ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 4,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಕೊರತೆ: ವರದಿ
ಹೊಸದಿಲ್ಲಿ : ದಿಲ್ಲಿ,ಮುಂಬೈ,ಚೆನ್ನೈ ಮತ್ತು ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 4,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಕೊರತೆಯಿದೆ ಎಂದು ಸರಕಾರದ ಆಂತರಿಕ ಅಧ್ಯಯನವು ತೋರಿಸಿದೆ ಎಂದು livemint.com ವರದಿ ಮಾಡಿದೆ.
2024ರ ವೇಳೆಗೆ ಮಾತ್ರ ಪರಿಸ್ಥಿತಿಯು ಸುಗಮಗೊಳ್ಳಬಹುದು ಎಂದು ಸರಕಾರಿ ಏಜೆನ್ಸಿಗಳು ನಿರೀಕ್ಷಿಸಿರುವುದರಿಂದ ವರ್ಷದ ಉಳಿದ ಅವಧಿಗೂ ಪ್ರಯಾಣಿಕರಿಗೆ ವಿಳಂಬದ ಸಮಸ್ಯೆ ಮುಂದುವರಿಯಲಿದೆ.
ವಾಯುಯಾನ ಸಚಿವಾಲಯವು ನಡೆಸಿರುವ ಅಧ್ಯಯನದ ಪ್ರಕಾರ ದಿಲ್ಲಿ ವಿಮಾನ ನಿಲ್ದಾಣವೊಂದರಲ್ಲೇ 1,300ಕ್ಕೂ ಅಧಿಕ ಸಿಐಎಸ್‌ಎಫ್ ಸಿಬ್ಬಂದಿಗಳ ಕೊರತೆಯಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1,000ಕ್ಕೂ ಅಧಿಕ ಹಾಗೂ ಚೆನ್ನೈ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳಲ್ಲಿ ತಲಾ 800ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಕೊರತೆಯಿದ್ದರೆ ಮುಂಬೈ ವಿಮಾನ ನಿಲ್ದಾಣದಲ್ಲಿ 150ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಕೊರತೆಯಿದೆ.
ಸಿಬ್ಬಂದಿಗಳ ಕೊರತೆ ಭದ್ರತಾ ಕಳವಳಗಳನ್ನು ಹೆಚ್ಚಿಸುವುದು ಮಾತ್ರವಲ್ಲ, ಪ್ರವೇಶ ದ್ವಾರಗಳಲ್ಲಿ ಮತ್ತು ಭದ್ರತಾ ತಪಾಸಣೆಗಾಗಿ ಉದ್ದನೆಯ ಸರದಿ ಸಾಲುಗಳಿಂದಾಗಿ ವಿಳಂಬವಾಗುವ ಮೂಲಕ ಪ್ರಯಾಣಿಕರಿಗೆ ಅನಾನುಕೂಲವನ್ನೂ ಉಂಟು ಮಾಡುತ್ತದೆ.
ಗರಿಷ್ಠ ದಟ್ಟಣೆಯಿರುವ ಬೇಸಿಗೆಯಲ್ಲಿ ಮತ್ತು ಕಳೆದ ವರ್ಷದ ಚಳಿಗಾಲದಲ್ಲಿಯೂ ಭದ್ರತಾ ಕೌಂಟರ್‌ಗಳಲ್ಲಿ ವಿಳಂಬಗಳ ಕುರಿತು ಪ್ರಯಾಣಿಕರು ದೂರಿಕೊಂಡಿದ್ದು ಇಂತಹ ಅಧ್ಯಯನ ನಡೆಸುವುದನ್ನು ಸರಕಾರಕ್ಕೆ ಅಗತ್ಯವಾಗಿಸಿತ್ತು.
ಒಟ್ಟಾರೆಯಾಗಿ, ಹೆಚ್ಚುತ್ತಿರುವ ವಾಯುಸಂಚಾರಕ್ಕೆ ಅನುಗುಣವಾಗಿ 2024ರ ಅಂತ್ಯದ ವೇಳೆಗೆ 15 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 5,000ಕ್ಕೂ ಅಧಿಕ ಸಿಐಎಸ್‌ಎಫ್ ಸಿಬ್ಬಂದಿಗಳ ಅಗತ್ಯವನ್ನು ಅಧ್ಯಯನವು ಅಂದಾಜಿಸಿದೆ.
ಅಕ್ಟೋಬರ್-ಡಿಸೆಂಬರ್‌ನಲ್ಲಿ ಸಂಚಾರ ದಟ್ಟಣೆ ಆರಂಭಗೊಳ್ಳುವ ಮುನ್ನ ಗಣನೀಯ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ಹೆಚ್ಚಿಸಲು ಚರ್ಚೆಗಳು ನಡೆಯುತ್ತಿದ್ದು,2024ರ ಅಂತ್ಯದ ವೇಳೆಗೆ ಪರಿಸ್ಥಿತಿಯು ಸುಗಮಗೊಳ್ಳುವ ಆಶಯವನ್ನು ಸರಕಾರವು ಹೊಂದಿದೆ ಎಂದು ಬೆಳವಣಿಗೆಯನ್ನು ಬಲ್ಲ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.