ಹಾರನಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ಸಭೆ

Update: 2024-03-27 18:07 GMT

ಶಿವಮೊಗ್ಗ: "ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅದೇ, ಧೈರ್ಯದಿಂದ ಗೀತಾಕ್ಕಗೆ ಮತ ನೀಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ‌' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ದಾರಿ ದೀಪವಾಗಿವೆ. ಅದೇ ರೀತಿ, ಎಸ್.ಬಂಗಾರಪ್ಪ ಅವರ ಆಡಳಿತದ ಅವಧಿಯಲ್ಲಿ ಉಚಿತ ವಿದ್ಯುತ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಶೋಷಿತ ವರ್ಗಕ್ಕೆ ನೆರಳಾಗಿ ನಿಂತಿದ್ದರು ಎಂದರು.

 ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ರೈತರಿಗೆ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ. ರಾಜ್ಯ ಮಟ್ಟದಲ್ಲಿ ಸಚಿವ ಮಧು ಬಂಗಾರಪ್ಪ ಅವರು ರೈತರ ಕಷ್ಟಗಳಿಗೆ ನೆರವಾದರೆ, ಕೇಂದ್ರದ ಹಂತದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸಲು ನಾನು ಶ್ರಮಿಸುತ್ತೇನೆ. ಅದೇ ಕಾರಣಕ್ಕೆ ನನಗೆ ಮತ ನೀಡಿ ಎಂದು ಕೋರಿದರು

ನಟ ಶಿವರಾಜ ಕುಮಾರ್ ಮಾತನಾಡಿ, ಜನರು ಬದಲಾವಣೆ ಬಯಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಈ ಯೋಜನೆಗಳಿಂದ ಬಡವರಿಗೆ ಸಹಾಯ ಆಗಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳಿಗೆ ಬೆಲೆ ಸಿಗಲಿದೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಏತ ನೀರಾವರಿ ಯೋಜನೆಗೆ ಬೀಜ ಬಿತ್ತಿದವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಎನ್ನುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆ ನುಂಗಲಾಗದ ತುತ್ತಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗೀತಾ ಅವರು ಶಾಸ್ವತ ಪರಿಹಾರ ಸೂಚಿಸುವರು ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಶಕ್ತಿ ತುಂಬುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಶಕ್ತರಿಗೆ ನೆರವಾಗಿದ್ದಾರೆ. ಇದರ ಋಣ ತೀರಿಸುವ ಸಕಾಲ ಈಗ ಬಂದಿದೆ ಎಂದರು.

ವಿಧಾನ ಪರಿಷತ್ ಮಜಿ ಸದಸ್ಯ ಆರ್.ಪ್ರಸನ್ನಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ,ಎಸ್.ರವಿಕುಮಾರ್, ಜಿ.ಡಿ.ಮಂಜುನಾಥ್, ಎನ್.ರಮೇಶ್, ಜಿ.ಪಲ್ಲವಿ, ಕಲಗೋಡು ರತ್ನಾಕರ್, ಎಂ.ಶ್ರೀಕಾಂತ್, ವೈ.ಎಚ್.ನಾಗರಾಜ್, ಚಂದ್ರಭೂಪಾಲ್, ರವಿಕುಮಾರ್, ಮಲೆಶಂಕರ ರಮೇಶ, ಸಿ.ಹನುಮಂತ್, ಇಕ್ಕೇರಿ ರಮೇಶ್, ಅನಿತಾ ಕುಮಾರಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News