ಪಕ್ಷದಿಂದ ನನ್ನನ್ನು ಉಚ್ಚಾಟಿಸಿದ ವಿಜಯೇಂದ್ರ ಅವರಿಗೆ ಅಭಿನಂದನೆ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: "ಚುನಾವಣೆಗೆ ನಿಲ್ತಿರೋ ಇಲ್ವೋ ಎಂದು ಬಹಳಷ್ಟು ಜನರಲ್ಲಿ ಗೊಂದಲವಿತ್ತು. ಎಲ್ಲಾ ಗೊಂದಲಕ್ಕೂ ಈಗ ಉತ್ತರ ಸಿಕ್ಕಿದೆ. ನನ್ನನ್ನು ಉಚ್ಚಾಟಿಸಿದ್ದಕ್ಕೆ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈಶ್ವರಪ್ಪ ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದು ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಈ ಮೂವರು ಬಹಳಷ್ಟು ಗೊಂದಲ ಮೂಡಿಸುತ್ತಿದ್ದರು. ಈ ಗೊಂದಲಗಳಿಗೆ ಈಗ ಉತ್ತರ ಸಿಕ್ಕಿದೆ ಎಂದರು.
ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ಅವರನ್ನೇ ಹೋಗಿ ಅವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಕರೆ ತಂದಿದ್ದಾರೆ. ಇದು ಕೂಡ ಹಾಗೇ. ತಾತ್ಕಾಲಿಕವಾಗಿ ನಾನು ಪಕ್ಷದಿಂದ ಹೊರ ಇದ್ದೆನೆ ಅಷ್ಟೇ. ಈ ಉಚ್ಚಾಟನೆ ತುಂಬಾ ತಾತ್ಕಾಲಿಕ. ಅಪ್ಪಮಕ್ಕಳ ಕುತಂತ್ರದಿಂದ ನಾನು ಈಗ ಬಿಜೆಪಿಯಿಂದ ಹೊರಬಂದಿದ್ದೇನೆ ಎಂದರು.
ಒಬ್ಬ ಎಳಸು ರಾಜ್ಯಾಧ್ಯಕ್ಷ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಬಿಜೆಪಿ ಬಗ್ಗೆ ಏನೂ ಗೊತ್ತಿಲ್ಲದೇ ಇರುವ ವ್ಯಕ್ತಿ ನನನ್ನು ಬಿಜೆಪಿಯಿಂದ ಹೊರಹಾಕಿದ್ದಾರೆ. ಈ ರೀತಿ ಹಲವಾರು ಜನರು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ. ಇದು ತಾತ್ಕಾಲಿಕ ಬೆಳವಣಿಗೆ ಅಷ್ಟೇ. ನಾನೆಂದೂ ಬಿಜೆಪಿ ಬಿಟ್ಟು ಹೋಗಿಲ್ಲ. ಕಾಂಗ್ರೆಸ್ ಪಕ್ಷವನ್ನು ಈ ಜನ್ಮದಲ್ಲಿ ಸೇರಲ್ಲ. ನಾನು ಮತ್ತೆ ಬಿಜೆಪಿಗೆ ಸೇರುವವನೇ. ಇದನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಚುನಾವಣಾ ಆಯೋಗ ನನಗೆ ಚಿಹ್ನೆ ನೀಡಿದೆ. ನನ್ನ ಚಿಹ್ನೆ ಎರಡು ಕಬ್ಬು ಇರುವ ರೈತ. ಈ ರೈತನ ಚಿಹ್ನೆ ಸಿಗಲು ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೆ ಎಂಬುದು ಗೊತ್ತಿಲ್ಲ.ನಾಳೆಯಿಂದ ಚಿಹ್ನೆ ಮೂಲಕ ಎಲ್ಲೆಡೆ ಪ್ರಚಾರ ಕಾರ್ಯ ನಡೆಸಲಿದ್ದೇನೆ ಎಂದರು.
ವಿಜಯೇಂದ್ರ ಕುಂಕುಮ ಅಳಿಸಿಕೊಂಡ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ನೀತಿ, ನೈತಿಕತೆಯೇ ಇಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡವರು ಅವರು. ಕುಂಕುಮ ಯಾವಾಗ ಬೇಕಾದರೂ ಹಚ್ಚುತ್ತಾರೆ. ಹಾಗೇ ತೆಗೆಯುತ್ತಾರೆ. ಯಡಿಯೂರಪ್ಪ ಕೆಜೆಪಿ ಜೊತೆಗೆ ಹೋದಾಗ ಟಿಪ್ಪು ಸುಲ್ತಾನ್ ಜಯಂತಿಯಂದು ಟೋಪಿ ಹಾಕಿಕೊಂಡು ಹೋಗಿದ್ದರು ಎಂದು ಹೇಳಿದರು.