50 ವಿಕೆಟ್ ಪೂರೈಸಿದ ಹಾರಿಸ್ ರವೂಫ್‌ಗೆ ವಿಶೇಷ ಸ್ಮರಣಿಕೆ ನೀಡಿದ ಶಾಹೀನ್ ಅಫ್ರಿದಿ

Update: 2023-09-07 15:30 GMT

ಹಾರಿಸ್ ರವೂಫ್‌ ಹಾಗೂ ಶಾಹೀನ್ ಅಫ್ರಿದಿ Photo: twitter/@iShaheenAfridi

ಲಾಹೋರ್: ಲಾಹೋರ್‌ನ  ಗಢಾಫಿ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ ಏಶ್ಯಕಪ್‌ನ ಮೊದಲ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ವೇಗದ ಬೌಲರ್ ಹಾರಿಸ್ ರವೂಫ್‌ಗೆ ಸಹ ಆಟಗಾರ ಶಾಹೀನ್ ಶಾ ಅಫ್ರಿದಿ ವಿಶೇಷ ಸ್ಮರಣಿಕೆ ನೀಡಿದರು.

ಅಮೋಘ ಪ್ರದರ್ಶನ ನೀಡಿದ್ದ ರವೂಫ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದರು. ರವೂಫ್ ತಾನಾಡಿರುವ 27 ಏಕದಿನ ಪಂದ್ಯಗಳಲ್ಲಿ ಒಟ್ಟು 53 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 

ಮಹತ್ವದ ಸಾಧನೆ ಮಾಡಿರುವ ಸಹ ಆಟಗಾರ ರವೂಫ್‌ಗೆ ಪಂದ್ಯದ ನಂತರ ಇಡೀ ತಂಡದ ಪರವಾಗಿ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಸಣ್ಣ ಟ್ರೋಫಿಯನ್ನು ಪ್ರದಾನಿಸಿ ಗೌರವಿಸಿದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಎಕ್ಸ್‌ನಲ್ಲಿ ಶಾಹೀನ್ ಅವರು ರವೂಫ್‌ಗೆ ವಿಶೇಷ ಸ್ಮರಣಿಕೆ ನೀಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ.

ಪಾಕಿಸ್ತಾನ ತಂಡದ ಫೀಲ್ಡಿಂಗ್ ಪ್ರದರ್ಶನದಲ್ಲಿ ಸುಧಾರಣೆಯಾಗುವ ನಿಟ್ಟಿನಲ್ಲಿ ರವೂಫ್ ಅವರ ಕೊಡುಗೆಯನ್ನು ಶಾಹೀನ್ ಶ್ಲಾಘಿಸಿದರು.

ಇದು ನನಗೆ ಗೌರವದ ಕ್ಷಣ. ಏಕೆಂದರೆ ನಾನು ಹಾರಿಸ್‌ರೊಂದಿಗೆ ದೀರ್ಘ ಸಮಯದಿಂದ ಆಡುತ್ತಿರುವೆ. 2018ರಿಂದ ಪಾಕ್ ತಂಡದಲ್ಲಿ ಆಡುತ್ತಿರುವೆ. ಬೌಲಿಂಗ್ ಮಾತ್ರವಲ್ಲ, ಪಾಕಿಸ್ತಾನದ ಫೀಲ್ಡಿಂಗ್ ವಿಭಾಗ ಉತ್ತಮವಾಗಲು ಹಾರಿಸ್ ಕೊಡುಗೆ ನೀಡಿದ್ದಾರೆ.  ಇದೊಂದು ಚಿಕ್ಕ ಟ್ರೋಫಿ. ತಂಡದ ಎಲ್ಲ ಸದಸ್ಯರು ರವೂಫ್ ಭವಿಷ್ಯದಲ್ಲಿ 300-400 ವಿಕೆಟ್‌ಗಳನ್ನು ಪಡೆಯಬೇಕೆಂದು ಆಶಿಸುತ್ತದೆ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News