗೆ ಕಡಿವಾಣ ಹಾಕುತ್ತಾರೆ ಎಂಬ ಊಹೆಯಲ್ಲಿ ಅರ್ಥವಿಲ್ಲ ಎನಿಸುತ್ತದೆ. ಕೋಮುವಾದಿ ಅಜೆಂಡಾ ಜಾರಿಗೆ ಬಿಡುವುದಿಲ್ಲ ಎಂಬುದು ನಂಬಿಕೆ ಮಾತ್ರ. ಮಿತ್ರ ಪಕ್ಷಗಳಿಗೆ ಅಧಿಕಾರ ಮತ್ತು ಅವರ ಇತರ ಬೇಡಿಕೆಗಳನ್ನು ಈಡೇರಿಸಿ ತಮ್ಮ ಕೋಮುವಾದಿ ಅಜೆಂಡಾಗಳ ಜಾರಿಗೆ ಮೋದಿ ಕೂಡಲೇ ಕೈಹಾಕುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.
ತಮ್ಮ ಹೊಸ ತಂಡವನ್ನು ರಚಿಸುವಾಗ ಮೋದಿ ಅವರು ಹಿಂದಿನ ಸರಕಾರದಲ್ಲಿ ಭದ್ರತೆ ಸಂಬಂಧಿಸಿದ ಸಂಪುಟ ಸಮಿತಿಯ ಭಾಗವಾಗಿದ್ದ ನಾಲ್ವರು ಪ್ರಮುಖ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್ ಅವರಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಒತ್ತಡ ಹೇರಲು ಬಂದರೆ ಅವರ ಪಕ್ಷಗಳನ್ನೇ ಒಡೆದು ಹಾಗೂ ‘ಇಂಡಿಯಾ’ ಮೈತ್ರಿ ಕೂಟದಲ್ಲಿ ಬಿರುಕು ಮೂಡಿಸಿ (ಆದರೆ ‘ಇಂಡಿಯಾ’ ಕೂಟ ಒಡೆಯುವುದು ಸುಲಭವಲ್ಲ.) ಮೋದಿ ಮತ್ತು ಅವರ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಆಣತಿಯಂತೆ ಮೋದಿ ತಂತ್ರ ರೂಪಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ಮೋದಿಯವರು ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಇಬ್ಭಾಗ ಮಾಡಿದರು. ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಒಡೆದರು. ಜಾತ್ಯತೀತ ಎಂದು ಹೇಳಿಕೊಳ್ಳುವ ರಾಮದಾಸ್ ಅಠಾವಳೆ ಅವರ ರಿಪಬ್ಲಿಕನ್ ಪಕ್ಷವನ್ನು ಕೈಗೊಂಬೆ ಮಾಡಿಕೊಂಡರು. ಈ ಯಾವ ಪಕ್ಷಗಳೂ ಮೋದಿಯವರ ಕೋಮುವಾದಿ ಕಾರ್ಯಸೂಚಿಯ ಬಗ್ಗೆ ಆಕ್ಷೇಪಿಸಲಿಲ್ಲ.ಅಧಿಕಾರದ ಬ್ರೆಡ್ ಚೂರುಗಳನ್ನು ಎಸೆದು ಇಲ್ಲವೇ ಸಿಬಿಐ, ಈ.ಡಿ., ಐಟಿ ಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ತಮ್ಮ ಗುರಿ ಸಾಧಿಸುವ ಕಲೆ ಮೋದಿಯವರಿಗೆ ಕರಗತವಾಗಿದೆ.
ಸಾಮಾನ್ಯವಾಗಿ ಸೈದ್ಧಾಂತಿಕವಾಗಿ ಸಮಾನ ಆಶಯಗಳನ್ನು ಹೊಂದಿರುವ ಪಕ್ಷಗಳು ಒಂದುಗೂಡಿ ನಿರ್ದಿಷ್ಟ ಕಾರ್ಯಕ್ರಮದ ಆಧಾರದಲ್ಲಿ ಒಂದುಗೂಡಿ ಸಂಯುಕ್ತ ರಂಗವೊಂದನ್ನು ರಚಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಈ ಪಕ್ಷಗಳಿಗೆ ಬಹುಮತ ಸಿಕ್ಕಿ ಸರಕಾರ ರಚನೆಯಾದರೂ ಅಂಥ ಸಮಸ್ಯೆಗಳು ಉದ್ಭವವಾಗುವುದಿಲ್ಲ. ಆದರೆ ಈಗ ಸ್ವಾರ್ಥಕ್ಕಾಗಿ ಒಂದುಗೂಡಿರುವ ಬಿಜೆಪಿ ಮತ್ತು ತೆಲುಗು ದೇಶಂ ಹಾಗೂ ಸಂಯುಕ್ತ ಜನತಾ ದಳಗಳ ನಡುವೆ ಯಾವ ಸಮಾನ ಅಂಶಗಳಿವೆ?
‘ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ’ ಎಂದು ಬಹಿರಂಗವಾಗಿ ಹೇಳುತ್ತ ಬಹುತ್ವ ಭಾರತದ ಮೇಲೆ ಹಿಂದಿ ಭಾಷೆಯನ್ನು ಹೇರಲು ಯತ್ನಿಸಿದ ಪಕ್ಷಕ್ಕೂ ಪ್ರಾದೇಶಿಕ ಅಸ್ಮಿತೆಗಳನ್ನು ಹೊಂದಿರುವ ಚಂದ್ರಬಾಬು ನಾಯ್ಡು ಅವರಿಗೂ ಹೇಗೆ ಹೊಂದಾಣಿಕೆ ಸಾಧ್ಯವಾಗುತ್ತದೆ? ಮೈತ್ರಿ ಧರ್ಮ ಪಾಲನೆ ಮಾಡುವ ಪ್ರಾಮಾಣಿಕತೆ ಆರೆಸ್ಸೆಸ್ ನಿಯಂತ್ರಿತ ಬಿಜೆಪಿಗೆ ಇದೆಯೇ? ಮುಸಲ್ಮಾನರಿಗೆ ಶೇಕಡಾ 4 ಮೀಸಲಾತಿ ನೀಡುವುದಾಗಿ ಹೇಳುವ ಚಂದ್ರಬಾಬು ನಾಯ್ಡು ಅವರು ಹೇಗೆ ಕೂಡಿ ಕೆಲಸ ಮಾಡಲು ಸಾಧ್ಯ? ಈಗ ಬೆಂಬಲ ನೀಡಿರುವ ಪಕ್ಷಗಳು ಅಧಿಕಾರಕ್ಕಾಗಿ ತಮ್ಮ ನಿಲುವುಗಳನ್ನು ಬಿಟ್ಟು ಕೊಡುವವೇ?
ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ಮತದಾರರನ್ನು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಣ ಮಾಡಲು ತಮ್ಮ ಶಕ್ತಿ ಮೀರಿ ಯತ್ನಿಸಿದರು. ಮುಸ್ಲಿಮ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಅವರು ಮಾಡಿದ ಆರೋಪಗಳು ಮತ್ತು ಆಡಿದ ನುಡಿಗಳನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿಯ ದ್ವೇಷ ರಾಜಕಾರಣವನ್ನು ಮತದಾರರು ಒಪ್ಪಿಕೊಳ್ಳಲಿಲ್ಲ. ಅಯೋಧ್ಯೆಯ ಮಂದಿರ ನಿರ್ಮಾಣ ಮತ್ತು ಬಾಲರಾಮಮೂರ್ತಿ ಪ್ರತಿಷ್ಠಾಪನೆ ಬಿಜೆಪಿಗೆ ಜಯ ತಂದು ಕೊಡಲಿಲ್ಲ. ನಿರುದ್ಯೋಗ, ಬಡತನ ಮತ್ತು ಸಂವಿಧಾನಕ್ಕೆ ಎದುರಾಗಿರುವ ಗಂಡಾಂತರದ ಬಗ್ಗೆ ಪ್ರತಿಪಕ್ಷಗಳು ಮಾಡಿದ ಜನಜಾಗೃತಿ ಕೋಮುವಾದಿ ಶಕ್ತಿಗಳನ್ನು ಸೋಲಿಸಿತು.
ಮನುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ಒಮ್ಮೆ ಅಧಿಕಾರ ಸಿಕ್ಕರೆ ಸಾಕು ಅವು ಬಲಿಷ್ಠವಾಗಿ ಬೇರೂರುತ್ತವೆ. ತಮ್ಮ ಸಿದ್ಧಾಂತವನ್ನು ಜಾರಿಗೆ ತರಲು ವಿಭಿನ್ನ ಪಕ್ಷಗಳ ಜೊತೆಗೆ ಅವಕಾಶವಾದಿ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತವೆ.ಈಗ ಕೇಂದ್ರದಲ್ಲಿ ನಡೆದಿರುವುದು ಅಂತಹದೇ ಒಂದು ಹುನ್ನಾರ ಎಂದರೆ ಅತಿಶಯೋಕ್ತಿಯಲ್ಲ.
ಕಳೆದ ಎರಡು ಸಲದಂತೆ ಈ ಸಲವೂ ಮೋದಿಯವರು ದ್ವೇಷ ಮತ್ತು ರಾಗ ರಹಿತ ಸರಕಾರ ನಡೆಸುವುದಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಇವರ ಪ್ರಮಾಣ ವಚನಕ್ಕೂ ಆಡಳಿತ ವೈಖರಿಗೂ ಯಾವುದೇ ಸಂಬಂಧವಿಲ್ಲ ಎಂಬುದಕ್ಕೆ ಹಿಂದಿನ ಅನುಭವಗಳು ಉದಾಹರಣೆಗಳಾಗಿವೆ. ಆದ್ದರಿಂದ ಸಂಘಪರಿವಾರ ನಿಯಂತ್ರಿತ ಮೋದಿಯವರು ಬದಲಾಗಿದ್ದಾರೆಂದು ಭಾವಿಸುವುದರಲ್ಲಿ ಅರ್ಥವಿಲ್ಲ.