ತೀರ್ಥಹಳ್ಳಿ | ಹೆಗ್ಗೋಡು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ : ಗ್ರಾಮ ಪ್ರವೇಶಿಸದಂತೆ ರಾಜಕಾರಣಿಗಳಿಗೆ ಎಚ್ಚರಿಕೆ

Update: 2024-03-20 11:19 GMT

ಶಿವಮೊಗ್ಗ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಗ್ರಾಮದ ಗ್ರಾಮಸ್ಥರು ಮುಂಬರುವ ಲೋಕಸಭಾ ಚುನಾವಣೆಯಗೆ ಬಹಿಷ್ಕಾರ ಹಾಕಿದ್ದಾರೆ.ಅಲ್ಲದೇ ಯಾವುದೇ ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶಿಸಿದರೆ ಮಹಿಳೆಯರಿಂದ ಪೊರಕೆ ಉಪಚಾರ ಮಾಡಿಸುತ್ತೇವೆ ಎಂದು ಬ್ಯಾನರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಜಲ ಜೀವನ್ ಮಿಷನ್ ಅಡಿಯಲ್ಲಿ 36 ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುವಂತೆ ರೂ.348 ಕೋಟಿ ವೆಚ್ಚದಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅನುಮೋದಿತ ಯೋಜನೆಯಂತೆ ತುಂಗಾ ಮತ್ತು ಮಾಲತಿ ನದಿಗಳು ಸೇರುವ ಭೀಮನಕಟ್ಟೆಯಲ್ಲಿ ನೀರನ್ನು ಲಿಫ್ಟ್ ಮಾಡಲಾಗುವುದು. ಅಲ್ಲಿಂದ ಪೈಪ್‌ಲೈನ್ ಮೂಲಕ 36 ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳಿಗೆ ನೀರು ಸರಬರಾಜು ಮಾಡುವಂತಹ ಬೃಹತ್ ಯೋಜನೆ ಇದಾಗಿದೆ.

ಆದರೆ ಈ ನದಿ ತೀರದ ಜನರ ಅಭಿಪ್ರಾಯದಂತೆ ಈ ಯೋಜನೆಯೇ ಅವೈಜ್ಞಾನಿಕ ಎನ್ನಲಾಗಿದೆ. ತುಂಗಾ ಮತ್ತು ಮಾಲತಿ ನದಿಗಳು ಮಾರ್ಚ್ ಮತ್ತು ಜೂನ್ ನಡುವೆ ಒಣಗುತ್ತವೆ. ತಾಲ್ಲೂಕಿನ ಸಂಪೂರ್ಣ ಜನತೆ ಕೇಂದ್ರೀಕೃತ ಪಂಪಿಂಗ್ ಸ್ಟೇಷನ್ ಅವಲಂಬಿತವಾಗುವಂತೆ ಮಾಡಿದರೆ ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅದಲ್ಲದೆ ನದಿಯ ಎರಡೂ ಬದಿಯಲ್ಲಿ ನೂರಾರು ರೈತರು ನದಿ ನೀರನ್ನು ನಂಬಿ ಕೃಷಿ ಮಾಡುತ್ತಿದ್ದಾರೆ. ಕುಡಿಯುವ ನೀರು ಸರಬರಾಜು ಯೋಜನೆಯು ಬೇಸಿಗೆಯ ತಿಂಗಳುಗಳಲ್ಲಿ ತಮ್ಮ ನೀರಿನ ಮೂಲವನ್ನು ಕಸಿದುಕೊಳ್ಳಬಹುದು ಎಂಬ ಆತಂಕ ಸುತ್ತಲಿನ ಗ್ರಾಮಸ್ಥರಲ್ಲಿದೆ. ಅಡಿಕೆ ಬೆಳೆಯೇ ಇಲ್ಲಿನ ಜನರ ಮೂಲ ಕಸುಬಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೆತ್ತುಕೊಂಡದ್ದೇ ಆದರೆ ಇಲ್ಲಿನ ನೂರಾರು ಗ್ರಾಮಸ್ಥರ ಬದುಕೇ ಬೀದಿ ಪಾಲಾಗಲಿದೆ ಎಂಬ ಆತಂಕ ಎದುರಾಗಿದೆ.

ನೂರಾರು ರೈತರ ಬದುಕು ಮುಳುಗಿಸಿ ತಾಲ್ಲೂಕಿಗೆ ಕುಡಿಯುವ ನೀರು ಕೊಡುತ್ತೇವೆ ಎಂಬುದು ಎಷ್ಟು ವೈಜ್ಞಾನಿಕ ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಈ ಅವೈಜ್ಞಾನಿಕ ಯೋಜನೆ ಕೈಬಿಡಬೇಕು.ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶಿಸಿದರೆ ಮಹಿಳೆಯರಿಂದ ಪೊರಕೆ ಸೇವೆ ನೀಡುವುದಾಗಿ ಬ್ಯಾನರ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ರಾಜಕಾರಣಿಗಳು ತೀರ್ಥಹಳ್ಳಿ ತಾಲ್ಲೂಕಿನ ಆಲಗೇರಿ, ಹೆಗ್ಗೋಡು ಗ್ರಾಮಕ್ಕೆ ಬರುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಮುಳುಬಾಗಿಲು, ಹೊಸಹಳ್ಳಿ, ತೀರ್ಥಮುತ್ತೂರು ಸೇರಿದಂತೆ ತುಂಗಾ ಹಾಗೂ ಮಾಲತಿ ನದಿ ತೀರದ 15 ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಪ್ರವೇಶ ನಿರ್ಬಂಧಕ್ಕೆ ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿಯ ರೈತ ಮುಖಂಡ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೋಡ್ಲು ವೆಂಕಟೇಶ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೋರಾಟಗಾರರಾದ ಕಂಬಳಿಗೆರೆ ರಾಜೇಂದ್ರ, ಅಭಿಲಾಶ್ ಸೌಳಿ, ಬಿಕ್ಕೊಳ್ಳಿ ಮಂಜುನಾಥ್ ಮುಂತಾದವರಿದ್ದರು.

ತಾಲೂಕು ರೈತ ಸಂಘ ಬೆಂಬಲ:

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಗ್ರಾಮದ ಗ್ರಾಮಸ್ಥರು ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದನ್ನು ತಾಲೂಕು ರೈತ ಸಂಘ ಬೆಂಬಲಿಸಿದೆ.

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಂಘವು, ತೀರ್ಥಹಳ್ಳಿ ತಾಲ್ಲೂಕಿನ ಉದ್ದೇಶಿತ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯು ಅವೈಜ್ಞಾನಿಕ. ಮತ್ತು ನದಿಗಳೂ ಸೇರಿದಂತೆ ಜಲಮೂಲಗಳ ನೀರಿನ ಮೇಲಿನ ಜನಸಾಮಾನ್ಯರ ಹಕ್ಕನ್ನು ಕಸಿದು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒತ್ತೆ ಇಡುವ ಕೇಂದ್ರೀಕೃತ ಯೋಜನೆಗಳನ್ನು ರೂಪಿಸಬಾರದೆಂದು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News