ಮೋದಿ ಭಾವಚಿತ್ರ ಬಳಕೆ | ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿಯಿಂದ ನ್ಯಾಯಾಲಯದಲ್ಲಿ ದಾವೆ

Update: 2024-04-16 06:55 GMT

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿರುವ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಕೆ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿ ಬಿಜೆಪಿ ಜಿಲ್ಲಾ ಘಟಕವು ಶಿವಮೊಗ್ಗ ಸಿವಿಲ್ ನ್ಯಾಯಾಲಯದಲ್ಲಿ ಸೋಮವಾರ ದಾವೆ ಹೂಡಿದೆ.

ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಲು ಅವಕಾಶವಿದೆ. ಬೇರೆಯವರು ಬಳಕೆ ಮಾಡಿದರೆ ಅದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್– 29ರ ಉಲ್ಲಂಘನೆಯಾಗುತ್ತದೆ. ಹೀಗಾಗಿ ಕೆ.ಎಸ್. ಈಶ್ವರಪ್ಪ ಚುನಾವಣೆ ಪ್ರಚಾರ ಸಭೆಯ ವೇದಿಕೆಗಳಲ್ಲಿ ನರೇಂದ್ರ ಮೋದಿ ಭಾವಚಿತ್ರ ಮಾತ್ರವಲ್ಲ ಹೆಸರು ಬಳಕೆ ಮಾಡಿ ಮತ ಕೇಳುವುದಕ್ಕೂ ತಡೆಯಾಜ್ಞೆ ನೀಡುವಂತೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ದಾವೆಯಲ್ಲಿ ಕೋರಿದ್ದಾರೆ.

ಬಿಜೆಪಿ ಪರವಾಗಿ ವಕೀಲ ಕೆ. ಬಸಪ್ಪಗೌಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೋದಿ ಭಾವಚಿತ್ರ ಬಳಕೆ ಸಂಬಂಧ ಈಶ್ವರಪ್ಪ ಈ ಮೋದಲೇ ಕೇವಿಯಟ್‌ ಸಲ್ಲಿಸಿದ್ದು, ನ್ಯಾಯಾಲಯ ಮಂಗಳವಾರ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News