ಈಶ್ವರಪ್ಪನವರಿಗೆ ಬಂಡಾಯವಾಗಿ ಸ್ಪರ್ಧಿಸುವ ತಾಕತ್ತು ಇಲ್ಲ: ಆಯನೂರು ಮಂಜುನಾಥ್

Update: 2024-03-24 06:30 GMT

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರನ್ನು ಗೆಲ್ಲಿಸಲು ಯಡಿಯೂರಪ್ಪ ಮತ್ತು ಈಶ್ವರಪ್ಪ ಕುಟುಂಬದ ನಡುವೆ ಆಂತರಿಕ ಒಪ್ಪಂದ ಆಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರಿಗೆ ಬಂಡಾಯವಾಗಿ ಸ್ಪರ್ಧಿಸುವ ತಾಕತ್ತು ಇಲ್ಲ.ಈಶ್ವರಪ್ಪನವರನ್ನು ಸ್ಪರ್ಧಿಸುವ ಮೂಲಕ ಬಿ.ವೈ ರಾಘವೇಂದ್ರರನ್ನು ಗೆಲ್ಲಿಸುವ ಒಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅವರೇ ಒಪ್ಪಿಕೊಂಡಂತೆ ಚುನಾವಣೆಯ ನಂತರ ಈಶ್ವರಪ್ಪನವರನ್ನು ರಾಜ್ಯಪಾಲರನ್ನಾಗಿಸುವ ಮತ್ತು ಪುತ್ರ ಕಾಂತೇಶ್ ಗೆ ಎಂಎಲ್ ಸಿ ಸ್ಥಾನ ಸಿಗಲಿದೆ ಎಂದು ಹೇಳಿದರು.

ಈಶ್ವರಪ್ಪ ಬಿಜೆಪಿಯ ಡಮ್ಮಿ ಕ್ಯಾಂಡಿಡೇಟ್ ಎಂದು ಲೇವಡಿ ಮಾಡಿದ ಆಯನೂರು, ಬಿಜೆಪಿಯ ಕೋರ್ ಕಮಿಟಿಯಲ್ಲಿ ಏನೆಲ್ಲಾ ಚರ್ಚೆಯಾಗಿದೆ ಎಂಬ ಮಾಹಿತಿ ನನ್ನ ಬಳಿ‌ ಇದೆ. ಈಶ್ವರಪ್ಪನವರ ಬ್ಯಾಟರಿ ಇಷ್ಟು ಪವರ್ ಫುಲ್ ಅಲ್ಲ. ಧೈರ್ಯ ಮಾಡುವ ಸ್ವಭಾವ ಕೂಡ ಅವರದಲ್ಲ. ಬಂಡಾಯ ಸ್ಪರ್ಧೆ ಮಾಡದಿದ್ದರೆ 40% ಕಮಿಷನ್ ಹಗರಣದಲ್ಲಿ ಐಟಿ, ಇಡಿ ಅಧಿಕಾರಿಗಳು ದಾಳಿ ನಡೆಸುತ್ತಾರೆಂಬ ಭಯದಿಂದ ಒಳ ಒಪ್ಪಂದ ಮಾಡಿಕೊಂಡು ಬಂಡಾಯ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.

 ಹೋರಾಟಗಾರ, ದಿಟ್ಟ ರಾಜಕಾರಣಿ ಬಂಗಾರಪ್ಪನವರು ಮತ್ತು ಅವರ ಕುಟುಂಬ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುವವರಲ್ಲ.ಬಂಗಾರಪ್ಪನವರ ರಾಜಕೀಯ ಸಂಧ್ಯಾ ಕಾಲದಲ್ಲಿ ಆದ ಅನ್ಯಾಯಯಕ್ಕೆ ನಾಯ ಪಡೆದುಕೊಳ್ಳಬೇಕು ಎಂಬ ಕಾರಣಕ್ಕೆ ಬಂಗಾರಪ್ಪನವರ ಮಗಳೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ಬಂಗಾರಪ್ಪನವರ ಸೋಲಿಗೆ ನ್ಯಾಯ ಪಡೆದುಕೊಳ್ಳುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಸಾಧಿಸುವುದು ನೂರಕ್ಕೆ ನೂರು ಖಚಿತ ಎಂದರು.

ನೀತಿ ಸಂಹಿತೆ ಉಲ್ಲಂಘನೆ ಕ್ರಮ ಯಾಕಿಲ್ಲ:

ಧರ್ಮದ ಆಧಾರದ ಮೇಲೆ ಮತಯಾಚಿಸುತ್ತಿರುವ ಈಶ್ವರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಚುನಾವಣೆ ಆಯೋಗ ನೀತಿ ಸಂಹಿತೆ ಉಲ್ಲಂಘನೆ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಬೇಕು.ತಂಡೋಪ ತಂಡವಾಗಿ ಸ್ವಾಮೀಜಿ ಬಳಿ ಹೋಗಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ ಎಂದು ಹೇಳಿದರು. 

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಡಿ ಮಂಜುನಾಥ್, ವೈ.ಹೆಚ್ ನಾಗರಾಜ್, ಶಿಜು ಪಾಶಾ, ಪದ್ಮನಾಭ್ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News