ನೂತನ ಸಂಸತ್ ಭವನ ಭಾರತದ ವರ್ಚಸ್ಸನ್ನು ಹೆಚ್ಚಿಸೀತೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನೂತನ ಸಂಸತ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಸಂಸತ್‌ಕಟ್ಟಡವನ್ನು ಭಾರತದ ಅತಿ ದೊಡ್ಡ ಸಾಧನೆಯಾಗಿ ಪ್ರಧಾನಿ ಮೋದಿಯವರು ಬಿಂಬಿಸಿದ್ದಾರೆ. ‘‘ಈ ಸಂಸತ್ ಪ್ರಜಾಪ್ರಭುತ್ವದ ಪಯಣದ ಸುವರ್ಣ ಅಧ್ಯಾಯ’’ ಎಂದು ಅವರು ಕರೆದಿದ್ದಾರೆ. ಇದರ ಜೊತೆ ಜೊತೆಗೇ, ಶೃಂಗ ಸಭೆಯ ಯಶಸ್ವಿಯಿಂದ ಭಾರತದ ವರ್ಚಸ್ಸು ವಿಶ್ವಮಟ್ಟದಲ್ಲಿ
ಹೆಚ್ಚಿರುವುದಾಗಿಯೂ ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಕಟ್ಟಡಗಳು ಬದಲಾದರೆ ದೇಶ ಬದಲಾಗುವುದಿಲ್ಲ. ಆಳುವವರ ಚಿಂತನೆಗಳು ಬದಲಾದಾಗ ಮಾತ್ರ ದೇಶ ಬದಲಾಗುತ್ತದೆ. ನೂತನ ಸಂಸತ್ ಕಟ್ಟಡಕ್ಕೆ ಅಡಿಗಲ್ಲು ಹಾಕುವ ಹೊತ್ತಿಗೆ ದೇಶದ ತುಂಬಾ ಕೊರೋನ ಕಾರ್ಮೋಡ ಕವಿದಿತ್ತು. ಅದಾಗಲೇ ನೋಟು ನಿಷೇಧದಿಂದ ತತ್ತರಿಸಿಕೂತಿದ್ದ ಭಾರತದ ಆರ್ಥಿಕತೆಗೆ ಲಾಕ್‌ಡೌನ್ ಇನ್ನೊಂದು ದೊಡ್ಡ ಆಘಾತವಾಗಿತ್ತು. ಲಕ್ಷಾಂತರ ಜನರು ಬೀದಿಗೆ ಬಿದ್ದಿದ್ದರು. ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರ ಮಾರಣಹೋಮ ನಡೆಯಿತು. ಸಾವಿರಾರು ಹೆಣಗಳು ಗಂಗಾನದಿಯಲ್ಲಿ ತೇಲಿದವು. ಇಂತಹ ಹೊತ್ತಿನಲ್ಲಿ ನೂತನ ಸಂಸತ್ ಕಟ್ಟಡಕ್ಕೆ ಅಡಿಪಾಯ ಹಾಕಲಾಯಿತು. ಕೇಳುವ ಕಿವಿಗಳಿದ್ದರೆ, ನೂತನ ಸಂಸತ್‌ನ ಕಂಬಗಳಿಂದ ಕೊರೋನ, ಲಾಕ್‌ಡೌನ್‌ನ ಸಂತ್ರಸ್ತರ ಆರ್ತನಾದವನ್ನು ಕೇಳಬಹುದು. ನೂತನ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ನೋಟು ನಿಷೇಧ ಮತ್ತು ಲಾಕ್‌ಡೌನ್‌ನಲ್ಲಿ ಹುತಾತ್ಮರಾದ ಕಾರ್ಮಿಕರು, ಜನಸಾಮಾನ್ಯರಿಗೆ ಶ್ರದ್ಧಾಂಜಲಿ ಅರ್ಪಿಸುವುದು ಅತ್ಯಗತ್ಯವಾಗಿತ್ತು. ದುರದೃಷ್ಟವಶಾತ್ ಪ್ರಧಾನಿಯವರ ಭಾಷಣದಲ್ಲಿ ತನ್ನ ಸರಕಾರದ ಬಗೆಗಿನ ಬೋಪರಾಕ್‌ಗಳಿದ್ದವೇ ಹೊರತು, ಈ ದೇಶದ ಜನಸಾಮಾನ್ಯರ ನೋವು, ಸಂಕಟಗಳ ಕುರಿತ ಸಣ್ಣ ಕಾಳಜಿಯೂ ಇರಲಿಲ್ಲ.
ಶೃಂಗಸಭೆಯ ಸಾಧನೆಯನ್ನು ಅಧಿವೇಶನದಲ್ಲಿ ಬಣ್ಣಿಸಲಾಯಿತು. ಭಾರತದ ಜ್ವಲಂತ ಸಮಸ್ಯೆಗಳನ್ನು ವಿಶ್ವ ನಾಯಕರಿಂದ ಮುಚ್ಚಿಡುವಲ್ಲಿ ಯಶಸ್ವಿಯಾಗಿರುವುದೇ ಭಾರತದ ಶೃಂಗಸಭೆಯ ಅತಿದೊಡ್ಡ ಯಶಸ್ಸು. ದಿಲ್ಲಿಯ ಜೋಪಡಪಟ್ಟಿಗಳನ್ನು ಪ್ಲಾಸ್ಟಿಕ್‌ಗಳಿಂದ ಮುಚ್ಚಲಾಯಿತು ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡವು. ಬರೇ ದಿಲ್ಲಿಯ ಜೋಪಡಪಟ್ಟಿ ಮಾತ್ರವಲ್ಲ, ಮಣಿಪುರದ ಹತ್ಯಾಕಾಂಡಗಳು, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಮಾನವ ಹಕ್ಕುಗಳ ಮೇಲೆ ಭಾರತದಲ್ಲಿ ನಡೆಯುತ್ತಿರುವ ದಮನ ಇವೆಲ್ಲವನ್ನೂ ಶೃಂಗಸಭೆಯಿಂದ ಮುಚ್ಚಿಡುವಲ್ಲಿ ಸರಕಾರ ಯಶಸ್ವಿಯಾಗಿದೆ. ಇದು ನಿಜಕ್ಕೂ ಸರಕಾರದ ಸಾಧನೆಯೇ ಸರಿ. ಆದರೂ ಮುಚ್ಚಿದ ಪ್ಲಾಸ್ಟಿಕ್‌ಗಳ ಬಿರುಕುಗಳಿಂದ ಹಲವು ಸಮಸ್ಯೆಗಳು ಹೊರ ಕಾಣಿಸಿದ್ದು ಸುಳ್ಳಲ್ಲ. ಶೃಂಗಸಭೆಯ ಮರೆಯಲ್ಲೇ, ಭಾರತದಲ್ಲಿ ನಡೆಯುತ್ತಿರುವ ಪ್ರಜಾಸತ್ತೆಯ ದಮನದ ಬಗ್ಗೆ ಪ್ರಧಾನಿ ಮೋದಿಯವರ ಗಮನ ಸೆಳೆದಿರುವುದಾಗಿ ಅಮೆರಿಕದ ಅಧ್ಯಕ್ಷರು ಹೇಳಿಕೆ ನೀಡಿದರು. ಬೇಡಬೇಡವೆಂದರೂ, ಸಿಖ್ ಉಗ್ರವಾದ ಮಾಧ್ಯಮಗಳಲ್ಲಿ ಚರ್ಚೆಗೀಡಾಯಿತು. ಕೆನಡಾದಲ್ಲಿ ಸಿಖ್ ಭಯೋತ್ಪಾದಕರಿಗೆ ನೀಡಲಾಗುತ್ತಿರುವ ಆಶ್ರಯ, ಭಾರತ ಸರಕಾರ ಇಲ್ಲಿ ಪೋಷಿಸುತ್ತಿರುವ ಕೇಸರಿ ಭಯೋತ್ಪಾದನೆಯ ಬಗ್ಗೆ ಚರ್ಚಿಸಲು ನೆಪವಾಯಿತು. ಕೆನಡಾದಲ್ಲಿ ನಡೆದ ಸಿಖ್ ಉಗ್ರವಾದಿಯ ಹತ್ಯೆಯ ಆರೋಪವನ್ನು ಇಂದು ಭಾರತದ ತಲೆಗೆ ಕಟ್ಟಲಾಗಿದೆ. ಈ ಕುರಿತಂತೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಇದು ಭಾರತದ ಪಾಲಿಗೆ ಯಾವ ರೀತಿಯೂ ಭೂಷಣವಲ್ಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕಿದ್ದ ಸದಭಿಪ್ರಾಯ, ಉಗ್ರವಾದದ ಕುರಿತ ಭಾರತದ ದ್ವಂದ್ವ ನಿಲುವಿನಿಂದಾಗಿ ಕುಸಿಯುತ್ತಿದೆ.
ಹಳೆಯ ಸಂಸತ್ತಿನ ಮೇಲೆ ನಡೆದ ಉಗ್ರರ ದಾಳಿ ಅತಿ ದೊಡ್ಡ ಕಳಂಕವಾಗಿತ್ತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ದಾಳಿ ನಡೆದಿರುವುದು ಎನ್‌ಡಿಎ ಆಡಳಿತವಿದ್ದಾಗ ಎನ್ನುವುದನ್ನು ಅವರು ಮರೆತಿದ್ದಾರೆ. ನೂತನ ಸಂಸತ್ ಕಟ್ಟಡದಿಂದ ಈ ಕಳಂಕವನ್ನು ತೊಳೆದುಕೊಳ್ಳುವುದು ಸಾಧ್ಯವಿಲ್ಲ. ಭಯೋತ್ಪಾದನೆ, ಉಗ್ರವಾದ ಸಂಪೂರ್ಣ ಮಟ್ಟ ಹಾಕುವ ಮೂಲಕ ಈ ಕಳಂಕವನ್ನು ತೊಳೆದುಕೊಳ್ಳಬಹುದಾಗಿದೆ. ಆದರೆ ಕಳೆದ ಒಂದು ದಶಕದಿಂದ ದೇಶದಲ್ಲಿ ಭಯೋತ್ಪಾದನೆ ಬೇರೆ ರೂಪಗಳಲ್ಲಿ ತಲೆ ಎತ್ತುತ್ತಿದೆ. ಮೊದಲು ಭಯೋತ್ಪಾದಕ ದಾಳಿಗಳು ವಿದೇಶಿ ಸಂಘಟನೆಗಳಿಂದ ನಡೆಯುತ್ತಿದ್ದರೆ, ಪ್ರಧಾನಿ ಮೋದಿಯ ಕಾಲದಲ್ಲಿ ‘ಸ್ವದೇಶಿ ಭಯೋತ್ಪಾದನೆ’ ತಲೆಯೆತ್ತುತ್ತಿವೆ. ಪಂಜಾಬ್‌ನಲ್ಲಿ ಉಗ್ರವಾದ ಮತ್ತೆ ಚಿಗುರುತ್ತಿದೆ. ಇದಕ್ಕೆ ಪೂರಕವಾಗಿ ಕೇಸರಿ ಭಯೋತ್ಪಾದನೆಯೂ ಭರ್ಜರಿ ಬೆಳೆಯನ್ನು ತೆಗೆಯುತ್ತಿದೆ. ಮಾಲೆಗಾಂವ್‌ನಲ್ಲಿ ಬಾಂಬ್ ಸ್ಫೋಟಿಸಿದ ಆರೋಪ ಹೊತ್ತ ಶಂಕಿತ ಭಯೋತ್ಪಾದಕಿಗೆ ಬಿಜೆಪಿ ಟಿಕೆಟ್ ಕೊಟ್ಟು ಸಂಸತ್‌ನೊಳಗೆ ಪ್ರವೇಶಿಸುವಂತೆ ಮಾಡಿತು. ಇದು ಸಂಸತ್‌ಗೆ
ಭೂಷಣವೆ? ಬೃಹತ್ ಪ್ರತಿಮೆ, ಬೃಹತ್ ಪಾರ್ಕ್, ಬೃಹತ್ ದೇವಸ್ಥಾನ, ಅತ್ಯಾಧುನಿಕ ಸಂಸತ್ ಭವನಗಳಿಂದ ದೇಶದ ವರ್ಚಸ್ಸನ್ನು ಹೆಚ್ಚಿಸಲು ಹೊರಟಿರುವ ಪ್ರಧಾನಿ ಮೋದಿಯವರು ಮುಚ್ಚಿಟ್ಟ ಒಂದು ವಿಷಯವಿದೆ. ಇಂದಿಗೂ ಭಾರತ ಬಡತನದಲ್ಲಿ ವಿಶ್ವದಲ್ಲೇ ನಂಬರ್ 1 ಸ್ಥಾನದಲ್ಲಿದೆ.
ಭಾರತ ಬಡತನದಲ್ಲಿ ಮೊದಲ ಸ್ಥಾನದಲ್ಲಿದೆ ಎನ್ನುವುದನ್ನು ವಿರೋಧ ಪಕ್ಷ ನಾಯಕರು ಘೋಷಿಸಿರುವುದಲ್ಲ ಅಥವಾ ಪಾಕಿಸ್ತಾನ, ಕೆನಡಾಗಳು ಮಾಡಿದ ಆರೋಪವೂ ಅಲ್ಲ. ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ಕಚೇರಿ ಮತ್ತು ಆಕ್ಸ್ ಫರ್ಡ್ ವಿವಿಯ ಮಾನವ ಅಭಿವೃದ್ಧಿ ಉಪಕ್ರಮ ಸಿದ್ಧಪಡಿಸಿದ ಜಾಗತಿಕ ಬಡತನ ಸೂಚ್ಯಂಕ (ಎಂಪಿಐ) ಬಹಿರಂಗಪಡಿಸಿದ ವರದಿ ಇದು. ಜಗತ್ತಿನಲ್ಲಿ ಒಟ್ಟು 120 ಕೋಟಿ ಜನರು ಅತಿ ಬಡತನದಲ್ಲಿ ನರಳುತ್ತಿದ್ದಾರೆ. ಭಾರತದಲ್ಲಿ 22.89 ಕೋಟಿ ಜನರು ಬಡತನಕ್ಕೆ ಸಿಲುಕಿದ್ದು, ವಿಶ್ವದಲ್ಲೇ ಅತ್ಯಧಿಕ ಬಡವರಿರುವ ದೇಶವಾಗಿ ಗುರುತಿಸಿಕೊಂಡಿದೆ. ಆಫ್ರಿಕಾದ ನೈಜೀರಿಯ ಎರಡನೇ ಸ್ಥಾನದಲ್ಲಿದೆ. ಈ ದೇಶದಲ್ಲಿ 9 ಕೋಟಿ ಜನರು ಬಡತನದಿಂದ ನರಳುತ್ತಿದ್ದಾರೆ. ಬಹುಶಃ ನೋಟು ನಿಷೇಧ ಮತ್ತು ಲಾಕ್‌ಡೌನ್‌ಗಳು ಭಾರತದಲ್ಲಿ ಸಂಭವಿಸದೇ ಇದ್ದಿದ್ದರೆ ಬಡತನದ ಪ್ರಮಾಣ ಈ ಮಟ್ಟದಲ್ಲಿ ಏರುತ್ತಿರಲಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ನೋಟು ನಿಷೇಧದ ಸರಕಾರದ ತಪ್ಪು ನಿರ್ಧಾರದ ಕಾರಣದಿಂದಾಗಿ ಲಾಕ್‌ಡೌನ್ ಭಾರತದ ಪಾಲಿಗೆ ಇನ್ನಷ್ಟು ಭೀಕರವಾಯಿತು. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ. 16.4ರಷ್ಟು ಭಾರತೀಯರು ಶೇ. 42ರಷ್ಟು ಬಡತನದಲ್ಲಿ ನರಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ. 21.2 ಬಡವರಿದ್ದರೆ, ನಗರ ಪ್ರದೇಶದಲ್ಲಿ ಶೇ. 5.5ರಷ್ಟು ಬಡವರಿದ್ದಾರೆ. ಅಂದರೆ ಶೇ. ೯೦ರಷ್ಟು ಬಡವರು ಹಳ್ಳಿಗಳಲ್ಲಿಯೇ ಬದುಕುತ್ತಿದ್ದಾರೆ. ವಿಪರ್ಯಾಸವೆಂದರೆ, ಬಡತನಕ್ಕಾಗಿ ವಿಶ್ವದಲ್ಲೇ ಗುರುತಿಸಿಕೊಂಡಿರುವ ಭಾರತದ ಬೆರಳೆಣಿಕೆಯ ವ್ಯಕ್ತಿಗಳು ಬಿಲಿಯಾಧಿಪತಿಗಳಾಗಿ ಕಂಗೊಳಿಸುತ್ತಿದ್ದಾರೆ. ಅಂಬಾನಿ, ಅದಾನಿಗಳು ವಿಶ್ವದ ಶ್ರೀಮಂತ ವ್ಯಕ್ತಿಗಳಾಗಿ ಗುರುತಿಸಲ್ಪಡುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಭಾರತ ಆರ್ಥಿಕವಾಗಿ ನೆಲಕಚ್ಚಿದ್ದರೂ, ಅದಾನಿ, ಅಂಬಾನಿಯ ಸಂಪತ್ತಿನಲ್ಲಿ ಹೆಚ್ಚಳವಾಗಿತ್ತು.
ಹಳೆಯ ಸಂಸತ್ ಭವನದಿಂದ ನೂತನ ಸಂಸತ್‌ಭವನಕ್ಕೆ ವಲಸೆ ಹೋಗುವುದರಿಂದ ಭಾರತದ ದಾರಿದ್ರ್ಯವನ್ನು, ಬಡತನವನ್ನು ಮುಚ್ಚಿಡುವುದು ಸಾಧ್ಯವಿಲ್ಲ. ನೂತನ ಸಂಸತ್‌ಭವನದಲ್ಲಿ ಭಾರತದ ವಾಸ್ತವಗಳು ಚರ್ಚೆಗೊಳಗಾಗಬೇಕು. ಬಡವರ ಪರವಾಗಿ, ರೈತರ ಪರವಾಗಿ ನೀತಿಗಳು ಜಾರಿಗೊಳ್ಳಬೇಕು. ಆಗ ಮಾತ್ರ ಸಂಸತ್ ಭವನ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುತ್ತದೆ. ಕಟ್ಟಡ ಹಳತೋ, ಹೊಸತೋ ಅದರೊಳಗಿರುವ ಮನಸ್ಸುಗಳು ಹೊಸತನ್ನು ಯೋಚಿಸಬೇಕು.